ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಅಕ್ರಮವಾಸಿಗಳನ್ನು ಒಕ್ಕಲೆಬ್ಬಿಸಿ

ಕಾರ್ಯಕರ್ತರು ಇಂಥ ಅಕ್ರಮ ನಿವಾಸಿಗಳು ನೆಲೆಸಿರುವ ಶೆಡ್‌ಗಳಿಗೆ ಭೇಟಿಯಿತ್ತು ದಾಖಲೆಗಳನ್ನು ಪರಿಶೀಲಿಸಿದಾಗ, ಅವರಲ್ಲಿ ಅನೇಕರು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡಿರುವುದು ಪತ್ತೆ ಯಾಗಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಈ ಕಾರ್ಯದ ನೆರವೇರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಅಕ್ರಮವಾಸಿಗಳನ್ನು ಒಕ್ಕಲೆಬ್ಬಿಸಿ

Profile Ashok Nayak Jul 11, 2025 11:04 AM

ಬೆಂಗಳೂರಿನ ಮಹದೇವಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶದ ಪ್ರಜೆಗಳನ್ನು ಪತ್ತೆ ಹಚ್ಚುವ ಉದ್ದೇಶದಿಂದ ಬಿಜೆಪಿಯ ಕಾರ್ಯಕರ್ತರು ಕ್ಷೇತ್ರದ ವಿವಿಧ ಸ್ಥಳಗಳಲ್ಲಿ ಅಭಿಯಾನ ಕೈಗೊಂಡಿರುವುದು ಶ್ಲಾಘನೀಯ ಸಂಗತಿ. ಇದು ಕೇವಲ ಒಂದು ಪ್ರದೇಶಕ್ಕೆ ಸೀಮಿತ ವಾಗದೆ ರಾಜ್ಯದ ಮತ್ತು ದೇಶದ ಉದ್ದಗಲಕ್ಕೂ ಹಬ್ಬುವ ಅಭಿಯಾನವಾಗಬೇಕು.

ಬಾಂಗ್ಲಾದೇಶೀಯರು ಮಾತ್ರವಲ್ಲದೆ ದೇಶದೊಳಗೆ ಅಕ್ರಮವಾಗಿ ತೂರಿಕೊಂಡಿರುವ ಅಥವಾ ಅವಧಿ ಮೀರಿ ನೆಲೆಸಿರುವ ಇತರ ದೇಶದ ಪ್ರಜೆಗಳನ್ನು ಕೂಡ ಹೀಗೆಯೇ ಗುರುತು ಹಚ್ಚಿ, ಅವರವರ ನೆಲೆಗಳಿಗೆ ವಾಪಸ್ ಕಳಿಸುವಂತಾಗಬೇಕು. ವಿಶ್ವದ ಭೂರಾಜಕೀಯದ ವಾತಾವರಣವು ತೀವ್ರವಾಗಿ ಮತ್ತು ಅಸಹಜವಾಗಿ ಬದಲಾಗುತ್ತಿರುವುದರ ಹಿನ್ನೆಲೆಯಲ್ಲಿ ಹಾಗೂ ಭಾರತದ ಭದ್ರತೆ, ಸುರಕ್ಷತೆ, ಸಾರ್ವಭೌಮತೆಗಳನ್ನು ಗಮನದಲ್ಲಿಟ್ಟುಕೊಂಡು, ಜರೂರಾಗಿ ನೆರವೇರಿಸಬೇಕಾದ ಕಾರ್ಯ ಇದಾಗಿದೆ ಎಂದರೆ ಅತಿಶಯೋಕ್ತಿ ಆಗಲಾರದು.

ಇದನ್ನೂ ಓದಿ: Vishwavani Editorial: ಬೈಕ್ ಟ್ಯಾಕ್ಸಿ ಸೇವೆ ಊರ್ಜಿತವಾಗಲಿ

ಕಾರ್ಯಕರ್ತರು ಇಂಥ ಅಕ್ರಮ ನಿವಾಸಿಗಳು ನೆಲೆಸಿರುವ ಶೆಡ್‌ಗಳಿಗೆ ಭೇಟಿಯಿತ್ತು ದಾಖಲೆಗಳನ್ನು ಪರಿಶೀಲಿಸಿದಾಗ, ಅವರಲ್ಲಿ ಅನೇಕರು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡಿರುವುದು ಪತ್ತೆಯಾಗಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಈ ಕಾರ್ಯದ ನೆರವೇರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಈ ಅಭಿಯಾನಕ್ಕೆ ಆ ಪಕ್ಷದವರು, ಈ ಪಕ್ಷದವರು ಎಂದು ಹಣೆಪಟ್ಟಿ ಕಟ್ಟಿ ಕೊಳ್ಳದೆ ಅಥವಾ ‘ನಾವು ಸಾರ್ವಜನಿಕರು, ನಮಗ್ಯಾಕೆ ಈ ಉಸಾಬರಿ’ ಎಂಬ ಗೊಣಗಾಟ-ಗ್ರಹಿಕೆಗೆ ಆಸ್ಪದ ನೀಡದೆ ಪ್ರತಿಯೊಬ್ಬರೂ ಸಹಕರಿಸಬೇಕಾದ್ದು ಈ ಕ್ಷಣದ ಅನಿವಾರ್ಯತೆಯಾಗಿದೆ.

ಜಮ್ಮು-ಕಾಶ್ಮೀರ ಪ್ರದೇಶದಲ್ಲಿ ಪಾಕಿಸ್ತಾನದ ಕಡೆಯಿಂದ ಅಕ್ರಮವಾಗಿ ಒಳತೂರಿಕೊಂಡವರು, ಭಾರತದ ಸಾರ್ವಭೌಮತೆಗೆ ಧಕ್ಕೆಯನ್ನು ತಂದೊಡ್ಡಲು ಏನೆಲ್ಲಾ ಕುತಂತ್ರಗಳ ಬಲೆಯನ್ನು ಹೆಣೆದರು, ವಿಧ್ವಂಸಕ ಕೃತ್ಯಗಳ ಸಂಚುಹೂಡಿದರು ಎಂಬುದನ್ನು ಒಮ್ಮೆ ನೆನಪಿಸಿಕೊಂಡರೆ, ಈ ಚಟುವಟಿಕೆಯು ನೆರವೇರಲೇಬೇಕಾದುದರ ಹಿಂದಿನ ಅನಿವಾರ್ಯತೆ ಮನವರಿಕೆಯಾದೀತು.