RCB vs RR: ರಾಜಸ್ಥಾನ್ ಪಂದ್ಯದಲ್ಲಿ ಆರ್ಸಿಬಿ ಆಟಗಾರರು ನಿರ್ಮಿಸಿದ ದಾಖಲೆ ಪಟ್ಟಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ತಂಡವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಮತ್ತೆ ಮೂರನೇ ಸ್ಥಾನಕ್ಕೇರಿದೆ. ಆಡಿದ 9 ಪಂದ್ಯಗಳಲ್ಲಿ 6 ಗೆಲುವು ಸಾಧಿಸಿ 12 ಅಂಕ ಪಡೆದಿರುವ ಆರ್ಸಿಬಿ ಇನ್ನೆರಡು ಗೆಲುವು ಸಾಧಿಸಿದರೆ ತಂಡದ ಪ್ಲೇ ಆಫ್ ಸ್ಥಾನ ಖಚಿತವಾಗಲಿದೆ. ತಂಡಕ್ಕೆ ಇನ್ನು 5 ಪಂದ್ಯಗಳು ಬಾಕಿ ಇದೆ.



ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುರುವಾರ ನಡೆದಿದ್ದ ಐಪಿಎಲ್ನ 44ನೇ ಪಂದ್ಯದಲ್ಲಿ ರಾಯಲ್ ಜಾಲೆಂಜರ್ಸ್ ಬೆಂಗಳೂರು ತಂಡ 11 ರನ್ ಅಂತರದ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಆರ್ಸಿಬಿಯ ವಿರಾಟ್ ಕೊಹ್ಲಿ, ದೇವದತ್ತ ಪಡಿಕ್ಕಲ್ ಮತ್ತು ವೇಗಿ ಜೋಶ್ ಹ್ಯಾಜಲ್ವುಡ್ ಪ್ರಮುಖ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಈ ದಾಖಲೆಯ ವಿವರ ಹೀಗಿದೆ.

ಕರ್ನಾಟಕದ ಆಟಗಾರ ದೇವದತ್ತ ಪಡಿಕ್ಕಲ್, ರಾಜಸ್ಥಾನ್ ವಿರುದ್ಧ ಅರ್ಧಶತಕ ಬಾರಿಸುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಮೂರು ಸಾವಿರ ರನ್ ಪೂರೈಸಿದ ಮೈಲಿಗಲ್ಲು ತಲುಪಿದರು. ರಾಜಸ್ಥಾನ್ ವಿರುದ್ಧ 27 ಎಸೆತಗಳಿಂದ 3 ಸಿಕ್ಸರ್ ಮತ್ತು 4 ಬೌಂಡರಿ ನೆರವಿನಿಂದ ಭರ್ತಿ 50 ರನ್ ಗಳಿಸಿದರು.

70 ರನ್ ಬಾರಿಸಿದ ವಿರಾಟ್ ಕೊಹ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿದ ಟಿ20 ಕ್ರಿಕೆಟ್ನಲ್ಲಿ 3500 ರನ್ಗಳನ್ನು ಕಲೆಹಾಕಿದ ವಿಶೇಷ ಸಾಧನೆ ಮಾಡಿದರು. 3ನೇ ಓವರ್ನಲ್ಲಿ ಬೌಂಡರಿ ಬಾರಿಸುವ ಮೂಲಕ ಅವರು ಈ ಮೈಲುಗಲ್ಲು ತಲುಪಿದರು. ಇದರೊಂದಿಗೆ ವಿಶ್ವದ ಯಾವುದೇ ಕ್ರೀಡಾಂಗಣದಲ್ಲಿ 3500 ರನ್ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡರು.

4 ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜಲ್ವುಡ್ ಈ ವಿಕೆಟ್ ಸಾಧನೆಯೊಂದಿಗೆ ಟಿ20 ಕ್ರಿಕೆಟ್ನಲ್ಲಿ 150 ವಿಕೆಟ್ ಮತ್ತು ಐಪಿಎಲ್ನಲ್ಲಿ 50 ವಿಕೆಟ್ ಪೂರ್ತಿಗೊಳಿಸಿದ ಹೆಗ್ಗಳಿಕೆಗೆ ಪಾತ್ರರಾದರು. ಜತೆಗೆ ಅತಿ ವೇಗವಾಗಿ ಐಪಿಎಲ್ನಲ್ಲಿ 50 ವಿಕೆಟ್ ಸಂಪಾದಿಸಿದ 5ನೇ ಬೌಲರ್ ಎಂಬ ದಾಖಲೆಯೂ ಹ್ಯಾಜಲ್ವುಡ್ ಹೆಸರಿಗೆ ಸೇರ್ಪಡೆಯಾಯಿತು.
ಇದನ್ನೂ ಓದಿ IPL 2025: 7 ಪಂದ್ಯ ಸೋತ ರಾಜಸ್ಥಾನ್ ತಂಡದ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ?

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ ವಿರಾಟ್ ಕೊಹ್ಲಿ ಮತ್ತು ದೇವದತ್ತ ಪಡಿಕ್ಕಲ್ ಅವರ ಅರ್ಧಶತಕದ ನೆರವಿನಿಂದ 5 ವಿಕೆಟ್ಗೆ 205 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್, ಉತ್ತಮ ಆರಂಭದ ಹೊರತಾಗಿಯೂ 194 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.