Roopa Gururaj Column: ಆರೋಗ್ಯವಿಲ್ಲದ ದೀರ್ಘಾಯಸ್ಸು ಶಾಪದಂತೆ
ತಾನು ಎಣ್ಣೆ ತಂದು ಹಾಕುವವರೆಗೂ ತಾನು ಸಾಯುವುದಿಲ್ಲ. ಎಣ್ಣೆ ತರದೇ ಹೋದರೆ ತನಗೆ ಸಾವೇ ಇಲ್ಲ. ಅಮರತ್ವ ಪಡೆದಂತಾಯಿತು, ಎಂದು ಕೊಂಡು ಅವನು ಮರಳಿ ಬರಲೇ ಇಲ್ಲ. ಗುರುಗಳು ಸ್ವಲ್ಪ ಹೊತ್ತು ಕಾಯ್ದು ,ಬೇರೆ ಶಿಷ್ಯರಿಂದ ಎಣ್ಣೆಯನ್ನು ತರಿಸಿ ದೀಪ ಹಚ್ಚಿ ಭಜನೆಯನ್ನು ಪೂರೈಸಿ ದೇಹ ತ್ಯಾಗ ಮಾಡಿದರು.


ಒಂದೊಳ್ಳೆ ಮಾತು
rgururaj628@gmail.com
ಒಂದು ಚಿಕ್ಕ ಹಳ್ಳಿ ಅಲ್ಲೊಬ್ಬ “ಸಿದ್ದಪ್ಪ ಗುರು" ಎಂದು ಕರೆಸಿಕೊಳ್ಳುವ ಜಂಗಮರಿದ್ದರು. ಅವರನ್ನು ಕಂಡರೆ ಎಲ್ಲರಿಗೂ ಗೌರವ ಪ್ರೀತಿ. ಅವರು ಅನೇಕ ಪವಾಡಗಳನ್ನೂ ಮಾಡುತ್ತಿದ್ದರು. ಗುರುಗಳಿಗೆ ವಯಸ್ಸಾಯಿತು. ಅವರು ತಮ್ಮ ಶಿಷ್ಯರನ್ನೆಲ್ಲಾ ಕರೆದು ನನ್ನ ಇಹಲೋಕದ ಕೆಲಸ ಮುಗಿಯುತ್ತಾ ಬಂತು, ನಾನಿನ್ನುಈ ಜಾಗದಿಂದ ಹೊರಡಲು ಸಿದ್ಧನಾಗಿದ್ದೇನೆ, ನನ್ನಲ್ಲಿ ಏನಾದರೂ ಕೇಳಬೇಕೆಂದಿದ್ದರೆ, ಈಗಲೇ ಕೇಳಿಕೊಳ್ಳಿ, ಎಂದರು. ಸಿದ್ದಪ್ಪ ಗುರುಗಳುತಮ್ಮ ಗುರುಗಳ ಸಮಾಧಿಯ ಮುಂದೆ ದೀಪ ಹಚ್ಚಿ ಭಜನೆ ಮಾಡಿ, ತಮ್ಮ ಪ್ರಾಣ ತ್ಯಾಗ ಮಾಡಲು ನಿರ್ಧರಿಸಿದರು. ಗುರುಗಳ ಸಮಾಽಯ ಮುಂದೆ ಹೋದಾಗ ಹಣತೆಯಲ್ಲಿ ಎಣ್ಣೆ ಖಾಲಿಯಾಗಿತ್ತು. ಒಬ್ಬ ಶಿಷ್ಯನನ್ನು ಕರೆದು ಎಣ್ಣೆ ತಂದು ಹಾಕಲು ಹೇಳುತ್ತಾರೆ. ಈ ಶಿಷ್ಯ ದುಡುಕು ಸ್ವಭಾವದ, ಸ್ವಲ್ಪ ತಲೆಹರಟೆ ಮನುಷ್ಯ. ಯಾವ ಸಂದರ್ಭದಲ್ಲಿ ಏನು ಮಾತಾಡಬೇಕು ಎಂಬುದನ್ನು ತಿಳಿಯದೇ, ಗುರುಗಳಿಗೆ ಪ್ರಶ್ನೆ ಮಾಡು ತ್ತಾನೆ. ಗುರುಗಳೇ ನೀವೇ ಈ ದೇಹ ನಶ್ವರ ವೆಂದು, ಹೇಳುತ್ತೀರಿ ಅದರಲ್ಲೂ ಯಾರ ಆಯಸ್ಸು ಯಾವ ಸಮಯದಲ್ಲಿ ಮುಗಿಯುವು ದೆಂಬುದನ್ನು ಹೇಳುವುದು ಅಸಾಧ್ಯವೆಂದು ತಿಳಿಸಿದ್ದೀರಿ.
ಹೀಗಿರುವಾಗ ಎಣ್ಣೆಯನ್ನು ತಂದು ಹಣತೆಗೆ ಹಾಕುವವರೆಗೂ ನಾನು ಬದುಕಿರುತ್ತೇನೆಂಬ ಭರವಸೆ ಏನು? ಎಂದು ತಲೆ ಹರಟೆ ಪ್ರಶ್ನೆ ಕೇಳಿದ. ಆಗ ಗುರುಗಳು ನಕ್ಕು ನೀನು ಎಣ್ಣೆ ತಂದು ಹಾಕುವವ ರೆಗೂ ನಿನಗೆ ಮರಣವಿಲ್ಲ ನಾನು ಭರವಸೆ ಕೊಡುತ್ತೇನೆ ಎಂದರು. ಈ ಶಿಷ್ಯನಿಗೆ ಬಹಳ ಸಂತೋಷ ವಾಯಿತು.
ಇದನ್ನೂ ಓದಿ: Roopa Gururaj Column: ಕರುಣೆಯ ನ್ಯಾಯಾಲಯದ ದೇವರು ಶಿವಕುಮಾರ ಮಹಾಸ್ವಾಮಿಗಳು
ತಾನು ಎಣ್ಣೆ ತಂದು ಹಾಕುವವರೆಗೂ ತಾನು ಸಾಯುವುದಿಲ್ಲ. ಎಣ್ಣೆ ತರದೇ ಹೋದರೆ ತನಗೆ ಸಾವೇ ಇಲ್ಲ. ಅಮರತ್ವ ಪಡೆದಂತಾಯಿತು, ಎಂದು ಕೊಂಡು ಅವನು ಮರಳಿ ಬರಲೇ ಇಲ್ಲ. ಗುರುಗಳು ಸ್ವಲ್ಪ ಹೊತ್ತು ಕಾಯ್ದು ,ಬೇರೆ ಶಿಷ್ಯರಿಂದ ಎಣ್ಣೆಯನ್ನು ತರಿಸಿ ದೀಪ ಹಚ್ಚಿ ಭಜನೆ ಯನ್ನು ಪೂರೈಸಿ ದೇಹ ತ್ಯಾಗ ಮಾಡಿದರು.
ಆ ಉದ್ದಟ ಶಿಷ್ಯ ತಲೆಮರೆಸಿಕೊಂಡು ಬೇರೆ ಊರಿಗೆ ಹೊರಟುಬಿಟ್ಟ. ಅಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಸಾವಿನ ಭಯ ಹೊರಟುಹೋಗಿ ಮಾಡಬಾರದ ಕೆಲಸಗಳನ್ನೆಲ್ಲ ಮಾಡುತ್ತಾನೆ. ಕರ್ಮಫಲದಂತೆ ವರ್ಷಗಳು ಉರುಳಿದಂತೆ ಯಾವ ಯಾವುದೋ, ಖಾಯಿಲೆ ಅಂಟಿಕೊಂಡು ಅವನ ದೇಹ ಒದ್ದಾಡುತ್ತಿರುತ್ತದೆ, ಆದರೆ ಸಾವು ಮಾತ್ರ ಬರಲಿಲ್ಲ. ಭಗವಂತಾ ಸಾಕು ಈ ಜೀವನ ಬೇಗ ಸಾವು ಕೊಡು ಎಂದು ದೀನನಾಗಿ ಬೇಡುತ್ತಾನೆ. ಆದರೆ ಅವನಿಗೆ ಸಾವು ಮಾತ್ರ ಬರುವುದಿಲ್ಲ.
ಎಲ್ಲರಿಗೂ ಆಶ್ಚರ್ಯ. ಇವನು ಬದುಕಿರುವುದಾದರೂ ಹೇಗೆ? ಮೈತುಂಬಾ ಖಾಯಿಲೆ ಇದ್ದು ತೊಂಬತ್ತೈದು ವರ್ಷಗಳಾಗಿ, ಹಾಸಿಗೆಯಿಂದ ಏಳಲಾಗದಿದ್ದರೂ ಮನೆಯವರಿಗೆ, ಆಪ್ತರಿಗೆ ಬೇಡವಾಗಿ ನರಳುತ್ತಿದ್ದರೂ ಇವನ ಪ್ರಾಣ ಹೋಗುತ್ತಿಲ್ಲವಲ್ಲಾ ಎಂದು. ತಕ್ಷಣ ಅವನಿಗೆ ತಾನು ಗುರುಗಳಿಗೆ ಮಾಡಿದ ನಂಬಿಕೆ ದ್ರೋಹ ನೆನಪಾಯಿತು. ತನ್ನ ಬಂಧು ಮಿತ್ರರಿಗೆ ತನ್ನ ದ್ರೋಹದ ಕಥೆ ತಿಳಿಸಿ, ಅವರೊಂದಿಗೆ ಗುರುಗಳ ಸಮಾಽಯ ಬಳಿಗೆ ಬಂದು ಹಣತೆಗೆ ಎಣ್ಣೆ ಹಾಕುತ್ತಾನೆ.
ಎಲ್ಲರೂ ನೋಡುತ್ತಿರುವ ಹಾಗೇ ಅಲ್ಲಿಯೇ ಕುಸಿದು ಬಿದ್ದು ಪ್ರಾಣ ಬಿಟ್ಟು ದೇಹದಿಂದ ಮುಕ್ತನಾಗು ತ್ತಾನೆ. ಚಿರಂಜೀವಿಯಾಗ ಬೇಕೆಂಬುದು ಮನುಷ್ಯನ ಹಂಬಲ. ಆದರೆ ಮನಃಶಾಂತಿ ಇಲ್ಲದೇ ದೇಹದಲ್ಲಿ ಆರೋಗ್ಯವೂ ಇಲ್ಲದೇ ಬದುಕಿದ್ದರೆ ದೀರ್ಘಾಯುಷ್ಯ ಒಂದು ದೊಡ್ಡ ಶಾಪವೇ ಸರಿ. ನಾವೆಲ್ಲರೂ ಬಹಳ ಕಾಲ ಬದುಕಬೇಕು ಎಂದು ಬಯಸುತ್ತೇವೆ. ಆದರೆ ಬದುಕಿರುವಷ್ಟು ದಿನ ನಾಲ್ಕು ಜನರಿಗೆ ಉಪಯೋಗವಾಗುವ ಹಾಗೆ, ಯಾರಿಗೂ ಕೆಟ್ಟದ್ದನ್ನು ಬಯಸದ ಹಾಗೆ ಬದುಕಬೇಕು ಎಂದು ಆಶಿಸುತ್ತೇವೆಯೇ? ನಮಗೊಂದಿಷ್ಟು ಲಾಭವಾದರೆ ಸಾಕು, ನಾವು ನಮ್ಮ ಮನೆಯವರು ಚೆನ್ನಾಗಿದ್ದರೆ ಸಾಕು ಅನ್ನುವ ಹಂತಕ್ಕೆ ಬಂದು ನಿಂತುಬಿಡುತ್ತೇವೆ.
ಮತ್ತೊಬ್ಬರ ನಿಟ್ಟುಸಿರು ಖಂಡಿತ ನಮ್ಮನ್ನು ನೆಮ್ಮದಿಯಾಗಿ ಬದುಕಲು ಬಿಡುವುದಿಲ್ಲ. ಆದ್ದರಿಂದಲೇ ಗೊತ್ತಿದ್ದು ಗೊತ್ತಿಲ್ಲದೆಯೋ ಯಾರಿಗೂ ಕೇಡು ಬಯಸುವುದು ಬೇಡ. ಬದುಕಿರು ವಷ್ಟು ದಿನ ನಾಲ್ಕು ಜನರಿಗೆ ಉಪಯೋಗವಾಗುವಂತೆ ಬದುಕೋಣ.