CM Siddaramaiah: ಕಾಂಗ್ರೆಸ್ ವಿರುದ್ಧ ಬಿಜೆಪಿ ಕಾರ್ಯಕರ್ತರ ಘೋಷಣೆ; ವೇದಿಕೆಯಲ್ಲೇ ಎಸ್‌ಪಿ ವಿರುದ್ಧ ಸಿಎಂ ಗರಂ
CM Siddaramaiah: ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರೋಧಿಸಿ ಬೆಳಗಾವಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಘಟನೆ ನಡೆದಿದೆ. ಸಿಎಂ ಸಿದ್ದರಾಮಯ್ಯ ಅವರ ಭಾಷಣದ ವೇಳೆ ಕೆಲ ಬಿಜೆಪಿ ಕಾರ್ಯಕರ್ತೆಯರು ಕಪ್ಪು ಬಟ್ಟೆ ಪ್ರದರ್ಶಿಸಿ, ಕಾಂಗ್ರೆಸ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ್ದಾರೆ. ಹೀಗಾಗಿ ಎಸ್‌ಪಿಯನ್ನು ಸಿಎಂ ತರಾಟೆಗೆ ತೆಗೆದುಕೊಂಡಿದ್ದಾರೆ.


ಬೆಳಗಾವಿ: ನಗರದಲ್ಲಿ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಕೇಂದ್ರ ಸರ್ಕಾರದ ಬೆಲೆ ಏರಿಕೆ, ಜನ ವಿರೋಧಿ ನೀತಿ ಹಾಗೂ ದೇಶ ವಿರೋಧಿ ಆಡಳಿತ ವಿರೋಧಿ ಖಂಡನಾ ಸಮಾವೇಶದಲ್ಲಿ ಎಸ್‌ಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ ಆದ ಪ್ರಸಂಗ ಸೋಮವಾರ ನಡೆದಿದೆ. ಭಾಷಣದ ವೇಳೆ ಕೆಲ ಬಿಜೆಪಿ ಕಾರ್ಯಕರ್ತೆಯರು ಕಪ್ಪು ಬಟ್ಟೆ ಪ್ರದರ್ಶಿಸಿ, ಕಾಂಗ್ರೆಸ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸಿಎಂ ಅವರು, ಯಾರದು ಎಸ್‌ಪಿ, ಏನು ಮಾಡುತ್ತಿದ್ದಾರೆ ಗರಂ ಆಗಿದ್ದಾರೆ.
ಇದ್ದಕ್ಕಿದ್ದಂತೆ ತಮ್ಮ ಮುಂಭಾಗವೇ ಬಿಜೆಪಿ ಕಾರ್ಯಕರ್ತೆಯರ ಪ್ರತಿಭಟನೆ ನೋಡಿ ಭಾಷಣ ನಿಲ್ಲಿಸಿದ ಸಿಎಂ ಸಿದ್ದರಾಮಯ್ಯ ಅವರು, ಯಾರದು ಎಸ್‌ಪಿ ಎಂದು ಹೇಳಿ ವೇದಿಕೆಗೆ ಬರುವಂತೆ ಹೇಳಿದರು. ಹೆಚ್ಚುವರಿ ಎಸ್‌ಪಿ ನಾರಾಯಣ ಬರಮನಿ ಅಲ್ಲಿಗೆ ಬರುತ್ತಿದ್ದಂತೆ ಏನ್ರೀ ಇದು, ಏನು ಮಾಡ್ತಾ ಇದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಬಿಜೆಪಿ ಕಾರ್ಯಕರ್ತೆಯರನ್ನು ಪೊಲೀಸರು ತಕ್ಷಣವೇ ಅವರನ್ನು ವಶಕ್ಕೆ ಪಡೆದಿದ್ದಾರೆ.
ಬಿಜೆಪಿ - ಆರ್.ಎಸ್.ಎಸ್‌ನ ಗೊಡ್ಡು ಬೆದರಿಕೆಗಳಿಗೆ ಜಗ್ಗಲ್ಲ-ಬಗ್ಗಲ್ಲ
ನಮ್ಮ ಪಕ್ಷದ ಕಾರ್ಯಕ್ರಮಕ್ಕೆ ಬಂದು ಅಡ್ಡಿಪಡಿಸಿದ ಬಿಜೆಪಿ ಕಾರ್ಯಕರ್ತರಿಗೆ, ಇವರ ಹಿಂದೆ ನಿಂತಿರುವ ಮುಖೇಡಿ ನಾಯಕರಿಗೆ ನೇರವಾಗಿ ಎಚ್ಚರಿಕೆ ಕೊಡುತ್ತಿದ್ದೇನೆ. "ನಾವು ಬಿಜೆಪಿ - ಆರ್.ಎಸ್.ಎಸ್‌ನ ಗೊಡ್ಡು ಬೆದರಿಕೆಗಳಿಗೆ ಜಗ್ಗಲ್ಲ-ಬಗ್ಗಲ್ಲ. ನಿಮ್ಮನ್ನೆಲ್ಲಾ ಸಾರ್ವಜನಿಕವಾಗಿ ಎದುರಿಸುವ ಶಕ್ತಿ ನನಗಿದೆ, ನಮ್ಮ ಕಾರ್ಯಕರ್ತರಿಗೂ ಇದೆ" ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಾ, ಭಾರತೀಯರ ಬದುಕನ್ನು ಬೆಲೆ ಏರಿಕೆಯಲ್ಲಿ ಬೇಯಿಸುತ್ತಾ, ಭಾರತೀಯ ಸಮಾಜವನ್ನು ಛಿದ್ರಗೊಳಿಸುತ್ತಾ, ಜನರ ನಡುವೆ ಬಿರುಕು ಮೂಡಿಸುತ್ತಾ ಜನದ್ರೋಹಿಯಾಗಿ ವರ್ತಿಸುತ್ತಿರುವುದು ಬಿಟ್ಟರೆ ಬೇರೆ ಏನು ಮಾಡಿದೆ?
ಭಾರತೀಯರು ಬ್ರಿಟೀಷರ ವಿರುದ್ಧ ಪ್ರಾಣತ್ಯಾಗ ಮಾಡಿ ಹೋರಾಡುತ್ತಿದ್ದಾಗ ನೀವು ಅಂದರೆ ಸಂಘ ಪರಿವಾರದವರು ಏನು ಕಡೆದು ಕಟ್ಟೆ ಹಾಕ್ತಿದ್ರಿ? ಸ್ವಾತಂತ್ರ್ಯ ಹೋರಾಟಕ್ಕೆ ಏಕೆ ಬರಲಿಲ್ಲ ? ಏನ್ ಮಾಡ್ತಾ ಕೂತಿದ್ರಿ?
ಮೊನ್ನೆ ಕಾಶ್ಮೀರದಲ್ಲಿ ಅಮಾಯಕ ಭಾರತೀಯರನ್ನು, ಕರ್ನಾಟಕದ ಮೂವರು ಅಮಾಯಕರನ್ನು ರಾಜಾರೋಷವಾಗಿ ಗನ್‌ಗಳ ಸಮೇತ ಬಂದು ಅಮಾನುಷವಾಗಿ ಹತ್ಯೆ ಮಾಡಿ ಹೋದರಲ್ಲಾ, ಇದು ಕೇಂದ್ರ ಸರ್ಕಾರದ ಭದ್ರತಾ ಲೋಪ ಅಲ್ಲವಾ? ಭಾರತೀಯರಿಗೆ ರಕ್ಷಣೆ ಕೊಡುವುದರಲ್ಲಿ ವಿಫಲ ಆಗಿರುವುದನ್ನು ನಾವು ಭಾರತೀಯರು ಪ್ರಶ್ನಿಸಬಾರದಾ? ಪ್ರಶ್ನಿಸಿದರೆ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸ್ತೀರಾ? ಎಂದು ಪ್ರಶ್ನಿಸಿದರು.
ನಮ್ಮ ಕಾರ್ಯಕ್ರಮಕ್ಕೆ ಬಂದು ಅಡ್ಡಿಪಡಿಸಿದ ದುಷ್ಟರಿಗೆ ದೇಶಪ್ರೇಮ ಇಲ್ಲವೇ?
ಭಾರತಕ್ಕೆ ಸ್ವಾತಂತ್ರ್ಯ ಬಂದು 52 ವರ್ಷಗಳ ಕಾಲ ಆರ್.ಎಸ್.ಎಸ್ ಕೇಂದ್ರ ಕಚೇರಿ ಮೇಲೆ ಭಾರತದ ಬಾವುಟ ಹಾರಿಸಲೇ ಇಲ್ಲ. ಇದಕ್ಕೆ ನಾಚಿಕೆ ಆಗುವುದಿಲ್ಲವೇ ನಿಮಗೆ? ಯಾವತ್ತಾದರೂ ಆರ್.ಎಸ್.ಎಸ್ ಕಚೇರಿ ಮುಂದೆ ಹೋಗಿ ಪ್ರತಿಭಟಿಸಿದ್ದೀರ? ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಆಧುನಿಕ ಭಾರತ ನಿರ್ಮಾಣದವರೆಗೂ ಬಿಜೆಪಿ, ಸಂಘ ಪರಿವಾರದ ಕೊಡುಗೆ ಏನಿದೆ? ನಾಚಿಕೆ ಇಲ್ಲದೆ ದೇಶಭಕ್ತಿ ಬಗ್ಗೆ ಮಾತಾಡ್ತೀರಾ. ಭಾರತೀಯ ಸಮಾಜವನ್ನು ಬಿರುಕು ಮೂಡಿಸಿದ್ದು ಬಿಟ್ಟರೆ ಇಷ್ಟು ವರ್ಷಗಳ ನಿಮ್ಮ ಕೊಡುಗೆ ಏನು? ಎಂದು ಸಿಎಂ ಪ್ರಶ್ನಿಸಿದರು.
ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಅತ್ಯಂತ ಶ್ರೀಮಂತರ ಮೇಲೆ 32% ಟ್ಯಾಕ್ಸ್ ಇತ್ತು. ಮೋದಿ ಬಂದ ಮೇಲೆ ಅತ್ಯಂತ ಶ್ರೀಮಂತರ ಮೇಲಿನ ತೆರಿಗೆಯನ್ನು ಶೇ25 ಇಳಿಸಿದ್ದಾರೆ. ಬಡವರು, ಮಧ್ಯಮ ವರ್ಗದವರ ಮೇಲಿನ ತೆರಿಗೆಯನ್ನು ಹೆಚ್ಚಿಸಿದಿರಿ. ನಾಚಿಕೆ ಆಗುತ್ತಿಲ್ಲ ನಿಮಗೆ. ಬಡವರ, ಮಧ್ಯಮ ವರ್ಗದವರ ವಿರೋಧಿ ಬಿಜೆಪಿಯ ಆಡಳಿತವನ್ನು ಪ್ರಶ್ನಿಸಬಾರದಾ? ಭಾರತೀಯರನ್ನು ಇನ್ನೂ ಎಷ್ಟು ವರ್ಷ ಸುಳ್ಳು ಹೇಳಿ ಮರಳು ಮಾಡ್ತೀರಿ. ಸತ್ಯ ಹೇಳಿ.
ಭಾರತದ ಸ್ವಾತಂತ್ರ್ಯಕ್ಕೆ ಪ್ರಾಣ ತ್ಯಾಗ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಹೋರಾಟ ಹೊಸದಲ್ಲ. ಬ್ರಿಟೀಷರನ್ನೇ ಒದ್ದೋಡಿಸಿದ ನಮಗೆ ನೀವು ಬಿಜೆಪಿ - ಆರ್.ಎಸ್.ಎಸ್ ಅನ್ನೂ ಎದುರಿಸಿ ನಿಲ್ಲುವ ಶಕ್ತಿ ಇದೆ.
ನಾವು ಹಾಲಿನ ದರ 4 ರೂ ಹೆಚ್ಚಿಸಿ, ಇಡೀ 4 ರೂಪಾಯಿಯನ್ನು ಪೂರ್ತಿಯಾಗಿ ರೈತರಿಗೆ, ಗೋಪಾಲಕರಿಗೆ, ಗೋ ಸಾಕಾಣಿಕೆದಾರರಿಗೆ ವರ್ಗಾಯಿಸಿದ್ದೀವಿ. ಇದರಲ್ಲಿ ಒಂದು ರೂಪಾಯಿ ಕೂಡ ಸರ್ಕಾರಕ್ಕೆ ಬರಲ್ಲ. ನಾವು 4 ರೂ ಹೆಚ್ಚಿಸಿದರೂ ಹಾಲಿನ ದರ ಇಡೀ ದೇಶದಲ್ಲಿ ಕಡಿಮೆ ಇರುವುದು ನಮ್ಮ ರಾಜ್ಯದಲ್ಲಿ ಮಾತ್ರ. ಬಸ್ ದರ, ನೀರಿನ ದರ, ವಿದ್ಯುತ್ ದರ ಅಕ್ಕ ಪಕ್ಕದ ರಾಜ್ಯಗಳಿಗಿಂತ ಅತ್ಯಂತ ಕಡಿಮೆ ಇರುವುದು ನಮ್ಮ ರಾಜ್ಯದಲ್ಲಿ ಮಾತ್ರ. ನಿಮ್ಮ ಸುಳ್ಳು, ಅಪಪ್ರಚಾರ, ಬೆದರಿಕೆಗೆ ಈ ಸಿದ್ದರಾಮಯ್ಯ ಹೆದರುವವನಲ್ಲ. ನಿಮ್ಮನ್ನು ಮೆಟ್ಟಿ ನಿಲ್ತೀವಿ. ಕಾಂಗ್ರೆಸ್ ಪಕ್ಷಕ್ಕೆ ಆ ಶಕ್ತಿ ಇನ್ನೂ ಇದೆ.
ಅಕ್ಕಿ, ಎಣ್ಣೆ, ಚಿನ್ನ, ಬೆಳ್ಳಿ, ಗೊಬ್ಬರ, ಕಾಳು, ಬೇಳೆ, ಡೀಸೆಲ್, ಪೆಟ್ರೋಲ್, ಸಿಲಿಂಡರ್ ಎಲ್ಲದರ ಬೆಲೆ ಏರಿಸಿದ್ದೀರಿ. ಯಾವುದನ್ನು ಬಿಟ್ಟಿದ್ದೀರಿ ಹೇಳಿ? ಕಚ್ಚಾತೈಲ ಬೆಲೆ ಕಡಿಮೆ ಇದ್ದಾಗಲೂ ಪೆಟ್ರೋಲ್, ಡೀಸೆಲ್ ಬೆಲೆ ಮಾತ್ರ ನಿರಂತರವಾಗಿ ಏರಿಕೆ ಮಾಡುತ್ತಲೇ ಇರುವುದು ಭಾರತೀಯರಿಗೆ ಬಿಜೆಪಿ ಬಗೆಯುತ್ತಿರುವ ಮಹಾದ್ರೋಹ.
ಬಿಜೆಪಿ ನಿರಂತರವಾಗಿ ಭಾರತೀಯರನ್ನು ಸುಳ್ಳುಗಳ ಸರಮಾಲೆಯಲ್ಲಿ ಮುಳುಗಿಸಿ, ಸಮಾಜದಲ್ಲಿ ಬಿರುಕು ಮೂಡಿಸಿ ಕಾಲ ಕಳೆಯುತ್ತಿದೆ. ನಿಮಗೆ ತಕ್ಕ ಉತ್ತರ ಕೊಡುವ ಶಕ್ತಿ ನಮಗಿದೆ. ನಾವು ಉತ್ತರ ಕೊಡ್ತೀವಿ ಎಂದು ಸಿಎಂ ಕಿಡಿಕಾರಿದ್ದಾರೆ.