Operation Abhyaas: ಬೆಂಗಳೂರಿನಲ್ಲಿ ಹೀಗಿತ್ತು ʼಆಪರೇಷನ್ ಅಭ್ಯಾಸ್ʼ ಮಾಕ್ ಡ್ರಿಲ್
Mock Drill: ಏ. 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಭಾರತವು ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ 2 ದೇಶಗಳ ನಡುವೆ ಯುದ್ಧದ ವಾತಾವರಣ ಮೂಡಿದೆ. ಹೀಗಾಗಿ ಯುದ್ಧದಂತಹ ತುರ್ತು ಸಂದರ್ಭದಲ್ಲಿ ನಾಗರಿಕರನ್ನು ಹೇಗೆ ಸಂರಕ್ಷಿಸಬೇಕು ಎನ್ನುವುದನ್ನು ತಿಳಿಸಲು ಅಣಕು ಕಾರ್ಯಾಚರಣೆ ನಡೆಸಲಾಯಿತು.

ಫೋಟೊಗಳು: ಸುಧಾಕರ್ ದೇವರಾಜ್.


ದೇಶಾದ್ಯಂತ ಮೇ 7ರಂದು ಆಪರೇಷನ್ ಅಭ್ಯಾಸ್ ಹೆಸರಿನಲ್ಲಿ ಮಾಕ್ಡ್ರಿಲ್ ಅಥವಾ ಅಣಕು ಕಾರ್ಯಾಚರಣೆ ನಡೆಯಿತು. ಬೆಂಗಳೂರಿನಲ್ಲಿಯೂ ವಿವಿಧ ಕಡೆಗಳಲ್ಲಿ ಇದನ್ನು ನಡೆಸಿ ಸಾರ್ಚಜನಿಕರಲಲಿ ಅರಿವು ಮೂಡಿಸಲಾಯಿತು. ತುರ್ತು ಪರಿಸ್ಥಿತಿಯಲ್ಲಿ ಹೇಗೆ ವರ್ತಿಸಬೇಕು ಎನನುವುದನ್ನು ತಿಳಿಸಲಾಯಿತು.

ಭಾರತ-ಪಾಕ್ ನಡುವೆ ಯುದ್ಧ ವಾತಾವರಣ ಹಿನ್ನೆಲೆ ದೇಶದಾದ್ಯಂತ ಮಾಕ್ ಡ್ರಿಲ್ ಕೈಗೊಳ್ಳಲಾಯಿತು. ಬೆಂಗಳೂರಿನ 35 ಸ್ಥಳಗಳಲ್ಲಿ 2 ನಿಮಿಷ ಸೈರನ್ ಮೊಳಗಿತು. 2 ನಿಮಿಷಗಳ ಕಾಲ ಸೈರನ್ ಮೊಳಗಿತು. ಆ ಮೂಲಕ ಸ್ಥಳೀಯರಿಗೆ ಎಚ್ಚರಿಕೆ ನೀಡಲಾಯಿತು.

ಬೆಂಕಿ ಅವಘಡ ಸಂಭವಿಸಿದಾಗ ಯಾವ ರೀತಿಯ ಕಾರ್ಯಾಚರಣೆ ನಡೆಸಬೇಕು ಎನ್ನುವುದರ ಪ್ರಾತ್ಯಕ್ಷಿತೆ ಮೂಲಕ ವಿವರಿಸಲಾಯಿತು. ತುರ್ತು ಪರಿಸ್ಥಿತಿಯಲ್ಲಿ ಗಾಬರಿ ಬೀಳದೆ ಯಾವ ರೀತಿ ಪಾರಾಗಬಹುದು ಎನ್ನುವುದನ್ನು ತಜ್ಞರು ತಿಳಿಸಿಕೊಟ್ಟರು. ಎಚ್ಚರಿಕೆಯ ಸೈರನ್ ಮೊಳಗಿದಾಗ ನಮ್ಮನ್ನು, ನಮ್ಮವರನ್ನು ಹೇಗೆ ರಕ್ಷಿಸಬೇಕು ಎನ್ನುವುದನ್ನು ಪ್ರಾಯೋಗಿಕವಾಗಿ ಮನವರಿಕೆ ಮಾಡಲಾಯಿತು.

ದಿಲ್ಲಿ, ಮುಂಬೈ, ಪುಣೆ, ಬೆಂಗಳೂರು, ಹೈದರಾಬಾದ್ ಮತ್ತು ಅಹಮದಾಬಾದ್ನಂತಹ ಮೆಟ್ರೋ ನಗರಗಳು ಸೇರಿದಂತೆ ಭಾರತದ 259 ಸ್ಥಳಗಳಲ್ಲಿ ಮಾಕ್ ಡ್ರಿಲ್ ನಡೆದಿದೆ. ಇವುಗಳಲ್ಲಿ 100ಕ್ಕೂ ಹೆಚ್ಚು ಸ್ಥಳಗಳನ್ನು ಅತ್ಯಂತ ಸೂಕ್ಷ್ಮವೆಂದು ಗುರುತಿಸಲಾಗಿದೆ. ಕ್ಯಾಟಗರಿ 2ರಲ್ಲಿ ಕರ್ನಾಟಕದ 2-3 ಜಿಲ್ಲೆಗಳಿವೆ.

ಮಾಕ್ ಡ್ರಿಲ್ ಹೇಗೆ ನಡೆಯುವ ವಿಧಾನ. ಮೊದಲಿಗೆಇನ್ಕಮಿಂಗ್ ಏರ್ ರೈಡ್ ನಡೆಯುತ್ತದೆ. ನಂತರ ಸೈರನ್ ಮೊಳಗಲಿದೆ. ಬಳಿಕ ಸುರಕ್ಷತಾ ಕ್ರಮ ಕೈಗೊಳ್ಳಲಾಗುತ್ತದೆ. ಇದಾದ ಬಳಿಕ ಬ್ಲಾಕ್ ಔಟ್ ಮಾಡಲಾಗುತ್ತದೆ. ಇದು ಕಟ್ಟಡದಲ್ಲಿ ಬೆಂಕಿ ಬಿದ್ದ ಅಣಕು ಪ್ರದರ್ಶನ, ಸಂತ್ರಸ್ತರರ ಹುಡುಕಾಟ ಮತ್ತು ರಕ್ಷಣಾ ಕ್ರಮ, ಗಾಯಾಳುಗಳ ರಕ್ಷಣೆ ಮಾಡುವ ಅಣಕು ಪ್ರದರ್ಶನ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಕೆಲಸ, ಸೂಕ್ಷ್ಮ ಜಾಗದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಅಣಕು ಪ್ರದರ್ಶನ ಇರುತ್ತದೆ.

1971ರ ಅನಂತರ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಕವಾಯತುಗಳನ್ನು ನಡೆಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ ಅನಂತರ ಪಾಕಿಸ್ತಾನದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈ ಕವಾಯತುಗಳನ್ನು ನಡೆಸಲು ಆದೇಶಿಸಿತ್ತು.

ನಾಗರಿಕ ರಕ್ಷಣಾ ಕವಾಯತುಗಳನ್ನು ನಿಯಮಿತವಾಗಿ ಕೆಲವು ಜಿಲ್ಲೆಗಳಲ್ಲಿ ನಡೆಸಲಾಗುತ್ತಿರುತ್ತದೆ. ಆದರೆ ಈ ಬಾರಿ ಅದು ಸಂಪೂರ್ಣ ಭಾರತದಲ್ಲಿ ಏಕಕಾಲಕ್ಕೆ ನಡೆದಿದೆ. ಇದು ಒಂದೆರಡು ದಿನಗಳ ಕಾಲ ನಡೆಯುವ ಸಾಧ್ಯತೆ ಇದೆ. ನಾಗರಿಕ ರಕ್ಷಣೆಗಾಗಿ ನಡೆಯುವ ಈ ಅಣಕು ಕವಾಯತು ಜನರನ್ನು ಭಯಭೀತರನ್ನಾಗಿಸಲು ನಡೆಸಲಾಗುತ್ತಿಲ್ಲ. ಇದು ನಾಗರಿಕ ರಕ್ಷಣಾ ಸ್ವಯಂಸೇವಕರ ಪಟ್ಟಿಯನ್ನು ಮರು ಪರಿಶೀಲನೆ ನಡೆಸಲು ಮಾಡಲಾಗುತ್ತದೆ. ಇದು ಮುಂದೆ ಸನ್ನಿವೇಶಕ್ಕೆ ನಮ್ಮನ್ನು ಸಜ್ಜುಗೊಳಿಸಲು ಸಹಾಯ ಮಾಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶಾದ್ಯಂತ ಇರುವ ಕೆಲವು ದುರ್ಬಲವಾಗಿರುವ ಜಿಲ್ಲೆಗಳಲ್ಲಿ ಈ ಕಾರ್ಯಾಚರಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಡೆಸಲು ಮತ್ತು ನಾಗರಿಕರಿಗೆ ತರಬೇತಿ ನೀಡಲು ಸರ್ಕಾರ ಸೂಚನೆ ನೀಡಿತ್ತು. ಯುದ್ಧದ ಸಮಯದಲ್ಲಿ ನಾಗರಿಕರನ್ನು ರಕ್ಷಿಸುವುದು ಇದರ ಪ್ರಧಾನ ಉದ್ದೇಶ. ಕೊನೆಯ ಬಾರಿಗೆ ಇಂತಹ ತರಬೇತಿ 1999ರಲ್ಲಿ ಮತ್ತು ಅದಕ್ಕಿಂತ ಮೊದಲು 1971ರಲ್ಲಿ ನಡೆದಿತ್ತು. ಆದರೆ ಇಂದಿನ ಪೀಳಿಗೆಯ ಹೆಚ್ಚಿನ ಯುವಜನರಿಗೆ ಈ ಬಗ್ಗೆ ತಿಳಿದಿಲ್ಲ.

ನಾಗರಿಕ ರಕ್ಷಣೆಗಾಗಿ ನಡೆದ ಅಣಕು ಕವಾಯತಿನಲ್ಲಿ ರಕ್ಷಣೆ, ಪ್ಯಾರಾ ಮಿಲಿಟರಿ, ಆಸ್ಪತ್ರೆಗಳಲ್ಲಿನ ವ್ಯವಸ್ಥೆಗಳ ಪರಿಶೀಲನೆಯನ್ನು ನಡೆಸಲಾಗಿದೆ. ಇದು ನಾಗರಿಕ ರಕ್ಷಣಾ ಕಾರ್ಯತಂತ್ರದ ಪ್ರಮುಖ ಭಾಗ ಎಂದೇ ಪರಿಗಣಿಸಲಾಗಿದೆ. ಒಟ್ಟಿನಲ್ಲಿ ಬೆಂಗಳೂರು ಸೇರಿದಂತೆ ದೇಶಾದ್ಯಂತ ನಡೆದ ಮಾಕ್ ಡ್ರಿಲ್ನಲ್ಲಿ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡರು.