Stock Market: ಉಗ್ರರ ದಾಳಿಗೆ ಸೆನ್ಸೆಕ್ಸ್, ನಿಫ್ಟಿ ಕುಸಿತ 10 ಲಕ್ಷ ಕೋಟಿ ರೂ. ನಷ್ಟ!
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಭೀಕರ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಇವತ್ತು ಷೇರು ಮಾರುಕಟ್ಟೆ (Stock Market) ಸೂಚ್ಯಂಕ ಸೆನ್ಸೆಕ್ಸ್ ಮತ್ತು ನಿಫ್ಟಿ ತೀವ್ರ ಕುಸಿದಿದೆ. ಬೆಳಗ್ಗೆ ಸೆನ್ಸೆಕ್ಸ್ ಸಾವಿರಾರು ಅಂಕಗಳ ಕುಸಿತಕ್ಕೀಡಾಯಿತು.


ಕೇಶವಪ್ರಸಾದ.ಬಿ
ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಭೀಕರ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಇವತ್ತು ಷೇರು ಮಾರುಕಟ್ಟೆ (Stock Market) ಸೂಚ್ಯಂಕ ಸೆನ್ಸೆಕ್ಸ್ ಮತ್ತು ನಿಫ್ಟಿ ತೀವ್ರ ಕುಸಿದಿದೆ. ಬೆಳಗ್ಗೆ ಸೆನ್ಸೆಕ್ಸ್ ಸಾವಿರಾರು ಅಂಕಗಳ ಕುಸಿತಕ್ಕೀಡಾಯಿತು. ಮುಕ್ತಾಯದ ವೇಳೆಗೆ ಸೆನ್ಸೆಕ್ಸ್ 588 ಅಂಕ ಕಳೆದುಕೊಂಡು 79,212ಕ್ಕೆ ಸ್ಥಿರವಾಯಿತು. ನಿಫ್ಟಿ 207 ಅಂಕ ನಷ್ಟದಲ್ಲಿ 24,039ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಇವತ್ತು ಹೂಡಿಕೆದಾರರಿಗೆ 10 ಲಕ್ಷ ಕೋಟಿಗೂ ಹೆಚ್ಚು ನೋಶನಲ್ ನಷ್ಟ ಉಂಟಾಗಿದೆ. ಈ ನಡುವೆ ಮಾರುತಿ ಸುಜುಕಿ ತನ್ನ ಹೂಡಿಕೆದಾರರಿಗೆ ಪ್ರತಿ ಷೇರಿಗೆ 135 ರುಪಾಯಿಗಳ ಡಿವಿಡೆಂಡ್ ಘೋಷಿಸಿದೆ. ಈ ಕುರಿತ ವಿವರಗಳನ್ನು ತಿಳಿಯೋಣ.
ಇಂದು ಸೆನ್ಸೆಕ್ಸ್, ನಿಫ್ಟಿ ಕುಸಿತಕ್ಕೆ ಕಾರಣಗಳನ್ನು ನೋಡೋಣ.
- ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನತೆ ಉಂಟಾಗಿರುವುದು:
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಹಿಂದೂಗಳ ನರಮೇಧ ನಡೆಸಿದ ಬಳಿಕ ಭಾರತವು ಪಾಕಿಸ್ತಾನ ವಿರುದ್ಧ ರಾಜತಾಂತ್ರಿಕ ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ಉಗ್ರರ ವಿರುದ್ಧ ಕಾರ್ಯಾಚರಣೆ ಆರಂಭವಾಗಿದೆ. ಉಭಯ ದೇಶಗಳ ನಡುವೆ ಉದ್ವಿಗ್ನತೆ ಉಂಟಾಗಿರುವುದರಿಂದ ಷೇರು ಸೂಚ್ಯಂಕಗಳು ಕುಸಿದಿವೆ.
ಸಾಮಾನ್ಯವಾಗಿ ಜಿಯೊ ಪೊಲಿಟಿಕಲ್ ಟೆನ್ಷನ್ ಉಂಟಾದಾಗ ಸ್ಟಾಕ್ ಮಾರ್ಕೆಟ್ ಸೂಕ್ಷ್ಮವಾಗಿ ಸ್ಪಂದಿಸುತ್ತದೆ.
- ಕಳೆದ 7 ದಿನಗಳಿಂದ ನಿಫ್ಟಿ ಸತತ ಏರಿಕೆಯಲ್ಲಿತ್ತು. ಮೌಲ್ಯದಲ್ಲಿ 8.6% ಹೆಚ್ಚಳವಾಗಿತ್ತು. ಹೀಗಾಗಿ ಹೂಡಿಕೆದಾರರು ಪ್ರಾಫಿಟ್ ಬುಕಿಂಗ್ ಕೂಡ ಮಾಡಿದರು. ಇದೂ ಪ್ರಭಾವ ಬೀರಿತು. ಟೆಕ್ನಿಕಲ್ ಇಂಡಿಕೇಟರ್‌ಗಳೂ, ಸತತ ಏಳು ದಿನಗಳ ಖರೀದಿ ಭರಾಟೆಯ ಬಳಿಕ ಕರೆಕ್ಷನ್ ಆಗುತ್ತಿರುವುದನ್ನು ಬಿಂಬಿಸಿದೆ.
- ಎಕ್ಸಿಸ್ ಬ್ಯಾಂಕ್, ಎಸ್‌ಬಿಐ ಮತ್ತು ಬಜಾಜ್ ಫೈನಾನ್ಸ್ ಷೇರುಗಳ ದರದಲ್ಲಿ ತೀವ್ರ ಇಳಿಕೆ ದಾಖಲಾಯಿತು. ಕೋಟಕ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಷೇರು ದರ ಕೂಡ ತಗ್ಗಿತು.
ಎಕ್ಸಿಸ್ ಬ್ಯಾಂಕಿನ್ ಜನವರಿ-ಮಾರ್ಚ್ ತ್ರೈಮಾಸಿಕ ರಿಸಲ್ಟ್ ಪ್ರಕಟವಾಗಿದ್ದು, ನಿವ್ವಳ ಲಾಭವು 7,130 ಕೋಟಿ ರುಪಾಯಿತಿಂದ 7,117 ಕೋಟಿ ರುಪಾಯಿಗೆ ಇಳಿಯಿತು. ಇದು ಷೇರಿನ ದರದ ಮೇಲೆ ನಕಾರಾತ್ಮಕ ಪ್ರಭಾವ ಬೀರಿತು.
- ಕಾರ್ಪೊರೇಟ್ ವಲಯದ ದಿಗ್ಗಜ ಕಂಪನಿಗಳು ಜನವರಿ-ಮಾರ್ಚ್ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸುತ್ತಿವೆ. ಆದರೆ ಇವುಗಳು ಮಾರುಕಟ್ಟೆಯನ್ನು ನಿರೀಕ್ಷಿತ ಮಟ್ಟದಲ್ಲಿ ಉತ್ತೇಜಿಸಿಲ್ಲ. ಉದಾಹರಣೆಗೆ ಹಿಂದೂಸ್ತಾನ್ ಯುನಿಲಿವರ್ ತನ್ನ ಆದಾಯದಲ್ಲಿ ಎರಡು ಪರ್ಸೆಂಟ್ ಬೆಳವಣಿಗೆ ದಾಖಲಿಸಿದೆ. ನಗರ ಪ್ರದೇಶಗಳಲ್ಲಿ ಬೇಡಿಕೆ ಇಳಿಕೆಯಾಗಿರುವುದನ್ನು ಇದು ಬಿಂಬಿಸಿದೆ. ಇನ್ಫೋಸಿಸ್ ಮತ್ತು ವಿಪ್ರೊ ಆದಾಯದ ಮುನ್ನೋಟಗಳು ಷೇರು ಮಾರುಕಟ್ಟೆಗೆ ತೃಪ್ತಿ ತಂದಿಲ್ಲ.
ಈ ನಡುವೆ ಮಾರುತಿ ಸುಜುಕಿ ತನ್ನ ಜನವರಿ-ಮಾರ್ಚ್ ಅವಧಿಯ ಫಲಿತಾಂಶವನ್ನು ಪ್ರಕಟಿಸಿದೆ. 3,911 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯು 3,952 ಕೋಟಿ ರುಪಾಯಿ ಲಾಭ ಗಳಿಸಿತ್ತು. ಅಂದ್ರೆ 1% ಇಳಿಕೆಯಾಗಿದೆ. ಆದರೆ ಕಂಪನಿಯ ಅದಾಯದಲ್ಲಿ 6% ಏರಿಕೆಯಾಗಿದ್ದು, 40,920 ಕೋಟಿ ರುಪಾಯಿಗೆ ಏರಿಕೆಯಾಗಿದೆ.
ಈ ಸುದ್ದಿಯನ್ನೂ ಓದಿ: Stock Market: 7 ದಿನಗಳಿಂದ ಸೆನ್ಸೆಕ್ಸ್, ನಿಫ್ಟಿ ಜಿಗಿತ! ಇಲ್ಲಿದೆ ಸಂಪೂರ್ಣ ಮಾಹಿತಿ
ಮಾರುತಿ ಸುಜುಕಿಯು ಪ್ರತಿ ಷೇರಿಗೆ 135 ರುಪಾಯಿಗಳ ಡಿವಿಡೆಂಡ್ ಘೋಷಿಸಿದೆ. ಇದರ ರೆಕಾರ್ಡ್ ಡೇಟ್ 2025ರ ಆಗಸ್ಟ್ 1 ಆಗಿದೆ. ಅಂದರೆ ಆಗಸ್ಟ್ 1ರೊಳಗೆ ಷೇರು ಖರೀದಿಸುವವರಿಗೆ ಡಿವಿಡೆಂಡ್ ಕೂಡ ಸಿಗಲಿದೆ. ಈಗ ಷೇರಿನ ದರ 11,650 ರುಪಾಯಿ ಆಗಿದೆ. 5 ವರ್ಷದ ಹಿಂದೆ 2020 ರ ಏಪ್ರಿಲ್‌ನಲ್ಲಿ ಷೇರಿನ ದರ 5,300 ರುಪಾಯಿ ಇತ್ತು. ಐದು ವರ್ಷದಲ್ಲಿ ದರದಲ್ಲಿ 130% ಹೆಚ್ಚಳವಾಗಿದೆ.