Tumkur News: ಭಾಷೆಯ ಹೆಸರಿನಲ್ಲಿ ಸಾಮರಸ್ಯ ಮೂಡಿಸಬೇಕು: ಎಸ್.ರಾಜೇಂದ್ರ ಕುಮಾರ್
Tumkur News: ಸಂಸ್ಕೃತ ಭಾರತೀಯರ ಸಂಸ್ಕಾರ ತೋರಿಸುತ್ತದೆ. ಭಾಷೆಯ ಹೆಸರಿನಲ್ಲಿ ದ್ವೇಷಕಾರುವ ಬದಲು ಸಾಮರಸ್ಯ ಮೂಡಿಸಬೇಕು ಎಂದು ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.


ತುಮಕೂರು: ಸಂಸ್ಕೃತ ಭಾರತೀಯರ ಸಂಸ್ಕಾರ ತೋರಿಸುತ್ತದೆ. ಭಾಷೆಯ ಹೆಸರಿನಲ್ಲಿ ದ್ವೇಷಕಾರುವ ಬದಲು ಸಾಮರಸ್ಯ ಮೂಡಿಸಬೇಕು ಎಂದು ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ಅಭಿಪ್ರಾಯಪಟ್ಟರು. ನಗರದ (Tumkur News) ಶೇಷಾದ್ರಿಪುರಂ ಶಾಲೆಯಲ್ಲಿ ಏರ್ಪಡಿಸಿದ್ದ ಅಂಚೆಚೀಟಿ ಸಂಗ್ರಹದ ಮೂಲಕ ಸಂಸ್ಕೃತ ಕಲಿಕೆ, ಅಂಚೆ ಚೀಟಿ ಪ್ರದರ್ಶನ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅತ್ಯಂತ ಪ್ರಾಚೀನ ಭಾಷೆಯಾದ ಸಂಸ್ಕೃತ ಭಾಷೆಯು ಭಾರತೀಯ ಭಾಷೆಗಳಲ್ಲದೆ, ವಿದೇಶಿ ಭಾಷೆಗಳ ಮೇಲೆಯೂ ತನ್ನದೇ ಆದ ಪ್ರಭಾವ ಬೀರಿದೆ. ಪ್ರಸ್ತುತ ಈ ಕೃತಿಯಲ್ಲಿರುವ ಸಂಸ್ಕೃತ ಶಬ್ದಗಳನ್ನು ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲೂ ಕಾಣಬಹುದಾಗಿದ್ದು, ವಿವಿಧ ಭಾಷೆಗಳ ಸಂಗಮವಾಗಿದೆ ಎಂದು ಬಣ್ಣಿಸಿದರು.
ಬೆಂಗಳೂರಿನ ಎಂಎಲ್ಎ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಹೆಗ್ಡೆ ಮಾತನಾಡಿ, ನಾವಾಡುವ ಪ್ರತಿ ಶಬ್ದದ ಹಿಂದೆ ಸಂಸ್ಕೃತವಿದೆ. ಅದರ ಪ್ರಭಾವ ಬಹಳಷ್ಟಿದೆ. ಸಂಸ್ಕೃತದಿಂದ ಭಾಷಾ ಸಾಮರಸ್ಯ ಉಂಟಾಗುತ್ತದೆ. ನಾವೆಲ್ಲ ಒಂದು ಎಂಬ ಭಾವನೆ ಮೂಡುತ್ತದೆ. ಭಾಷಾ ಕಲಿಕೆಯು ವ್ಯಕ್ತಿಯನ್ನು ಶ್ರೇಷ್ಠತೆಗೆ ಕೊಂಡೊಯ್ಯುತ್ತದೆ ಎಂದರು.
ಅಂಚೆ ಚೀಟಿ ಸಂಗ್ರಹದ ಮೂಲಕ ಸಂಸ್ಕೃತ ಕಲಿಕೆ ಅತ್ಯಂತ ವಿನೂತನ ಪರಿಕಲ್ಪನೆಯಾಗಿದೆ. ಅಂಚೆಚೀಟಿಯಲ್ಲಿ ಸಂಸ್ಕೃತವಿದೆ. ಸಂಸ್ಕೃತದ ಶಬ್ದವಿದೆ. ಈಗಾಗಲೇ ಬೇರೆ ಭಾಷೆಗಳಲ್ಲಿ ಈ ರೀತಿಯ ಪುಸ್ತಕಗಳು ಪ್ರಕಟಗೊಂಡಿದ್ದು, ಸಂಸ್ಕೃತದಲ್ಲಿ ಇದೀಗ ಪ್ರಕಟಗೊಂಡಿರುವುದು ಶ್ಲಾಘನೀಯವಾದ ವಿಚಾರವಾಗಿದೆ ಎಂದರು.
ಸಿದ್ದಗಂಗಾ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಟಿ.ಕೆ. ನಂಜುಂಡಪ್ಪ ಮಾತನಾಡಿ, ಅಂಚೆಚೀಟಿಯ ಪ್ರಾರಂಭ, ನಡೆದುಬಂದ ಹಾದಿಯ ಬಗ್ಗೆ ವಿವರಿಸಿದರು.
ಶೇಷಾದ್ರಿಪುರಂ ಶಾಲೆಯ ಪ್ರಿನ್ಸಿಪಾಲ್ ಎಚ್.ಎನ್.ನಂದಾರಾಜ್ ಮಾತನಾಡಿ, ಶೇಷಾದ್ರಿಪುರಂ ಶಾಲೆಯಲ್ಲೂ ಸಹ ಅಂಚೆಚೀಟಿ ಸಂಗ್ರಹದ ಕ್ಲಬ್ ಸ್ಥಾಪನೆ ಮಾಡಿದ್ದು, ಅನೇಕ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಬೆಂಗಳೂರು ವಲಯ ಹಿರಿಯ ಅಂಚೆ ಅಧಿಕಾರಿ ವಿ. ತಾರಾ ಮಾತನಾಡಿ, ರಾಮಾಯಣ, ಮಹಾಭಾರತ, ಭಗವದ್ಗೀತೆ ಸೇರಿ ಅನೇಕ ಶ್ಲೋಕಗಳೆಲ್ಲ ಸಂಸ್ಕೃತದಲ್ಲಿದೆ. ಅಂತಹ ಸಂಸ್ಕೃತ ಭಾಷೆಯನ್ನು ಬಳಸಿಕೊಂಡು ಅನಂತರಾಮು ಅವರು, ಅಂಚೆಚೀಟಿ ಸಂಗ್ರಹದ ಮೂಲಕ ಸಂಸ್ಕೃತ ಕಲಿಕೆ ಎಂಬ ವಿನೂತನ ಪುಸ್ತಕವನ್ನು ಪ್ರಕಟಿಸಿರುವುದು ಅತ್ಯಂತ ಸ್ತುತ್ಯಾರ್ಹವಾಗಿದೆ ಎಂದು ಹೇಳಿದರು.
ನಿವೃತ್ತ ಅಂಚೆ ಇಲಾಖೆ ಅಧಿಕಾರಿ ಅನಂತರಾಮು ಸಂಪಾದಕತ್ವದ ಅಂಚೆ ಚೀಟಿ ಸಂಗ್ರಹದ ಮೂಲಕ ಸಂಸ್ಕೃತ ಕಲಿಕೆ ಪುಸ್ತಕ ಬಿಡುಗಡೆ ಮಾಡಲಾಯಿತು.
ಈ ಸುದ್ದಿಯನ್ನೂ ಓದಿ | Karnataka Rains: ರಾಜ್ಯದಲ್ಲಿ ಮುಂದಿನ 4 ದಿನ ಭರ್ಜರಿ ಮಳೆ; ಯೆಲ್ಲೋ ಅಲರ್ಟ್ ಮುಂದುವರಿಕೆ
ಅಂಚೆಚೀಟಿ ಸಂಗ್ರಹದ ಮೂಲಕ ಸಂಸ್ಕೃತ ಕಲಿಕೆ ಕೃತಿಯ ಕರ್ತೃ ಕೆ.ವಿ. ಅನಂತರಾಮು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃತಿ ರಚನೆಗೆ ಸಹಕರಿಸಿದ ಅನೇಕ ಹಿತೈಷಿಗಳನ್ನು ಸನ್ಮಾನಿಸಲಾಯಿತು. ವೆಂಕಟೇಶ್ ಶರ್ಮ, ಮಂಜುನಾಥ್, ಉದ್ಯಮಿ ಎಸ್.ಪಿ. ಚಿದಾನಂದ್ ಉಪಸ್ಥಿತರಿದ್ದರು. ಭವಾನಿ ಹೆಗ್ಡೆ ಪ್ರಾರ್ಥಿಸಿದರು. ರಶ್ಮಿ ನಿರೂಪಿಸಿದರು. ಸುಚೇತನ ಗಿರೀಶ್ ವಂದಿಸಿದರು.