ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG 2nd Test Preview: ಎಜ್‌ಬಾಸ್ಟನ್‌ನಲ್ಲಿ ಇತಿಹಾಸ ಬರೆಯಲು ಭಾರತ ಸಜ್ಜು!

IND vs ENG 2nd Test Preview: ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಜುಲೈ 2 ರಂದು ಬುಧವಾರ ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಆರಂಭವಾಗುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯದ ನಿಮಿತ್ತ ಉಭಯ ತಂಡಗಳ ಪ್ಲೇಯಿಂಗ್‌ XI, ಪಿಚ್‌ ರಿಪೋರ್ಟ್‌, ಹವಾಮಾನ ವರದಿ ಸೇರಿದಂತೆ ಪ್ರಮುಖ ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ.

ಎಜ್‌ಬಾಸ್ಟನ್‌ನಲ್ಲಿ ಇತಿಹಾಸ ಬರೆಯಲು ಟೀಮ್‌ ಇಂಡಿಯಾ ಸಜ್ಜು!

ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಣ ಎರಡನೇ ಟೆಸ್ಟ್‌ ಪಂದ್ಯ.

Profile Ramesh Kote Jul 1, 2025 2:24 PM

ಬರ್ಮಿಂಗ್‌ಹ್ಯಾಮ್‌: ಐದು ಶತಕಗಳ ಹೊರತಾಗಿಯೂ ಇಂಗ್ಲೆಂಡ್‌ ವಿರುದ್ಧ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ(IND vs ENG) ಸೋಲು ಅನುಭವಿಸಿದ್ದ ಶುಭಮನ್‌ ಗಿಲ್‌ (Shubman Gill) ನಾಯಕತ್ವದ ಭಾರತ ತಂಡ, ನಾಳೆ (ಜುಲೈ 2, ಬುಧವಾರ) ಇಲ್ಲಿನ ಎಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ಆರಂಭವಾಗುವ ಎರಡನೇ ಹಣಾಹಣಿಗೆ ಸಜ್ಜಾಗುತ್ತಿದೆ. ಎರಡನೇ ಪಂದ್ಯವನ್ನು ಗೆದ್ದು ಆತಿಥೇಯರಿಗೆ ತಿರುಗೇಟು ನೀಡಲು ಪ್ರವಾಸಿಗರು ಎದುರು ನೋಡುತ್ತಿದ್ದಾರೆ. ಲೀಡ್ಸ್‌ ಟೆಸ್ಟ್‌ ಪಂದ್ಯದಲ್ಲಿ ಮಾಡಿದ್ದ ತಪ್ಪುಗಳನ್ನು ತಿದ್ದಿಕೊಂಡು ಟೀಮ್‌ ಇಂಡಿಯಾ ಕಣಕ್ಕೆ ಇಳಿಯಲಿದೆ. ಆದರೆ, ಇಂಗ್ಲೆಂಡ್‌ (England) ಕಳೆದ ಪಂದ್ಯದಲ್ಲಿ ತೋರಿದ್ದ ಅದೇ ಲಯವನ್ನು ಮುಂದುವರಿಸುವ ವಿಶ್ವಾಸವನ್ನು ಹೊಂದಿದೆ.

ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಹಾಗೂ ಆರ್‌ ಅಶ್ವಿನ್‌ ಅವರು ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆದ್ದರಿಂದ ಶುಭಮನ್‌ ಗಿಲ್‌ ನಾಯಕತ್ವದ ಹೊಸ ತಲೆಮಾರಿನ ಟೆಸ್ಟ್‌ ತಂಡ ಲೀಡ್ಸ್‌ ಟೆಸ್ಟ್‌ನಲ್ಲಿ ಗಮನಾರ್ಹ ಪ್ರದರ್ಶನವನ್ನು ತೋರಿತ್ತು. ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌, ರಿಷಭ್‌ ಪಂತ್‌ ಹಾಗೂ ಕೆಎಲ್‌ ರಾಹುಲ್‌ ಅವರಿಂದ ಐದು ಶತಕಗಳು ಮೂಡಿ ಬಂದಿದ್ದವು. ಆದರೂ ಭಾರತ ತಂಡ ಗೆಲ್ಲಲು ಸಾಧ್ಯವಾಗಿರಲಿಲ್ಲ. ಇಂಗ್ಲೆಂಡ್‌ಗೆ ಭಾರತ ತಂಡ ಕೊನೆಯ ಇನಿಂಗ್ಸ್‌ನಲ್ಲಿ 371 ರನ್‌ಗಳ ಗುರಿಯನ್ನು ನೀಡಿತ್ತಾದರೂ ಆತಿಥೇಯ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಲು ಪ್ರವಾಸಿ ಬೌಲರ್‌ಗಳಿಂದ ಸಾಧ್ಯವಾಗಲಿಲ್ಲ. ಆ ಮೂಲಕ ಬೆನ್‌ ಸ್ಟೋಕ್ಸ್‌ ನಾಯಕತ್ವದ ಇಂಗ್ಲೆಂಡ್‌ ತಂಡ ಟೆಸ್ಟ್‌ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದಿತ್ತು.

IND vs ENG: ಜಸ್‌ಪ್ರೀತ್‌ ಬುಮ್ರಾ ಇಲ್ಲ? ಎರಡನೇ ಟೆಸ್ಟ್‌ಗೆ ಇಬ್ಬರು ಸ್ಪಿನ್ನರ್‌ಗಳು!

ಎಜ್‌ಬಾಸ್ಟನ್‌ನಲ್ಲಿ ಭಾರತ ತಂಡ ಇಲ್ಲಿಯವರೆಗೂ 8 ಟೆಸ್ಟ್‌ ಪಂದ್ಯಗಳನ್ನು ಆಡಿದೆ. ಇದರಲ್ಲಿ 7 ರಲ್ಲಿ ಸೋಲು ಅನುಭವಿಸಿದ್ದು, ಇನ್ನುಳಿದ ಒಂದು ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತ್ತು. 1986ರಲ್ಲಿ ಕಪಿಲ್‌ ದೇವ್‌ ನಾಯಕತ್ವದಲ್ಲಿ ಭಾರತ ತಂಡ ಒಂದು ಪಂದ್ಯದಲ್ಲಿ ಡ್ರಾ ಸಾಧಿಸಿತ್ತು. 2022ರಲ್ಲಿ ಇದೇ ಅಂಗಣದಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ಭಾರತ ನೀಡಿದ್ದ 378 ರನ್‌ಗಳ ಗುರಿಯನ್ನು ಇಂಗ್ಲೆಂಡ್‌ ಚೇಸ್‌ ಮಾಡಿತ್ತು. ಆ ಮೂಲಕ ಆಂಗ್ಲರು ಏಳು ವಿಕೆಟ್‌ಗಳಿಂದ ಗೆಲುವು ಪಡೆದಿದ್ದರು.

ಅದ್ಭುತ ಲಯದಲ್ಲಿ ನಾಲ್ವರು ಬ್ಯಾಟರ್ಸ್

ಭಾರತ ತಂಡದ ಅಗ್ರ ಬಾಟಿಂಗ್‌ ಕ್ರಮಾಂಕ ಬಲಿಷ್ಠವಾಗಿದೆ. ಯಶಸ್ವಿ ಜೈಸ್ವಾಲ್‌, ನಾಯಕ ಶುಭಮನ್‌ ಗಿಲ್‌, ಕೆಎಲ್‌ ರಾಹುಲ್‌ ಹಾಗೂ ರಿಷಭ್‌ ಪಂತ್‌ ಉತ್ತಮ ಲಯದಲ್ಲಿದ್ದಾರೆ. ಈ ನಾಲ್ವರು ಬ್ಯಾಟ್ಸ್‌ಮನ್‌ಗಳು ಕಳೆದ ಪಂದ್ಯದಲ್ಲಿ ಶತಕಗಳನ್ನು ಬಾರಿಸಿದ್ದರು. ಆದರೆ, ಕೆಳ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್‌ಮನ್‌ಗಳು ಎರಡನೇ ಟೆಸ್ಟ್‌ನಲ್ಲಿ ಕಮ್‌ಬ್ಯಾಕ್‌ ಮಾಡಬೇಕಾದ ಅಗತ್ಯವಿದೆ. ಲೀಡ್ಸ್‌ನಲ್ಲಿ ಕೆಳ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಎರಡೂ ಇನಿಂಗ್ಸ್‌ಗಳಲ್ಲಿ ವೈಫಲ್ಯ ಅನುಭವಿಸಿದ್ದರು. ಭಾರತ ಸೋಲಿಗೆ ಇದು ಕೂಡ ಒಂದು ಕಾರಣವಾಗಿತ್ತು.

IND vs ENG: ಜೋಫ್ರಾ ಆರ್ಚರ್‌ ಇಲ್ಲ, ಎರಡನೇ ಟೆಸ್ಟ್‌ಗೆ ಇಂಗ್ಲೆಂಡ್‌ನ ಪ್ಲೇಯಿಂಗ್‌ XI ಪ್ರಕಟ!

ಬೌಲಿಂಗ್‌ನಲ್ಲಿ ಸುಧಾರಣೆ ಅಗತ್ಯ

ಇನ್ನು ಕಳೆದ ಪಂದ್ಯದಲ್ಲಿ ಭಾರತ ತಂಡದ ಬೌಲಿಂಗ್‌ ವಿಭಾಗದಲ್ಲಿ ಜಸ್‌ಪ್ರೀತ್‌ ಬುಮ್ರಾ ಏಕಾಂಗಿ ಹೋರಾಟ ನಡೆಸಿದ್ದರು. ಅವರು ಪ್ರಥಮ ಇನಿಂಗ್ಸ್‌ನಲ್ಲಿ 5 ವಿಕೆಟ್‌ ಸಾಧನೆ ಮಾಡಿದ್ದರು. ಆದರೆ, ಇವರಿಗೆ ಇತರೆ ಬೌಲರ್‌ಗಳು ಸರಿಯಾಗಿ ಸಾಥ್‌ ನೀಡಿರಲಿಲ್ಲ. ಎರಡೂ ಇನಿಂಗ್ಸ್‌ಗಳಿಂದ ಪ್ರಸಿಧ್‌ ಕೃಷ್ಣ 5 ವಿಕೆಟ್‌ ಕಿತ್ತಿದ್ದರೂ ಹೆಚ್ಚಿನ ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಮೊಹಮ್ಮದ್‌ ಸಿರಾಜ್‌ ಕೇವಲ ಎರಡು ವಿಕೆಟ್‌ ಪಡೆದಿದ್ದರು.

ಎರಡನೇ ಗೆಲುವಿನ ಮೇಲೆ ಇಂಗ್ಲೆಂಡ್‌ ಕಣ್ಣು

ಇನ್ನು ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಗೆಲುವಿನ ವಿಶ್ವಾಸದಲ್ಲಿ ತೇಲುತ್ತಿರುವ ಇಂಗ್ಲೆಂಡ್‌ ತಂಡ, ಎಜ್‌ಬಾಸ್ಟನ್‌ನಲ್ಲಿಯೂ ಅದೇ ಲಯವನ್ನು ಮುಂದುವರಿಸಲು ಎದುರು ನೋಡುತ್ತಿದೆ. ಬೆನ್‌ ಡಕೆಟ್‌, ಒಲ್ಲಿ ಪೋಪ್‌, ಜೋ ರೂಟ್‌, ಹ್ಯಾರಿ ಬ್ರೂಕ್‌ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು. ಇದೀಗ ಅದೇ ಲಯವನ್ನು ಅವರು ಮುಂದುವರಿಸಲು ಬಯಸುತ್ತಿದ್ದಾರೆ. ಇನ್ನು ಎರಡನೇ ಟೆಸ್ಟ್‌ ಪಂದ್ಯಕ್ಕೆ ಇಂಗ್ಲೆಂಡ್‌ ತಂಡದ ಪ್ಲೇಯಿಂಗ್‌ IX ಈಗಾಗಲೇ ಪ್ರಕಟಿಸಲಾಗಿದೆ. ಲೀಡ್ಸ್‌ನಲ್ಲಿ ಆಡಿದ್ದ ಅದೇ ಆಡುವ ಬಳಗವನ್ನು ಈ ಪಂದ್ಯಕ್ಕೂ ಉಳಿಸಿಕೊಳ್ಳಲಾಗಿದೆ.

IND vs ENG: ಕೆಎಲ್‌ ರಾಹುಲ್‌ಗೆ ಮಹತ್ವದ ಸಂದೇಶ ರವಾನಿಸಿದ ಸಂಜಯ್‌ ಮಾಂಜ್ರೇಕರ್‌!

ಪಿಚ್‌ ಮತ್ತು ಹವಾಮಾನ ವರದಿ

ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ ಪಿಚ್‌ ಪಂದ್ಯದ ಆರಂಭದಲ್ಲಿ ಫಾಸ್ಟ್‌ ಬೌಲರ್‌ಗಳಿಗೆ ಬೌನ್ಸ್‌ ಹಾಗೂ ವೇಗದ ಬೌಲಿಂಗ್‌ಗೆ ನೆರವು ನೀಡಲಿದೆ. ಅದರಲ್ಲಿಯೂ ವಿಶೇಷವಾಗಿ ಮೋಡ ಮುಸುಕಿದ ವಾತಾವರಣವಿದ್ದರೆ, ಇಲ್ಲಿನ ಪಿಚ್‌ ಬೌಲರ್‌ಗಳಿಗೆ ನೆರವು ನೀಡಲಿದೆ. ಆದರೆ, ಒಮ್ಮೆ ಬಿಸಿಲು ಬಂದು ಪಂದ್ಯ ಸಾಗುತ್ತಿದ್ದರೆ, ಇಲ್ಲಿನ ವಿಕೆಟ್‌ ಬ್ಯಾಟ್ಸ್‌ಮನ್‌ಗಳಿಗೆ ನೆರವು ನೀಡಲಿದೆ. ಆದರೆ, ಮೂರನೇ ದಿನದ ಬಳಿಕ ಪಿಚ್‌ ಸ್ಪಿನ್ನರ್‌ಗಳಿಗೆ ನೆರವು ನೀಡಲಿದೆ. ಇನ್ನು ಪಂದ್ಯದ ಮೊದಲನೇ ದಿನಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇಲ್ಲ. ಆದರೆ, ಇಂಗ್ಲೆಂಡ್‌ ಹವಾಮಾನದ ಬಗ್ಗೆ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಒಂದು ವೇಳೆ ದಿನವೀಡಿ ಮೋಡವಿದ್ದರೆ, ಈ ವಾತಾವರಣ ಬೌಲರ್‌ಗಳಿಗೆ ನೆರವಾಗಲಿದೆ.

ಇಂಗ್ಲೆಂಡ್‌ ಪ್ಲೇಯಿಂಗ್‌ XI

ಝ್ಯಾಕ್‌ ಕ್ರಾವ್ಲಿ, ಬೆನ್‌ ಡಕೆಟ್‌, ಒಲ್ಲಿ ಪೋಪ್‌, ಜೋ ರೂಟ್‌, ಹ್ಯಾರಿ ಬ್ರೂಕ್‌, ಬೆನ್‌ ಸ್ಟೋಕ್ಸ್‌ (ನಾಯಕ), ಜೇಮಿ ಸ್ಮಿತ್‌ (ವಿಕೆಟ್‌ ಕೀಪರ್‌), ಕ್ರಿಸ್‌ ವೋಕ್ಸ್‌, ಬ್ರೈಡನ್‌ ಕಾರ್ಸ್‌, ಜಾಶ್‌ ಟಾಂಗ್‌, ಶೋಯೆಬ್‌ ಬಷೀರ್‌

IND vs ENG: 49 ವರ್ಷದ ಭಾರತೀಯ ದಾಖಲೆ ಮುರಿಯಲು ಸಜ್ಜಾದ ಜೈಸ್ವಾಲ್‌

ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್, ಕರುಣ್ ನಾಯರ್, ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ

ಪಂದ್ಯದ ವಿವರ

ಎರಡನೇ ಟೆಸ್ಟ್‌ ಪಂದ್ಯ

ಭಾರತ vs ಇಂಗ್ಲೆಂಡ್‌

ದಿನಾಂಕ: ಜುಲೈ 2 ರಿಂದ 6

ಸಮಯ: ಭಾರತೀಯ ಕಾಲಮಾನ ಮಧ್ಯಾಹ್ನ 03: 30ಕ್ಕೆ ಆರಂಭ

ಸ್ಥಳ: ಎಜ್‌ಬಾಸ್ಟನ್‌ ಸ್ಟೇಡಿಯಂ, ಬರ್ಮಿಂಗ್‌ಹ್ಯಾಮ್‌

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಲೈವ್‌ ಸ್ಟ್ರೀಮಿಂಗ್‌: ಡಿಸ್ನಿ ಹಾಟ್‌ಸ್ಟಾರ್‌