Agnyathavasi Movie: Zee5 ಒಟಿಟಿಗೆ ʼಅಜ್ಞಾತವಾಸಿʼ ಎಂಟ್ರಿ; ಯಾವಾಗ ಪ್ರಸಾರ?
Zee5: ಇತ್ತೀಚೆಗೆ ಥಿಯೇಟರ್‌ನಲ್ಲಿ ಬಿಡುಗಡೆಯಾಗಿ ಗಮನ ಸೆಳೆದ ಸ್ಯಾಂಡಲ್‌ವುಡ್ ಚಿತ್ರ ʼಅಜ್ಞಾತವಾಸಿʼ ಇದೀಗ ಒಟಿಟಿಗೆ ಎಂಟ್ರಿ ಕೊಡಲು ಸಜ್ಜಾಗಿದೆ. ಜನಾರ್ದನ್ ಚಿಕ್ಕಣ್ಣ ನಿರ್ದೇಶನದಲ್ಲಿ, ಹೇಮಂತ್ ರಾವ್, ಪ್ರಚುರ ಪಿ.ಪಿ. ಹಾಗೂ ಜಯಲಕ್ಷ್ಮೀ ನಿರ್ಮಾಣದಲ್ಲಿ ʼಅಜ್ಞಾತವಾಸಿʼ ಸಿನಿಮಾ ಮೂಡಿ ಬಂದಿದ್ದು, ಮೇ 28ಕ್ಕೆ ಝೀ5 ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ.

ʼಅಜ್ಞಾತವಾಸಿʼ ಕನ್ನಡ ಚಿತ್ರದ ಪೋಸ್ಟರ್.

ಬೆಂಗಳೂರು: ಕನ್ನಡ ಪ್ರೇಕ್ಷಕರು ಕಂಟೆಂಟ್ ಬೆಸ್ಡ್ ಸಿನಿಮಾಗಳನ್ನು ಕೈ ಬಿಡುವುದಿಲ್ಲ ಎನ್ನುವುದಕ್ಕೆ ಸದ್ಯದ ಉದಾಹರಣೆ ʼಅಜ್ಞಾತವಾಸಿʼ (Agnyathavasi Movie). ಥಿಯೇಟರ್‌ನಲ್ಲಿ ಮೆಚ್ಚುಗೆ ಪಡೆದಿದ್ದ ಈ ಚಿತ್ರವೀಗ ಒಟಿಟಿಗೆ ಎಂಟ್ರಿ ಕೊಡಲು ಸಜ್ಜಾಗಿದೆ. ಭಾರತದ ಅತಿದೊಡ್ಡ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ ಝೀ5 (ZEE5)ನಲ್ಲಿ 'ಅಜ್ಞಾತವಾಸಿ' ಸಿನಿಮಾ ಶೀಘ್ರದಲ್ಲಿ ಸ್ಟ್ರೀಮಿಂಗ್ ಆಗಲಿದೆ. ಜನಾರ್ದನ್ ಚಿಕ್ಕಣ್ಣ ನಿರ್ದೇಶನದಲ್ಲಿ, ಹೇಮಂತ್ ರಾವ್, ಪ್ರಚುರ ಪಿ.ಪಿ. ಹಾಗೂ ಜಯಲಕ್ಷ್ಮೀ ನಿರ್ಮಾಣದಲ್ಲಿ ʼಅಜ್ಞಾತವಾಸಿʼ ಸಿನಿಮಾ ಮೂಡಿ ಬಂದಿದೆ. ಈ ಚಿತ್ರ ಯಾವಾಗ ಸ್ಟ್ರೀಮಿಂಗ್ ಆಗಲಿದೆ ಎನ್ನುವ ವಿವರ ಇಲ್ಲಿದೆ.
ರಂಗಾಯಣ ರಘು ಮುಖ್ಯ ಪಾತ್ರದಲ್ಲಿ ನಟಿಸಿರುವ, ಮಲೆನಾಡು ಹಿನ್ನೆಲೆಯ ಸಸ್ಪೆನ್ಸ್ ಥ್ರಿಲ್ಲರ್ ಕಥೆಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಾಲಿವುಡ್ ನಟ ಜಾನ್ ಅಬ್ರಹಾಂ ನೋಡಲೇಬೇಕಾದ ಸಿನಿಮಾ ಎಂದು ಹೇಳಿದ್ದರು. ಏ. 11ರಂದು ಥಿಯೇಟರ್‌ನಲ್ಲಿ ಬಿಡುಗಡೆಯಾಗಿದ್ದ ʼಅಜ್ಞಾತವಾಸಿʼ ಸಿನಿಮಾ ಮೇ 28ಕ್ಕೆ ಝೀ5 ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ.
ಝೀ5 ಇನ್‌ಸ್ಟಾಗ್ರಾಮ್ ಪೋಸ್ಟ್ ಇಲ್ಲಿದೆ:
ಈ ಸುದ್ದಿಯನ್ನೂ ಓದಿ: Maayavi Movie: ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವುಳ್ಳ ʼಮಾಯಾವಿʼ ಚಿತ್ರದ ಟೀಸರ್, ಹಾಡು ಬಿಡುಗಡೆ
ʼʼಕನ್ನಡದ ಬ್ಲಾಕ್ ಬಸ್ಟರ್ ʼಅಜ್ಞಾತವಾಸಿʼ ಈಗಾಗಲೇ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ. ಈ ಚಿತ್ರ ನಮ್ಮ ಫ್ಲ್ಯಾಟ್‌ಫಾರ್ಮ್‌ನಲ್ಲೂ ಪ್ರೇಕ್ಷಕರನ್ನು ರಂಜಿಸಲಿದೆ ಎಂಬ ವಿಶ್ವಾಸವಿದೆ. ಜನಾರ್ದನ್ ಚಿಕ್ಕಣ್ಣ ನಿರ್ದೇಶನ ಮತ್ತು ರಂಗಾಯಣ ರಘು ಅಭಿನಯ ಚಿತ್ರದ ತೂಕ ಹೆಚ್ಚಿಸಿದೆ. ಸಂತಸದಿಂದ ಈ ಪ್ರಯಾಣದ ಭಾಗವಾಗುತ್ತಿದ್ದೇವೆ ಮತ್ತು ಭವಿಷ್ಯದಲ್ಲಿ ನಮ್ಮ ಜಾಗತಿಕ ಪ್ರೇಕ್ಷಕರಿಗೆ ಇಂತಹ ಅತ್ಯುತ್ತಮ ಕಂಟೆಂಟ್ ನೀಡುವುದನ್ನು ಮುಂದುವರಿಸಲಿದ್ದೇವೆʼʼ ಎಂದು ಮೂಲಗಳು ತಿಳಿಸಿವೆ.
ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ಮಾತನಾಡಿ, ʼʼಅಜ್ಞಾತವಾಸಿʼ ಚಿತ್ರವನ್ನು ಮಾಡಲು ಹೊರಟಾಗ, ಅದು ಕೇವಲ ಒಂದು ಕ್ರೈಮ್ ಥ್ರಿಲ್ಲರ್ ಚಿತ್ರವಾಗಿರಬಾರದು ಎಂದು ನಾನು ಬಯಸಿದ್ದೆ. ಪ್ರೇಕ್ಷಕರ ಮನಸ್ಸಿನಲ್ಲಿ ದೀರ್ಘಕಾಲ ಉಳಿಯುವ ಚಿತ್ರವಾಗಬೇಕು ಅಂದುಕೊಂಡಿದ್ದೆವು. ರಂಗಾಯಣ ರಘು ಅವರ ಅಭಿನಯ ಅದ್ಭುತವಾಗಿದೆ. ಥಿಯೇಟರ್‌ನಲ್ಲಿ ಅದ್ಭುತ ಪ್ರದರ್ಶನದ ನಂತರ, ಝೀ5ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ಸಹಯೋಗಕ್ಕಾಗಿ ನಾನು ಕೃತಜ್ಞನಾಗಿದ್ದೇನೆʼʼ ಎಂದು ವಿವರಿಸಿದ್ದಾರೆ.
ರಂಗಾಯಣ ರಘು ಮಾತನಾಡಿ, ʼʼನನ್ನ ವೃತ್ತಿ ಜೀವನದ ಅತ್ಯಂತ ವಿಶೇಷ ಸಿನಿಮಾಗಳಲ್ಲಿ ಇದೂ ಒಂದು. ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರವನ್ನು ನಿರ್ವಹಿಸುವುದು ಅತ್ಯಂತ ಸವಾಲಿನಿಂದ ಕೂಡಿತ್ತು. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ಅಭಿಮಾನಿಗಳು ಅಪಾರ ಪ್ರಮಾಣದಲ್ಲಿ ಪ್ರೀತಿ ತೋರಿಸಿದ್ದಾರೆ. ಒಟಿಟಿಯಲ್ಲಿ ಪ್ರೇಕ್ಷಕರು ಹೇಗೆ ಸ್ವೀಕರಿಸಲಿದ್ದಾರೆ ಎನ್ನುವುದನ್ನು ತಿಳಿಯಲು ಕಾತುರದಿಂದ ಕಾಯುತ್ತಿದ್ದೇನೆʼʼ ಎಂದಿದ್ದಾರೆ.
ಕಥೆ ಏನು?
ಮಲೆನಾಡ ಸಣ್ಣ ಹಳ್ಳಿಯಲ್ಲಿ ಒಂದು ಪೊಲೀಸ್ ಠಾಣೆ. ಆ ಠಾಣೆ ಶುರುವಾದಾಗಿನಿಂದ ಒಂದು ಕೇಸ್ ಸಹ ಇಲ್ಲ. ಹೀಗಿರುವಾಗಲೇ ಆ ಊರಿನ ಜಮೀನ್ದಾರ ಶಂಕರಪ್ಪ (ಶರತ್ ಲೋಹಿತಾಶ್ವ) ನಿಧನರಾಗುತ್ತಾರೆ. ಎಲ್ಲರೂ ಅದೊಂದು ಸಹಜ ಸಾವು ಅಂದುಕೊಂಡಿದ್ದರು. ಆದರೆ ಅದು ಕೊಲೆ ಎಂದು ಅದೇ ಠಾಣೆಯಲ್ಲಿ ಎಷ್ಟೋ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಹೇಳುತ್ತಾರೆ. ಅವರಿಗೆ ಅದು ಕೊಲೆ ಅಂತ ಯಾಕೆನಿಸಿತು? ಆ ಕೊಲೆ ಯಾರು ಮಾಡಿದರು? ಅದರ ಹಿಂದಿನ ಮರ್ಮವೇನು? ಎನ್ನುವುದೇ ‘ಅಜ್ಞಾತವಾಸಿ’ಯ ಕಥೆ.
ತಾರಾ ಬಳಗ
ರಂಗಾಯಣ ರಘು, ಶರತ್ ಲೋಹಿತಾಶ್ವ ಜತೆಗೆ ಸಿದ್ದು ಮೂಲಿಮನಿ, ಪಾವನಾ ಗೌಡ, ರವಿಶಂಕರ್ ಗೌಡ, ಯಮುನಾ ಶ್ರೀನಿಧಿ ಮುಂತಾದವರು ನಟಿಸಿದ್ದಾರೆ.