ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

World Blood Pressure Day: ವಿಶ್ವ ರಕ್ತದೊತ್ತಡ ದಿನ- ನಿಯಮಿತ ತಪಾಸಣೆಯನ್ನು ಮರೆಯಬೇಡಿ

ರಕ್ತದೊತ್ತಡ ಇದು ಎಂತಹ ಸಮಸ್ಯೆ ಎಂದರೆ ಯಾವಾಗ, ಹೇಗೆ ಪ್ರಾರಂಭವಾಯಿತು ಎನ್ನುವುದೇ ತಿಳಿಯುವುದಿಲ್ಲ. ರಕ್ತದೊತ್ತಡ ಎನ್ನುವ ಬೀಜಕ್ಕೆ ಒತ್ತಡದ ಬದುಕು, ವ್ಯಾಯಾಮ ರಹಿತ ಜೀವನ, ಅನಾರೋಗ್ಯಕರ ಆಹಾರ ಮೊದಲಾದವುಗಳು ನೀರು, ಗೊಬ್ಬರ ಹಾಕುತ್ತಲೇ ಇರುತ್ತವೆ. ಈ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಮೇ ತಿಂಗಳ ಹದಿನೇಳನೇ ದಿನವನ್ನು ಜಾಗತಿಕ ರಕ್ತದೊತ್ತಡದ ದಿನವೆಂದು ಘೋಷಿಸಲಾಗಿದೆ.

ರಕ್ತದೊತ್ತಡ ನಿರ್ವಹಣೆ ಮಾಡುವುದು  ಹೇಗೆ?

ಶೀತ, ಜ್ವರ, ಕೆಮ್ಮು ಮುಂತಾದ ಸೋಂಕು ರೋಗಗಳು ಇಂದಿಲ್ಲದಿದ್ದರೂ ನಾಳೆಗೆ ಬಂದುಬಿಡಬಹುದು. ಆದರೆ ಜೀವನಶೈಲಿಯಿಂದ ಬರುವ ರೋಗಗಳು ಹಾಗಲ್ಲ, ನಮಗೇ ತಿಳಿಯದಂತೆ ನಾವೆಂದೋ ಬಿತ್ತಿದ ಬೀಜ, ಆಳವಾದ ಬೇರುಗಳನ್ನು ಬಿಟ್ಟ ಮೇಲೆಯೇ ಮೊಳಕೆ ಕಾಣುವುದು. ಉದಾ- ರಕ್ತದೊತ್ತಡದಂಥ (Blood Pressure) ಸಮಸ್ಯೆ. ಇದನ್ನು ಗಮನಿಸಿದರೆ ಎಂದಿನಿಂದ ಪ್ರಾರಂಭವಾಯಿತು ಎನ್ನುವುದೇ ತಿಳಿಯುವುದಿಲ್ಲ. ಆದರೆ ದೀರ್ಘಕಾಲದಿಂದಲೇ ಒತ್ತಡದ ಬದುಕು, ವ್ಯಾಯಾಮ ರಹಿತ ಜೀವನ, ಅನಾರೋಗ್ಯಕರ ಆಹಾರ ಮುಂತಾದ ಕಾರಣಗಳು ಈ ಬೀಜಕ್ಕೆ ನೀರು, ಗೊಬ್ಬರ ಹಾಕುತ್ತಲೇ ಇರುತ್ತವೆ. ಇದರಿಂದಲೇ ಹೃದಯದ ಸಮಸ್ಯೆಗಳು ಹುಟ್ಟಿಕೊಳ್ಳುವುದು. ಈ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಮೇ ತಿಂಗಳ ಹದಿನೇಳನೇ ದಿನವನ್ನು ಜಾಗತಿಕ ರಕ್ತದೊತ್ತಡದ ದಿನವೆಂದು (World Blood Pressure Day) ಘೋಷಿಸಲಾಗಿದೆ. ರಕ್ತದೊತ್ತಡ ಅಥವಾ ಬಿಪಿ (BP) ಎಂದು ಜನಪ್ರಿಯವಾಗಿ ಕರೆಯಲ್ಪಡುವ ಈ ಸಮಸ್ಯೆಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಬಿಪಿ ಎಂದರೆ?

ಆಡು ಮಾತಿನಲ್ಲಿ ಬಿಪಿ ಅಥವಾ ರಕ್ತದೊತ್ತಡ ಎಂದು ಕರೆಯಲಾಗುವ ಈ ಅವ‍ಸ್ಥೆಯು, ರಕ್ತನಾಳಗಳಲ್ಲಿ ಪ್ರವಹಿಸುವ ರಕ್ತವು ನಿಗದಿತ ಅಥವಾ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿನ ಒತ್ತಡದಲ್ಲಿ ಹರಿಯುವುದರಿಂದ ಉಂಟಾಗುವಂಥದ್ದು. ಇಂದಿನ ಜೀವನಶೈಲಿಯಲ್ಲಿ ವಯಸ್ಸು, ಲಿಂಗ ಮುಂತಾದ ಯಾವುದೇ ತಾರತಮ್ಯವಿಲ್ಲದೆ ಕಾಡಬಹುದಾದ ತೊಂದರೆಯಿದು. ಮೊದಲಿಗೆ ಕೇವಲ ರಕ್ತದ ಏರೊತ್ತಡ ಎಂಬುದರಿಂದ ಆರಂಭವಾಗುವ ಸಮಸ್ಯೆಯು ಕ್ರಮೇಣ ಹೃದ್ರೋಗ, ಪಾರ್ಶ್ವವಾಯು ಮುಂತಾದ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ. ಆರಂಭದಲ್ಲಿ ತನ್ನ ಇರುವಿಕೆಯನ್ನು ಅಷ್ಟಾಗಿ ಪ್ರಕಟಿಸದ ಈ ಸಮಸ್ಯೆಯು ಬಿಪಿ ೧೮೦/೧೨೦ರ ಆಜೂಬಾಜು ತಲುಪುತ್ತಿದ್ದಂತೆ ಕೆಲವು ಲಕ್ಷಣಗಳನ್ನು ತೋರಿಸುತ್ತದೆ.

ಲಕ್ಷಣಗಳೇನು?

ಸಾಮಾನ್ಯವಾಗಿ ತಲೆನೋವು, ತಲೆ ಸುತ್ತು, ಎದೆನೋವು, ಉಸಿರಾಡಲು ಕಷ್ಟವಾಗುವುದು, ಆತಂಕ, ಗೊಂದಲ, ಹೊಟ್ಟೆ ತೊಳೆಸುವುದು, ವಾಂತಿ, ದೃಷ್ಟಿ ಮಂಜಾಗುವುದು, ಅನಿಯಂತ್ರಿತ ಎದೆ ಬಡಿತ ಮುಂತಾದ ಲಕ್ಷಣಗಳು ಕಂಡುಬರುತ್ತವೆ.

ಒಂದು ಅಂದಾಜಿನ ಪ್ರಕಾರ ಸುಮಾರು ಶೇ. ೪೬ರಷ್ಟು ಮಂದಿಗೆ ತಮಗೆ ರಕ್ತದೊತ್ತಡ ಇರುವ ವಿಷಯವೇ ತಿಳಿದಿರುವುದಿಲ್ಲ. ಹಾಗಾಗಿ ಇಂಥ ಯಾವುದೇ ಲಕ್ಷಣಗಳು ಕಾಣುವವರೆಗೆ ಕಾಯದೆ ನಿಯಮಮಿತವಾಗಿ ಬಿಪಿ ಪರೀಕ್ಷಿಸಿಕೊಳ್ಳುವುದು ಅಗತ್ಯ. ಹಾಗಾಗಿಯೇ, “ರಕ್ತದೊತ್ತಡವನ್ನು ಸರಿಯಾಗಿ ಪರೀಕ್ಷಿಸಿಕೊಳ್ಳಿ, ನಿಯಂತ್ರಿಸಿ, ದೀರ್ಘಾಯುವಾಗಿ” ಎಂಬ ಈ ಬಾರಿಯ ಘೋಷವಾಕ್ಯ ಮಹತ್ವ ಪಡೆದಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಿಶ್ವದೆಲ್ಲೆಡೆ ಪ್ರತಿವರ್ಷ ಒಂದು ಶತಕೋಟಿಗೂ ಹೆಚ್ಚು ಮಂದಿ ಈ ಸಮಸ್ಯೆಯಿಂದ ನರಳುತ್ತಿದ್ದಾರೆ. ಮಾತ್ರವಲ್ಲ ೭.೫ ದಶಲಕ್ಷ ಮಂದಿ ಜೀವ ತೆರುತ್ತಿದ್ದಾರೆ.

ಇದನ್ನೂ ಓದಿ: Health Tips: ತೂಕ ಇಳಿಸುವ ಸರಳ ವ್ಯಾಯಾಮಗಳು ಗೊತ್ತೇ?

ಹತೋಟಿ ಹೇಗೆ?

ಬಿಪಿಯನ್ನು ಸಂಪೂರ್ಣ ಹತೋಟಿಯಲ್ಲಿ ಇರಿಸಿಕೊಳ್ಳಲು ಸಾಧ್ಯವಿದೆ. ಇದಕ್ಕಾಗಿ ಜೀವನಶೈಲಿಯಲ್ಲಿ ಕೆಲವು ಅಗತ್ಯ ಬದಲಾವಣೆಗಳನ್ನು ಮಾಡಿಕೊಂಡರೆ ರಕ್ತದ ಏರೊತ್ತಡವನ್ನು ನಿಯಂತ್ರಣಕ್ಕೆ ತರಬಹುದು. ಮೊದಲಿಗೆ ಸೋಡಿಯಂ ಸೇವನೆಯ ಪ್ರಮಾಣವನ್ನು ಕಡಿಮೆ ಮಾಡಬೇಕು. ಅಂದರೆ ಉಪ್ಪು ಹೆಚ್ಚು ತಿನ್ನಬೇಡಿ. ಇದು ನೇರವಾಗಿ ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕಾಗಿ ಯಾವುದೇ ಸಂಸ್ಕರಿತ ಆಹಾರಗಳು ಬೇಡ. ಸಾಫ್ಟ್‌ ಡ್ರಿಂಕ್‌, ಚಿಪ್ಸ್‌, ಪ್ಯಾಕೆಟ್‌ ಅಥವಾ ಕ್ಯಾನ್ಡ್‌ ಆಹಾರಗಳಲ್ಲಿ ಉಪ್ಪಿನ ಅಂಶ ಹೆಚ್ಚಿರುತ್ತದೆ. ಪ್ರಿಸರ್ವೇಟಿವ್‌ ಬಳಸಿದ ಬಹುತೇಕ ಆಹಾರಗಳಲ್ಲಿ ಸೋಡಿಯಂ ಪ್ರಮಾಣ ಹೆಚ್ಚು. ಹಾಗಾಗಿ ತಾಜಾ ಆಹಾರಗಳು, ಸತ್ವಭರಿತ ಆಹಾರಗಳ ಸೇವನೆಯತ್ತ ಗಮನ ನೀಡಿ. ಆಹಾರದ ರುಚಿ ಹೆಚ್ಚಿಸುವುದಕ್ಕೆ ಉಪ್ಪು ಹೆಚ್ಚು ಉಪಯೋಗಿಸುವ ಬದಲು ಹರ್ಬ್‌ಗಳ ಬಳಕೆಯನ್ನು ಹೆಚ್ಚಿಸಿ.

ಕೊಬ್ಬು ಕಡಿಮೆ ಮಾಡಿ

ನಿತ್ಯ ತಿನ್ನುವ ಕೊಬ್ಬಿನ ಪ್ರಮಾಣ ಮತ್ತು ಗುಣಮಟ್ಟದ ಬಗ್ಗೆಯೂ ಗಮನ ಅಗತ್ಯ. ಸ್ಯಾಚುರೇಟೆಡ್ ಕೊಬ್ಬು ಹೆಚ್ಚಿರುವ ಆಹಾರಗಳ ಬದಲಿಗೆ ಆರೋಗ್ಯಕರ ಕೊಬ್ಬು ಇರುವ ಎಣ್ಣೆ ಬೀಜಗಳು, ಅವಕಾಡೊ ಮುಂತಾದವು ದೇಹಕ್ಕೆ ಹಿತವಾಗುತ್ತವೆ. ಬಳಸುವ ಎಣ್ಣೆಯ ಬಗ್ಗೆಯೂ ಸರಿಯಾದ ಅರಿವು ಅಗತ್ಯ. ಕರಿದ ತಿಂಡಿಗಳನ್ನು ದೂರ ಮಾಡಿದಷ್ಟೂ ಒಳ್ಳೆಯದು. ಆಯಾ ಋತುವಿನಲ್ಲಿ ದೊರೆಯುವ ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚಾಗಿ ಆಹಾರದಲ್ಲಿ ಸೇರಿಸಿಕೊಳ್ಳುವುದು ಸೂಕ್ತ.

ವ್ಯಾಯಾಮನಡಿಗೆ, ಸೈಕಲ್‌ ಹೊಡೆಯುವುದು, ಈಜು, ನೃತ್ಯ, ಯಾವುದೇ ಆಟಗಳು, ಯೋಗ, ಏರೋಬಿಕ್ಸ್‌ ಮುಂತಾದ ಯಾವುದೇ ದೈಹಿಕ ಚಟುವಟಿಕೆಗಳು ವಾರದಲ್ಲಿ ಕನಿಷ್ಠ ೫ ದಿನವಾದರೂ ಇರಲಿ. ದೇಹದ ತೂಕ ಹೆಚ್ಚಾಗಿದ್ದರೆ, ಅದನ್ನು ಆದ್ಯತೆಯ ಮೇರೆಗೆ ಇಳಿಸಿಕೊಳ್ಳಿ.

ತಪಾಸಣೆ

ಕಾಲಕಾಲಕ್ಕೆ ವೈದ್ಯರಲ್ಲಿ ಹೋಗಿ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳಿ. ನಿಯಂತ್ರಣಕ್ಕೆ ಔಷಧ ಅಗತ್ಯವಾಗಿದ್ದರೆ ಅದನ್ನು ಮರೆಯಬೇಡಿ. ಧೂಮಪಾನ, ಆಲ್ಕೋಹಾಲ್ ನಂಥ ಚಟಗಳಿದ್ದರೆ ಅವುಗಳ ಹೊರತಾಗಿ ಬದುಕುವ ಮಾರ್ಗವಿದೆ ಎಂಬುದನ್ನು ತಿಳಿಯಿರಿ. ಮಾನಸಿನ ಒತ್ತಡ ದೂರ ಮಾಡಲು ಆರೋಗ್ಯಕರ ಮಾರ್ಗಗಳತ್ತ ಗಮನ ಹರಿಸಿ.