Maayavi Movie: ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವುಳ್ಳ ʼಮಾಯಾವಿʼ ಚಿತ್ರದ ಟೀಸರ್, ಹಾಡು ಬಿಡುಗಡೆ
Maayavi Movie: ರಘುರಾಮ್ ನಾಯಕನಾಗಿ ನಟಿಸಿರುವ, ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ʼಮಾಯಾವಿʼ ಚಿತ್ರದ ಟೀಸರ್ ಹಾಗೂ ʼಆವರಿಸುʼ ಹಾಡಿನ ಅನಾವರಣ ಕಾರ್ಯಕ್ರಮ ನೆರವೇರಿತು. ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು ʼಆವರಿಸುʼ ಹಾಡನ್ನು ಹಾಡಿದ್ದು, ಅಗಸ್ತ್ಯ ಸಂತೋಷ್ ಸಂಗೀತ ನೀಡಿದ್ದಾರೆ. ಆನಂದ್ ಕಮ್ಮಸಾಗರ ಬರೆದಿದ್ದಾರೆ. ಈ ಕುರಿತ ವಿವರ ಇಲ್ಲಿದೆ.


ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ನೂತನ ಪ್ರತಿಭೆಗಳ ಆಗಮನ ಹೆಚ್ಚಾಗುತ್ತಿದೆ. ಈಗ ಆ ಸಾಲಿಗೆ ಕೋಟೆನಾಡಿನ ಹುಡುಗ ರಘು ರಾಮ್ ಸೇರ್ಪಡೆಯಾಗಿದ್ದಾರೆ. ನಾಯಕನಾಗಷ್ಟೇ ಅಲ್ಲದೆ ಇಷ್ಟ ಎಂಟರ್ಟೈನರ್ಸ್ ಮೂಲಕ ʼಮಾಯಾವಿʼ ಚಿತ್ರವನ್ನು (Maayavi Movie) ನಿರ್ಮಾಣ ಕೂಡ ಮಾಡಿದ್ದಾರೆ. ಶಂಕರ್ ಜಿ ನಿರ್ದೇಶಿಸಿರುವ ಈ ಚಿತ್ರದ ಟೀಸರ್ ಹಾಗೂ ʼಆವರಿಸುʼ ಹಾಡಿನ ಅನಾವರಣ ಇತ್ತೀಚೆಗೆ ಅದ್ಧೂರಿಯಾಗಿ ನೆರವೇರಿತು. ಶ್ರೀ ಶಾಂತವೀರ ಮಹಾಸ್ವಾಮೀಜಿ ಹಾಗೂ ಶ್ರೀ ಈಶ್ವರಾನಂದಾಪುರಿ ಮಹಾಸ್ವಾಮೀಜಿ ʼಮಾಯಾವಿʼ ಚಿತ್ರದ ಟೀಸರ್ ಹಾಗೂ ಹಾಡಿನ ಲಿರಿಕಲ್ ವಿಡಿಯೋ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ನಿರ್ದೇಶಕ ಶಂಕರ್ ಮಾತನಾಡಿ, ನಾನು ಈ ಹಿಂದೆ ಕೆಲವು ನಿರ್ದೇಶಕರ ಬಳಿ ಕೆಲಸ ಮಾಡಿದ್ದೇನೆ. ನಿರ್ದೇಶನಕನಾಗಿ ಇದು ಮೊದಲ ಚಿತ್ರ. ಚಿತ್ರದುರ್ಗದಲ್ಲಿ ಕಥೆ ಕೇಳಿದ ಮಿತ್ರ ರಘುರಾಮ್ ಹಾಗೂ ಅವರ ಪತ್ನಿ ಅಕ್ಷತ ಚಿತ್ರ ನಿರ್ಮಾಣಕ್ಕೆ ಮುಂದಾದರು. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಚಿತ್ರದುರ್ಗ, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದ್ದು, ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ. ಚಿತ್ರಕ್ಕೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ಎಂದರು.
ನಾಯಕ ಹಾಗೂ ನಿರ್ಮಾಪಕ ರಘುರಾಮ್ ಮಾತನಾಡಿ, ನಾನು ಚಿತ್ರದುರ್ಗದವನು. ನಾಯಕನಾಗಿ ನನಗೆ ʼಮಾಯಾವಿʼ ಮೊದಲ ಚಿತ್ರ. ಈ ಚಿತ್ರ ನಿರ್ಮಾಣವಾಗಲು ಪ್ರಮುಖ ಕಾರಣ ನನ್ನ ಪತ್ನಿ ಡಾ. ಅಕ್ಷತ. ಮೂಲತಃ ವೈದ್ಯೆ. ಇನ್ನು ಶಂಕರ್ ಅವರು ಈ ಚಿತ್ರದ ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ಆನಂತರ ಚಿತ್ರಕ್ಕೆ ಚಾಲನೆ ದೊರೆಯಿತು. ಇಂದು ಟೀಸರ್ ಹಾಗೂ ʼಆವರಿಸುʼ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ಜನಪ್ರಿಯ ಗಾಯಕ ವಿಜಯ್ ಪ್ರಕಾಶ್ ಅವರು ಈ ಹಾಡನ್ನು ಹಾಡಿದ್ದು, ಅಗಸ್ತ್ಯ ಸಂತೋಷ್ ಸಂಗೀತ ನೀಡಿದ್ದಾರೆ. ಆನಂದ್ ಕಮ್ಮಸಾಗರ ಬರೆದಿದ್ದಾರೆ. ನಮ್ಮ ಚಿತ್ರದ ಮುಹೂರ್ತದ ದಿನ ಬಂದು ಹಾರೈಸಿದ್ದ ಇಬ್ಬರು ಗುರುಗಳು ಇಂದು ಆಡಿಯೋ ಹಾಗೂ ಟೀಸರ್ ಬಿಡುಗಡೆ ಮಾಡಿದ್ದು ಬಹಳ ಖುಷಿಯಾಗಿದೆ. ಪಿ. ಮೂರ್ತಿ ಅವರಿಗೂ ಈ ಸಂದರ್ಭದಲ್ಲಿ ಧನ್ಯವಾದ ಹೇಳುತ್ತೇನೆ ಎಂದರು.
ನಾಯಕಿ ನಿಶ್ಚಿತ ಶೆಟ್ಟಿ ಮಾತನಾಡಿ, ನಾನು ಮೂಲತಃ ಎಂಜಿನಿಯರ್. ʼಶ್ರೀ ಜಗನ್ನಾಥದಾಸರುʼ ಚಿತ್ರದಿಂದ ನನ್ನ ಸಿನಿ ಜರ್ನಿ ಆರಂಭವಾಯಿತು. ʼಮಾಯಾವಿʼ ಚಿತ್ರದಲ್ಲೂ ನನ್ನ ಪಾತ್ರ ಚೆನ್ನಾಗಿದೆ. ನಟನೆಯ ಜತೆಗೆ ತಂತ್ರಜ್ಞಳಾಗೂ ಕಾರ್ಯ ನಿರ್ವಹಿಸಿದ್ದೇನೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Summer Printed Fashion: ಬೇಸಿಗೆಯಲ್ಲಿ ಮನಸ್ಸನ್ನು ಉಲ್ಲಾಸಗೊಳಿಸುವ ಪ್ರಿಂಟೆಡ್ ಫ್ಯಾಷನ್‌ವೇರ್ಸ್ ಹಂಗಾಮ
ನಾಯಕ ರಘುರಾಮ್ ಅವರ ಪತ್ನಿ ಅಕ್ಷತ ಅವರು ಸಿನಿಮಾ ಆರಂಭವಾದ ಬಗ್ಗೆ ತಿಳಿಸಿ, ಎಲ್ಲರೂ ʼಮಾಯಾವಿʼ ಚಿತ್ರಕ್ಕೆ ಪ್ರೋತ್ಸಾಹ ನೀಡಬೇಕೆಂದರು.
ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ಪಿ. ಮೂರ್ತಿ, ಕಾರ್ಯಕಾರಿ ನಿರ್ಮಾಪಕರಾದ ಮಹೇಶ್ವರಪ್ಪ, ಹಿರಿಯ ನಟ ಸುರೇಶ್ ಬಾಬು ಮುಂತಾದ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.