ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam Terror Attack: ಪಹಲ್ಗಾಮ್ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಹಫೀಜ್ ಸಯೀದ್?

ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26/11 ದಾಳಿಯ ಮಾಸ್ಟರ್ ಮೈಂಡ್ ಮತ್ತು ನಿಷೇಧಿತ ಲಷ್ಕರ್-ಎ-ತೈಬಾ (ಎಲ್‌ಇಟಿ)ದ ಮುಖ್ಯಸ್ಥ ಹಫೀಜ್ ಸಯೀದ್ (Hafiz Saeed) ಪ್ರಮುಖ ಪಾತ್ರವಹಿಸಿದ್ದಾನೆ ಎನ್ನಲಾಗಿದೆ. ಪಹಲ್ಗಾಮ್ ದಾಳಿಯ ಬಳಿಕ ನಿಷೇಧಿತ ಲಷ್ಕರ್-ಎ-ತೈಬಾದೊಂದಿಗೆ ಸಂಬಂಧವಿರುವ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಇದನ್ನು ತಾನೇ ಮಾಡಿರುವುದಾಗಿ ಒಪ್ಪಿಕೊಂಡಿದೆ. ಈ ಗುಂಪಿನಲ್ಲಿ ಹೆಚ್ಚಾಗಿ ವಿದೇಶಿ ಭಯೋತ್ಪಾದಕರು ಸೇರಿದ್ದು, ಇದಕ್ಕೆ ಸ್ಥಳೀಯ ಉಗ್ರಗಾಮಿಗಳ ಬೆಂಬಲವೂ ಇದೆ.

ಪಹಲ್ಗಾಮ್ ಘಟನೆಯ ಹಿಂದೆ 26/11 ದಾಳಿಯ ಮಾಸ್ಟರ್ ಮೈಂಡ್

ನವದೆಹಲಿ: ದಕ್ಷಿಣ ಕಾಶ್ಮೀರದ (Southern kashmir) ಪಹಲ್ಗಾಮ್ (Pahalgam Terror Attack) ಬಳಿಯ ಬೈಸರನ್ ಕಣಿವೆಯಲ್ಲಿ ಮಂಗಳವಾರ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ (Terrorists Attack) ಸುಮಾರು 26 ಮಂದಿ ಸಾವನ್ನಪ್ಪಿದ್ದಾರೆ. ಈ ದಾಳಿಯಲ್ಲಿ 26/11 ದಾಳಿಯ (Mumbai attack) ಮಾಸ್ಟರ್ ಮೈಂಡ್ ಮತ್ತು ನಿಷೇಧಿತ ಲಷ್ಕರ್-ಎ-ತೈಬಾ (LeT)ದ ಮುಖ್ಯಸ್ಥ ಹಫೀಜ್ ಸಯೀದ್ (Hafiz Saeed) ಪಾತ್ರವಿದೆ. ಪಹಲ್ಗಾಮ್ ದಾಳಿಯ ಬಳಿಕ ಲಷ್ಕರ್-ಎ-ತೈಬಾದೊಂದಿಗೆ ಸಂಬಂಧವಿರುವ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಇದನ್ನು ತಾನೇ ಮಾಡಿರುವುದಾಗಿ ಹೇಳಿಕೊಂಡಿದೆ. ಇದರಲ್ಲಿ ಹೆಚ್ಚಾಗಿ ವಿದೇಶಿ ಭಯೋತ್ಪಾದಕರು ಸೇರಿದ್ದು, ಇದಕ್ಕೆ ಸ್ಥಳೀಯ ಉಗ್ರಗಾಮಿಗಳ ಬೆಂಬಲವೂ ಇದೆ.

ಪಹಲ್ಗಾಮ್ ನಲ್ಲಿ ನಡೆದ ಈ ದಾಳಿಯು ಜಮ್ಮು ಮತ್ತು ಕಾಶ್ಮೀರದಲ್ಲಿ ಸುದೀರ್ಘ ಕಾಲದಿಂದ ಕಾರ್ಯನಿರ್ವಹಿಸುತ್ತಿದ್ದ ಭಯೋತ್ಪಾದಕ ಸಂಘಟನೆಯಾದ ಟಿಆರ್ ಎಫ್ ಅನ್ನು ಮುನ್ನೆಲೆಗೆ ತಂದಿದೆ. ಈ ಸಂಘಟನೆಯು 2019ರಲ್ಲಿ ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ಬಳಿಕ ಅಸ್ತಿತ್ವಕ್ಕೆ ಬಂದಿತ್ತು.

ಪಹಲ್ಗಾಮ್ ದಾಳಿಯ ಹೊಣೆಹೊತ್ತುಕೊಂಡಿರುವ ಟಿಆರ್ ಎಫ್ ನಲ್ಲಿರುವ ವಿದೇಶಿ ಭಯೋತ್ಪಾದಕರು ಹಾಗೂ ಸ್ಥಳೀಯ ಉಗ್ರರರನ್ನು ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಮತ್ತು ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ನಿಯಂತ್ರಿಸುತ್ತಿರುವುದಾಗಿ ತಿಳಿದುಬಂದಿದೆ. ಗುಪ್ತಚರ ಮಾಹಿತಿ ಪ್ರಕಾರ ದಿ ರೆಸಿಸ್ಟೆನ್ಸ್ ಫ್ರಂಟ್ ಕಾಶ್ಮೀರ ಕಣಿವೆಯಲ್ಲಿ ಸುಧೀರ್ಘ ಕಾಲದಿಂದ ಸಕ್ರಿಯವಾಗಿದೆ. ಹಲವಾರು ಉನ್ನತ ಮಟ್ಟದ ದಾಳಿಗಳ ಹಿಂದೆ ಇದರ ಕೈವಾಡವಿದೆ ಎನ್ನಲಾಗಿದೆ.

2024ರ ಅಕ್ಟೋಬರ್ ತಿಂಗಳಲ್ಲಿ ಬೂಟಾ ಪತ್ರಿಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಭಾರತೀಯ ಸೇನಾ ಸಿಬ್ಬಂದಿ ಸೇರಿದಂತೆ ನಾಲ್ವರು ಮೃತಪಟ್ಟಿದ್ದರು. ಬಳಿಕ ಅದೇ ತಿಂಗಳಲ್ಲಿ ಸೋನಾಮಾರ್ಗ್ ಸುರಂಗ ನಿರ್ಮಾಣ ಕಾರ್ಮಿಕರ ಮೇಲೆ ದಾಳಿಯಾಗಿದ್ದು, ಇದರಲ್ಲಿ ಆರು ಕಾರ್ಮಿಕರು ಮತ್ತು ವೈದ್ಯರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಈ ದಾಳಿಗಳಲ್ಲಿ ಪಹಲ್ಗಾಮ್ ಹತ್ಯಾಕಾಂಡದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಹಾಶಿಮ್ ಮೂಸಾ ಕೂಡ ಶಂಕಿತನಾಗಿದ್ದಾನೆ.

ಇದನ್ನೂ ಓದಿ: Pahalgam Terror Attack: 2 ದಿನಗಳಲ್ಲಿ ಪಾಕಿಸ್ತಾನ ವಿರುದ್ಧ 7 ದೊಡ್ಡ ನಿರ್ಧಾರ ಕೈಗೊಂಡ ಭಾರತ

ಸೋನಾಮಾರ್ಗ್ ಹತ್ಯಾಕಾಂಡದ ಆರೋಪಿಯಾಗಿರುವ ಕುಲ್ಗಾಮ್‌ನ ಎ+ ವರ್ಗದ ಲಷ್ಕರ್ ಭಯೋತ್ಪಾದಕ ಜುನೈದ್ ಅಹ್ಮದ್ ಭಟ್ 2024ರ ಡಿಸೆಂಬರ್ ತಿಂಗಳಲ್ಲಿ ಡಚಿಗಾಮ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾನೆ. ಈ ವೇಳೆ ಇತರರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಇವರೆಲ್ಲ ಪಾಕಿಸ್ತಾನದಲ್ಲಿರುವ ತಮ್ಮ ನಿರ್ವಾಹಕರ ಆದೇಶಗಳನ್ನು ಪಡೆಯುವವರೆಗೆ ಭೂಗತವಾಗಿರುತ್ತಾರೆ.

ದಿ ರೆಸಿಸ್ಟೆನ್ಸ್ ಫ್ರಂಟ್ ಅನ್ನು ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಅವನ ಸಹವರ್ತಿ ಸೈಫುಲ್ಲಾ ನೇರವಾಗಿ ನಿಯಂತ್ರಿಸುತ್ತಿದ್ದಾರೆ ಎನ್ನಲಾಗಿದೆ. ಇವರಿಬ್ಬರೂ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಾರೆ. ಇವರಿಗೆ ಪಾಕಿಸ್ತಾನದ ಮಿಲಿಟರಿ ಮತ್ತು ಅದರ ಗುಪ್ತಚರ ಸಂಸ್ಥೆಯಾದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಯುದ್ಧತಂತ್ರದ ಮಾರ್ಗದರ್ಶನವನ್ನು ನೀಡುತ್ತದೆ ಎನ್ನುತ್ತದೆ ಭಾರತೀಯ ಗುಪ್ತಚರ ಸಂಸ್ಥೆಗಳು.

ಪಹಲ್ಗಾಮ್ ನ ಬೈಸರನ್ ಕಣಿವೆಯ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಐದು ಜನರನ್ನು ಒಂದೇ ಸ್ಥಳದಲ್ಲಿ ಕೊಲ್ಲಲಾಗಿದೆ. ಇಬ್ಬರಿಗೆ ತೆರೆದ ಮೈದಾನದಲ್ಲಿ ಗುಂಡು ಹಾರಿಸಲಾಗಿದೆ. ಇತರರು ಕಣಿವೆಯ ಸುತ್ತಲಿನ ಬೇಲಿ ರಚನೆಯ ಬಳಿ ಬಲಿಯಾಗಿದ್ದಾರೆ. ಬೇಲಿ ಹಾರಿ ಹೋದವರು ತಮ್ಮ ಪ್ರಾಣ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಈ ದಾಳಿಗೆ ಸಂಬಂಧಿಸಿ ಮೂವರು ಶಂಕಿತರ ರೇಖಾಚಿತ್ರಗಳನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಗುರುವಾರ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆಗಳಾದ ಹಾಶಿಮ್ ಮುಸಾ ಅಲಿಯಾಸ್ ಸುಲೇಮಾನ್ ಮತ್ತು ಅಲಿ ಭಾಯ್ ಅಲಿಯಾಸ್ ತಲ್ಹಾ. ಇನ್ನೊಬ್ಬ ಕಾಶ್ಮೀರದ ಅನಂತ್‌ನಾಗ್ ನಿವಾಸಿ ಅಬ್ದುಲ್ ಹುಸೇನ್ ಥೋಕರ್.