Operation Sindoor: ನಮಗೆ ಸಹಾಯ ಕೊಡಿ, ಪಾಕ್ ಅನ್ನು ಬಗ್ಗುಬಡಿಯುತ್ತೇವೆ: ಬಲೂಚಿ ಉಗ್ರರು
Operation Sindoor: ಪಾಕಿಸ್ತಾನದ ಶಾಂತಿ ಮತ್ತು ಕದನ ವಿರಾಮದ ಹೇಳಿಕೆಗಳನ್ನು ಬಿಎಲ್‌ಎ "ಸುಳ್ಳು ಪ್ರಚಾರ ಮತ್ತು ವಂಚನೆ" ಎಂದು ಬಣ್ಣಿಸಿದೆ. ಇವು ಕೇವಲ ಪಾಕಿಸ್ತಾನದ ಕುತಂತ್ರದ ನಡೆಗಳು ಎಂದು ಆರೋಪಿಸಿದೆ. ಜೊತೆಗೆ, "ಪಾಕಿಸ್ತಾನದ ಮಾತುಗಳಿಗೆ ಬಲಿಯಾಗಬೇಡಿ, ನಿರ್ಣಾಯಕ ಕ್ರಮ ಕೈಗೊಳ್ಳಿ" ಎಂದು ಭಾರತ ಮತ್ತು ಇತರ ಪ್ರಾದೇಶಿಕ ಶಕ್ತಿಗಳಿಗೆ ಮನವಿ ಮಾಡಿದೆ.

ಬಲೂಚ್ ಲಿಬರೇಶನ್ ಆರ್ಮಿ

ಕ್ವೆಟ್ಟಾ: ಒಂದೆಡೆ ಆಪರೇಶನ್ ಸಿಂದೂರ್‌ನಿಂದ (Operation Sindoor) ತತ್ತರಿಸಿರುವ ಪಾಕಿಸ್ತಾನಕ್ಕೆ (Pakistan) ಬಲೂಚಿಗಳು (Baluchistan) ಸರಿಯಾದ ಸಮಯದಲ್ಲಿ ತಪರಾಕಿ ಇಡಲು ಮುಂದಾಗಿದ್ದಾರೆ. ಬಲೂಚಿಸ್ತಾನದ ಪ್ರತ್ಯೇಕತಾವಾದಿಗಳು ಇದೀಗ ಭಾರತದ ಜೊತೆಗೆ ಸ್ನೇಹಹಸ್ತ ಚಾಚಿದ್ದಾರೆ. ಬಲೂಚ್ ಲಿಬರೇಶನ್ ಆರ್ಮಿ (Baloch Liberation Army) ಸ್ವಾತಂತ್ರ್ಯ ಪಡೆಯಲು ಭಾರತದ ಸಹಾಯವನ್ನು ಕೋರಿದೆ. ಪಾಕಿಸ್ತಾನ ಸೇನೆಯ ವಿರುದ್ಧ ಯುದ್ಧ ನಡೆಸುತ್ತಿರುವ ಬಲೂಚ್ ಲಿಬರೇಶನ್ ಆರ್ಮಿಯು, ಪಾಕಿಸ್ತಾನದ ಮೇಲೆ ದಾಳಿ ನಡೆಸುವಂತೆ ಭಾರತಕ್ಕೆ ಪತ್ರ ಬರೆದಿದೆ. "ಪಾಕಿಸ್ತಾನವನ್ನು ಪಶ್ಚಿಮದಿಂದ ನಾಶಪಡಿಸಲು ನಾವು ಸಂಪೂರ್ಣವಾಗಿ ಸಿದ್ಧರಿದ್ದೇವೆ" ಎಂದು ಬಿಎಲ್‌ಎ ಹೇಳಿದೆ.
ತಾವು ಯಾವುದೇ ದೇಶದ ಕೈಗೊಂಬೆಯಲ್ಲ ಎಂದು ಸ್ಪಷ್ಟಪಡಿಸಿರುವ ಬಿಎಲ್‌ಎ, ಪ್ರಾದೇಶಿಕ ರಾಜಕೀಯ ಮತ್ತು ಮಿಲಿಟರಿ ಸಮೀಕರಣದಲ್ಲಿ ತಮ್ಮದು ನಿರ್ಣಾಯಕ ಪಕ್ಷವಾಗಿದೆ ಎಂದು ಒತ್ತಿ ಹೇಳಿದೆ. ಪಾಕಿಸ್ತಾನದ ಶಾಂತಿ ಮತ್ತು ಕದನ ವಿರಾಮದ ಹೇಳಿಕೆಗಳನ್ನು ಬಿಎಲ್‌ಎ "ಸುಳ್ಳು ಪ್ರಚಾರ ಮತ್ತು ವಂಚನೆ" ಎಂದು ಬಣ್ಣಿಸಿದೆ. ಇವು ಕೇವಲ ಪಾಕಿಸ್ತಾನದ ಕುತಂತ್ರದ ನಡೆಗಳು ಎಂದು ಆರೋಪಿಸಿದೆ. ಜೊತೆಗೆ, "ಪಾಕಿಸ್ತಾನದ ಮಾತುಗಳಿಗೆ ಬಲಿಯಾಗಬೇಡಿ, ನಿರ್ಣಾಯಕ ಕ್ರಮ ಕೈಗೊಳ್ಳಿ" ಎಂದು ಭಾರತ ಮತ್ತು ಇತರ ಪ್ರಾದೇಶಿಕ ಶಕ್ತಿಗಳಿಗೆ ಮನವಿ ಮಾಡಿದೆ. ಪಾಕಿಸ್ತಾನವನ್ನು "ಭಯೋತ್ಪಾದಕ ಕಾರ್ಖಾನೆ" ಎಂದು ಕರೆದಿರುವ ಬಿಎಲ್‌ಎ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜಾಗತಿಕ ಭಯೋತ್ಪಾದನೆಯ ಕೇಂದ್ರವಾಗಿದೆ ಎಂದು ದೂಷಿಸಿದೆ.
ಬಿಎಲ್‌ಎ ತನ್ನ ಹೋರಾಟದಲ್ಲಿ ಗಣನೀಯ ಯಶಸ್ಸು ಸಾಧಿಸಿರುವುದಾಗಿ ಹೇಳಿಕೊಂಡಿದೆ. "ಯಾವುದೇ ಬಾಹ್ಯ ಬೆಂಬಲವಿಲ್ಲದೆ, ಬಲೂಚಿಸ್ತಾನದ ನೆಲದಲ್ಲಿ ಪಾಕಿಸ್ತಾನದಂತಹ ಪರಮಾಣು ಶಕ್ತಿಯನ್ನು ಹಲವು ರಂಗಗಳಲ್ಲಿ ಸೋಲಿಸಿದ್ದೇವೆ," ಎಂದು ಘೋಷಿಸಿರುವ ಬಿಎಲ್‌ಎ, ಪಾಕಿಸ್ತಾನವನ್ನು "ಬೇರುಗಳಿಂದ ನಿರ್ಮೂಲನೆ" ಮಾಡಲು ಭಾರತ ರಾಜಕೀಯ, ರಾಜತಾಂತ್ರಿಕ ಮತ್ತು ಮಿಲಿಟರಿ ಬೆಂಬಲ ನೀಡಬೇಕು ಎಂದು ಕೋರಿದೆ. ಜೊತೆಗೆ, "ಪಾಕಿಸ್ತಾನ ಇರುವವರೆಗೆ ಈ ಪ್ರದೇಶದಲ್ಲಿ ಭಯೋತ್ಪಾದನೆ ಮತ್ತು ಅಸ್ಥಿರತೆ ಮುಂದುವರಿಯುತ್ತದೆ," ಎಂದು ಎಚ್ಚರಿಕೆ ನೀಡಿದೆ.
ಭಾರತ ಪಾಕಿಸ್ತಾನವನ್ನು ನಾಶಪಡಿಸಲು ನಿರ್ಧರಿಸಿದರೆ, ಬಿಎಲ್‌ಎ ಪಶ್ಚಿಮ ಭಾಗದಿಂದ ಮಿಲಿಟರಿ ಬೆಂಬಲ ನೀಡಲು ಸಿದ್ಧವಾಗಿದೆ ಎಂದು ಹೇಳಿದೆ. "ನಾವು ಅವರನ್ನು ನಾಶ ಮಾಡುತ್ತೇವೆ. ಜಗತ್ತು ಈ ಅವಕಾಶವನ್ನು ಗುರುತಿಸದಿದ್ದರೆ, ಬಲೂಚ್ ಜನರು ಈ ಹೋರಾಟವನ್ನು ಸ್ವತಂತ್ರವಾಗಿ ಮುಂದುವರಿಸುತ್ತಾರೆ" ಎಂದು ಹೇಳಿದೆ. ಇದರೊಂದಿಗೆ, "ಸ್ವತಂತ್ರ ಬಲೂಚಿಸ್ತಾನವು ಮಾತ್ರ ಈ ಪ್ರದೇಶದಲ್ಲಿ ಶಾಶ್ವತ ಶಾಂತಿ, ಸಮತೋಲನ ಮತ್ತು ಭಯೋತ್ಪಾದನೆಯನ್ನು ಕೊನೆಗಾಣಿಸಲು ಖಾತರಿಪಡಿಸುತ್ತದೆ," ಎಂದು ಬಿಎಲ್‌ಎ ತಿಳಿಸಿದೆ.
ಇದನ್ನೂ ಓದಿ: operation sindoor: ಕ್ಷಿಪಣಿ ದಾಳಿಯಿಂದ ಸ್ವಲ್ಪದರಲ್ಲೇ ಪಾರಾದ ಆಸೀಸ್ ಕ್ರಿಕೆಟಿಗರು