Rajnath Singh: ಭಯೋತ್ಪಾದಕರು ಗಡಿಯಾಚೆಗಿದ್ದರೂ ಬಿಡುವುದಿಲ್ಲ; ಮತ್ತೊಮ್ಮೆ ಗುಡುಗಿದ ರಾಜನಾಥ್ ಸಿಂಗ್
Operation Sindoor: ʼʼಭಾರತ ಮಾತೆಯ ಹಣೆಯ ಮೇಲೆ ದಾಳಿ ಮಾಡಿದ, ಅನೇಕ ಕುಟುಂಬಗಳ ಸಿಂದೂರವನ್ನು ಅಳಿಸಿದ, ಭಾರತ ವಿರೋಧಿ ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ಭಾರತೀಯ ಸೇನೆಯು ಆಪರೇಷನ್ ಸಿಂದೂರ್ ಮೂಲಕ ಪಾಠ ಕಲಿಸಿದೆʼʼ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ರಾಜನಾಥ್ ಸಿಂಗ್.

ಲಖನೌ: ಉತ್ತರ ಪ್ರದೇಶ ರಕ್ಷಣಾ ಕೈಗಾರಿಕಾ ಕಾರಿಡಾರ್‌ನಲ್ಲಿ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ ಉತ್ಪಾದನಾ ಘಟಕವನ್ನು ವರ್ಚುವಲ್ ಆಗಿ ಉದ್ಘಾಟಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆಯನ್ನು ಶ್ಲಾಘಿಸಿದರು. ʼʼಭಾರತ ಮಾತೆಯ ಹಣೆಯ ಮೇಲೆ ದಾಳಿ ಮಾಡಿದ, ಅನೇಕ ಕುಟುಂಬಗಳ ಸಿಂದೂರವನ್ನು ಅಳಿಸಿದ, ಭಾರತ ವಿರೋಧಿ ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ಭಾರತೀಯ ಸೇನೆಯು ಆಪರೇಷನ್ ಸಿಂದೂರ್ ಮೂಲಕ ಪಾಠ ಕಲಿಸಿದೆʼʼ ಎಂದು ತಿಳಿಸಿದರು.
ʼʼಆಪರೇಷನ್ ಸಿಂದೂರ್ ಕಾರ್ಯಾಚರಣೆ ನಡೆಸಿದ ಭಾರತೀಯ ಸಶಸ್ತ್ರ ಪಡೆಗಳಿಗೆ ಇಡೀ ದೇಶವೇ ಗೌರವ ಸೂಚಿಸುತ್ತಿದೆ. ಆಪರೇಷನ್ ಸಿಂದೂರ್ ಕೇವಲ ಮಿಲಿಟರಿ ಕಾರ್ಯಾಚರಣೆಯಲ್ಲ, ಬದಲಾಗಿ ಭಾರತದ ರಾಜಕೀಯ, ಸಾಮಾಜಿಕ ಮತ್ತು ಕಾರ್ಯತಂತ್ರ ಸಂಕಲ್ಪದ ಸಂಕೇತ. ಈ ಕಾರ್ಯಾಚರಣೆಯು ಭಯೋತ್ಪಾದನೆಯ ವಿರುದ್ಧ ಭಾರತದ ದೃಢ ನಿರ್ಧಾರವನ್ನು ಹಾಗೂ ಅದರ ಮಿಲಿಟರಿ ಶಕ್ತಿಯ ಸಾಮರ್ಥ್ಯ ಮತ್ತು ಸಂಕಲ್ಪವನ್ನು ಪ್ರದರ್ಶಿಸುತ್ತದೆ. ಭಾರತ ಭಯೋತ್ಪಾದನೆಯ ವಿರುದ್ಧ ಕ್ರಮ ಕೈಗೊಂಡಾಗಲೆಲ್ಲ, ಉಗ್ರರು ಮತ್ತು ಅವರ ಪೋಷಕರು ಗಡಿಯಾಚೆಯೂ ಸುರಕ್ಷಿತರಾಗಿರುವುದಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆʼʼ ಎಂದು ಹೇಳಿದರು.
ರಾಜನಾಥ ಸಿಂಗ್ ಹೇಳಿದ್ದೇನು? ವಿಡಿಯೊ ನೋಡಿ:
'आपरेशन सिंदूर' सिर्फ़ एक सैन्य कार्रवाई भर नहीं है, बल्कि भारत की राजनीतिक, सामाजिक और सामरिक इच्छाशक्ति का प्रतीक है।
— Rajnath Singh (@rajnathsingh) May 11, 2025
हमारे प्रधानमंत्री श्री @narendramodi ने स्पष्ट कर दिया है कि यह नया भारत है जो आतंकवाद के ख़िलाफ़ सरहद के इस पार और उस पार दोनों तरफ़ प्रभावी कारवाई करता है। pic.twitter.com/Lmoj3MrYey
ಈ ಸುದ್ದಿಯನ್ನೂ ಓದಿ: Brahmos missile: ಸೇನೆಗೆ ಮತ್ತೊಂದು ಬಲ; ಬ್ರಹ್ಮೋಸ್ ಕ್ಷಿಪಣಿ ಉತ್ಪಾದನಾ ಘಟಕ ಉದ್ಘಾಟಿಸಿದ ರಾಜನಾಥ್ ಸಿಂಗ್
ಭಾರತ ನಾಗರಿಕರ ಮೇಲೆ ದಾಳಿ ನಡೆಸಿಲ್ಲ
ʼʼಆಪರೇಷನ್ ಸಿಂದೂರ್ ಕಾರ್ಯಾಚರಣೆ ಮೂಲಕ ಪಾಕಿಸ್ತಾನದಲ್ಲಿನ ಭಯೋತ್ಪಾದಕ ನೆಲೆಯ ಮೇಲೆ ದಾಳಿ ನಡೆಸಲಾಗಿದೆಯೇ ಹೊರತು ನಾಗರಿಕರಿಗೆ ಯಾವುದೇ ಹಾನಿ ಉಂಟು ಮಾಡಿಲ್ಲ. ಭಾರತೀಯ ನಾಗರಿಕ ಪ್ರದೇಶಗಳು ಮತ್ತು ಧಾರ್ಮಿಕ ಸ್ಥಳಗಳ ಮೇಲೆ ಪಾಕಿಸ್ತಾನ ಆಕ್ರಮಣ ನಡೆಸುತ್ತಿದೆʼʼ ಎಂದು ಅವರು ವಿವರಿಸಿದರು.
ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ
ಭಯೋತ್ಪಾದನೆಯನ್ನು ಭಾರತ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅವರು ಪುನರುಚ್ಚರಿಸಿದರು. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧ ಭಾರತ ಪ್ರತೀಕಾರ ತೀರಿಸಿಕೊಂಡಿರುವುದನ್ನು ಉಲ್ಲೇಖಿಸಿದರು. ಉರಿಯ ನಂತರದ ಸರ್ಜಿಕಲ್ ದಾಳಿ, ಪುಲ್ವಾಮಾ ನಂತರದ ಬಾಲಕೋಟ್ ವೈಮಾನಿಕ ದಾಳಿಯನ್ನು ವಿವರಿಸಿದ ಅವರು "ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಗೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಬದ್ಧವಾಗಿದ್ದಾರೆ. ಇದು ಹೊಸ ಭಾರತ - ಗಡಿಯ ಎರಡೂ ಬದಿಗಳಲ್ಲಿ ಭಯೋತ್ಪಾದನೆಯ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳುವ ಭಾರತ" ಎಂದು ಸ್ಪಷ್ಟಪಡಿಸಿದರು.
80ರಿಂದ 100 ಬ್ರಹ್ಮೋಸ್ ಕ್ಷಿಪಣಿ ತಯಾರಿಸುವ ಸಾಮರ್ಥ್ಯ
ಲಖನೌ ಉತ್ತರ ಪ್ರದೇಶ ರಕ್ಷಣಾ ಕೈಗಾರಿಕಾ ಕಾರಿಡಾರ್‌ನಲ್ಲಿರುವ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಉತ್ಪಾದನಾ ಘಟಕ ವಾರ್ಷಿಕವಾಗಿ 80ರಿಂದ 100 ಬ್ರಹ್ಮೋಸ್ ಕ್ಷಿಪಣಿಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ. 300 ಕೋಟಿ ರೂ. ವೆಚ್ಚದಲ್ಲಿ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಘಟಕ ನಿರ್ಮಾಣಗೊಂಡಿದೆ.
ಇದು 290-400 ಕಿ.ಮೀ ವ್ಯಾಪ್ತಿಯ ಮತ್ತು ಮ್ಯಾಕ್ 2.8 ರ ಗರಿಷ್ಠ ವೇಗದಲ್ಲಿ ಹಾರುವ ಸಾಮರ್ಥ್ಯವನ್ನು ಹೊಂದಿರುವ ನಿಖರ-ದಾಳಿಯ ಆಯುಧವಾಗಿದೆ. ಈ ಕ್ಷಿಪಣಿಯನ್ನು ಭೂಮಿ, ಸಮುದ್ರ ಅಥವಾ ಗಾಳಿಯಿಂದ ಉಡಾಯಿಸಬಹುದು.