Narendra Modi: ಹೃದಯ ವಿದ್ರಾವಕ; ಬೆಂಗಳೂರು ಕಾಲ್ತುಳಿತಕ್ಕೆ ಪ್ರಧಾನಿ ಮೋದಿ ಆಘಾತ
Bengaluru Stampede: ಬೆಂಗಳೂರು ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಸಮೀಪ ನಡೆದ ಕಾಲ್ತುಳಿತಕ್ಕೆ ಸಿಲುಕಿ 11 ಮಂದಿ ಮೃತಪಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಈ ಅಪಘಾತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರೊಂದಿಗೆ ನಾವಿದ್ದೇವೆ ಎಂದು ಅವರು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.


ಬೆಂಗಳೂರು: 18 ವರ್ಷಗಳ ಸುದೀರ್ಘ ಕಾಯುವಿಕೆಗೆ ಕೊನೆಗೂ ಫಲ ಸಿಕ್ಕಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೊಚ್ಚಲ ಬಾರಿಗೆ ಕಿರೀಟ ಮುಡಿಗೇರಿಸಿಕೊಂಡಿದೆ. ಈ ಅಭೂತಪೂರ್ವ ಗೆಲುವನ್ನು ಕೊಂಡಾಡಲು ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಾವಿರಾರು ಸಂಖ್ಯೆಯ ಅಭಿಮಾನಿಗಳು ನೆರೆದ ಕಾರಣ ಕಾಲ್ತುಳಿತ ಉಂಟಾಗಿ 11 ಮಂದಿ ಮೃತಪಟ್ಟಿದ್ದು (Bengaluru Stampede) ಸಂಭ್ರಮಾಚರಣೆಯ ಜಾಗದಲ್ಲಿ ಇದೀಗ ಶೋಕ ಮಡುಗಟ್ಟಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಈ ದುರಂತಕ್ಕೆ ದುಃಖ ವ್ಯಕ್ತಪಡಿಸಿ, ಇದು ಹೃದಯ ವಿದ್ರಾವಕ ಘಟನೆ ಎಂದಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಮೋದಿ ಬರೆದುಕೊಂಡಿದ್ದಾರೆ. "ಬೆಂಗಳೂರಿನಲ್ಲಿ ನಡೆದ ದುರಂತ ನಿಜಕ್ಕೂ ಹೃದಯ ವಿದ್ರಾವಕ. ಈ ಅಪಘಾತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರೊಂದಿಗೆ ನಾವಿದ್ದೇವೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆʼʼ ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರ ಎಕ್ಸ್ ಪೋಸ್ಟ್:
The mishap in Bengaluru is absolutely heartrending. In this tragic hour, my thoughts are with all those who have lost their loved ones. I pray that those who are injured have a speedy recovery: PM @narendramodi
— PMO India (@PMOIndia) June 4, 2025
ಘಟನೆಯಲ್ಲಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಕಾಲ್ತುಳಿತ ಸಂಭವಿಸಿದೆ ಎಂದು ಬಿಜೆಪಿ ಆರೋಪಿಸಿದೆ.
ಈ ಸುದ್ದಿಯನ್ನೂ ಓದಿ: Chinnaswamy Stadium Stampede: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತದಲ್ಲಿ 11 ಮಂದಿ ಸಾವು; ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿದ ಸಿಎಂ
ಹೇಗಾಯ್ತು ದುರಂತ?
ವಿಧಾನಸೌಧದ ಮುಂಭಾಗ ರಾಜ್ಯ ಸರ್ಕಾರ ನೀಡಿದ್ದ ಸನ್ಮಾನ ಸ್ವೀಕರಿಸಿ ಆರ್ಸಿಬಿ ಆಟಗಾರರು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸುವ ಯೋಜನೆ ಇತ್ತು. ಈ ಹಿನ್ನೆಲೆಯಲ್ಲಿ ಆಟಗಾರರನ್ನು ಕಣ್ತುಂಬಿಕೊಳ್ಳಲು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಾವಿರಾರು ಮಂದಿ ಆರ್ಸಿಬಿ ಅಭಿಮಾನಿಗಳು ಸೇರಿದ್ದರು. ಕ್ರೀಡಾಂಗಣದ ಗೇಟ್ ನಂಬರ್ 5 ಮತ್ತು 6 ರ ಮುಖಾಂತರ ಪ್ರವೇಶಕ್ಕೆ ಅವಕಾಶ ನೀಡುವಂತೆ ಅಭಿಮಾನಿಗಳು ಪಟ್ಟು ಹಿಡಿದರು. ಇದಕ್ಕೆ ಅವಕಾಶ ನೀಡದಿದ್ದಾಗ ಗೇಟ್ ನಂಬರ್ 6ರ ಮೇಲೆ ಹತ್ತಿ ಕ್ರೀಡಾಂಗಣದ ಒಳಗೆ ನುಗ್ಗುಲು ಯತ್ನಿಸಿದರು. ಈ ವೇಳೆ ಬಿದ್ದು ಓರ್ವನ ಕಾಲು ಮುರಿದಿತ್ತು.
ಇತ್ತ ಮತ್ತೊಂದು ಗೇಟ್ ಬಳಿ ಅಭಿಮಾನಿಗಳ ನೂಕುನುಗ್ಗಲು ಕಂಡು ಬಂದಿತ್ತು. ಇದಿಂದ ಹಲವರು ಗಂಭೀರವಾಗಿ ಗಾಯಗೊಂಡಿದ್ದರು. ಹೀಗಾಗಿ ಪೊಲೀಸರು ಅಭಿಮಾನಿಗಳನ್ನು ಚದುರಿಸಲು ಲಾಠಿ ಚಾರ್ಜ್ ಮಾಡಿದರು. ಅತ್ತ ಗೇಟ್ ನಂಬರ್ 12ರಲ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚಾಯಿತು. ಆಗ, ಗೇಟ್ ತೆರದು ಅಭಿಮಾನಿಗಳನ್ನು ಒಳಗಡೆ ಬಿಡಲಾಯಿತು. ಏಕಾಏಕಿ ಅಭಿಮಾನಿಗಳು ಬ್ಯಾರಿಕೇಡ್ಗಳನ್ನು ತಳ್ಳಿ ಕ್ರೀಡಾಂಗಣದ ಒಳಗೆ ನುಗ್ಗಲು ಆರಂಭಿಸಿದ್ದರಿಂದ ಕಾಲ್ತುಳಿತ ಸಂಭವಿಸಿತು.
ಈ ಕಾಲ್ತುಳಿತದಲ್ಲಿ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ಅವರನ್ನು ಬೆಂಗಳೂರಿನ ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ವೈದೇಹಿ ಆಸ್ಪತ್ರೆ, ಶಿವಾಜಿನಗರದಲ್ಲಿರುವ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ದಾಖಲಿಸಲಾಯಿತು. ಬೌರಿಂಗ್ ಆಸ್ಪತ್ರೆಯಲ್ಲಿ ದಾಖಲಾಗಿದ್ದವರ ಪೈಕಿ 6 ಮಂದಿ ಮತ್ತು ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದವರಲ್ಲಿ ನಾಲ್ವರು ಮೃತಪಟ್ಟಿದ್ದಾರೆ. 12 ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನು ಘಟನೆ ಬಗ್ಗೆ ಸುದ್ದಿಗೋಷ್ಠಿ ನಡೆಸಿರುವ ಸಿಎಂ ಸಿದ್ದರಾಮಯ್ಯ ಅವರು ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.