Karnataka Rains: ತುಮಕೂರು ಜಿಲ್ಲಾಸ್ಪತ್ರೆ ಆವರಣದಲ್ಲಿ ಬಿರುಗಾಳಿ ಮಳೆಗೆ ಮರಗಳು ನೆಲಕ್ಕುರುಳಿ ಹಲವು ಕಾರುಗಳು ಜಖಂ
Karnataka Rains: ರಾಜ್ಯದ ಉತ್ತರ ಒಳನಾಡಿನಲ್ಲಿ 2 ದಿನಗಳವರೆಗೆ ಗರಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ. ನಂತರ 2-3 ಡಿಗ್ರಿ ಸೆಲ್ಸಿಯಸ್ ಕ್ರಮೇಣ ಹೆಚ್ಚಳವಾಗುತ್ತದೆ. ಮುಂದಿನ 5 ದಿನಗಳವರೆಗೆ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಗರಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ.

ತುಮಕೂರು ಜಿಲ್ಲಾಸ್ಪತ್ರೆ ಆವರಣದಲ್ಲಿ ಬಿರುಗಾಳಿ ಮಳೆಗೆ ಕಾರುಗಳ ಮೇಲೆ ಮರ ಬಿದ್ದಿರುವುದು.


ರಾಜ್ಯದ ಹಲವೆಡೆ ಸೋಮವಾರ ಭರ್ಜರಿ ಮಳೆಯಾಗಿದ್ದು, ತುಮಕೂರಿನಲ್ಲಿ ಸಂಜೆ ಸುರಿದ ಭಾರಿ ಮಳೆಗೆ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಮರಗಳು ಧರೆಗುರುಳಿದ್ದು, ಇದರಿಂದ ಹಲವು ಕಾರುಗಳು ಜಖಂಗೊಂಡಿವೆ. ತುಮಕೂರು ನಗರ ಸೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಮಳೆ ಆಗುತ್ತಿದೆ. ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ಅದೇ ರೀತಿ ತುಮಕೂರು ನಗರದ ಜಿಲ್ಲಾಸ್ಪತ್ರೆ ಬಳಿ ಕಾರಿನ ಮೇಲೆ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಅದೃಷ್ಟವಶಾತ್ ಯಾವುದು ಪ್ರಾಣಾಪಾಯವಿಲ್ಲ. ಸ್ಥಳಕ್ಕೆ ಬೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ಕಂಬಗಳನ್ನು ತೆರವುಗೊಳಿಸುವ ಕಾರ್ಯ ಮಾಡುತ್ತಿದ್ದಾರೆ.

ಏಪ್ರಿಲ್ 29ರಂದು ಮಂಗಳವಾರ ರಾಜ್ಯದ ಕೂಡ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ರಾಯಚೂರು, ಯಾದಗಿರಿ, ಕಲಬುರಗಿ, ಕೊಪ್ಪಳ ಹಾಗೂ ದಕ್ಷಿಣ ಒಳನಾಡಿನ ಕೊಡಗು, ಚಿಕ್ಕಮಗಳೂರು, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮಂಡ್ಯ, ತುಮಕೂರು ಮತ್ತು ಮೈಸೂರು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಬಿರುಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 34°C ಮತ್ತು 23°C ಇರುವ ಸಾಧ್ಯತೆ ಇದೆ.

ಏಪ್ರಿಲ್ 30ರಂದು ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಗುರದಿಂದ ಮಧ್ಯಮ ಮಳೆ/ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಕೊಪ್ಪಳ, ವಿಜಯಪುರ, ಕಲಬುರಗಿ, ಗದಗ ಬಾಗಲಕೋಟೆ, ಬೀದರ್, ರಾಯಚೂರು, ಯಾದಗಿರಿ, ಹಾವೇರಿ ಮತ್ತು ಧಾರವಾಡ ಜಿಲ್ಲೆಗಳು ಹಾಗೂ ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.