ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಕರುಣೆಯ ನ್ಯಾಯಾಲಯದ ದೇವರು ಶಿವಕುಮಾರ ಮಹಾಸ್ವಾಮಿಗಳು

ಬುದ್ಧಿಯೋರೇ, ನಾನೆಲ್ಲೂ ಹೋಗೋದಿಲ್ಲ, ನಿಮ್ಮ ಸೇವೆ ಮಾಡಿಕೊಂಡು ಮಠದಲ್ಲೇ ಇರ್ತೀನಿ, ಎಂದು ಗೋಗರೆದ. ನಂತರ ಶಿವಕುಮಾರ ಸ್ವಾಮಿಗಳು ಅವನಿಗೆ ಮಠದಲ್ಲೇ ಒಂದು ಕೆಲಸವನ್ನೂ ಕೊಟ್ಟರು. ಕರುಣೆಯ ನ್ಯಾಯಾಲಯದ ಕಾನೂನುಗಳೇ ಬೇರೆ, ತೀರ್ಮಾನವು ಕೂಡ ಬೇರೆಯೇ. ಮನೆಯಲ್ಲಿ ಚಿಕ್ಕಪುಟ್ಟ ತಪ್ಪುಗಳನ್ನು ಮಾಡಿ ಮನೆಯವರು ಸಿಕ್ಕಿಕೊಂಡಾಗ ಅವರನ್ನು ಖಂಡಿಸಿ ಅವಮಾನ ಪಡಿಸಿ ಮತ್ತಷ್ಟು ಗಾಯ ಮಾಡುವ ಬದಲು, ಅವರ ಬಳಿ ಕುಳಿತು ಏಕೆ ಈ ರೀತಿ ಮಾಡಿದರು ಎಂದು ತಿಳಿದು ಕೊಳ್ಳುವ ಪ್ರಯತ್ನ ಮಾಡಿದರೆ ಅದೆಷ್ಟೋ ವಿಷಯಗಳು ಬಗೆಹರಿಯುತ್ತವೆ

ಕರುಣೆಯ ನ್ಯಾಯಾಲಯದ ದೇವರು ಶಿವಕುಮಾರ ಮಹಾಸ್ವಾಮಿಗಳು

ಒಂದೊಳ್ಳೆ ಮಾತು

rgururaj628@gmail.com

ಸುಮಾರು 25 ವರ್ಷಗಳ ಹಿಂದೆ ಸಿದ್ದಗಂಗಾ ಮಠದಲ್ಲಿ ನಡೆದ ಘಟನೆ ಇದು. ಮಠದ ತೋಟದಲ್ಲಿ ತೆಂಗಿನಕಾಯಿ ಕಳುವಾಗುತ್ತಿದ್ದವು. ಇದು ತೋಟದ ಕಾವಲುಗಾರರ ಗಮನಕ್ಕೆ ಬಂತು. ಹೇಗಾದರೂ ಮಾಡಿ ಕಳ್ಳನನ್ನು ಹಿಡಿಯಬೇಕೆಂದು, ಕಾವಲುಗಾರರು ನಾನಾ ರೀತಿಯ ಪ್ರಯತ್ನಗಳನ್ನು ಮಾಡಿದರು. ಎಲ್ಲಾ ಕಡೆಗಳಲ್ಲಿ ಹೊಂಚು ಹಾಕಿ ಕುಳಿತರು. ಆದರೆ ಕಳ್ಳ ಬಹಳ ಬುದ್ಧಿವಂತ. ಇವರಿಗೇ ಚಳ್ಳೆಹಣ್ಣು ತಿನ್ನಿಸಿ, ಯಾವ ಮಾಯದಲ್ಲೊ, ಕದ್ದು ಓಡಿ ಹೋಗುತ್ತಿದ್ದ. ಈ ಕಳ್ಳತನದ ವಿಚಾರ ಮೇಲು ಉಸ್ತುವಾರಿಯವರ ತನಕ ಹೋಗಿ, ಅವರು ಕಾವಲುಗಾರರನ್ನು, ಬಾಯಿಗೆ ಬಂದಂತೆ ಉಗಿದರು. ಈಗ ಕಾವಲುಗಾರರಿಗೆ ಪೇಚಿಗಿಟ್ಟುಕೊಂಡಿತು, ಈ ಕಳ್ಳನನ್ನು ಹಿಡಿಯದಿದ್ದರೆ ತಮಗೆ ಉಳಿಗಾಲವಿಲ್ಲ ಎಂದು ಕೊಂಡು, ಒಮ್ಮೆ ಅವನು ಸಿಕ್ಕರೆ, ಅವನ ಕೈ ಕಾಲು ಮುರಿದು ಹಾಕಿಬಿಡಬೇಕೆಂದು ತೀರ್ಮಾನಿಸಿ, ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದರು.

ಅಂತೂ ಹೇಗೋ ಒಂದು ಸಲ ಕಳ್ಳ ಸಿಕ್ಕಿಬಿದ್ದ, ಅವನನ್ನು ಹಿಡಿದು ಚೆನ್ನಾಗಿ ತದುಕಿದರು. ಮೈತುಂಬ ಬಾಸುಂಡೆ ಬರುವಂತೆ ಹೊಡೆದು ಅವನನ್ನು ಒಂದು ಮರಕ್ಕೆ ಕಟ್ಟಿಹಾಕಿ ಮೇಲ್ವಿಚಾರಕ‌ ರಿಗೆ ಕಳ್ಳ ಸಿಕ್ಕಿರುವ ಸುದ್ದಿ ಮುಟ್ಟಿಸಿದರು. ಅವರು ಬಂದು ವಿಚಾರಿಸಿ ಕಳ್ಳನನ್ನು ಪೊಲೀಸರಿಗೆ ಒಪ್ಪಿಸಬೇಕೆಂದುಕೊಂಡು, ಅದಕ್ಕೆ ಮೊದಲು ಯಾವುದಕ್ಕೂ ಒಂದು ಮಾತು ಗುರುಗಳನ್ನು ಕೇಳಬೇಕೆಂದುಕೊಂಡು ಅವರಿಗೆ ಸುದ್ದಿ ಮುಟ್ಟಿಸಿದರು.

ಇದನ್ನೂ ಓದಿ: Roopa Gururaj Column: ಶತಪದಿ ಹುಳದ ನೂರು ಕಾಲುಗಳ ಲೆಕ್ಕ

ಗುರುಗಳು ಅಲ್ಲಿಗೆ ಬಂದರು. ಎಲ್ಲರಿಗೂ ಕುತೂಹಲ: ಈಗ ಬುದ್ಧಿಯೋರು, ಏನು ಮಾಡಬಹುದು? ಎಂದು. ಶಿವಕುಮಾರ ಮಹಾಸ್ವಾಮಿಗಳು, ಕಳ್ಳನನ್ನು ನೋಡಿದರು. ಕಳ್ಳ, ಅವರನ್ನು ನೋಡಿದ್ದೇ ತಡ, ಬುದ್ಧಿಯೋರೇ, ಎಂದು ಕಟ್ಟಿ ಹಾಕಿದ್ದಲ್ಲಿಂದಲೇ, ಅಳುತ್ತಾ, ಮಿಸುಕಾಡಿದ. ಅವನ ಪರಿಸ್ಥಿತಿ ಯನ್ನು ಕಂಡ ಸ್ವಾಮಿಗಳ ಕಣ್ಣುಗಳು ಒದ್ದೆಯಾದವು,

ಕರುಣೆ ತುಂಬಿ ಸ್ವಾಮೀಜಿ, ತಮ್ಮ ಸಿಬ್ಬಂದಿಯವರನ್ನು ನೋಡಿ, ಛೀ ಪಾಪಿಗಳಾ, ನೀವೇನು ಮನುಷ್ಯರಾ? ಅಥವಾ ರಾಕ್ಷಸರಾ? ಬಾಸುಂಡೆ ಬರುವಂತೆ ಹೊಡೆದಿದ್ದೀರಲ್ಲೋ, ಎನ್ನುತ್ತಾ, ಮೊದಲು ಅವನ ಕಟ್ಟುಬಿಚ್ಚಿ ಎಂದು ಗುಡುಗಿದರು. ಅವನ ಕಟ್ಟು ಬಿಚ್ಚಿದ ಮೇಲೆ, ಅವನ ಬಳಿ ಹೋಗಿ, ಅಲ್ಲ ಕಣೋ, ಕದಿಯೋದ್ ಕದ್ದೆ, ಯಾಕೋ ಸಿಕ್ಹಾಕಂಡೆ? ದಡ್ಡನ್ ತಂದು, ಅಂದರು.

ಮಠದ ಸಿಬ್ಬಂದಿಗಳಿಗೆ ಆಶ್ಚಯವಾಯಿತು. ಇದೇನು ಬುದ್ಧಿಯೋರು ಹೀಗೆ ಮಾತಾಡ್ತಾರೆ? ಕಳ್ಳನನ್ನು ಯಾಕೆ ಕದ್ದೆ? ಎಂದು ಬಯ್ಯುವುದು ಬಿಟ್ಟು, ಯಾಕೆ ಇವರ ಕೈಗೆ ಸಿಗ್ಹಾಕೊಂಡೆ ಎಂದು ಕೇಳ್ತಾರಲ್ಲ, ಇವರು ಎಂದು. ಛೇ, ಛೇ ಎಂಥಾ ಕೆಲಸ ಆಗೋಯ್ತು? ಎಂದುಕೊಂಡು ಅವನನ್ನು ತಮ್ಮೊಂದಿಗೆ ಮಠಕ್ಕೆ ಕರೆದುಕೊಂಡು ಹೋದರು. ಅವನಿಗೆ ಹೊಟ್ಟೆ ತುಂಬಾ ಊಟ ಹಾಕ್ಸಿ, ಊಟವಾದ ಮೇಲೆ ಅವನ ಕೈಗೆ ಐವತ್ತು, ರೂಪಾಯಿ, ಕೊಟ್ಟು, ಈಗ ಇಲ್ಲಿಂದ ತಕ್ಷಣ ಹೊರಟು ಹೋಗು, ಇನ್ಮೇಲೆ ಕಳ್ಳತನ ಮಾಡಿದರೆ ಯಾರ ಕೈಗೂ ಸಿಗ್ಹಾಕೊಬೇಡ, ಎಂದರು, ಸ್ವಾಮಿಗಳು. ಕಳ್ಳ ,ಕಣ್ಣೀರು ಸುರಿಸುತ್ತಾ, ಸ್ವಾಮಿಗಳ ಪಾದಗಳ ಮೇಲೆ ಬಿದ್ದು ಹೊರಳಾಡಿದ.

ಬುದ್ಧಿಯೋರೇ, ನಾನೆಲ್ಲೂ ಹೋಗೋದಿಲ್ಲ, ನಿಮ್ಮ ಸೇವೆ ಮಾಡಿಕೊಂಡು ಮಠದಲ್ಲೇ ಇರ್ತೀನಿ, ಎಂದು ಗೋಗರೆದ. ನಂತರ ಶಿವಕುಮಾರ ಸ್ವಾಮಿಗಳು ಅವನಿಗೆ ಮಠದಲ್ಲೇ ಒಂದು ಕೆಲಸವನ್ನೂ ಕೊಟ್ಟರು. ಕರುಣೆಯ ನ್ಯಾಯಾಲಯದ ಕಾನೂನುಗಳೇ ಬೇರೆ, ತೀರ್ಮಾನವು ಕೂಡ ಬೇರೆಯೇ. ಮನೆಯಲ್ಲಿ ಚಿಕ್ಕಪುಟ್ಟ ತಪ್ಪುಗಳನ್ನು ಮಾಡಿ ಮನೆಯವರು ಸಿಕ್ಕಿಕೊಂಡಾಗ ಅವರನ್ನು ಖಂಡಿಸಿ ಅವಮಾನ ಪಡಿಸಿ ಮತ್ತಷ್ಟು ಗಾಯ ಮಾಡುವ ಬದಲು, ಅವರ ಬಳಿ ಕುಳಿತು ಏಕೆ ಈ ರೀತಿ ಮಾಡಿದರು ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿದರೆ ಅದೆಷ್ಟೋ ವಿಷಯಗಳು ಬಗೆಹರಿಯು ತ್ತವೆ.

ಪ್ರತಿ ತಪ್ಪಿಗೂ ಶಿಕ್ಷೆಯೇ ಅಂತಿಮ ತೀರ್ಮಾನವಲ್ಲ. ಕೆಲವಕ್ಕೆ ನಾವು ಬೇರೆ ರೀತಿ ಕೂಡ ಯೋಚಿಸ ಬಹುದು. ಇದರಿಂದ ತಪ್ಪು ಮಾಡಿದವರ ಮನಃಪರಿವರ್ತನೆಯಾದರೆ ಅದಕ್ಕಿಂತ ಒಳ್ಳೆಯದು ಇನ್ನೇನಿದೆ ಅಲ್ಲವೇ?