Vikrant Massey: ತೆರೆಮೇಲೆ ಬರಲಿದೆ ಶ್ರೀ ಶ್ರೀ ರವಿ ಶಂಕರ್ ಜೀವನ ಚರಿತ್ರೆ; ವಿಕ್ರಾಂತ್ ಮೆಸ್ಸಿಗೊಲಿದ ನಾಯಕ ಪಟ್ಟ
Gurudev Sri Sri Ravi Shankar: ಭಾರತದ ಜನಪ್ರಿಯ ಆಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್ ಅವರ ಜೀವನ ಚರಿತ್ರೆ ಸಿನಿಮಾವಾಗಲಿದೆ. ಬಾಲಿವುಡ್ನಲ್ಲಿ ಈ ಚಿತ್ರ ತಯಾರಾಗಲಿದ್ದು, ನಾಯಕನಾಗಿ ವಿಕ್ರಾಂತ್ ಮೆಸ್ಸಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ತೆರೆಕಂಡ ʼದಿ ಸಾಬರ್ಮತಿ ರಿಪೋರ್ಟ್ʼ ಸಿನಿಮಾ ಮೂಲಕ ಗಮನ ಸೆಳೆದ ಅವರಿಗೆ ಇದೀಗ ಮತ್ತೊಂದು ಬಂಪರ್ ಚಾನ್ಸ್ ಒಲಿದಿದೆ. ವಿವಿಧ ಭಾಷೆಗಳಲ್ಲಿ ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆರೆಗೆ ಬರಲಿದೆ.

ಶ್ರೀ ಶ್ರೀ ರವಿ ಶಂಕರ್ ಮತ್ತು ವಿಕ್ರಾಂತ್ ಮೆಸ್ಸಿ.


ಬಹುನಿರೀಕ್ಷಿತ ಚಿತ್ರದಲ್ಲಿ ವಿಕ್ರಾಂತ್ ಮೆಸ್ಸಿ
ಮುಂಬೈ: ಕಳೆದ ವರ್ಷ ತೆರೆಕಂಡ ತೆರೆಕಂಡ, ಗೋದ್ರಾ ಹತ್ಯಾಕಾಂಡ ಘಟನೆಯನ್ನು ಆಧರಿಸಿದ 'ದಿ ಸಬರಮತಿ ರಿಪೋರ್ಟ್ʼ ಬಾಲಿವುಡ್ ಚಿತ್ರದ ಮೂಲಕ ಗಮನ ಸೆಳೆದ ನಟ ವಿಕ್ರಾಂತ್ ಮೆಸ್ಸಿ ಇದೀಗ ಬಹು ಬೇಡಿಕೆಯ ನಟ ಎನಿಸಿಕೊಂಡಿದ್ದಾರೆ. ಅಳೆದೂ ತೂಗಿ ಪಾತ್ರಗಳನ್ನು ಆಯ್ಕೆ ಮಾಡುವ ಅವರು ಇದೀಗ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ಒಪ್ಪಿಕೊಂಡಿದ್ದಾರೆ.

ಅದ್ಧೂರಿಯಾಗಿ ಸಿದ್ಧವಾಗಲಿದೆ ʼವೈಟ್ʼ
ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿ ಶಂಕರ್ ಜೀವನವನ್ನಾಧರಿಸಿದ ಚಿತ್ರ ಇದಾಗಿದ್ದು, ʼವೈಟ್ʼ ಎಂದು ಹೆಸರಿಡಲಾಗಿದೆ. ಇದರಲ್ಲಿ ನಾಯಕನಾಗಿ ವಿಕ್ರಾಂತ್ ಮೆಸ್ಸಿ ನಟಿಸಲಿದ್ದಾರೆ. ಬಾಲಿವುಡ್ ನಿರ್ದೇಶಕ, ನಿರ್ಮಾಪಕ ಸಿದ್ಧಾರ್ಥ್ ಆನಂದ್ ಅವರು ಮಹಾವೀರ್ ಅವರೊಂದಿಗೆ ಸೇರಿ ಈ ಚಿತ್ರವನ್ನು ನಿರ್ಮಿಸಲಿದ್ದಾರೆ.

ಅಂತಾರಾಷ್ಟ್ರೀಯ ಗುಣಮಟ್ಟ
ಈ ಅಂತಾರಾಷ್ಟ್ರೀಯ ಥ್ರಿಲ್ಲರ್ ಚಿತ್ರದಲ್ಲಿ ನಟಿಸಲು ಈಗಾಗಲೇ ವಿಕ್ರಾಂತ್ ಮೆಸ್ಸಿ ಒಪ್ಪಿಕೊಂಡಿದ್ದು, ಸಹಿ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜುಲೈಯಲ್ಲಿ ಈ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ. ಸದ್ಯ ಕೊಲಂಬಿಯಾದಲ್ಲಿ ಸಿದ್ಧತೆ ನಡೆಸಲಾಗುತ್ತಿದೆ ಎಂದು ಪಿಂಕಿವಿಲ್ಲಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಶ್ರೀ ಶ್ರೀ ರವಿ ಶಂಕರ್ ಜೀವನದ ಮೇಲೆ ಬೆಳಕು ಚೆಲ್ಲುವ ಯತ್ನ
ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಸಿನಿಮಾ ಶ್ರೀ ಶ್ರೀ ರವಿ ಶಂಕರ್ ಅವರ ಜೀವನದ ಮೇಲೆ ಬೆಳಕು ಚೆಲ್ಲಲಿದೆ. ಯಾರಿಗೂ ಗೊತ್ತಿಲ್ಲದ ಅವರ ವಿಚಾರ ಇದರಲ್ಲಿ ಇರಲಿದೆಯಂತೆ. ಅವರು ಕೊಲಂಬಿಯಾದ ಸುಮಾರು 52 ವರ್ಷಗಳ ಸುದೀರ್ಘ ಸಿವಿಲ್ ವಾರ್ ಕೊನೆಗೊಳಿಸಿದ ವಿವರವೂ ಚಿತ್ರದಲ್ಲಿ ಹೈಲೈಟ್ ಆಗಲಿದೆ.

ಮುಂದಿನ ವರ್ಷ ತೆರೆಗೆ
ಈಗಾಗಲೇ ವಿಕ್ರಾಂತ್ ಮೆಸ್ಸಿ ಈ ಚಿತ್ರದ ಸಲುವಾಗಿ ಶ್ರೀ ಶ್ರೀ ರವಿ ಶಂಕರ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಅವರ ಬಾಡಿ ಲ್ಯಾಗ್ವೇಜ್ ಅರ್ಥ ಮಾಡಿಕೊಳ್ಳುತ್ತಿದ್ದಾರಂತೆ. ಇದು ಹಿಂದಿ, ಇಂಗ್ಲಿಷ್ ಮತ್ತು ಸ್ಪಾನಿಷ್ನಲ್ಲಿ ತಯಾರಾಗಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ʼವೈಟ್ʼ ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆ ಇದೆ.