ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tumkur News: ಜೂಜು ಅಡ್ಡೆ ಮಾಹಿತಿ ನೀಡಿದ ವ್ಯಕ್ತಿಯ ಕಾಲು ಮುರಿದ ಪೊಲೀಸರು!

Tumkur News: ತಿಪಟೂರು ತಾಲೂಕಿನ ಹೊನ್ನವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೂಜು ಅಡ್ಡೆ ಬಗ್ಗೆ ಮಾಹಿತಿ ನೀಡಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಹಲ್ಲೆಗೊಳಗಾದ ವ್ಯಕ್ತಿಯ ತಾಯಿ, ಎಸ್ಪಿ ಕಚೇರಿಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಜೂಜು ಅಡ್ಡೆ ಮಾಹಿತಿ ನೀಡಿದ ವ್ಯಕ್ತಿಯ ಕಾಲು ಮುರಿದ ಪೊಲೀಸರು!

Profile Prabhakara R Jul 15, 2025 8:41 PM

ತುಮಕೂರು: ಸಾರ್ವಜನಿಕರ ಹಿತದೃಷ್ಟಿಯಿಂದ ಜೂಜಾಟದ ಸ್ಥಳದ ಮಾಹಿತಿ ಕೊಟ್ಟ ವ್ಯಕ್ತಿಯ ಮನೆಗೆ ಪೊಲೀಸರೇ ನುಗ್ಗಿ ಹಲ್ಲೆ (Assault case) ಮಾಡಿ, ಕಾಲು ಮುರಿದ ಆರೋಪ ಕೇಳಿಬಂದಿದೆ. ತಿಪಟೂರು ತಾಲೂಕಿನ ಹೊನ್ನವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಚೌಲಿಹಳ್ಳಿಯ ರಘು ಎಂಬಾತ, ಪೊಲೀಸರಿಂದ ದೌರ್ಜನ್ಯಕ್ಕೊಳಗಾಗಿ ಆಸ್ಪತ್ರೆ ಸೇರಿರುವ ವ್ಯಕ್ತಿ.

ರಘು ತಾಯಿ, ಪೊಲೀಸರಿಂದ ರಕ್ಷಣೆ ಕೋರಿ ಕಣ್ಣೀರಿಡುತ್ತಾ ಎಸ್ಪಿ ಕಚೇರಿಗೆ ಬಂದು ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಚೌಲಿಹಳ್ಳಿ ಗ್ರಾಮದಲ್ಲಿ ನಡೆಯುತ್ತಿದ್ದ ಜೂಜಾಟದ ಬಗ್ಗೆ ಪೊಲೀಸರಿಗೆ ರಘು ಮಾಹಿತಿ ಕೊಟ್ಟಿದ್ದಾರೆ. ಸಿಟ್ಟಿಗೆದ್ದ ಹೊನ್ನವಳ್ಳಿ ಪೊಲೀಸರು ಜೂನ್ 12 ರಂದು ರಘು ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪಿಎಸ್‌ಐ ರಾಜೇಶ್ ಹಾಗೂ ಪೇದೆ ಯೋಗೀಶ್ ಇಬ್ಬರೂ ಏಕಾಏಕಿ ರಘು ಮನೆಗೆ ನುಗ್ಗಿ ಮಲಗಿದ್ದ ರಘುಗೆ ಬೂಟು ಕಾಲಿನಿಂದ ಒದ್ದು, ಮನಬಂದಂತೆ ಹಲ್ಲೆ ನಡೆಸಿದ್ದಾರಂತೆ ಎನ್ನಲಾಗಿದೆ. ಈ ಮೊದಲೇ ಅಪಘಾತದಿಂದ ಕಾಲು ಸ್ವಾಧೀನ ಕಳೆದುಕೊಂಡು ವಿಶೇಷ ಚೇತನ ಆಗಿರುವ ರಘುಗೆ ಸಲೀಸಾಗಿ ಓಡಾಡಲು ಆಗುವುದಿಲ್ಲವಾದರೂ ಗ್ರಾಮದಲ್ಲಿ ನಡೆಯುವ ಅಕ್ರಮ ಜೂಜಾಟದ ಬಗ್ಗೆ ಹೊನ್ನವಳ್ಳಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಾಜೇಶ್‌ಗೆ ಮಾಹಿತಿ ಕೊಟ್ಟಿದ್ದರು.

ರಘು ಜೂಜಾಟದ ಬಗ್ಗೆ ಮಾಹಿತಿ ನೀಡಿದ್ದರಿಂದ ಸಿಟ್ಟಿಗೆದ್ದ ಹೊನ್ನವಳ್ಳಿ ಪಿಎಸ್‌ಐ ರಾಜೇಶ್ ಪೇದೆ ಯೋಗೀಶ್ ಜತೆ, ಚೌಲಿಹಳ್ಳಿ ಗ್ರಾಮದ ರಘು ಮನೆಗೆ ಹೋಗಿ ಏಕಾಏಕಿ ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ. ಪೊಲೀಸರ ಹಲ್ಲೆಯಿಂದ ರಘುಗೆ ಮೈಯೆಲ್ಲಾ ರಕ್ತ ಹೆಪ್ಪು ಗಟ್ಟಿದ ಗಾಯಗಳಾಗಿದೆ, ಅಲ್ಲದೆ ಪೊಲೀಸರು ಬೂಟು ಕಾಲಿನಿಂದ ತುಳಿದು ಕಾಲು ಮುರಿದಿದ್ದಾರೆ ಎಂದು ಗಾಯಾಳು ರಘು ಆರೋಪಿಸಿದ್ದಾರೆ. ಮನೆಯಲ್ಲಿ ಮಲಗಿದ್ದ ವಿಶೇಷ ಚೇತನ ಮಗನ ಮೇಲೆ ಪೊಲೀಸರ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ತಾಯಿ ರತ್ನಮ್ಮ ಎಸ್ಪಿ ಕಚೇರಿಗೆ ಬಂದು ಹೊನ್ನವಳ್ಳಿ, ಪೊಲೀಸರ ವಿರುದ್ಧ ದೂರು ನೀಡಿದ್ದಾರೆ.

ಹೊನ್ನವಳ್ಳಿ ಪೊಲೀಸರು ಬಂದು ನನ್ನ ಮೇಲಾಧಿಕಾರಿಗೆ ಮಾಹಿತಿ ಕೊಡ್ತಿಯಾ ಎಂದು ಪಿಎಸ್‌ಐ ರಾಜೇಶ್ ಹಾಗೂ ಯೋಗೀಶ್ ಇಬ್ಬರೂ ಸೇರಿ ಮನಬಂದಂತೆ ಮಗ ರಘು ಮೇಲೆ ಹಲ್ಲೆ ನಡೆಸಿದ್ದಾರೆ. ಬಿಡಿಸಿಕೊಳ್ಳಲು ಮಧ್ಯೆ ಬಂದ ರಘು ತಾಯಿ ರತ್ನಮ್ಮ, ರಘು ಅಣ್ಣನ ಮಗಳು 15 ವರ್ಷದ ಬಾಲಕಿಯನ್ನು ಎಳೆದು ಹಾಕಿ ರಘು ಮೇಲೆ ಮನಬಂದಂತೆ ಹಲ್ಲೆ ನಡೆಸಿದರು. ಹೊನ್ನವಳ್ಳಿ ಪೊಲೀಸರಿಂದ ನಮಗೆ ರಕ್ಷಣೆ ಕೊಡಿ ಎಂದು ತಾಯಿ ರತ್ನಮ್ಮ ಕಣ್ಣೀರು ಹಾಕಿದ್ದಾರೆ.

ಈ ಸುದ್ದಿಯನ್ನೂ ಓದಿ | Ring Road Shubha Case: ʼಯವ್ವನದ ದುಡುಕಿನಲ್ಲಿʼ ಭಾವಿ ಪತಿಯನ್ನು ಕೊಂದ ರಿಂಗ್‌ ರೋಡ್‌ ಶುಭಾ ಕೇಸ್‌ ರಾಜ್ಯಪಾಲರ ಅಂಗಳಕ್ಕೆ, ಅಲ್ಲಿವರೆಗೂ ಬಂಧನವಿಲ್ಲ

ಹಲ್ಲೆಗೊಳಗಾಗಿರುವ ರಘು ಸದ್ಯ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಹೊನ್ನವಳ್ಳಿ ಪೊಲೀಸರು ರಘು ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದು, ಹೊತ್ತುಗೊತ್ತೆನ್ನದೆ ರಘು ಮನೆಗೆ ಹೋಗಿ ಕುಟುಂಬದವರಿಗೆ ಬೆದರಿಕೆ ಹಾಕುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ 15 ವರ್ಷದ ರಘು ಅಣ್ಣನ ಮಗಳು ಶಾಲೆಗೆ ಹೋಗುವಾಗ ಪೊಲೀಸ್ ಜೀಪ್‌ನಲ್ಲಿ ಬಂದು ಅಡ್ಡ ಹಾಕಿ ಬೆದರಿಸಿದ್ದಾರೆ. ಚಿಕ್ಕಪ್ಪನ ಮೇಲೆ ಹಲ್ಲೆ ಮಾಡಿದ ವಿಡಿಯೊ ಇದೆಯಂತೆ ತಂದು ಕೊಡು ಎಂದು ಬೆದರಿಕೆ ಹಾಕಿದ್ದು, ಪೊಲೀಸರ ಬೆದರಿಕೆಯಿಂದ ಬಾಲಕಿ ಭಯಭೀತಳಾಗಿದ್ದು ಜ್ವರದಿಂದ ನರಳಿದ್ದಾಳೆ ಎಂದು ತಿಳಿದುಬಂದಿದೆ.