ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sanjana Ganesan: 'ನಮ್ಮ ಮಗ ಮನರಂಜನೆಯ ವಿಷಯವಲ್ಲ'; ಟ್ರೋಲಿಗರಿಗೆ ಬುಮ್ರಾ ಪತ್ನಿ ಖಡಕ್‌ ಎಚ್ಚರಿಕೆ

ಭಾನುವಾರ ನಡೆದಿದ್ದ ಮುಂಬೈ ಮತ್ತು ಲಕ್ನೋ ನಡುವಣ ಐಪಿಎಲ್‌(IPL 2025) ಪಂದ್ಯಕ್ಕೆ ಬುಮ್ರಾ ಪತ್ನಿ ಸಂಜನಾ ಮತ್ತು ಮಗ ಅಂಗದ್ ಹಾಜರಾಗಿದ್ದರು. ಪಂದ್ಯದ ವೇಳೆ ಇವರನ್ನು ದೊಡ್ಡ ಪರದೆಯಲ್ಲಿ ತೋರಿಸಲಾಗಿತ್ತು. ಇದೇ ಫೋಟೊವನ್ನು ಕೆಲ ನೆಟ್ಟಿಗರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಟ್ರೋಲ್‌ ಮಾಡಿದ್ದಾರೆ.

ಮಗನನ್ನು ಟ್ರೋಲ್‌ ಮಾಡಿದವರಿಗೆ ಖಡಕ್‌ ಎಚ್ಚರಿಕೆ ಕೊಟ್ಟ ಬುಮ್ರಾ ಪತ್ನಿ

Profile Abhilash BC Apr 28, 2025 4:49 PM

ಮುಂಬಯಿ: ಭಾರತ ತಂಡದ ಪ್ರಧಾನ ವೇಗಿ ಜಸ್‌ಪ್ರೀತ್‌ ಬುಮ್ರಾ(Jasprit Bumrah) ಅವರ ಪತ್ನಿ ಸಂಜನಾ ಗಣೇಶನ್(Sanjana Ganesan) ತಮ್ಮ ಮಗ ಅಂಗದ್(Angad) ಕುರಿತು ಟ್ರೋಲ್‌ ಮಾಡಿದ ನೆಟ್ಟಿಗರನ್ನು ತೀವ್ರ ತರಾಟೆಗೆ ತೆದುಕೊಂಡಿದ್ದಾರೆ. "ನಮ್ಮ ಮಗ ಮನರಂಜನೆಯ ವಿಷಯವಲ್ಲ" ಎಂದು ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಭಾನುವಾರ ನಡೆದಿದ್ದ ಮುಂಬೈ ಮತ್ತು ಲಕ್ನೋ ನಡುವಣ ಐಪಿಎಲ್‌(IPL 2025) ಪಂದ್ಯಕ್ಕೆ ಬುಮ್ರಾ ಪತ್ನಿ ಸಂಜನಾ ಮತ್ತು ಮಗ ಅಂಗದ್ ಹಾಜರಾಗಿದ್ದರು. ಪಂದ್ಯದ ವೇಳೆ ಇವರನ್ನು ದೊಡ್ಡ ಪರದೆಯಲ್ಲಿ ತೋರಿಸಲಾಗಿತ್ತು. ಇದೇ ಫೋಟೊವನ್ನು ಕೆಲ ನೆಟ್ಟಿಗರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಟ್ರೋಲ್‌ ಮಾಡಿದ್ದರು.

ಪಂದ್ಯದಲ್ಲಿ ಜಸ್‌ಪ್ರೀತ್‌ ಬುಮ್ರಾ 4 ವಿಕೆಟ್‌ಗಳನ್ನು ಕಬಳಿಸಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬುಮ್ರಾ ವಿಕೆಟ್ ಕಬಳಿಸುತ್ತಿದ್ದಂತೆ ಕ್ರೀಡಾಂಗಣದಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದ ಸಂಜನಾ ಮತ್ತು ಮಗ ಅಂಗದ್‌ ಅವರನ್ನು ಕ್ಯಾಮೆರಾದಲ್ಲಿ ತೋರಿಸಲಾಯಿತು. ಕ್ರಿಕೆಟ್‌ ಏನು ಎಂದೇ ತಿಳಿಯದ ಪುಟ್ಟ ಮಗು ಅಂಗದ್‌ ಯಾವುದೇ ಪ್ರತಿಕ್ರಿಯೆ ನೀಡದೆ ಜನರ ಗದ್ದಲವನ್ನೇ ನೋಡುತ್ತಾ ನಿಂತಿದ್ದ. ಇದೇ ವಿಡಿಯೊವನ್ನು ಕೆಲ ನೆಟ್ಟಿಗರು ಟ್ರೋಲ್‌ ಮಾಡುವ ಮೂಲಕ ಮುಖದಲ್ಲಿ ಯಾವುದೇ ಭಾವನನೆಗಳಿಲ್ಲದ ಅಂಗದ್‌ಗೆ ಖಿನ್ನತೆ ಸಮಸ್ಯೆ ಇರಬಹುದು ಎಂದಿದ್ದಾರೆ. ಇನ್ನು ಕೆಲವರು ಸದಾ ಗಂಭೀರವಾಗಿರುವ ಗೌತಮ್‌ ಗಂಭೀರ್‌ಗೆ ಹೋಲಿಕೆ ಮಾಡಿದ್ದಾರೆ.



ನೆಟ್ಟಿಗರ ಈ ಕೃತ್ಯಕ್ಕೆ ಪ್ರತಿಕ್ರಿಯಿಸಿರುವ ಸಂಜನಾ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಒಂದನ್ನು ಮಾಡಿ, ತಮ್ಮ ಮಗ ಮನರಂಜನೆಯ ವಿಷಯವಲ್ಲ. ಅಪಾರ ಅಭಿಮಾನಿಗಳು ಮತ್ತು ಕ್ಯಾಮೆರಾಗಳಿಂದ ತುಂಬಿರುವ ಕ್ರಿಕೆಟ್ ಕ್ರೀಡಾಂಗಣಕ್ಕೆ ಮಗುವನ್ನು ಕರೆತರುವುದರ ಪರಿಣಾಮಗಳು ಏನೆಂಬುದನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ. ನಾನು ಮತ್ತು ಅಂಗದ್ ಬುಮ್ರಾಗೆ ಬೆಂಬಲ ನೀಡಲು ಬಂದಿದ್ದೆವು ಹೊರತು ಬೇರೇನೂ ಅಲ್ಲ' ಎಂದಿದ್ದಾರೆ.



'ನಮ್ಮ ಮಗ ವೈರಲ್ ವಿಷಯ ಅಥವಾ ರಾಷ್ಟ್ರೀಯ ಸುದ್ದಿಯಾಗುವುದರಲ್ಲಿ ನಮಗೆ ಯಾವುದೇ ಆಸಕ್ತಿ ಇಲ್ಲ. ಕೆಲ ಕೀಳು ಮನಸ್ಸಿನ ನೆಟ್ಟಿಗರು ಅನಗತ್ಯವಾಗಿ ಅಂಗದ್ ಯಾರು, ಅವನ ಸಮಸ್ಯೆ ಏನು, ಅವನ ವ್ಯಕ್ತಿತ್ವ ಏನು ಎಂಬುದನ್ನು 3 ಸೆಕೆಂಡುಗಳ ದೃಶ್ಯಗಳಿಂದ ನಿರ್ಧರಿಸುತ್ತಾರೆ. ಅವನಿಗೆ ಈಗ ಒಂದೂವರೆ ವರ್ಷ. ಮಗುವನ್ನು ಉಲ್ಲೇಖಿಸಿ ಖಿನ್ನತೆಯಂತಹ ಪದಗಳನ್ನು ಬಳಸುವುದು ನಾವು ಒಂದು ಸಮುದಾಯವಾಗಿ ಎತ್ತ ಸಾಗುತ್ತಿದ್ದೇವೆ ಎಂಬುದನ್ನು ತೋರಿಸುತ್ತದೆ. ಇದು ನಿಜವಾಗಿಯೂ ದುಃಖಕರವಾಗಿದೆ' ಎಂದು ಬರೆದುಕೊಂಡಿದ್ದಾರೆ.