ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʼʼಸಂಪೂರ್ಣ ಅಸಂಬದ್ಧʼʼ; ಮಹಾರಾಷ್ಟ್ರದ ಚುನಾವಣೆಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ನಡೆದಿದೆ ಎನ್ನುವ ರಾಹುಲ್‌ ಗಾಂಧಿ ಆರೋಪಕ್ಕೆ ಚುನಾವಣಾ ಆಯೋಗ ಗರಂ

Election Commission: ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮ್ಯಾಚ್‌ ಫಿಕ್ಸಿಂಗ್‌ ಮಾಡಿದೆ ಎಂಬ ಕಾಂಗ್ರೆಸ್‌ ನಾಯಕ, ಸಂಸದ ರಾಹುಲ್‌ ಗಾಂಧಿ ಆರೋಪಕ್ಕೆ ಚುನಾವಣಾ ಆಯೋಗ ತಿರುಗೇಟು ನೀಡಿದೆ. ಆರೋಪವನ್ನು ಸಂಪೂರ್ಣ ಅಸಂಬದ್ಧ ಎಂದು ಕರೆದಿದೆ.

ರಾಹುಲ್‌ ಗಾಂಧಿ ಆರೋಪಕ್ಕೆ ಚುನಾವಣಾ ಆಯೋಗ ತಿರುಗೇಟು

ರಾಹುಲ್‌ ಗಾಂಧಿ.

Profile Ramesh B Jun 7, 2025 6:40 PM

ಹೊಸದಿಲ್ಲಿ: ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮ್ಯಾಚ್‌ ಫಿಕ್ಸಿಂಗ್‌ ಮಾಡಿ ಜಯ ಗಳಿಸಿದೆ ಎಂದು ಆರೋಪಿಸಿದ ಕಾಂಗ್ರೆಸ್‌ ನಾಯಕ, ಸಂಸದ ರಾಹುಲ್‌ ಗಾಂಧಿ (Rahul Gandhi) ಅವರಿಗೆ ಚುನಾವಣಾ ಆಯೋಗ (Election Commission) ತಿರುಗೇಟು ನೀಡಿದೆ. ಈ ಹಿಂದೆ ಬಿಡುಗಡೆ ಮಾಡಿದ್ದ ದಾಖಲೆಯನ್ನು ಮರು ಬಿಡುಗಡೆ ಮಾಡುವ ಮೂಲಕ ಆರೋಪವನ್ನು ಸಂಪೂರ್ಣ ಅಸಂಬದ್ಧ ಎಂದು ಕರೆದಿದೆ. ಶನಿವಾರ (ಜೂ. 7) 'ದಿ ಇಂಡಿಯನ್ ಎಕ್ಸ್‌ಪ್ರೆಸ್‌' ಪತ್ರಿಕೆಗೆ ಬರೆದ ಲೇಖನದಲ್ಲಿ ರಾಹುಲ್‌ ಗಾಂಧಿ, 2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳನ್ನು ನಡೆಸಿದ ರೀತಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಒಕ್ಕೂಟಕ್ಕಿಂತ ಉತ್ತಮ ಪ್ರದರ್ಶನ ನೀಡಿದ್ದ ಕಾಂಗ್ರೆಸ್, ಎನ್‌ಸಿಪಿಯ ಶರದ್ ಪವಾರ್ ಬಣ ಮತ್ತು ಶಿವಸೇನೆಯ ಉದ್ಧವ್ ಠಾಕ್ರೆ ಬಣಗಳ ಮೈತ್ರಿಕೂಟ ವಿಧಾನಸಭಾ ಚುನಾವಣೆಯಲ್ಲಿ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿತ್ತು. ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟ ರಾಜ್ಯದ 288 ವಿಧಾನಸಭಾ ಸ್ಥಾನಗಳ ಪೈಕಿ ಕೇವಲ 46 ಕಡೆಗಳಲ್ಲಿ ಮಾತ್ರ ಜಯಗಳಿಸಿತ್ತು. ಇತ್ತ ಬಿಜೆಪಿ ನೇತೃತ್ವದ ಒಕ್ಕೂಟ 132 ಸ್ಥಾನಗಳನ್ನು ಪಡೆದುಕೊಂಡು ಭರ್ಜರಿಯಾಗಿಯೇ ಅಧಿಕಾರಕ್ಕೆ ಮರಳಿತ್ತು.

ರಾಹುಲ್‌ ಗಾಂಧಿ ಅವರ ಎಕ್ಸ್‌ ಪೋಸ್ಟ್‌:



ಈ ಸುದ್ದಿಯನ್ನೂ ಓದಿ: Rahul Gandhi: ಆಪರೇಷನ್ ಸಿಂದೂರ್‌ನಲ್ಲಿ ಟ್ರಂಪ್ ಆದೇಶಕ್ಕೆ ಶರಣಾದ ಮೋದಿ: ರಾಹುಲ್ ಗಾಂಧಿ ಆರೋಪ

ರಾಹುಲ್‌ ಗಾಂಧಿ ಆರೋಪವೇನು?

ಪಟ್ಟಿಗೆ ನಕಲಿ ಮತದಾರರನ್ನು ಸೇರಿಸುವುದು, ಮತದಾರರ ಸಂಖ್ಯೆಯನ್ನು ಹೆಚ್ಚಿಸುವುದು ಮತ್ತು ಪುರಾವೆಗಳನ್ನು ಮರೆಮಾಡುವುದು ಮೊದಲಾದ ವಾಮಮಾರ್ಗಗಳ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದರು. ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಇದೇ ಮಾರ್ಗವನ್ನು ಅನುಸರಿಸಬಹುದು ಎಂದು ಆತಂಕ ವ್ಯಕ್ತಪಡಿಸಿದ್ದರು.

ತಿರುಗೇಟು ನೀಡಿದ ಚುನಾವಣಾ ಆಯೋಗ

ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗವು, ಮತದಾನದ ಸಮಯದಲ್ಲಿ ಪಕ್ಷ ಅಥವಾ ಅದರಿಂದ ನೇಮಿಸಲ್ಪಟ್ಟ ಮತಗಟ್ಟೆ ಏಜೆಂಟ್‌ಗಳು ಯಾವುದೇ ಗಂಭೀರ ಆರೋಪಗಳನ್ನು ಮಾಡಿಲ್ಲ ಎಂದು ತಿಳಿಸಿದೆ. "ಪ್ರತಿಯೊಂದು ಮತಗಟ್ಟೆಯಲ್ಲಿ ಅಭ್ಯರ್ಥಿಗಳು/ರಾಜಕೀಯ ಪಕ್ಷಗಳು ಅಧಿಕೃತವಾಗಿ ನೇಮಿಸಿದ ಮತಗಟ್ಟೆ ಏಜೆಂಟ್‌ಗಳ ಸಮ್ಮುಖದಲ್ಲಿಯೇ ಮತದಾನ ನಡೆಯಿತು. ಚುನಾವಣಾ ಅಧಿಕಾರಿ (RO) ಮತ್ತು ಚುನಾವಣಾ ವೀಕ್ಷಕರ ಪರಿಶೀಲನೆಯ ವೇಳೆಯೂ ಯಾವುದೇ ರೀತಿಯ ಅಸಹಜ ಮತದಾನಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ದೂರು ಸಲ್ಲಿಸಿರಲಿಲ್ಲʼʼ ಎಂದು ತಿಳಿಸಿದೆ.

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಯ ವಿರುದ್ಧ ಯಾವುದೇ ಪಕ್ಷವು ಗಣನೀಯ ಸಂಖ್ಯೆಯ ಮೇಲ್ಮನವಿಗಳನ್ನು ಸಲ್ಲಿಸಿಲ್ಲ. ಜತೆಗೆ ಯಾವುದೇ ದೂರು ಬಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಆಧಾರರಹಿತ ಆರೋಪಗಳನ್ನು ಮಾಡಿದ್ದಕ್ಕಾಗಿ ಕಾಂಗ್ರೆಸ್‌ ವಿರುದ್ದ ಕಿಡಿಕಾರಿದ ಚುನಾವಣಾ ಆಯೋಗ, "ಕೈ ಪಡೆಯ 27,099 ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಬೂತ್ ಲೆವೆಲ್ ಏಜೆಂಟ್‌ಗಳನ್ನು ನೇಮಿಸಿವೆ. ಆದ್ದರಿಂದ ಮಹಾರಾಷ್ಟ್ರದ ಮತದಾರರ ಪಟ್ಟಿಯ ವಿರುದ್ಧ ಎತ್ತಲಾದ ಈ ಆರೋಪದಲ್ಲಿ ಯಾವುದೇ ಹರುಳಿಲ್ಲ. ಚುನಾವಣಾ ಆಯೋಗವು 2024ರ ಡಿಸೆಂಬರ್ 24ರಂದು ನೀಡಿದ ಉತ್ತರದಲ್ಲಿ ಈ ಎಲ್ಲ ವಿವರಗಳಿವೆ. ಜತೆಗೆ ವೆಬ್‌ಸೈಟ್‌ನಲ್ಲಿ ವಿವರ ಲಭ್ಯವಿದೆʼʼ ಎಂದು ತಿಳಿಸಿದೆ.

ʼʼಭಾರತದಲ್ಲಿ ಚುನಾವಣೆಗಳನ್ನು ಕಾನೂನಿನ ಪ್ರಕಾರವೇ ನಡೆಸಲಾಗುತ್ತದೆ ಮತ್ತು ಇದನ್ನು ಪ್ರಪಂಚದಾದ್ಯಂತ ಪ್ರಶಂಸಿಸಲಾಗುತ್ತದೆ. ಮತದಾರರ ಯಾವುದೇ ಪ್ರತಿಕೂಲ ತೀರ್ಪಿನ ನಂತರ, ಚುನಾವಣಾ ಆಯೋಗವು ಒಂದು ಪಕ್ಷಕ್ಕೆ ಅನುಕೂಲ ಮಾಡಿಕೊಟ್ಟಿದೆ ಎಂದು ದೂರುವುದು ಅಸಂಬದ್ಧ" ಎಂದು ಅದು ಹೇಳಿದೆ.