Salman Rushdie: ಲೇಖಕ ಸಲ್ಮಾನ್ ರಶ್ದಿ ಹತ್ಯೆಗೆ ಯತ್ನಿಸಿದ ವ್ಯಕ್ತಿಗೆ 25 ವರ್ಷ ಜೈಲು ಶಿಕ್ಷೆ
ಖ್ಯಾತ ಲೇಖಕ ಸಲ್ಮಾನ್ ರಶ್ದಿ ಅವರ ಮೇಲೆ 2022ರಲ್ಲಿ ಚಾಕುವಿನಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದ ಆರೋಪಿ ಹಾದಿ ಮಾತರ್‌ಗೆ ಅಮೆರಿಕದ ಚೌಟಾಕ್ವಾ ಕೌಂಟಿ ಕೋರ್ಟ್ 25 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ನ್ಯೂಜರ್ಸಿಯ 27 ವರ್ಷದ ಹಾದಿ ಮಾತರ್‌ಗೆ ಶುಕ್ರವಾರ ಈ ಶಿಕ್ಷೆ ಪ್ರಕಟವಾಗಿದೆ. ಪಶ್ಚಿಮ ನ್ಯೂಯಾರ್ಕ್‌ನ ಕಾರ್ಯಕ್ರಮವೊಂದರಲ್ಲಿ ಈ ದಾಳಿ ನಡೆದಿತ್ತು.


ವಾಷಿಂಗ್ಟನ್: ಖ್ಯಾತ ಲೇಖಕ ಸಲ್ಮಾನ್ ರಶ್ದಿ (Salman Rushdie) ಅವರ ಮೇಲೆ 2022ರಲ್ಲಿ ಚಾಕುವಿನಿಂದ ದಾಳಿ ನಡೆಸಿ ಕೊಲೆ (Attempt Murder)ಗೆ ಯತ್ನಿಸಿದ ಆರೋಪಿ ಹಾದಿ ಮಾತರ್‌ಗೆ (Hadi Matar) ಚೌಟಾಕ್ವಾ ಕೌಂಟಿ ಕೋರ್ಟ್ 25 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ನ್ಯೂಜರ್ಸಿಯ (New Jersey) 27 ವರ್ಷದ ಹಾದಿ ಮಾತರ್‌ಗೆ ಶುಕ್ರವಾರ ಈ ಶಿಕ್ಷೆ ಪ್ರಕಟವಾಗಿದೆ. ಪಶ್ಚಿಮ ನ್ಯೂಯಾರ್ಕ್‌ನ ಕಾರ್ಯಕ್ರಮವೊಂದರಲ್ಲಿ ನಡೆದ ಈ ದಾಳಿಯ ವಿಚಾರಣೆ ತೀವ್ರವಾಗಿ ನಡೆಯಿತು.
77 ವರ್ಷ ವಯಸ್ಸಿನ ರಶ್ದಿ ತಮ್ಮ ಮೇಲಾದ ದಾಳಿಯ ಬಗ್ಗೆ ವಿವರವಾಗಿ ಸಾಕ್ಷ್ಯ ನೀಡಿದ್ದರು. ಈ ದಾಳಿಯಲ್ಲಿ ರಶ್ದಿ ಅವರ ತಲೆ, ಕತ್ತು, ಎದೆ, ಎಡಗೈ ಸೇರಿದಂತೆ 15 ಕಡೆ ಚಾಕುವಿನಿಂದ ಇರಿಯಲಾಗಿತ್ತು. ಇದರಿಂದ ಅವರು ಬಲಗಣ್ಣಿನ ದೃಷ್ಟಿ ಶಾಶ್ವತವಾಗಿ ಕಳೆದುಕೊಂಡಿದ್ದು, ಯಕೃತ್ತು ಮತ್ತು ಕರುಳಿಗೆ ಗಂಭೀರ ಹಾನಿಯಾಗಿದೆ. “ನಾನು ರಕ್ತದ ಮಡುವಿನಲ್ಲಿ ಮಲಗಿದ್ದೆ. ನನ್ನ ಕಣ್ಣು ಮತ್ತು ಕೈಯಲ್ಲಿ ನೋವುಂಟಾಗಿತ್ತು. ನಾನು ಸಾಯುತ್ತಿದ್ದೇನೆ ಎಂಬುದು ಸ್ಪಷ್ಟವಾಗಿ ತಿಳಿಯಿತು" ಎಂದು ರಶ್ದಿ ಫೆಬ್ರವರಿಯಲ್ಲಿ ನೀಡಿದ ಸಾಕ್ಷ್ಯದಲ್ಲಿ ತಿಳಿಸಿದ್ದರು.
ದಾಳಿಯ ಸಂದರ್ಭದಲ್ಲಿ ರಶ್ದಿ ಅವರೊಂದಿಗೆ ವೇದಿಕೆಯಲ್ಲಿದ್ದ ಕಾರ್ಯಕ್ರಮದ ಸಂಚಾಲಕ ರಾಲ್ಫ್ ಹೆನ್ರಿ ರೀಸ್ ಅವರನ್ನು ಗಾಯವಾಗಿದ್ದಕ್ಕಾಗಿ ಮಾತರ್‌ಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಜಿಲ್ಲಾ ವಕೀಲ ಜೇಸನ್ ಶ್ಮಿಟ್ ಪ್ರಕಾರ, ಈ ಎರಡೂ ಶಿಕ್ಷೆಗಳು ಏಕಕಾಲಿಕವಾಗಿ ಜಾರಿಯಾಗಲಿವೆ. ಏಕೆಂದರೆ ಇಬ್ಬರು ಸಂತ್ರಸ್ತರ ಮೇಲೆ ಒಂದೇ ಕಾರ್ಯಕ್ರಮದಲ್ಲಿ ದಾಳಿ ನಡೆದಿತ್ತು. "ಈ ದಾಳಿ ರಶ್ದಿ ಅವರಿಗೆ ಮಾತ್ರವಲ್ಲ,ಕಾರ್ಯಕ್ರಮಕ್ಕೆ ಬಂದಿದ್ದ 1,400 ಜನರಿಗೆ ಹಾನಿಯಾಗುವಂತೆ ಯೋಜಿಸಲಾಗಿತ್ತು" ಎಂದು ಶ್ಮಿಟ್ ಹೇಳಿದ್ದಾರೆ.
ತೀರ್ಪಿನ ಮೊದಲು, ಮಾತರ್ ಕೋರ್ಟ್‌ಗೆ ಹೇಳಿಕೆ ನೀಡಿ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿದ್ದ. "ಸಲ್ಮಾನ್ ರಶ್ದಿ ಇತರರನ್ನು ಅಗೌರವಿಸಲು ಬಯಸುತ್ತಾರೆ, ಬೇರೆಯವರನ್ನು ಕೀಳಾಗಿ ಕಾಣಲು ಬಯಸುತ್ತಾರೆ. ನಾನು ಅದನ್ನು ಒಪ್ಪುವುದಿಲ್ಲ" ಎಂದು ಅವನು ಹೇಳಿದ್ದ. ಆದರೆ ಮಾತರ್‌ನ ವಕೀಲ ನಥಾನಿಯಲ್ ಬಾರೋನ್, ತಮ್ಮ ಕಕ್ಷಿದಾರನಿಗೆ ಯಾವುದೇ ಕ್ರಿಮಿನಲ್ ದಾಖಲೆ ಇಲ್ಲ ಎಂದು ಒತ್ತಿಹೇಳಿದ್ದರು.
ಈ ಸುದ್ದಿಯನ್ನು ಓದಿ: Viral Video: ಪತ್ನಿಯನ್ನು ತುಂಡು ತುಂಡಾಗಿ ಕತ್ತರಿಸಿ ಎಸೆದ ಪತಿ; ಕಾರಣ ಕೇಳಿದ್ರೆ ಬೆಚ್ಚಿ ಬೀಳುತ್ತೀರಿ!
ಹಾದಿ ಮಾತರ್‌ನ ದಾಳಿಯ ಉದ್ದೇಶ ಏನಾಗಿತ್ತು?
ಫೆಡರಲ್ ಪ್ರಾಸಿಕ್ಯೂಟರ್‌ಗಳ ಪ್ರಕಾರ, 2006ರಲ್ಲಿ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಅವರ ಭಾಷಣದಿಂದ ಪ್ರೇರಿತನಾದ ಮಾತರ್, ರಶ್ದಿ ಅವರ 1988ರ ಕಾದಂಬರಿ ʼದಿ ಸ್ಯಾಟಾನಿಕ್ ವರ್ಸಸ್ʼಗೆ ಸಂಬಂಧಿಸಿದ ಫತ್ವಾವನ್ನು ಒಪ್ಪಿಕೊಂಡು ಈ ದಾಳಿಯನ್ನು ನಡೆಸಿದ್ದಾನೆ. ಈ ಕಾದಂಬರಿಯನ್ನು ಇರಾನ್‌ನ ಧರ್ಮ ಗುರುಗಳ ಧರ್ಮ ನಿಂದೆ ಎಂದು ಖಂಡಿಸಿದ್ದರು. ಇದರಿಂದ ರಶ್ದಿ ಅವರಿಗೆ ಬೆದರಿಕೆಗಳು ಬಂದಿದ್ದವು. ಮಾತರ್ 2022ರಲ್ಲಿ ಈ ಕಾದಂಬರಿಯ ಒಂದೆರಡು ಪುಟಗಳನ್ನು ಮಾತ್ರ ಓದಿದ್ದೇನೆ ಎಂದು ಒಪ್ಪಿಕೊಂಡಿದ್ದ.
ಈ ಜೀವಕ್ಕೆ ಕುತ್ತು ತರುವಂತ ದಾಳಿಯ ನಂತರ, ರಶ್ದಿ ಚಿಕಿತ್ಸೆಯನ್ನು ಪಡೆದು ಚೇತರಿಸಿಕೊಂಡರು. ಅವರು ಈ ದಾಳಿ ಮತ್ತು ಅದರ ಪರಿಣಾಮಗಳ ಬಗ್ಗೆ ʼನೈಫ್: ಮೆಡಿಟೇಷನ್ಸ್ ಆಫ್ಟರ್ ಆನ್ ಅಟೆಂಪ್ಟೆಡ್ ಮರ್ಡರ್ʼ ಎಂಬ ಆತ್ಮಕಥೆ ಬರೆದಿದ್ದಾರೆ. ಈ ತೀರ್ಪು ಈ ಪ್ರಕರಣಕ್ಕೆ ಮುಕ್ತಾಯ ಹಾಡಿದ್ದು, ಇಸ್ಲಾಮಿಸಂ ಮತ್ತು ಧರ್ಮವನ್ನು ಟೀಕೆ ಮಾಡುವವರಿಗೆ ಎದುರಾಗುವ ಬೆದರಿಕೆಗಳ ಕುರಿತ ಚರ್ಚೆಯನ್ನು ಮತ್ತೆ ಹುಟ್ಟು ಹಾಕಿದೆ.