Marilinga Gowda MaliPatil Column: ಉತ್ತರದವರ ಪಾಲಿಗೆ ಕನ್ನಡಿಗರು ಸವತಿ ಮಕ್ಕಳಾ ?
‘ಇಲ್ಲೇ ನೆಲೆಸಿದರೂ ನಾವು ಕನ್ನಡವನ್ನು ಕಲಿಯುವುದಿಲ್ಲ’ ಎಂಬ ಹಠ ಇವರದ್ದು. ವರ್ಷಗಟ್ಟಲೆ ಕನ್ನಡ ನಾಡಿನಲ್ಲಿದ್ದು, ಇಲ್ಲಿಯ ಅನ್ನ-ನೀರು ಸೇವಿಸಿದರೂ ಇವರಿಗೆ ಕನ್ನಡವೆಂದರೆ ಅಲರ್ಜಿ. ಜತೆಗೆ, ‘ಕನ್ನಡ ಕಲಿಯುವುದಿಲ್ಲ, ಏನಿವಾಗ?’ ಎಂಬ ಧಿಮಾಕು ಬೇರೆ. ಕನ್ನಡಿಗರ ತಾಳ್ಮೆಗೂ ಮಿತಿಯಿದೆ. ಕನ್ನಡ ವನ್ನು ಅಣಕಿಸಿದರೆ ಆ ತಾಳ್ಮೆ ತಪ್ಪುತ್ತದೆ.


ಪುಸ್ತಕ ಪ್ರಕಾಶನ ಸಂಸ್ಥೆಯೊಂದು ಇತ್ತೀಚೆಗೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಭಾಷಣಕಾರರಾಗಿ ದೆಹಲಿಯಿಂದ ಯೋಗೇಂದ್ರ ಯಾದವ್ ಬಂದಿದ್ದರು. ಅಂದು ಅವರು ‘ಲೋಹಿಯಾವಾದ’ದ ಬಗ್ಗೆ ಉಪನ್ಯಾಸ ನೀಡಬೇಕಿತ್ತು. ಕನ್ನಡ ತಿಳಿಯದ ಅವರು ಇಂಗ್ಲಿಷ್ ನಲ್ಲಿಯೇ ಮಾತನಾಡುವವರಿದ್ದರು. ಅದನ್ನು ಕನ್ನಡಕ್ಕೆ ಭಾಷಾಂತರಿಸಲೆಂದು ಗಣ್ಯರೊಬ್ಬರನ್ನು ನಿಯೋಜಿಸಲಾಗಿತ್ತು. ಯೋಗೇಂದ್ರರು ಉಪನ್ಯಾಸ ಆರಂಭಿಸಿ ಒಂದು ಹಂತದಲ್ಲಿ ಭಾಷಾಂತರ ಕಾರರಿಗೆ ಅವಕಾಶ ನೀಡಿದರು. ಆದರೆ ಸಭಿಕರು ಒಕ್ಕೊರಲಿನಿಂದ, ‘ನಮಗೆ ಭಾಷಾಂತರ ಬೇಕಿಲ್ಲ, ನಿಮ್ಮ ಇಂಗ್ಲಿಷ್ ನಮಗೆ ಅರ್ಥವಾಗುತ್ತದೆ ಮುಂದುವರಿಸಿ’ ಎಂದರು. ಯೋಗೇಂದ್ರರು ನಗುತ್ತಾ, ‘ಓಹ್, ಐ ಆಮ್ ಇನ್ ಬೆಂಗಳೂರ್’ ಎನ್ನುತ್ತಾ ಮಾತು ಮುಂದುವರಿಸಿದರು.
ಯೋಗೇಂದ್ರರ ಪ್ರತಿಕ್ರಿಯೆಯನ್ನು ಸಕಾರಾತ್ಮಕವಾಗಿ ತೆಗೆದುಕೊಂಡ ಸಭಿಕರು ಭಾಷಣವನ್ನು ಆನಂದಿಸಿದರು. ಇದು ಪರಭಾಷಿಕರೆಡೆಗೆ ಬೆಂಗಳೂರಿನ ನಾಗರಿಕರು ತೋರುವ ಸಹೃದಯತೆ. ಇದು ಇರಬೇಕಿರುವುದು ಹಾಗೆಯೇ. ಹೊರರಾಜ್ಯದ ಅತಿಥಿಯೊಬ್ಬರು ಕೆಲವು ದಿನಗಳ ಮಟ್ಟಿಗೆ ಕರ್ನಾಟಕಕ್ಕೆ ಬಂದರೆ, ಅವರಿಗೆ ಸ್ವಲ್ಪವೂ ‘ಅಹಿತ’ವಾಗದಂತೆ ಸಹಕರಿಸುತ್ತೇವೆ.
ಒಂದೆರಡು ದಿನಗಳ ಮಟ್ಟಿಗೆ ರಾಜ್ಯಕ್ಕೆ ಬಂದವರು ಕನ್ನಡ ಕಲಿಯಬೇಕಿಲ್ಲ, ನಾವು ಅವರೊಂದಿಗೆ ಇಂಗ್ಲಿಷ್ ಅಥವಾ ಹಿಂದಿಯಲ್ಲಿ, ಅಥವಾ ಕಷ್ಟಪಟ್ಟಾದರೂ ತಮಿಳು, ತೆಲುಗು, ಮಲಯಾಳಂನಲ್ಲಿ ವ್ಯವಹರಿಸುತ್ತೇವೆ. ಅಂಥ ಸಂದರ್ಭಗಳಲ್ಲಿ ಭಾಷೆಯ ಪ್ರಾಮುಖ್ಯ ಸಂವಹನಕ್ಕೆ ಮಾತ್ರವೇ. ಕನ್ನಡಿಗರ ಸಹೃದಯತೆಯ ಅರಿವಿದ್ದವರು ತಮ್ಮಿಂದಾದಷ್ಟು ಕನ್ನಡ ಮಾತನಾಡುತ್ತಾರೆ. ವಿರಾಟ್ ಕೊಹ್ಲಿಯಂಥವರು ಕನ್ನಡದಲ್ಲಿ ಒಂದು ವಾಕ್ಯವನ್ನಾದರೂ ಹೇಳುವುದು, ‘ಈ ಬಾರಿ ಕಪ್ ನಮ್ದು’ ಎಂಬ ಕನ್ನಡದ ಘೋಷವಾಕ್ಯವನ್ನು ಕ್ರಿಕೆಟರ್ ಸ್ಮೃತಿ ಮಂಧಾನ ಉಚ್ಚರಿಸುವುದು ಇಂಥ ಸಹೃದಯತೆಯ ದ್ಯೋತಕಗಳೇ.
ಇದನ್ನೂ ಓದಿ: MarilingaGowda Mali Patil Column: ಕರುನಾಡ ರಾಜಕೀಯದಲ್ಲಿ ಮಧುಜಾಲದ ಕರಾಳ ಅಧ್ಯಾಯ
ಆದರೆ ಕೆಲವರಿದ್ದಾರೆ. ಇವರು ಕನ್ನಡಿಗರ ಔದಾರ್ಯ, ಸಹೃದಯತೆಯನ್ನು ಅಣಕಿಸುತ್ತಾರೆ. ‘ಇಲ್ಲೇ ನೆಲೆಸಿದರೂ ನಾವು ಕನ್ನಡವನ್ನು ಕಲಿಯುವುದಿಲ್ಲ’ ಎಂಬ ಹಠ ಇವರದ್ದು. ವರ್ಷಗಟ್ಟಲೆ ಕನ್ನಡ ನಾಡಿನಲ್ಲಿದ್ದು, ಇಲ್ಲಿಯ ಅನ್ನ-ನೀರು ಸೇವಿಸಿದರೂ ಇವರಿಗೆ ಕನ್ನಡವೆಂದರೆ ಅಲರ್ಜಿ. ಜತೆಗೆ, ‘ಕನ್ನಡ ಕಲಿಯುವುದಿಲ್ಲ, ಏನಿವಾಗ?’ ಎಂಬ ಧಿಮಾಕು ಬೇರೆ. ಕನ್ನಡಿಗರ ತಾಳ್ಮೆಗೂ ಮಿತಿಯಿದೆ. ಕನ್ನಡವನ್ನುಅಣಕಿಸಿದರೆ ಆ ತಾಳ್ಮೆ ತಪ್ಪುತ್ತದೆ.
ಅಂಥ ಸಂದರ್ಭದಲ್ಲಿ ಅವರು, ವರ್ಷಗಟ್ಟಲೆ ಕರ್ನಾಟಕದಲ್ಲಿದ್ದೂ ಕನ್ನಡ ಕಲಿಯದವರ ವಿರುದ್ಧ ಸಿಡಿದೆದ್ದಿದ್ದೂ, ಕನ್ನಡ ಕಲಿಯುವಂತೆ ಒತ್ತಾಯಿಸಿದ್ದೂ ಇದೆ. ಇದು ಮಾಧ್ಯಮಗಳಲ್ಲಿ ಸುದ್ದಿ ಯಾದಾಗ ಕನ್ನಡಿಗರು ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಇದನ್ನು ‘ಕನ್ನಡಿ ಗರ ಅಪರಾಧ’ ಎಂಬಂತೆ ರಾಷ್ಟ್ರೀಯ ಮಟ್ಟದ ಮಾಧ್ಯಮಗಳು ಚರ್ಚಿಸಿದ್ದೂ ಇದೆ.
‘ಕನ್ನಡ ನಮ್ಮ ಭಾಷೆ, ರಾಜ್ಯದಲ್ಲಿ ಬದುಕುವವರು ಕನ್ನಡವನ್ನು ಕಲಿಯಬೇಕು’ ಎಂದು ಆಗ್ರಹಿಸು ವುದರಲ್ಲಿ ಅಪರಾಧ ಏನಿದೆ? ಆದರೆ, ‘ಕನ್ನಡಿಗರದು ಅತಿಯಾಯಿತು’ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ಬಿಂಬಿಸುವುದು ಹೆಚ್ಚಾಗುತ್ತಿದ್ದಂತೆ, ಈ ವಿಷಯದಲ್ಲಿ ಕನ್ನಡಿಗರನ್ನು ಕೆಣಕು ವವರೂ ಹೆಚ್ಚಾಗುತ್ತಿದ್ದಾರೆ.
ಇದಕ್ಕೆ ಉದಾಹರಣೆ ಎಂಬಂತೆ, ಬೆಂಗಳೂರಿನಲ್ಲಿ ಬೈಕ್ ಸವಾರನೊಬ್ಬನ ಮೇಲೆ ಸೇನಾಧಿಕಾರಿ ಯೊಬ್ಬರು ಗೂಂಡಾಗಿರಿ ಪ್ರದರ್ಶಿಸಿದ್ದಾರೆ. ಡಿಆರ್‌ಡಿಒ ಸಂಸ್ಥೆಯ ಉದ್ಯೋಗಿ ಶಿಲಾದಿತ್ಯ ಬೋಸ್ ಮತ್ತು ಕಾಲ್‌ಸೆಂಟರ್ ಒಂದರ ಉದ್ಯೋಗಿಯಾಗಿರುವ ಬೆಂಗಳೂರಿನ ವಿಕಾಸ್ ಕುಮಾರ್ ನಡುವೆ ಘರ್ಷಣೆ ನಡೆದಿದೆ. ಕೇವಲ ಒಂದು ‘ರಸ್ತೆ-ರಾದ್ಧಾಂತ’ ಪ್ರಕರಣವಾಗಿದ್ದ ಇದಕ್ಕೆ ಭಾಷೆಯ ವಿಚಾರ ವನ್ನು ಥಳುಕು ಹಾಕಿ ವಿಕಾಸ್ ಮೇಲೆ ದೂರಿತ್ತ ಪರಿಣಾಮವಾಗಿ ಪೊಲೀಸರು ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿದರು.
‘ಭಾಷಾ ವಿಚಾರಕ್ಕೆ ಬೈಕ್ ಸವಾರ ನನ್ನ ಮೇಲೆ ಹಲ್ಲೆ ನಡೆಸಿದ’ ಎಂದು ಶಿಲಾದಿತ್ಯ ಬೋಸ್ ಆರೋಪಿಸಿದ್ದಾರೆ; ಆದರೆ ಈ ವಿಚಾರಕ್ಕೆ ಹಲ್ಲೆ ನಡೆದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ‘ಅತಿವೇಗದಿಂದ ಬೈಕ್ ಚಲಾಯಿಸುತ್ತಿದ್ದ ಸವಾರನಿಗೆ ನಿಧಾನಕ್ಕೆ ಹೋಗುವಂತೆ ಹೇಳಿದ್ದಕ್ಕೆ ಆತ ಜಗಳ ಆರಂಭಿಸಿ ನನ್ನ ಪತಿಯ ಮೇಲೆ ಹಲ್ಲೆ ನಡೆಸಿದ್ದಾನೆ’ ಎಂದು ಶಿಲಾದಿತ್ಯರ ಪತ್ನಿ ಹೇಳಿದ್ದಾರೆ.
ಆದರೆ, ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿ ಮೂಲಕ ಸ್ಪಷ್ಟವಾಗಿದ್ದೇನೆಂದರೆ, ವಿಕಾಸ್‌ರನ್ನು ಶಿಲಾದಿತ್ಯ ಬೋಸ್ ನೆಲಕ್ಕೆ ತಳ್ಳಿ ಒದ್ದಿದ್ದಾರೆ, ಆತನ ಮೊಬೈಲ್ ಕಿತ್ತೆಸೆದಿದ್ದಾರೆ. ಬಳಿಕ ಬ್ಯಾಂಡೇಜ್ ಧರಿಸಿ ವಿಡಿಯೋ ಹರಿಬಿಟ್ಟಿದ್ದಾರೆ. ‘ಕನ್ನಡ ಪೀಪಲ್ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ಇದ್ದಕ್ಕಿದ್ದಂತೆ ರಾಷ್ಟ್ರೀಯ ಮಾಧ್ಯಮಗಳು ಕನ್ನಡಿಗರ ಮೇಲೆ ಮುಗಿ ಬಿದ್ದಿವೆ, ಭಾಷಾ ವಿಷಯವನ್ನು ಎಳೆತಂದು ಕನ್ನಡಿಗರ ಮೇಲೆ ಗೂಬೆ ಕೂರಿಸಿವೆ!
ಅಮಾಯಕನ ಮೇಲೆ ಹಲ್ಲೆ ನಡೆಸಿ, ಅದನ್ನು ಭಾಷಾ ವಿಚಾರಕ್ಕೆ ತಳಕುಹಾಕಿದರೆ ತಾನು ಬಚಾವಾಗಬಹುದು ಎಂದು ಶಿಲಾದಿತ್ಯ ಬೋಸ್ ಭಾವಿಸಿದ್ದಾರಾ? ಇಲ್ಲವಾದರೆ ಭಾಷಾ ವಿಚಾರ ಇಲ್ಲೇಕೆ ಬಂತು? ಭಾಷಾ ವಿಚಾರದಲ್ಲಿ ಕನ್ನಡಿಗರು ಅಸಹಿಷ್ಣುಗಳು ಎಂದು ರಾಷ್ಟ್ರೀಯ ಮಟ್ಟ ದಲ್ಲಿ ಬಿಂಬಿಸುವುದರಲ್ಲಿ ಕೆಲವರು ಯಶಸ್ವಿಯಾಗಿರುವುದರಿಂದ, ಹೀಗೆ ತಾವು ನಡೆಸಿದ ಹಲ್ಲೆಗೆ ಭಾಷೆಯ ಸಬೂಬು ಹೇಳಿಬಿಟ್ಟರೆ ಎಲ್ಲರೂ ತನ್ನನ್ನು ಬೆಂಬಲಿಸುತ್ತಾರೆ ಎಂದು ಶಿಲಾದಿತ್ಯರು ಭಾವಿಸಿದ್ದರು ಎನಿಸುತ್ತದೆ.
ಬಹುಶಃ ಸಿಸಿಟಿವಿ ಇರದಿದ್ದರೆ ಅವರ ಈ ಯತ್ನ ಯಶಸ್ವಿಯೂ ಆಗುತ್ತಿತ್ತು. ಆದರೆ ಸದರಿ ಪ್ರಕರಣದ ಅಸಲಿಯತ್ತನ್ನು ಸಿಸಿಟಿವಿ ಬಯಲಾಗಿಸಿದೆ, ವಿಕಾಸ್ ಬಚಾವಾಗಿದ್ದಾರೆ ಎನ್ನಬಹುದು. ಇಷ್ಟಾಗಿಯೂ ಪೊಲೀಸರು ಯಾಕೆ ಸುಮ್ಮನಿದ್ದಾರೆ? ‘ವಿಕಾಸ್ ಕುಮಾರ್ ದೂರು ನೀಡಿದರೆ ಶಿಲಾದಿತ್ಯ ಬೋಸ್ ವಿರುದ್ಧ ಕಾನೂನಿನ ಅನ್ವಯ ಕ್ರಮ ಜರುಗಿಸಲಾಗುವುದು’ ಎಂದಿದ್ದರು ಪೊಲೀಸರು. ಆದರೆ, ಶಿಲಾದಿತ್ಯರು ಸುಳ್ಳು ಹೇಳಿದ್ದಾರೆ ಎಂಬುದನ್ನು ಸಿಸಿಟಿವಿ ದೃಶ್ಯಗಳು ಸ್ಪಷ್ಟಪಡಿಸುತ್ತಿರುವಾಗ ‘ಸುಮೋಟೋ ಕೇಸ್’ ದಾಖಲಿಸಲು ಪೊಲೀಸರಿಗೆ ಏನು ತೊಂದರೆ? ‘ರೋಡ್ ರೇಜ್’ ಪ್ರಕರಣದಲ್ಲಿ ಅಮಾಯಕನ ಮೇಲೆ ಹಲ್ಲೆ ಮಾಡಿದ್ದರ ಜತೆಗೆ ಸುಳ್ಳು ಮಾಹಿತಿ ನೀಡಿದ್ದು ಶಿಲಾದಿತ್ಯರ ಅಪರಾಧ ವಲ್ಲವೇ? ಈ 2 ಕಾರಣಗಳ ಆಧಾರದಲ್ಲಿ ಅವರ ಮೇಲೆ ಕ್ರಮ ಜರುಗಿಸಲಾಗುವುದಿಲ್ಲವೇ? ಹೊರಗಿ ನಿಂದ ಬಂದವರ ಅಟ್ಟಹಾಸ ಮೇರೆ ಮೀರಲು ಇಂಥ ನಿಷ್ಕ್ರಿಯತೆಗಳೂ ಕಾರಣವಾಗ ಬಲ್ಲವು.
ಬೆಂಗಳೂರಿನಲ್ಲಿ ಪರಭಾಷಿಕರ ದಬ್ಬಾಳಿಕೆ ಮಿತಿ ಮೀರಿದೆ ಎಂಬುದರಲ್ಲಿ ಅನುಮಾನವಿಲ್ಲ. ಈ ಹಿಂದೆ ಹೊರರಾಜ್ಯದ ಮಹಿಳೆಯೊಬ್ಬರು ಜೊಮ್ಯಾಟೊ ನೌಕರನ ಮೇಲೆ ಹಲ್ಲೆ ಮಾಡಿ, ಅದಕ್ಕೆ ಭಾಷೆಯ ವಿಚಾರವನ್ನು ತಳಕು ಹಾಕಿದ್ದನ್ನು ಕನ್ನಡಿಗರು ಇನ್ನೂ ಮರೆತಿಲ್ಲ. ಇನ್ನು ಆಟೋ ಡ್ರೈವರ್ ಒಬ್ಬನನ್ನು ಪರಭಾಷಿಕನೊಬ್ಬ ‘ಹಿಂದಿಯಲ್ಲಿ ಮಾತನಾಡು’ ಎಂದು ಒತ್ತಾಯಿಸಿ ಬಳಿಕ ಕ್ಷಮೆಯಾಚಿಸಿದ ಪ್ರಕರಣವೂ ಇತ್ತೀಚೆಗೆ ನಡೆದಿದೆ.
ಹೊರರಾಜ್ಯಗಳಿಂದ ಬಂದವರು ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ಬೈದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅತಿಥಿಗಳಿಗೆ ಮರ್ಯಾದೆ ಕೊಡುವುದು ಸರಿಯೇ ಆದರೂ, ಅವರು ತಪ್ಪು ಮಾಡಿದಾಗಲೂ ಕನ್ನಡಿಗರ ಮೇಲೇ ಕ್ರಮ ಕೈಗೊಳ್ಳುವುದು ಎಷ್ಟು ಸರಿ? ಪ್ರಸ್ತುತ ಪ್ರಕರಣಕ್ಕೂ ಕನ್ನಡಕ್ಕೂ ಸಂಬಂಧವೇ ಇಲ್ಲ.
ಆದರೂ ಶಿಲಾದಿತ್ಯರ ಹೇಳಿಕೆಯನ್ನೇ ನಂಬಿದ ರಾಷ್ಟ್ರೀಯ ಮಾಧ್ಯಮಗಳು ಕನ್ನಡಿಗನ ಮೇಲೆ ಮುಗಿಬಿದ್ದ ಶೈಲಿಗೇ ಪೊಲೀಸರು ತಬ್ಬಿಬ್ಬಾದರಾ? ಆದರೆ ಸತ್ಯವು ಗೊತ್ತಾದ ಬಳಿಕವೂ ಶಿಲಾದಿತ್ಯರ ಮೇಲೆ ಕ್ರಮ ಕೈಗೊಳ್ಳಲು ಹಿಂಜರಿಕೆಯೇಕೆ? ಕನ್ನಡಿಗರು ಹೊರಗಿನ ಯಾರನ್ನೂ ‘ಬೆಂಗಳೂರಿಗೆ ಬರಬೇಡಿ’ ಎನ್ನುತ್ತಿಲ್ಲ.
‘ಇಲ್ಲಿಗೆ ಬನ್ನಿ, ಕೆಲಸ ಮಾಡಿ, ನಿಮ್ಮ ಬದುಕನ್ನು ಕಟ್ಟಿಕೊಳ್ಳಿ; ಆದರೆ ಕನ್ನಡವನ್ನು ಪ್ರೀತಿಸಿ, ಅದನ್ನು ಕಲಿಯಲು ಯತ್ನಿಸಿ’ ಎಂಬುದಷ್ಟೇ ಕನ್ನಡಿಗರ ವಿನಂತಿ. ಏಕೆಂದರೆ, ಎಲ್ಲಾ ರಾಜ್ಯ ಗಳಲ್ಲಿಯೂ ಅಲ್ಲಿನ ಭಾಷೆಗೇ ಪ್ರಾಧಾನ್ಯ. ಒಮ್ಮೆ ವೈಯಕ್ತಿಕ ಕೆಲಸಕ್ಕಾಗಿ ಕೇರಳದಲ್ಲಿ ಒಂದಿಡೀ ದಿನ ಇರಬೇಕಾಗಿ ಬಂದಿತ್ತು, ಆದರೆ ಅಲ್ಲಿಯ ಜನರು ಮಲಯಾಳಂ ಬಿಟ್ಟು ಇನ್ನೊಂದು ಭಾಷೆಯನ್ನು ಮಾತನಾಡಲಿಲ್ಲ.
ಕೇರಳದಲ್ಲಿ ನೆಲೆಸಿದ್ದ ಕನ್ನಡಿಗರೊಬ್ಬರ ನೆರವು ಪಡೆದು ನನ್ನ ಕೆಲಸವನ್ನು ಮುಗಿಸಿಕೊಂಡೆ. ಅಂದರೆ, ಮಲಯಾಳಂ ಬಾರದ ವ್ಯಕ್ತಿ ಒಂದು ದಿನವೂ ಕೇರಳದಲ್ಲಿ ವ್ಯವಹರಿಸಲು ಸಾಧ್ಯವಿಲ್ಲ. ಇದು ತಮಿಳುನಾಡಿನಲ್ಲಿ, ಉತ್ತರ ಭಾರತದಲ್ಲಿ ವ್ಯವಹರಿಸುವ ಬಹುತೇಕರಿಗೆ ಆಗುವ ಅನುಭವವೂ ಹೌದು. ಸ್ಥಳೀಯ ಭಾಷೆ ಬಾರದೆ ಅಲ್ಲಿ ಒಂದು ದಿನವನ್ನೂ ನಿಭಾಯಿಸಲಾಗದು.
ಆದರೆ ಕರ್ನಾಟಕದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಇದಕ್ಕೆ ತದ್ವಿರುದ್ಧವಾದ ಪರಿಸ್ಥಿತಿಯಿದೆ. ಹೊರಗಿನಿಂದ ಬಂದವರು ಕನ್ನಡದ ಬಗ್ಗೆ ಬಹಳ ತಾತ್ಸಾರವನ್ನು ತೋರಿಸುತ್ತಾರೆ. ಬಹುಶಃ ಅವರು ವಿನಯಪೂರ್ವಕವಾಗಿ ‘ನನಗೆ ಕನ್ನಡ ಬರಲ್ಲ’ ಅಂದರೆ ಅದಕ್ಕೆ ಆಕ್ಷೇಪ ಬರಲಾರದು. ಆದರೆ ಅವರು, ‘ಕನ್ನಡವನ್ನು ಕಲಿಯದೆಯೇ ಬೆಂಗಳೂರಿನಲ್ಲಿ ಬದುಕುತ್ತೇವೆ’ ಅಂತ ಧಾರ್ಷ್ಟ್ಯದ ಧೋರಣೆಯಲ್ಲಿ ಹೇಳಿದಾಗ ಅಥವಾ ಇಲ್ಲಿಯ ನೀರು-ಆಹಾರ ಸೇವಿಸಿದ ನಂತರವೂ ‘ಕನ್ನಡವನ್ನು ಕಲಿಯದಿದ್ದರೆ ಏನಿವಾಗ?’ ಎಂಬ ಧಾಟಿಯಲ್ಲಿ ವರ್ತಿಸಿದಾಗ, ಕನ್ನಡವನ್ನು ಕಲಿಯುವಂತೆ ಕನ್ನಡಿಗರೂ ಆಗ್ರಹಿಸಿರುವುದುಂಟು.
ಕೆಂಪೇಗೌಡರು ಕಟ್ಟಿದ ಬೆಂಗಳೂರಿನಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರಾಗುತ್ತಿದ್ದಾರೆ, ಪರಕೀಯ ರಾಗುತ್ತಿದ್ದಾರೆ. ಧೀಮಾಕಿನ ಉತ್ತರ ಭಾರತೀಯರೊಬ್ಬರು ‘ನಾವೆಲ್ಲಾ ಹೋದರೆ ಬೆಂಗಳೂರು ಖಾಲಿಯಾಗುತ್ತದೆ’ ಎಂಬ ಮಾತಾಡಿದ್ದು ಇದೇ ಹಿನ್ನೆಲೆಯಲ್ಲಿ ಇರಬಹುದು. ಆದರೆ, ತಾವು ತಮ್ಮ ಬದುಕನ್ನು ಕಟ್ಟಿಕೊಳ್ಳಲೆಂದೇ ಬೆಂಗಳೂರಿಗೆ ಬಂದಿರುವುದು ಎಂಬುದನ್ನು ಅವರೂ ನೆನಪಿ ನಲ್ಲಿಟ್ಟುಕೊಳ್ಳಬೇಕು.
ಕನ್ನಡಿಗರು ಹೀಗೇ ಸುಮ್ಮನಿದ್ದರೆ ಮುಂದೊಂದು ದಿನ ಬೆಂಗಳೂರು ಕೇಂದ್ರಾಡಳಿತ ಪ್ರದೇಶ ವಾದರೂ ಅಚ್ಚರಿಯಿಲ್ಲ. ಆದ್ದರಿಂದ ಇಂಥ ಪ್ರಕರಣಗಳಲ್ಲಿ ನಾಗರಿಕರು ಸರಿಯಾದ ಪ್ರತಿಕ್ರಿಯೆ ಯನ್ನು ನೀಡಬೇಕಿದೆ. ವರ್ಷಗಳ ಕಾಲ ಬೆಂಗಳೂರಿನಲ್ಲಿದ್ದೂ ಕನ್ನಡ ಕಲಿಯದಿದ್ದವರನ್ನು ಮಾತ್ರವೇ ಹಾಗೊಂದು ಕಲಿಕೆಗೆ ತಾವು ಆಗ್ರಹಿಸುತ್ತಿರುವುದು ಎಂಬುದನ್ನು ಕನ್ನಡಿಗರು ರಾಷ್ಟ್ರೀಯ ಮಾಧ್ಯಮಗಳಿಗೆ ಮೊದಲು ಸ್ಪಷ್ಟಪಡಿಸಬೇಕಿದೆ.
ಹೊರರಾಜ್ಯದ ಜನರಿಗೆ ಮನೆಯನ್ನು ಬಾಡಿಗೆ ಕೊಡುವ ಮುನ್ನ, ‘ಒಂದು ವರ್ಷದ ಅವಧಿಯಲ್ಲಿ ಕನ್ನಡ ಕಲಿಯದಿದ್ದರೆ ಬಾಡಿಗೆ ಕರಾರುಪತ್ರ ಮುಂದುವರಿಯುವುದಿಲ್ಲ’ ಅಂತ ಮನೆ ಮಾಲೀಕರು ಸ್ಪಷ್ಟಪಡಿಸಬೇಕು. ವರನಟ ಡಾ.ರಾಜ್‌ಕುಮಾರ್ ಅವರು ಹೇಳಿದಂತೆ, ‘ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ ಕನ್ನಡ’ ಎನ್ನುವುದು ಬೆಂಗಳೂರಿನಲ್ಲಿ ಜಾರಿಗೆ ಬರಬೇಕು.
ವರ್ಷಗಟ್ಟಲೆ ಬೆಂಗಳೂರಿನಲ್ಲಿದ್ದೂ ಕನ್ನಡ ಕಲಿಯದವರ ಬಗ್ಗೆ ಕನ್ನಡಿಗರ ಆಕ್ಷೇಪವಿದೆಯೇ ಹೊರತು, ಕನ್ನಡಿಗರು ಭಾಷಾ ವಿಷಯದಲ್ಲಿ ದಬ್ಬಾಳಿಕೆ ಮಾಡುವವರಲ್ಲವೇ ಅಲ್ಲ. ಕನ್ನಡಿಗರನ್ನು ತಪ್ಪಾಗಿ ಬಿಂಬಿಸಿ, ಸಾಮಾನ್ಯ ರಸ್ತೆ ರಾದ್ಧಾಂತದ ವಿಷಯಕ್ಕೂ ಭಾಷೆಯನ್ನು ತಳಕು ಹಾಕಿ ಕನ್ನಡಿ ಗರ ಮೇಲೆ ದಬ್ಬಾಳಿಕೆ ಮಾಡುವುದು ಸರ್ವಥಾ ಸಲ್ಲ. ಅನ್ಯ ರಾಜ್ಯಗಳಿಂದ ಬಂದು ಕನ್ನಡಿಗರ, ಕರ್ನಾಟಕದ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡುವವರನ್ನು ಗಡೀಪಾರು ಮಾಡುವ ಕಾಯ್ದೆ ಯನ್ನು ತರದೇ ಹೋದರೆ ಇಂಥ ಪ್ರಕರಣಗಳಿಗೆ ಕೊನೆಯಿರುವುದಿಲ್ಲ....
(ಲೇಖಕರು ಸಾಮಾಜಿಕ ಹೋರಾಟಗಾರರು)