Pahalgam Terror Attack: ಕಾಶ್ಮೀರದಲ್ಲಿ ನಿಲ್ಲದ ಉಗ್ರರ ಅಟ್ಟಹಾಸ; ಗುಂಡಿನ ದಾಳಿಗೆ ಓರ್ವ ನಾಗರಿಕ ಸಾವು
ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಉಗ್ರರು ನಾಗರಿಕರ ಮೇಲೆ ಗುಂಡು ಹಾರಿಸಿದ್ದಾರೆ. ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಶಂಕಿತ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ 45 ವರ್ಷದ ಸಾಮಾಜಿಕ ಕಾರ್ಯಕರ್ತರೊಬ್ಬರು ಸಾವನ್ನಪ್ಪಿದ್ದಾರೆ.


ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ(Pahalgam Terror Attack) ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಉಗ್ರರು ನಾಗರಿಕರ ಮೇಲೆ ಗುಂಡು ಹಾರಿಸಿದ್ದಾರೆ. ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಶಂಕಿತ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ 45 ವರ್ಷದ ಸಾಮಾಜಿಕ ಕಾರ್ಯಕರ್ತರೊಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಶನಿವಾರ ತಡರಾತ್ರಿ ಕಂಡಿ ಖಾಸ್ನಲ್ಲಿರುವ ಗುಲಾಮ್ ರಸೂಲ್ ಮ್ಯಾಗ್ರೆ ಅವರ ನಿವಾಸದೊಳಗೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮ್ಯಾಗ್ರೆ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ. ಉಗ್ರಗಾಮಿಗಳು ಸಾಮಾಜಿಕ ಕಾರ್ಯಕರ್ತನನ್ನು ಏಕೆ ಗುರಿಯಾಗಿಸಿಕೊಂಡಿದ್ದಾರೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ ಎಂದು ಅವರು ಹೇಳಿದರು.
ದಾಳಿ ಬಳಿಕ ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ಮತ್ತಷ್ಟು ಹೆಚ್ಚಸಿವೆ. ಸೋಮವಾರ ಪಹಲ್ಗಾಮ್‌ನಲ್ಲಿ ಉಗ್ರರು 26 ಜನ ಪ್ರವಾಸಿಗರನ್ನು ಹತ್ಯೆ ಮಾಡಿದ್ದರು. ಜಮ್ಮು ಕಾಶ್ಮೀರದಲ್ಲಿ ನಡೆದ ನರಮೇಧಕ್ಕೆ ಭಾರತ ಈಗ ಪ್ರತೀಕಾರ ತೆಗೆದುಕೊಳ್ಳುತ್ತಿದೆ. ಉಗ್ರರ ಮನೆಗಳನ್ನು ಹುಡುಕಿ ಧ್ವಂಸ ಮಾಡಲಾಗುತ್ತಿದೆ. ಕಾಶ್ಮೀರದಲ್ಲಿ ಮತ್ತೊಬ್ಬ ಶಂಕಿತ ಭಯೋತ್ಪಾದಕನ ಮನೆಯ ಮೇಲೆ ಬಾಂಬ್ ದಾಳಿ ನಡೆಸಿದೆ. ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕಲಾರೂಸ್ ಪ್ರದೇಶದಲ್ಲಿರುವ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಫಾರೂಕ್ ಅಹ್ಮದ್ ತಡ್ವಾ ಎಂಬಾ ಉಗ್ರನ ಮನೆ ಮೇಲೆ ಸೇನೆ ದಾಳಿ ನಡೆಸಿದೆ. ಕಳೆದ 48 ಗಂಟೆಗಳಲ್ಲಿ ಆರು ಭಯೋತ್ಪಾದಕರ ಮನೆಯನ್ನ ಧ್ವಂಸ ಮಾಡಲಾಗಿದೆ.
ಈ ಸುದ್ದಿಯನ್ನೂ ಓದಿ: Pahalgam Terror Attack: ಪಹಲ್ಗಾಮ್ ದಾಳಿಗೆ ಕಾರಣರಾದವರನ್ನು ನ್ಯಾಯದ ಕಟಕಟೆಯಲ್ಲಿ ನಿಲ್ಲಿಸಿ- ವಿಶ್ವಸಂಸ್ಥೆ
ಉಗ್ರರನ್ನು ಬೇಟೆಯಾಡುತ್ತಿರುವ ಸೇನೆ ಶುಕ್ರವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರದಾದ್ಯಂತ ಲಷ್ಕರ್-ಎ-ತೈಬಾ (ಎಲ್‌ಇಟಿ) ಕಮಾಂಡರ್ ಸೇರಿದಂತೆ ಐದು ಭಯೋತ್ಪಾದಕರ ಮನೆಗಳನ್ನು ಪುಡಿಗಟ್ಟಿತ್ತು. ಶೋಪಿಯಾನ್, ಕುಲ್ಗಾಮ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ಎಲ್‌ಇಟಿ ಕಾರ್ಯಕರ್ತರು ಮತ್ತು ಪಹಲ್ಗಾಮ್ ದಾಳಿಗೆ ಸಂಬಂಧಿಸಿದ ಶಂಕಿತರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಿವೆ. ಶೋಪಿಯಾನ್‌ನ ಚೋಟಿಪೋರಾ ಗ್ರಾಮದಲ್ಲಿ, ಎಲ್‌ಇಟಿ ಕಮಾಂಡರ್ ಶಾಹಿದ್ ಅಹ್ಮದ್ ಕುಟ್ಟೆ ಮನೆಯನ್ನು ನೆಲಸಮ ಮಾಡಲಾಗಿದೆ.