ಸತ್ಕರ್ಮಗಳಿಂದ ಮಾತ್ರ ಟೀಕಿಸುವವರಿಗೆ ಉತ್ತರ ಕೊಡಲು ಸಾಧ್ಯ: ಪ್ರಸನ್ನನಾಥ ಸ್ವಾಮೀಜಿ
ನಮ್ಮ ಸತ್ಕರ್ಮಗಳಿಂದ ಮಾತ್ರ ನಮ್ಮನ್ನ ಟೀಕಿಸುವವರಿಗೆ ಉತ್ತರ ಕೊಡಲು ಸಾಧ್ಯ. ಬದುಕಿನಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುವುದಕ್ಕೆ ಅವಕಾಶ ಸಿಗುವುದು ಪುಣ್ಯದ ಕೆಲಸ. ಆ ನಿಟ್ಟಿನಲ್ಲಿ ಈ ಪ್ರಯತ್ನ ಪ್ರಶಂಸನೀಯ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿಗಳಾದ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದ್ದಾರೆ.


ಬೆಂಗಳೂರು: ನಮ್ಮ ಸತ್ಕರ್ಮಗಳಿಂದ ಮಾತ್ರ ನಮ್ಮನ್ನ ಟೀಕಿಸುವವರಿಗೆ ಉತ್ತರ ಕೊಡಲು ಸಾಧ್ಯ. ಬದುಕಿನಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುವುದಕ್ಕೆ ಅವಕಾಶ ಸಿಗುವುದು ಪುಣ್ಯದ ಕೆಲಸ. ಆ ನಿಟ್ಟಿನಲ್ಲಿ ಈ ಪ್ರಯತ್ನ ಪ್ರಶಂಸನೀಯ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿಗಳಾದ ಪ್ರಸನ್ನನಾಥ ಸ್ವಾಮೀಜಿ ಹೇಳಿದರು. ರಾಜ್ಯ ಚುಂಚಾದ್ರಿ ಮಹಿಳಾ ಪ್ರತಿಷ್ಠಾನ, ಮಾತೃ ಮಿಲನ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘ ಮತ್ತು ವಿಶ್ವ ಒಕ್ಕಲಿಗರ ಮಹಿಳಾ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಎರಡು ದಿನಗಳ ಕ್ರೀಡಾ ಹಾಗೂ ಸಾಂಸ್ಕೃತಿಕೋತ್ಸವ ಕಾರ್ಯಕ್ರಮದ ಚುಂಚಾದ್ರಿ ಉತ್ಸವ 2025ರ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಸಾಧನೆಗೆ ಯಾವುದೇ ವಯೋಮಿತಿಯಿಲ್ಲ. ವಯಸ್ಸು ಮರೆತು ಇಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಪ್ರೋತ್ಸಾಹ ನೀಡಿದಾಗ ಎಂಥಹ ಸಾಧನೆಗಳಾದರು ಸಾಧ್ಯ ಎಂದು ಅವರು ತಿಳಿಸಿದರು.
ಆದಿ ಚುಂಚನಗಿರಿ ಶಾಖಾಮಠ ಬೆಂಗಳೂರಿನ ಕಾರ್ಯದರ್ಶಿಗಳಾದ ಸೌಮ್ಯನಾಥ ಸ್ವಾಮೀಜಿ ಮಾತನಾಡಿ, ಇದೊಂದು ವಿಶೇಷ ಪ್ರಯತ್ನ. ಹೀಗೆ ಕುಟುಂಬ ಸಂಭಾಳಿಸುವುದರ ಜತೆಗೆ ಇಂಥಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ಸಾಹ ತೋರಿ ಬಂದಿರುವುದು ಶ್ಲಾಘನೀಯ ಎಂದರು.
ಚುಂಚಾದ್ರಿ ಉತ್ಸವದ ಮೊದಲ ದಿನದ ಕ್ರೀಡೋತ್ಸವದಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ 14 ವಾಲಿಬಾಲ್ ತಂಡಗಳು ಹಾಗೂ 22 ಥ್ರೋಬಾಲ್ ತಂಡಗಳು ಭಾಗವಹಿಸಿದ್ದವು. ಈ ಕ್ರೀಡೋತ್ಸವದಲ್ಲಿ 18 ರಿಂದ 80 ವರ್ಷದ ಮಹಿಳೆಯರು ಭಾಗವಹಿಸಿದ್ದು ವಿಶೇಷವಾಗಿತ್ತು. ಹಾಗೆಯೇ ಎರಡನೇ ದಿನ 20 ಸಾಂಸ್ಕೃತಿಕ ತಂಡಗಳು ಭಾಗವಹಿಸಿದವು. ಈ ಎರಡು ಕಾರ್ಯಕ್ರಮಗಳು ಮಹಿಳೆಯರಲ್ಲಿನ ಅಗಾಧ ಪ್ರತಿಭೆಗೆ ಅತ್ಯುತ್ತಮ ವೇದಿಕೆಯೊದಗಿಸಿಕೊಟ್ಟವು. ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ನಗದು ಬಹುಮಾನ ನೀಡಲಾಯಿತು.
ರಾಜ್ಯ ಚುಂಚಾದ್ರಿ ಮಹಿಳಾ ಪ್ರತಿಷ್ಠಾನದ ಅಧ್ಯಕ್ಷೆ ಭಾರತಿ ಶಂಕರ್ ಮಾತನಾಡಿದರು. ಇದೇ ವೇಳೆ ಬೃ.ಬೆಂ.ಮ.ಪಾ. ಮಾಜಿ ಉಪಮಹಾಪೌರರಾದ ಹೇಮಲತಾ ಗೋಪಾಲಯ್ಯ ಹಾಗೂ ಕಿದ್ವಾಯಿ ಆಸ್ಪತ್ರೆಯ ಡಾ ಪಲ್ಲವಿ ವಿ.ಆರ್. ಅವರಿಗೆ 'ಯಶೋದರಾ ದಾಸಪ್ಪ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸುದ್ದಿಯನ್ನೂ ಓದಿ | Karnataka Rains: ನಾಳೆ ಬಾಗಲಕೋಟೆ, ಬೆಳಗಾವಿ ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆ ಮುನ್ಸೂಚನೆ
ಎಫ್‌ಕೆಸಿಸಿಐ ಅಧ್ಯಕ್ಷ ಡಾ.ಎಂ.ಜಿ. ಬಾಲಕೃಷ್ಣ ಬೃ.ಬೆಂ.ಮ.ಪಾ. ಮಾಜಿ ಉಪಮಹಾಪೌರರಾದ ಹೇಮಲತಾ ಗೋಪಾಲಯ್ಯ, ಕಿದ್ವಾಯಿ ಆಸ್ಪತ್ರೆಯ ಡಾ. ಪಲ್ಲವಿ ವಿ.ಆರ್., ಈಸ್ಟ್ ವೆಸ್ಟ್ ಶಿಕ್ಷಣ ಸಂಸ್ಥೆಯ ರಶ್ಮಿ ರವಿಕಿರಣ, ಎಸ್.ಎಂ.ಇ ಎಂಟರ್‌ಪ್ರೈಸಸ್‌ನ ಲೀಲಾ ರಾಜಶೇಖರ್, ವಿದ್ಯಾ ಪುಟ್ಟಣ್ಣ ಉಪಸ್ಥಿತರಿದ್ದರು.