Ranjith H Ashwath Column: ಮತಬ್ಯಾಂಕ್ʼನ ಮಾತಾಗದಿರಲಿ ದೇಶದ ಭದ್ರತೆ
ದೇಶವನ್ನೇ ಬೆಚ್ಚಿ ಬೀಳಿಸಿದ ಪಹಲ್ಗಾಮ್ ಉಗ್ರರ ದಾಳಿಯ ಸಮಯದಲ್ಲಿ ಕೆಲ ನಾಯಕರು ನಡೆದು ಕೊಂಡಿರುವ ರೀತಿಯ ಬಗ್ಗೆ ಚರ್ಚಿಸಬೇಕಿದೆ. ಈ ಉಗ್ರರ ದಾಳಿಗೆ ಕೇಂದ್ರ ಸರಕಾರದ ಗುಪ್ತಚರ ಇಲಾಖೆಯ ವೈಫಲ್ಯ ಕಾರಣ ಎನ್ನುವುದು ಪ್ರತಿಪಕ್ಷಗಳ ವಾದವಾಗಿದ್ದರೆ, ಸ್ಥಳೀಯರ ಕುಮ್ಮಕ್ಕಿನಿಂದಲೇ ಉಗ್ರವಾದಿಗಳು ದೇಶದೊಳಗೆ ನುಸುಳಿದ್ದಾರೆ ಎನ್ನುವುದು ಬಿಜೆಪಿ ಹಾಗೂ ಮೈತ್ರಿ ಪಕ್ಷಗಳ ವಾದವಾಗಿದೆ


ಅಶ್ವತ್ಥಕಟ್ಟೆ
ranjith.hoskere@gmail.com
ಸಂಘ-ಪರಿವಾರದಲ್ಲಿ ಒಂದು ಮಾತಿದೆ, ‘ದೇಶ ಮೊದಲು ಧರ್ಮ ನಂತರ’ ಎಂದು. ಇದೇ ಮಾತಿನ ಮುಂದುವರಿದ ಭಾಗ ಎನ್ನುವಂತೆ ಬಿಜೆಪಿಯ ಕೆಲವರು, “ದೇಶ ಮೊದಲು, ಧರ್ಮ ನಂತರ; ಧರ್ಮ ಮೊದಲು, ಪಕ್ಷ ನಂತರ; ಪಕ್ಷ ಮೊದಲು, ವ್ಯಕ್ತಿ ನಂತರ" ಎನ್ನುವ ಮಾತನ್ನು ಹಲವು ಸಮಯದಲ್ಲಿ ಹೇಳುವುದನ್ನು ಕೇಳಿದ್ದೇವೆ. ಬಿಜೆಪಿ ನಾಯಕರ ಈ ಮಾತು ಒಂದು ಪಕ್ಷಕ್ಕೆ ಮಾತ್ರವಲ್ಲದೆ ಸರ್ವಪಕ್ಷ ಗಳಿಗೂ ಅನ್ವಯವಾಗುತ್ತದೆ ಎನ್ನುವುದು ಸತ್ಯ. ಆದರೆ ‘ರಾಜಕೀಯ’ ಕಾರಣಕ್ಕೆ ಕೆಲ ಪಕ್ಷದವರ, ಆ ಪಕ್ಷದ ನಾಯಕರ ಹೇಳಿಕೆಗಳನ್ನು ಗಮನಿಸಿದರೆ, ಅವು ಮೇಲೆ ಹೇಳಿದ ಎಲ್ಲವನ್ನೂ ಮೀರಿ ‘ಮತ ಬ್ಯಾಂಕ್’ ಉದ್ದೇಶದ್ದು ಎನ್ನುವ ರೀತಿಯಲ್ಲಿರುತ್ತವೆ. ಮೇಲೆ ಹೇಳಿದ ಮಾತು ಇಂದಿನ ಬಹುತೇಕ ಬಿಜೆಪಿಗರಿಗೆ ಅನ್ವಯಿಸದಿದ್ದರೂ, ಕೆಲವೇ ಕೆಲವರು ಈ ಮಾತಿನಂತೆ ಪಕ್ಷದಲ್ಲಾಗುತ್ತಿರುವ ಕೆಲ ಹಿನ್ನಡೆಗಳನ್ನು ಸಹಿಸಿಕೊಂಡು ಇದ್ದಾರೆ.
ಆದರೆ ವಿಷಯ ಇದಲ್ಲ. ದೇಶವನ್ನೇ ಬೆಚ್ಚಿ ಬೀಳಿಸಿದ ಪಹಲ್ಗಾಮ್ ಉಗ್ರರ ದಾಳಿಯ ಸಮಯದಲ್ಲಿ ಕೆಲ ನಾಯಕರು ನಡೆದುಕೊಂಡಿರುವ ರೀತಿಯ ಬಗ್ಗೆ ಚರ್ಚಿಸಬೇಕಿದೆ. ಈ ಉಗ್ರರ ದಾಳಿಗೆ ಕೇಂದ್ರ ಸರಕಾರದ ಗುಪ್ತಚರ ಇಲಾಖೆಯ ವೈಫಲ್ಯ ಕಾರಣ ಎನ್ನುವುದು ಪ್ರತಿಪಕ್ಷಗಳ ವಾದವಾಗಿದ್ದರೆ, ಸ್ಥಳೀಯರ ಕುಮ್ಮಕ್ಕಿನಿಂದಲೇ ಉಗ್ರವಾದಿಗಳು ದೇಶದೊಳಗೆ ನುಸುಳಿದ್ದಾರೆ ಎನ್ನುವುದು ಬಿಜೆಪಿ ಹಾಗೂ ಮೈತ್ರಿ ಪಕ್ಷಗಳ ವಾದವಾಗಿದೆ.
ಇದನ್ನೂ ಓದಿ: Ranjith H Ashwath Column: ಯತ್ನಾಳ್ ಉಚ್ಚಾಟನೆ ಆಯ್ತು, ಮುಂದೆ ?
ಈ ಎರಡೂ ವಾದಗಳ ಹೊರತಾಗಿ, ಭಾರತಕ್ಕೆ ‘ಸೆರಗಿನ ಕೆಂಡ’ವಾಗಿರುವ ಪಾಕಿಸ್ತಾನ ಹಾಗೂ ಆ ದೇಶಕ್ಕಾಗಿ ಮಿಡಿಯುತ್ತಿರುವ, ಭಾರತದಲ್ಲಿರುವ ಕೆಲ ಮನಸ್ಥಿತಿಗಳು ಕೊನೆಯಾಗುವ ತನಕ ಈ ರೀತಿಯ ಆತಂಕಕ್ಕೆ ಕೊನೆಯಿಲ್ಲ ಎನ್ನುವುದು ಸ್ಪಷ್ಟ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕಾಶ್ಮೀರವೂ ಭಾರತದ ಇತರೆ ರಾಜ್ಯಗಳ ರೀತಿಯಲ್ಲಿಯೇ ಇರಬೇಕೆಂಬ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿತ್ತು.
ಆರ್ಟಿಕಲ್ 370ರ ರದ್ದತಿ, ದಶಕಗಳ ಬಳಿಕ ಚುನಾವಣೆ, ಪ್ರವಾಸೋದ್ಯಮಕ್ಕೆ ಭಾರಿ ಪ್ರೋತ್ಸಾಹ, ಮೂಲಸೌಕರ್ಯ ಅಭಿವೃದ್ಧಿ, ಭರಪೂರ ವಿಶೇಷ ಅನುದಾನ ಸೇರಿದಂತೆ ಅದು ಹಲವು ಕ್ರಮ ವಹಿಸಿದ್ದು ಇತಿಹಾಸ. ಈ ಎಲ್ಲದರ ಬಳಿಕ ಕಾಶ್ಮೀರ ಸುರಕ್ಷಿತ ಎನ್ನುವ ಭಾವನೆಯಿಂದಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಅಲ್ಲಿನ ಪ್ರವಾಸೋದ್ಯಮ ಭಾರಿ ಪ್ರಮಾಣದಲ್ಲಿ ವರ್ಧಿಸಿತ್ತು. ಅಂಕಿ-ಅಂಶಗಳೇ ಹೇಳುವ ಪ್ರಕಾರ, ಕರೋನಾದ ಬಳಿಕ 2021ರಲ್ಲಿ 6.64 ಲಕ್ಷ ಸ್ವದೇಶಿ, 1614 ವಿದೇಶಿ ಪ್ರವಾಸಿಗರು ಆಗಮಿಸಿದ್ದರೆ, 2022ರಲ್ಲಿ 26.53 ಲಕ್ಷ ದಾಟಿತ್ತು.

ಇನ್ನು 2024ರ ವೇಳೆ ಕಣಿವೆ ನಾಡಿಗೆ ಆಗಮಿಸಿದ ಸ್ವದೇಶಿ ಪ್ರವಾಸಿಗರ ಸಂಖ್ಯೆ 34.54 ಲಕ್ಷವಾಗಿದ್ದರೆ, 43 ಸಾವಿರಕ್ಕೂ ಹೆಚ್ಚು ವಿದೇಶಿಗರು ಆಗಮಿಸಿದ್ದಾರೆ ಎಂದು ಅಧಿಕೃತ ದಾಖಲೆಗಳು ಹೇಳುತ್ತಿವೆ. ಈ ರೀತಿ ಬದಲಾವಣೆಯ ಹಾದಿಯಲ್ಲಿ ಸಾಗುತ್ತಿದ್ದ ಕಾಶ್ಮೀರಕ್ಕೆ ಕಳೆದ ವಾರ ಬಹುದೊಡ್ಡ ‘ಹರ್ಡಲ್’ ರೀತಿ ಎದುರಾಗಿದ್ದು ಉಗ್ರರ ದಾಳಿ. ಕಣಿವೆ ನಾಡಿನಲ್ಲಿ ಆಗಾಗ್ಗೆ ಉಗ್ರರು ಹಾಗೂ ಸೈನಿಕರ ನಡುವೆ ಕಾಳಗಗಳು ನಡೆದಿದ್ದರೂ, ಪ್ರವಾಸಿಗರಿಗೆ ಈ ಬಿಸಿಮುಟ್ಟದ ರೀತಿಯಲ್ಲಿ ಕೇಂದ್ರ ಗುಪ್ತಚರ ಇಲಾಖೆ, ಸೇನೆ ಹಾಗೂ ಸ್ಥಳೀಯ ಪೊಲೀಸರು ನೋಡಿಕೊಂಡಿದ್ದರು.
ಆದರೆ ಸರಿಯಾಗಿ ಒಂದು ವಾರದ ಹಿಂದೆ (ಏ.22ರಂದು) ಕಾಶ್ಮೀರದ ಪಹಲ್ಗಾಮ್ನ ಬೈಸರನ್ ವ್ಯಾಲಿಯಲ್ಲಿ ಉಗ್ರರು ದಾಳಿ ಮಾಡಿದ್ದೇ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು. ನಿಶ್ಶಸ್ತ್ರಧಾರಿ ಗಳಾಗಿದ್ದ ಪ್ರವಾಸಿಗರ ‘ಧರ್ಮ’ ಕೇಳಿ, ಕಲ್ಮಾ ಪಠಿಸಿಲ್ಲವೆಂದು ಗುಂಡಿಕ್ಕಿ 26 ಅಮಾಯಕ ಪ್ರವಾಸಿಗ ರನ್ನು ಅವರು ಕೊಲೆ ಮಾಡಿದ್ದಾರೆ. ಈ ದಾಳಿಯನ್ನು ಧರ್ಮದ ಆಧಾರದಲ್ಲಿ ಮಾಡಿದ್ದರೂ, ಪ್ರವಾಸಿಗರನ್ನು ರಕ್ಷಿಸಲು ಹೋದ ಕೆಲ ಮುಸ್ಲಿಮರನ್ನು ಕೂಡ ಅವರು ಗುಂಡಿಕ್ಕಿ ಕೊಂದಿದ್ದಾರೆ ಎನ್ನುವುದು ವಾಸ್ತವ.
ಈ ಘಟನೆಯ ಬೆನ್ನಲ್ಲೇ ಇಡೀ ರಾಷ್ಟ್ರವೇ ಉಗ್ರರ ದಾಳಿಯನ್ನು ಖಂಡಿಸಿತು. ಪ್ರಧಾನಿಗಳು ತಮ್ಮ ವಿದೇಶಿ ಪ್ರವಾಸವನ್ನು ಮೊಟಕುಗೊಳಿಸಿ ವಾಪಸಾದರೆ, ಸರ್ವಪಕ್ಷ ಸಭೆಯಲ್ಲಿ ಕಾಂಗ್ರೆಸ್ ಸೇರಿದಂತೆ ಅಸಾದುದ್ದೀನ್ ಒವೈಸಿ ಸೇರಿದಂತೆ ಎಲ್ಲರೂ ಉಗ್ರರ ಈ ದಾಳಿಯನ್ನು ಖಂಡಿಸಿದರು. ಅವರಿಗೆ ಬೆಂಬಲಿಸಿ, ನೀರೆರೆದು ಪೋಷಿಸಿದ್ದ ಪಾಕಿಸ್ತಾನದ ವಿರುದ್ಧ ಹೋರಾಡಬೇಕು ಎಂದರು. ಈ ದಾಳಿ ಯಲ್ಲಾಗಿರುವ ‘ಸೆಕ್ಯೂರಿಟಿ ಲ್ಯಾಪ್ಸ್’ ಬಗ್ಗೆ ಹೆಚ್ಚು ಮಾತನಾಡದೇ, ಮುಂದೇನು ಮಾಡಬೇಕು ಎನ್ನುವ ನಿಟ್ಟಿನಲ್ಲಿ ಚಿಂತಿಸಬೇಕು ಎನ್ನುವ ‘ಬೇಷರತ್ತು’ ಬೆಂಬಲವನ್ನು ಕೇಂದ್ರ ಸರಕಾರಕ್ಕೆ ಪ್ರತಿಪಕ್ಷಗಳು ನೀಡಿದವು (ದೇಶದಲ್ಲಾಗಿರುವ ಈ ರೀತಿಯ ದಾಳಿಯ ಸಮಯದಲ್ಲಿ ಇದನ್ನು ಬಿಟ್ಟು ಬೆಂಬಲಿಸದಿದ್ದರೆ ಹೇಗೆ?).
ಉಗ್ರರ ದಾಳಿ ನಡೆದು 24 ತಾಸಿನ ತನಕ ಬಹುತೇಕ ಈ ವಿಷಯದಲ್ಲಿ ಯಾವುದೇ ‘ಕೊಂಕು’ ಆಡಿರ ಲಿಲ್ಲ. ಭಾರತದ ರಾಜಕೀಯ ಇತಿಹಾಸದಲ್ಲಿ ಈ ರೀತಿ ವಿರೋಧಿಸದೇ ಇರುವುದು ಅಪರೂಪ. ಆದರೂ ದೇಶದ ಭದ್ರತೆ ವಿಷಯದಲ್ಲಿ ಎಲ್ಲರೂ ಒಂದಾಗಿರಬಹುದು ಎಂದೇ ಅನೇಕರು ಭಾವಿಸಿ ದ್ದರು. ಆದರೆ ಭಾರತದ ಇತಿಹಾಸದಲ್ಲಿ ಯಾವುದೇ ಘಟನೆ ನಡೆದರೂ ಅದನ್ನು ಕೊನೆಗೆ ರಾಜಕೀಯಗೊಳಿಸದಿದ್ದರೆ ಅದಕ್ಕೆ ಸಮಾಪ್ತಿ ಎನ್ನುವುದಿರುವುದಿಲ್ಲ.
ಅದೇ ರೀತಿ ಪಹಲ್ಗಾಮ್ ವಿಷಯವನ್ನೂ ಕೆಲವರು ಕೊನೆಗೆ ರಾಜಕೀಯಗೊಳಿಸುವುದರಲ್ಲಿ ಯಶಸ್ವಿಯಾದರು ಎನ್ನುವುದು ವ್ಯವಸ್ಥೆಗೆ ಕೈಹಿಡಿದ ಕನ್ನಡಿ. ಆರಂಭದಲ್ಲಿ ‘ಆಗಿರುವ ಲೋಪ ವನ್ನು ಗಮನಿಸುವುದ ಕ್ಕಿಂತ ಮುಂದೇನು ಮಾಡಬೇಕು ಎನ್ನುವ ಬಗ್ಗೆ ಆಲೋಚಿಸಬೇಕು’ ಎಂದಿದ್ದ ಕಾಂಗ್ರೆಸ್ಸಿನ ನಾಯಕರು, ಘಟನೆ ನಡೆದು 24 ಗಂಟೆಯ ಬಳಿಕ ಸರ್ವಪಕ್ಷ ಸಭೆ ಕರೆದು ವಿಷಯವನ್ನು ವಿವರಿಸಬೇಕು ಎನ್ನುವ ಮೂಲಕ ಇಡೀ ಪ್ರಕರಣವನ್ನು ರಾಜಕೀಯಗೊಳಿಸುವು ದಕ್ಕೆ ಬೇಕಿದ್ದ ‘ಬುನಾದಿ’ಯನ್ನು ಹಾಕಿಕೊಂಡರು.
ಅಲ್ಲಿಂದ ಶುರುವಾದ ಹೇಳಿಕೆಗಳು ಮೆಲ್ಲಗೆ, ‘ಉಗ್ರರ ದಾಳಿಯ ಹಿಂದೆ ಕೇಂದ್ರ ಗುಪ್ತಚರ ಇಲಾಖೆಯ ವೈಫಲ್ಯ ಕಾಣಿಸುತ್ತಿದೆ’ ಎಂದು ಪೀಠಿಕೆ ಹಾಕುವೆಡೆಗೆ ತಿರುಗಿದವು. ಇದಾದ ಬಳಿಕ ಸರ್ವಪಕ್ಷ ಸಭೆಗೆ ಮೋದಿ ಬರಲಿಲ್ಲವೆಂದು ಕೆಲ ನಾಯಕರು ಬೊಬ್ಬೆ ಹೊಡೆಯಲು ಶುರು ಮಾಡಿದರು (ಮೋದಿ ಭಾಗವಹಿಸಿ, ಪರಿಸ್ಥಿತಿ ವಿವರಿಸಬೇಕಿತ್ತು ಎನ್ನುವುದು ಒಪ್ಪುವ ಮಾತು).
ಇದೀಗ ಘಟನೆ ನಡೆದು ವಾರ ಕಳೆಯುವ ವೇಳೆಗೆ ‘ಈ ಘಟನೆಗೆ ನೈತಿಕ ಹೊಣೆ ಹೊತ್ತು ಮೋದಿ ರಾಜೀನಾಮೆ ನೀಡಬೇಕು’ ಎನ್ನುವ ಕೂಗು ಸದ್ದಿಲ್ಲದೇ ದೇಶದಲ್ಲಿ ಶುರುವಾಗಿದೆ. ಅದರಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ ‘ಪಾಕಿಸ್ತಾನದ ಮೇಲೆ ಯುದ್ಧ ಬೇಡ’ ಎನ್ನುವ ಅರ್ಥದ ಹೇಳಿಕೆ ಇಡೀ ದೇಶದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಇದರಿಂದ ಡ್ಯಾಮೇಜ್ ಆಗುವುದು ತಿಳಿಯುತ್ತಿದ್ದಂತೆ ಅವರು ಹೇಳಿಕೆ ಬದಲಾಯಿಸಿದರೂ, ಆಗಿರುವ ಡ್ಯಾಮೇಜ್ ಸರಿಪಡಿಸಲು ಸಾಧ್ಯವಿಲ್ಲ.
ಇದಾದ ಬಳಿಕ ಇದೀಗ ಸಚಿವ ಸಂಪುಟದ ಹಿರಿಯ ಸಚಿವ ಆರ್.ಬಿ. ತಿಮ್ಮಾಪುರ ಅವರು, ‘ಧರ್ಮದ ಆಧಾರದಲ್ಲಿ ಕೊಲೆ ಮಾಡಿರಲು ಸಾಧ್ಯವೇ‘ ಎನ್ನುವ ಹೇಳಿಕೆ ವಿವಾದವನ್ನು ಸೃಷ್ಟಿಸಿದೆ. ಹಾಗೆ ನೋಡಿದರೆ, ಪ್ರವಾಸಿಗರ ಧರ್ಮ ಕೇಳಿ ಉಗ್ರರು ಕೊಂದರೆಂದು ಕೇಂದ್ರ ಸರಕಾರ ಅಥವಾ ಸೇನೆ ಹೇಳಿಲ್ಲ. ಬದಲಿಗೆ, ಮೃತಪಟ್ಟಿರುವವರ ಕುಟುಂಬ ಸದಸ್ಯರು, ಘಟನೆಯ ನಡೆಯುವಾಗ ಕಣ್ಣೆದುರಿದ್ದ ಹೆಂಡತಿ, ಮಕ್ಕಳು ಹೇಳಿದ್ದಾರೆ. ಹೀಗಿರುವಾಗ ಸಚಿವರು ‘ಧರ್ಮದ ಆಧಾರದಲ್ಲಿ ಕೊಲೆ ಮಾಡಲು ಸಾಧ್ಯವೇ‘ ಎನ್ನುವ ಮೂಲಕ ಯಾರನ್ನು ವಿರೋಧಿಸಲು ಅಥವಾ ಯಾರನ್ನು ವಹಿಸಿಕೊಳ್ಳಲು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎನ್ನುವ ಗೊಂದಲ ಶುರುವಾಗುವುದರಲ್ಲಿ ಅನುಮಾನವಿಲ್ಲ.
ಮೇಲ್ನೋಟಕ್ಕೆ ಉಗ್ರ ದಾಳಿಯ ಸಂಘಟನೆಯ ವಿಷಯದಲ್ಲಿ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಪ್ರತಿಕ್ರಿಯಿಸಲು ಒಂದು ಹೆಜ್ಜೆ ಹಿಂದಿಡಲು ಪ್ರಮುಖ ಕಾರಣವೇ ‘ಮತ ಬ್ಯಾಂಕ್’ ಎನ್ನುವುದು ನಗ್ನಸತ್ಯ. ಉಗ್ರವಾದವನ್ನು ಟೀಕಿಸಿದರೆ ಎಲ್ಲಿ ಮುಸ್ಲಿಮ್ ಮತಗಳು ‘ಒಡೆದು’ ಹೋಗುವವೋ ಎನ್ನುವ ಆತಂಕದಲ್ಲಿಯೇ ಕಾಂಗ್ರೆಸ್ ತನ್ನ ನಿಲುವನ್ನು ತೆಗೆದುಕೊಳ್ಳುತ್ತದೆ. ಕೇವಲ ಈಗಲ್ಲ, ಕೇಂದ್ರದಲ್ಲಿ ಅಧಿಕಾರದಲ್ಲಿರುವಾಗ ನಡೆದ ಅನೇಕ ಉಗ್ರ ಚಟುವಟಿಕೆಯ ಸಮಯದಲ್ಲಿಯೂ ಅದು ಒಂದು ಹೆಜ್ಜೆ ಹಿಂದೆ ಇರಿಸುವುದಕ್ಕೆ ಕಾರಣವೂ ಇದೇ ಆಗಿತ್ತು.
ಆದರೆ ಆರು ದಶಕ ಕಳೆದರೂ ಕಾಂಗ್ರೆಸ್ ಪಕ್ಷ ಅರ್ಥೈಸಿಕೊಳ್ಳದ ಒಂದು ವಿಷಯ ಏನೆಂದರೆ, ಉಗ್ರರನ್ನು, ಉಗ್ರವಾದವನ್ನು ಅಥವಾ ಪಾಕಿಸ್ತಾನ ಭಾರತದ ಮೇಲೆ ಮಾಡುವ ದುಷ್ಕೃತ್ಯವನ್ನು ಭಾರತದಲ್ಲಿ ಬಹುತೇಕ ಮುಸ್ಲಿಮರು ಒಪ್ಪುವುದಿಲ್ಲ. ಮುಸ್ಲಿಮರೆಲ್ಲ ಉಗ್ರರಿಗೆ ಬೆಂಬಲಿಸುತ್ತಾರೆ ಎನ್ನುವ ಆಲೋಚನೆಯೇ ತಪ್ಪಿದೆ.
ಈ ರೀತಿ ಸೇನೆಯ ಮಾಹಿತಿಯನ್ನು, ಸಂತ್ರಸ್ತರ ಮಾತನ್ನು ವಿರೋಧಿಸುವುದು ಕಾಂಗ್ರೆಸ್ನ ಕೆಲ ನಾಯಕರ ಇಂದಿನ ನಡೆಯಲ್ಲ. ಈ ಹಿಂದೆ ಮುಂಬೈ ದಾಳಿ ನಡೆದಾಗ, ಪುಲ್ವಾಮ ದಾಳಿಯ ಸಮಯದಲ್ಲಿ, ಪಠಾಣ್ಕೋಟ್ ದಾಳಿಯ ಸಮಯದಲ್ಲಿಯೂ ಅವರು ಇದೇ ರೀತಿ ವರ್ತಿಸಿದ್ದರು. ಈ ಮೂಲಕ ಯಾರನ್ನು ಮೆಚ್ಚಿಸಲು ಕಾಂಗ್ರೆಸ್ ಅಥವಾ ಎಡಪಂಥೀಯ ಪಕ್ಷಗಳು ಮುಂದಾಗಿವೆ ಎನ್ನುವುದು ತಿಳಿಯದ ವಿಷಯ.
ಪ್ರಜಾಪ್ರಭುತ್ವ ವ್ಯವಸ್ಥೆಯಿರುವ ಭಾರತದಲ್ಲಿ ಎಲ್ಲವನ್ನೂ ರಾಜಕೀಯವಾಗಿ ನೋಡುವುದು ಶುರುವಾಗಿ ದಶಕಗಳೇ ಕಳೆದಿವೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್, ಕಾಂಗ್ರೆಸ್ ಅಧಿಕಾರದಲ್ಲಿ ದ್ದಾಗ ಬಿಜೆಪಿಯವರು ಟೀಕಿಸುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ಕಾಂಗ್ರೆಸ್ಸಿಗರು ಅರ್ಥೈಸಿ ಕೊಳ್ಳಬೇಕಿರುವುದು, ಕನಿಷ್ಠ ದೇಶದ ಭದ್ರತೆಯ ವಿಷಯದಲ್ಲಾದರೂ ರಾಜಕೀಯವನ್ನು ಮೀರಿ ಮಾತನಾಡಬೇಕು ಎನ್ನುವುದನ್ನು. ಭಾರತದ ಇತಿಹಾಸವನ್ನು ಕೆದಕಿದಾಗ ದೇಶದ ಭದ್ರತೆಗೆ ಕುತ್ತು ತರುವ ಈ ರೀತಿಯ ಘಟನೆಗಳು ನಡೆದಾಗ ‘ಕೇಂದ್ರ ಸರಕಾರ’ದೊಂದಿಗೆ ನಾವಿದ್ದೇನೆ ಎನ್ನುವ ಮೊದಲ ಪ್ರತಿಕ್ರಿಯೆ ನೀಡಿದ ಬಳಿಕ ನಿಜವಾದ ‘ಪ್ರತಿಕ್ರಿಯೆ’ ನೀಡಲು ಶುರು ಮಾಡಿರುವುದನ್ನು ನೋಡಿದ್ದೇವೆ.
ಅದರಲ್ಲಿಯೂ ಕಾಂಗ್ರೆಸ್ನಲ್ಲಿರುವ ಕೆಲ ನಾಯಕರು ಈ ವಿಷಯದಲ್ಲಿಯೂ ‘ಮತಬ್ಯಾಂಕಿ’ ನೊಂದಿಗೆ ತಳಕು ಹಾಕಿ ಪ್ರತಿಕ್ರಿಯೆ ನೀಡುವುದು ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರುವಂಥದ್ದು ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಇನ್ನಾದರೂ ಈ ವಿಷಯದಲ್ಲಿ ಅವರು ಕನಿಷ್ಠ ‘ಜ್ಞಾನ’ವನ್ನು ಬಳಸಬೇಕಿದೆ. ನಾಯಕರು ಈ ರೀತಿಯ ಹೇಳಿಕೆ ನೀಡಿದಾಗ ತಥಾಕಥಿತ ಹೈಕಮಾಂಡ್ ಪ್ರತಿಕ್ರಿಯಿಸ ಬೇಕಿದೆ. ಏಕೆಂದರೆ, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷದಿಂದ ದೇಶದ ಭದ್ರತೆಯ ವಿಷಯದಲ್ಲಿ ಹೆಚ್ಚಿನದನ್ನು ನಿರೀಕ್ಷಿಸುವುದು ಸಹಜ!