ಆಪರೇಷನ್ ಸಿಂದೂರ್ ಕಾರ್ಯಾಚರಣೆ ವೇಳೆ ಮೋದಿ ನೀಡಿದ್ದ ಹೇಳಿಕೆಯನ್ನು ಜಾಹೀರಾತಿಗಾಗಿ ಬಳಸಿಕೊಂಡ ವೈದ್ಯ; ಏನಿದು ಘಟನೆ?
ಛತ್ತೀಸ್‌ಗಢದ ವೈದ್ಯ ಡಾ. ಶಿವೇಂದ್ರ ಸಿಂಗ್ ತಿವಾರಿ, ಪಾಕಿಸ್ತಾನ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಹೇಳಿಕೆಯನ್ನು ತನ್ನ ಆಸ್ಪತ್ರೆಗೆ ಜಾಹೀರಾತಿಗೆ ಬಳಸಿಕೊಂಡಿದ್ದಾನೆ. ಆತನ ಕ್ರಮ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣರಾಗಿದೆ.


ರಾಯ್‌ಪುರ: ಛತ್ತೀಸ್‌ಗಢದ ವೈದ್ಯನೊಬ್ಬ ಮೋದಿ ಅವರ ಹೇಳಿಕೆಯನ್ನೇ ಜಾಹೀರಾತಿಗಾಗಿ ಬಳಸಿಕೊಂಡು ದೇಶಾದ್ಯಂತ ಸುದ್ದಿಯಲ್ಲಿದ್ದಾನೆ. ಏಪ್ರಿಲ್ 22ರಂದು ಪಹಲ್ಗಾಂನಲ್ಲಿ(Pahalgam Attack) ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ (Operation Sindoor) ಕುರಿತು ಪ್ರಧಾನಿ ನರೆಂದ್ರ ಮೋದಿ (Narendra Modi) ಮಾಡಿದ್ದ ಭಾಷಣದಲ್ಲಿದ್ದ ಹೇಳಿಕೆಯನ್ನು ಬಳಸಿಕೊಂಡು ಡಾ. ಶಿವೇಂದ್ರ ಸಿಂಗ್ ತಿವಾರಿ (Dr.Shivendra Singh Thivari) ಹೊಸ ರೀತಿಯ ಜಾಹೀರಾತು ನೀಡಿದ್ದಾನೆ. ತನ್ನ ಲಾಭಕ್ಕೆ ಈ ಹೇಳಿಕೆಯನ್ನು ಬಳಸಿ ಜಾಹೀರಾತನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾನೆ. ಇದಕ್ಕೆ ಹಲವರು ಟೀಕೆ ವ್ಯಕ್ತಪಡಿಸಿದ್ದಾರೆ.
ಡಾ. ಶಿವೇಂದ್ರ ಸಿಂಗ್ ತಿವಾರಿ ತನ್ನ ಜಾಹೀರಾತಿನಲ್ಲಿ ಪ್ರಧಾನಿ ಮೋದಿ ಪಾಕಿಸ್ತಾನದ ಕುರಿತು ಹೇಳಿದ ʼʼರಕ್ತ ಮತ್ತು ನೀರು ಒಂದೇ ಸಮಯದಲ್ಲಿ ಹರಿಯಲಾರದುʼʼ ಎಂಬ ಮಾತನ್ನು ಬಳಸಿಕೊಂಡಿದ್ದಾನೆ.
ವೈರಲ್ ಪೋಸ್ಟ್:
ಈ ಮಾತನ್ನು ಜಾಹೀರಾತಿಗಾಗಿ ಬಳಸಿಕೊಂಡ ಡಾ. ಶಿವೇಂದ್ರ ಸಿಂಗ್ ತಿವಾರಿ, ಒಂದೇ ಸಮಯದಲ್ಲಿ ರಕ್ತ ಮತ್ತು ನೀರು ಹರಿಯಲಾರದು: ಪ್ರಧಾನಮಂತ್ರಿ ಎಂದು ಬರೆದುಕೊಂಡಿದ್ದಾನೆ. ಅದರ ಕೆಳಗೆ ಮೂತ್ರದಲ್ಲಿ ರಕ್ತ ಕಂಡರೆ ತಕ್ಷಣವೇ ಯುರಾಲಜಿಸ್ಟ್ ಅನ್ನು ಸಂಪರ್ಕಿಸಿ. ಇದು ಗಂಭೀರವಾಗಿರಬಹುದು ಎಂಬ ಸಾಲನ್ನು ಸೇರಿಸಿದ್ದಾನೆ.
ಇದನ್ನು ನೋಡಿದ ಹಲವರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ʼʼಡಾಕ್ಟರ್ ಎಂ.ಬಿ.ಬಿ.ಎಸ್. ಜತೆಗೆ ಮಾರ್ಕೆಟಿಂಗ್ ಎಂ.ಬಿ.ಎ. ಓದಿದಂತಿದ್ದಾರೆ!ʼʼ ಎಂದು ನೆಟ್ಟಿಗರೊಬ್ಬರು ವ್ಯಂಗ್ಯವಾಡಿದ್ದಾರೆ. ಈತನ ವಿರುದ್ಧ ರಾಜ್ಯ ವೈದ್ಯಕೀಯ ಮಂಡಳಿ ಶಿಸ್ತು ಕ್ರಮ ಕೈಗೊಂಡಿದೆಯೇ ಎಂಬುದರ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಪಹಲ್ಗಾಂ ದಾಳಿ ನಂತರ ಭಾರತ ಕೈಗೊಂಡ ಕ್ರಮಗಳು
ಏಪ್ರಿಲ್ 22ರಂದು ನಡೆದ ಪಹಲ್ಗಾಂ ಉಗ್ರರ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ, ಭಾರತವು ಪಾಕಿಸ್ತಾನದ ವಿರುದ್ಧ ಹಲವು ಕ್ರಮಗಳನ್ನು ಕೈಗೊಂಡಿತು. ಸಿಂದೂ ನದಿಯ ಜಲ ಒಪ್ಪಂದವನ್ನು ಸ್ಥಗಿತಗೊಳಿಸಲಾಯಿತು. ಅಟ್ಟಾರಿ-ವಾಘಾ ಗಡಿಯನ್ನು ವ್ಯಾಪಾರಕ್ಕೆ ಅನುವು ಮಾಡಿಕೊಡದೆ ಮುಚ್ಚಲಾಯಿತು. ಪಾಕಿಸ್ತಾನದ ಸೇನಾ ಸಲಹೆಗಾರರಿಗೆ ನೀಡಿದ ವೀಸಾಗಳನ್ನು ರದ್ದುಗೊಳಿಸಲಾಯಿತು ಮತ್ತು ಪಾಕಿಸ್ತಾನದ ನಿಗಮಿತ ಸರಕನ್ನು ನಿಷೇಧಿಸಲಾಯಿತು.
ಮೇ 7ರಂದು ಭಾರತ ನಡೆಸಿದ ‘ಆಪರೇಷನ್ ಸಿಂದೂರ್’ನಲ್ಲಿ ಪಾಕಿಸ್ತಾನ ಮತ್ತು ಪಾಕ್ ನಿಯಂತ್ರಿತ ಕಾಶ್ಮೀರದಲ್ಲಿನ ಒಂಬತ್ತು ಉಗ್ರರ ನೆಲೆಗಳ ಮೇಲೆ ನಿಖರವಾದ ದಾಳಿ ನಡೆಸಿ, 100ಕ್ಕಿಂತ ಹೆಚ್ಚು ಉಗ್ರರನ್ನು ಹೊಡೆದುರುಳಿಸಲಾಯಿತು. ಪಾಕಿಸ್ತಾನದಿಂದ ಬಂದ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಭಾರತ ಹೊಡೆದುರುಳಿಸಿದೆ. ಮೇ 10ರಂದು ಉಭಯ ದೇಶಗಳ ನಡುವೆ ಕದನ ವಿರಾಮ ಒಪ್ಪಂದ ಜಾರಿಯಾಗಿದ್ದು, ಮೇ 18ರವರೆಗೆ ವಿಸ್ತರಿಸಲಾಗಿದೆ. ಎರಡೂ ದೇಶಗಳ ಸೇನಾಪಡೆಯ ಮುಖ್ಯಸ್ಥರ ಮಾತುಕತೆ ನಿರೀಕ್ಷಿಸಲಾಗಿದೆ.