Ravi Hunj Column: ಸಂಶೋಧಕರ ಪೂರ್ವಗ್ರಹದ ಪೊರೆಯಲ್ಲಿ ಮಸುಕಾಗಿರುವ ಬಸವಣ್ಣ ಮತ್ತು ಶರಣರು
ಇಡೀ ವಚನ ಚಳವಳಿಯಲ್ಲದೆ ಇಡೀ ಭರತಖಂಡದಲ್ಲಿಯೇ ಇಲ್ಲಿಯವರೆಗೂ ಯಾವುದೇ ಸತ್ಪುರುಷನ ಸಹ‘ಧರ್ಮಿಣಿ’ಯು ಪತಿಯು ತೀರಿದ ಬಳಿಕ ಸುಖಿಯಾದೆನೆಂದು ನೀಲಮ್ಮನಂತೆ ಆತ್ಮಸ್ಥೈರ್ಯದಿಂದ ನಿಷ್ಠುರ ನಿರಾಳವನ್ನು ವ್ಯಕ್ತಪಡಿಸಿಲ್ಲ. ಬಸವನಳಿದ ಬಳಿಕದ ಆಕೆಯ ಹಲವಾರು ಇಂಥ ವಚನ ಗಳನ್ನು ಗಮನಿಸಬಹುದು. ಒಟ್ಟಿನಲ್ಲಿ ವಚನ ಸಾಹಿತ್ಯವು ಅಂದಿನ ಮಹಿಳೆಯನ್ನು ಅಸಮಾನತೆಯ ನೆಲೆಯಿಂದಲ್ಲದೆ ಸಾಮಾಜಿಕ ನೆಲೆಯಿಂದಲ್ಲದೆ ಮಾನಸಿಕ ನೆಲೆಯಿಂದಲೂ ಕಟ್ಟಿಕೊಡುತ್ತವೆ.


ಬಸವ ಮಂಟಪ
( ಭಾಗ-2)
ರವಿ ಹಂಜ್
ಹಿಂದಿನ ಸಂಚಿಕೆಯಲ್ಲಿ ಉಲ್ಲೇಖಿಸಲಾಗಿರುವ, ಕಾಮದ ಕುರಿತಾದ ನೀಲಮ್ಮನ ಸರಣಿ ವಚನಗಳು ಮತ್ತು ತನ್ನ ಪತ್ನಿ ನೀಲಮ್ಮಳ ಕುರಿತಾದ ಬಸವಣ್ಣನ ವಚನದ ವಾಸ್ತವತೆಯು ಪೌರಾಣಿಕ ರೂಪವಾಗಿ ಮಾಯಿದೇವಿ ಎಂದೂ ಕರೆಯುವ ನೀಲಮ್ಮನ ಒಂದು ಪ್ರಸಂಗವಾಗಿ ಹರಿಹರನ ‘ಬಸರಾಜದೇವರ ರಗಳೆ’ಯಲ್ಲಿ (ಸ್ಥಲ 12, ಬಸವರಾಜದೇವರ ರಗಳೆ, ಸಂ: ಟಿ.ಎಸ್.ವೆಂಕಣ್ಣಯ್ಯ, ಪುಟ 87, 88) ಅನಾವರಣಗೊಂಡಿದೆ. ಬಸವ-ಮಾಯಿದೇವಿ-ಜಂಗಮರಿರುವ ಈ ಪ್ರಸಂಗದಲ್ಲಿ ಶಿವನು ಸುಖಿಜಂಗಮನ ವೇಷದಲ್ಲಿ ಬಂದಾಗ ಅವನನ್ನು ರಮಿಸಲು ಬಸವನು ತನ್ನ ಪ್ರೀತಿಯ ಪತ್ನಿ ಮಾಯಿದೇವಿ (ನೀಲಮ್ಮ)ಯನ್ನು ಕಳುಹಿಸುತ್ತಾನೆ. ಇದನ್ನು ಮೆಚ್ಚಿ ಶಿವನು ನೀಲಮ್ಮನಿಗೆ ತನ್ನ ನಿಜರೂಪ ತೋರಿದಾಗ ಆಕೆ “ನೋಡಲಮ್ಮದೆ ನಡನಡಂ ನಡುಗಿ, ಬಸವಾ ಬಸವಾ, ಜಂಗಮದೇವರು ಸಂಗಮ ದೇವರಾದ" ರೆನ್ನಲು ಬಸವಣ್ಣನವರು “ತಾಯೆ ತಾಯೆ, ಮುನ್ನಾವ ರೆಂದು ಕೊಟ್ಟೆನೆಂ" ಎಂದುತ್ತರಿಸುತ್ತಾನೆ.
ಈ ಕಾಲ್ಪನಿಕ ಪೌರಾಣಿಕ ಸ್ವರೂಪದ ಕಥನಕ್ಕೆ ನೀಲಮ್ಮ ತನ್ನ ವಚನಗಳ ಸರಣಿಯಲ್ಲಿ ಬಹು ಸ್ಪಷ್ಟ ವಾಸ್ತವವನ್ನು ಕಟ್ಟಿಕೊಟ್ಟಿರುವುದು ಅಷ್ಟೇ ಸ್ಪಟಿಕ ಸ್ಪಷ್ಟ! ಇಂಥ ಕೆಚ್ಚಿರುವುದರಿಂದಲೇ ಆಕೆ ಹಂದೆಯಲ್ಲ ಎಂದು ಹರಿಹರನೂ ತನ್ನ ರಗಳೆಯಲ್ಲಿ ಹೊಗಳಿದ್ದಾನೆ.
ಹಾಗೆಯೇ ಅವಳೂ ತನ್ನನ್ನು ಹಂದೆಯಲ್ಲ ಎಂದು ಕರೆದುಕೊಂಡಿದ್ದಾಳೆ. ಇಂಥ ಗಟ್ಟಿ ನಿಲುವಿನ ಮಹಿಳಾ ನೆಲೆಯನ್ನು ಯಾವ ವಚನಕಾರ್ತಿಯೂ ಕಟ್ಟಿಕೊಟ್ಟಿಲ್ಲ. ಒಟ್ಟು 19 ಕಡೆಗಳಲ್ಲಿ ನೀಲಮ್ಮನು ತನ್ನ 12 ವಚನಗಳಲ್ಲಿ ‘ಕಾಮ’ ಪದವನ್ನು ಸಾಂಸಾರಿಕ ಮಹಿಳೆಯಾಗಿ ಅದೊಂದು ಸಾಂಸಾರಿಕ ಅಗತ್ಯವೆಂಬಂತೆ ಬಳಸಿದ್ದರೆ, ಅಕ್ಕಮಹಾದೇವಿ ಒಟ್ಟು 31 ಕಡೆಗಳಲ್ಲಿ, ವಚನಕಾರ ತನ್ನ 25 ವಚನಗಳಲ್ಲಿ ’ಕಾಮ’ ಪದವನ್ನು ಸನ್ಯಾಸತ್ವದ ಹಿನ್ನೆಲೆಯಲ್ಲಿ ಪಾಪವೆಂಬಂತೆ ಬಳಸಿದ್ದಾಳೆ. ಅಕ್ಕಮಹಾದೇವಿ ಯೋಗಿಣಿ ಎನಿಸಿದರೆ, ನೀಲಮ್ಮ ತ್ಯಾಗಿಣಿ ಎನಿಸುತ್ತಾಳೆ.
ಆದರೆ ಬಸವಣ್ಣನ ವಚನವೊಂದು ಹೀಗಿದೆ: “ಅವಳ ವಚನ ಬೆಲ್ಲದಂತೆ: ಹೃದಯದಲ್ಲಿಪ್ಪುದು ನಂಜು ಕಂಡಯ್ಯಾ ಕಂಗಳಬ್ಬನ ಕರೆವಳು; ಮನದಲೊಬ್ಬನ ನೆನೆವಳು! ವಚನದಬ್ಬನ ನೆರೆವಳು! ಕೂಡಲಸಂಗಮದೇವಾ, ಇಂತಹವಳ ತನುವೊಂದೆಸೆ, ಮನವೊಂದೆಸೆ, ಮಾತೊಂದೆಸೆ ಈ ‘ಮಾನಸಗಳ್ಳಿ’ಯ ನನ್ನವಳೆಂದು ನಂಬುವ ಕುರಿನರರನೇನೆಂಬೆನಯ್ಯಾ?" (ಎನ್ನ ನಾ ಹಾಡಿ ಕೊಂಡೆ- ಸಂ: ಡಾ. ಎಸ್.ವಿದ್ಯಾಶಂಕರ. ಪ್ರಿಯದರ್ಶಿನಿ ಪ್ರಕಾಶನ. ವಚನ ಸಂಖ್ಯೆ ೧೧೦. ಪುಟ 90).
ಇದನ್ನೂ ಓದಿ: Ravi Hunj Column: ವೀರಶೈವ ಲಿಂಗಾಯತರೇ, ಉಳಿವಿಗಾಗಿ ಎದ್ದೇಳಿ, ಎಚ್ಚರಗೊಳ್ಳಿ !
ಮೇಲುನೋಟಕ್ಕೆ ಈ ವಚನವನ್ನು ಓದಿದವರು ಇದು ಚಂಚಲ ಮನಸ್ಸಿನ ಕುರಿತಾದ ಸೊಗಸಿನ ವಚನ ಎಂದು ಅರ್ಥೈಸಿಕೊಳ್ಳುತ್ತಾರೆ. ಆದರೆ ಬಸವಣ್ಣನ ಕೌಟುಂಬಿಕ ಜೀವನವನ್ನು ಸಮಗ್ರವಾಗಿ ಗ್ರಹಿಸಿದಾಗ ಈ ವಚನವು ಬೇರೆಯದೇ ಅರ್ಥವನ್ನು ಕೊಡುತ್ತದೆ. ಹಾಗಾಗಿ ಬಸವಣ್ಣನು ಸೂಚ್ಯ ವಾಗಿ ಮಹಿಳೆಯರ ಚಂಚಲತೆ ಕುರಿತು ಈ ವಚನವನ್ನು ಹೇಳಿದ್ದಾನೋ ಅಥವಾ ತನ್ನ ಪತ್ನಿಯರ ಕುರಿತು ಹೇಳಿದ್ದಾನೋ ಎಂಬುದು ಮನೋವಿಶ್ಲೇಷಣೆಯ ಸಂಗತಿ. ಏಕೆಂದರೆ ಈ ವಚನದ ಹಿನ್ನೆಲೆಯಲ್ಲಿ ಬಸವಣ್ಣನು ಮಹಿಳೆಯರ ಬಗ್ಗೆ ಹೊಂದಿದ್ದ ಅಭಿಪ್ರಾಯ ಅವನಿಗೆ ಭೂಷಣ ಪ್ರಾಯವಂತೂ ಅಲ್ಲ. ಒಟ್ಟಾರೆ ಖುದ್ದು ಬಸವಣ್ಣನಂಥ ಸಮಾನತೆಯ ಹರಿಕಾರನೇ ಹೀಗೆ ಹೇಳಿರುವಾಗ ಸಮಾಜವು ಅಂದು ಮಹಿಳೆಯನ್ನು ಯಾವ ಸ್ಥಾನಕ್ಕಿಳಿಸಿ ನೋಡುತ್ತಿತ್ತು ಎಂಬುದರ ಹೊಳಹು ಸಿಗುತ್ತದೆ.
ಅಲ್ಲದೆ ನೀಲಮ್ಮನ ಎಲ್ಲಾ ದುಃಖ-ದುಮ್ಮಾನಗಳಿಗೆ ಬಸವಣ್ಣನ ಸ್ಪಂದನೆ ಮತ್ತಷ್ಟು ಸ್ಪಟಿಕ ಸದೃಶವಾಗಿ- “ಒಡನಿರ್ದ ಸತಿಯೆಂದು ನಚ್ಚಿರ್ದೆನಯ್ಯಾ, ಕೈವಿಡಿದ ಸಜ್ಜನೆಯೆಂದು ನಂಬಿರ್ದೆನಯ್ಯಾ. ಅಯ್ಯಾ, ನಮ್ಮಯ್ಯನ ಕೈನೊಂದಿತು, ತೆಗೆದುಕೊಡಾ ಎಲೆ ಚಂಡಾಲಗಿತ್ತಿ, ಕಳ್ಳನ ಮನೆಗೊಬ್ಬ ಬಲುಗಳ್ಳ ಬಂದಡೆ ಕೂಡಲಸಂಗಮದೇವನಲ್ಲದೆ ಆರೂ ಇಲ್ಲ" (ಸಮಗ್ರ ವಚನ ಸಂಪುಟ: ೧, ವಚನದ ಸಂಖ್ಯೆ: ೧೧೦೮) ಎಂಬ ವಚನದಲ್ಲಿ ಮೂಡಿ ರಗಳೆಯ ಪ್ರಸಂಗಕ್ಕೆ ಇಂಬು ಕೊಡುತ್ತದೆ. ಅಂದ ಹಾಗೆ ಈ ವಚನವು ಭಾವನಾತ್ಮಕವಾಗಿ ಪ್ರಕ್ಷಿಪ್ತ ಎನಿಸಿದರೂ ಇದನ್ನು ಪ್ರೊ.ಎಂ.ಎಂ.ಕಲಬುರ್ಗಿಯವರು ಮಾನ್ಯ ಮಾಡಿ ವಚನ ಸಂಪುಟಗಳಲ್ಲಿ ಸೇರಿಸಿzರೆ ಎಂಬುದು ಗಮನಾರ್ಹ.

ಇನ್ನು ಅಕ್ಕಮಹಾದೇವಿಯಂತೆಯೇ ಅಮುಗೆ ರಾಯಮ್ಮನ ವಚನಗಳು ಸಹ ಕಾಮವನ್ನು ಒಂದು ಪಾಪವೆಂಬಂತೆ ಚಿತ್ರಿಸಿವೆ. ಈ ಕೆಳಗಿನ ಅಂಥ ವಚನವನ್ನು ಗಮನಿಸಿದರೆ ಹಿಂದೆ ನೀಡಿದ ನೀಲಮ್ಮನ ವಚನಗಳು ಹೇಗೆ ಭಿನ್ನ ಎಂದು ತಿಳಿದುಬರುತ್ತದೆ: “ಕಣ್ಣಿಗೆ ಬಂದಂತೆ ಅನ್ಯದೇಶಕ್ಕೆ ಹೋಗುವ ಕುನ್ನಿಗಳಿಗೆ, ಬಣ್ಣದ ಮಾತೇಕೊ? ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಂಗಳುಳ್ಳವಂಗೆ ಮಹಾಜ್ಞಾನಿಗಳ ಮಾತೇಕೊ? ಕತ್ತಲೆಯ ಕಳೆದು ನಿಶ್ಚಿಂತನಾದವಂಗೆ ನಚ್ಚುಮೆಚ್ಚಿನ ರಚ್ಚೆಯ ಮಾತೇಕೊ? ಅಮುಗೇಶ್ವರ ಲಿಂಗವನರಿದವಂಗೆ?" (ಸಮಗ್ರ ವಚನ ಸಂಪುಟ: ೫, ವಚನದ ಸಂಖ್ಯೆ: ೬೨೦). ಒಟ್ಟಿನಲ್ಲಿ ವಚನ ಸಾಹಿತ್ಯವು ಅಂದಿನ ಮಹಿಳೆಯನ್ನು ಅಸಮಾನತೆಯ ನೆಲೆಯಿಂದಲ್ಲದೆ ಸಾಮಾಜಿಕ ನೆಲೆಯಿಂದಲ್ಲದೆ ಮಾನಸಿಕ ನೆಲೆಯಿಂದಲೂ ಕಟ್ಟಿಕೊಡುತ್ತವೆ.
ಅದೆಲ್ಲಕ್ಕಿಂತ ನೀಲಮ್ಮನಿಗೆ ತನ್ನ ಅನಿಸಿಕೆಗಳನ್ನು ಹೇಳಿಕೊಳ್ಳುವಂಥ ಆತ್ಮಸ್ಥೈರ್ಯವನ್ನು ಲಿಂಗವೊದಗಿಸಿತ್ತು. ಇಡೀ ವಚನಚಳವಳಿಯಲ್ಲದೆ ಇಡೀ ಭರತಖಂಡದಲ್ಲಿಯೇ ಇಲ್ಲಿಯವರೆಗೂ ಯಾವುದೇ ಸತ್ಪುರುಷನ ಸಹ‘ ಧರ್ಮಿಣಿ’ಯು ತನ್ನ ಪತಿಯು ತೀರಿದ ಬಳಿಕ ಸುಖಿಯಾದೆನೆಂದು ನೀಲಮ್ಮನಂತೆ ಆತ್ಮಸ್ಥೈರ್ಯದಿಂದ ಖಚಿತವಾದ ನಿಷ್ಠುರ ನಿರಾಳವನ್ನು ವ್ಯಕ್ತಪಡಿಸಿಲ್ಲ.
ಬಸವನಳಿದ ಬಳಿಕದ ಆಕೆಯ ಹಲವಾರು ಇಂಥ ನಿರಾಳತೆಯ ವಚನಗಳನ್ನು ಗಮನಿಸಬಹುದು. ಅಂಥ ಒಂದು ವಚನ ಹೀಗಿದೆ: “ಆಡದ ಮುನ್ನವಚ್ಚನೆ ಛಂದವಾಯಿತ್ತೆನಗಯ್ಯ. ಅಚ್ಚನೆಯಳಿದು ನಿರೂಢವಾಯಿತ್ತು ಪ್ರಸಂಗ. ಸಂಗ ಸ್ವಯಕೂಟವನ್ನೈದಲು, ಅಪ್ರತಿಮ ಮೂರ್ತಿಯ ಇರವನರಿದೆ ನಾನು. ಇಪ್ಪತ್ತೈದು ತತ್ತ್ವವ ಸರಗೊಳಿಸಿ ಸುಖಿಯಾದೆನಯ್ಯ ಸಂಗಯ್ಯ, ಬಸವನಳಿದು ನಿರಾಭಾರಿ ಯಾದ ಬಳಿಕ" (ಸಮಗ್ರ ವಚನ ಸಂಪುಟ: 5, ವಚನದ ಸಂಖ್ಯೆ: 839). ಹಾಗೆಯೇ ಈ ಕೆಳಗಿನ ವಚನವು ಬಸವಣ್ಣನೊಂದಿಗಿನ ಆಕೆಯ ಸಂಬಂಧದ ಬಗ್ಗೆ ಮತ್ತಷ್ಟು ಹೊಳಹುಗಳನ್ನು ನೀಡುತ್ತದೆ.
ಒಟ್ಟಿನಲ್ಲಿ ನೀಲಮ್ಮನು ಕೇವಲ ಬಸವಪತ್ನಿಯಾಗಿ, ವಚನಕಾರ್ತಿಯಾಗಿಯಲ್ಲದೆ ಜಾಗತಿಕ ವಾಗಿಯೂ ಮಹಿಳಾ ನೆಲೆಯಿಂದ ಅತಿ ವಿಶಿಷ್ಟ ವ್ಯಕ್ತಿಯೆನಿಸುತ್ತಾಳೆ. ಜಗತ್ತು ಕೇವಲ ಧಾರ್ಮಿಕ ನೆಲೆಯಲ್ಲಿ ವಚನಕಾರ್ತಿಯರನ್ನು ನೋಡಿರುವುದರಿಂದ ನೀಲಮ್ಮನನ್ನು ಗುರುತಿಸುವಲ್ಲಿ ಸೋತಿದೆ: ‘ಅಧಿಕ ತೇಜೋನ್ಮಯ ಬಸವಾ. ಅನಾದಿತತ್ವಮೂರ್ತಿ ನೀನೆ ಅಯ್ಯಾ ಬಸವಾ.
ಎಲೆ ಅಯ್ಯಾ ಸಮರಸದಲ್ಲಿ ಹುಟ್ಟಿದ ಪ್ರಣವಮೂರ್ತಿಯಯ್ಯಾ ಬಸವ ಯ್ಯನು. ಆ ಬಸವನಡಗಿದ ಬಳಿಕ ಆನು ಬದುಕಿದೆನಯ್ಯಾ ಸಂಗಯ್ಯಾ" (ಸಮಗ್ರ ವಚನ ಸಂಪುಟ: 5, ವಚನದ ಸಂಖ್ಯೆ: 818). ಅದೇ ಬಸವಣ್ಣನವರ ಇನ್ನೋರ್ವ ಪತ್ನಿ ನೀಲಾಂಬಿಕೆಯ ಸೋದರಿ ಗಂಗಾಂಬಿಕೆ ತನ್ನ ಸಂಸಾರದ ಮತ್ತೊಂದು ಕೋನವನ್ನು ತೋರುತ್ತಾಳೆ.
ಆಕೆಯ ಈ ಕೆಳಗಿನ ವಚನಗಳು ಸವತಿ ಮತ್ಸರದ ದೂರಿನ ಭಾವನೆಗಳನ್ನು ಹೊಂದಿವೆ ಎನಿಸುತ್ತವೆ: “ಅವಳ ಕಂದ ಬಾಲಸಂಗ, ನಿನ್ನ ಕಂದ ಚೆನ್ನಲಿಂಗ ಎಂದು ಹೇಳಿದರಮ್ಮಾ ಎನ್ನ ಒಡೆಯರು. ಫಲವಿಲ್ಲದ ಕಂದನಿರ್ಪನವಳಿಗೆ, ಎನಗೆ ಫಲವಿಲ್ಲ, ಕಂದನಿಲ್ಲ. ಇದೇನೋ ದುಃಖದಂದುಗ ಗಂಗಾಪ್ರಿಯ ಕೂಡಲಸಂಗಮದೇವಾ?" (ಸಮಗ್ರ ವಚನ ಸಂಪುಟ: 5, ವಚನದ ಸಂಖ್ಯೆ: 753). “ಪತಿಯಾeಯಲ್ಲಿ ಚರಿಪ ಸತಿಗ್ಯಾಕೆ ಪ್ರತಿಜ್ಞೆಯು? ಪ್ರತಿಜ್ಞೆಯ ಪತಿಕರದಲ್ಲಿ ಪೋಪದಿರೆ ಯಾತನೆಯಲ್ಲವೆ? ಇವಳ ಲಿಂಗನಿಷ್ಠೆ ಇವಳಿಗೆ, ನಮ್ಮ ನಿಷ್ಠೆಪತಿಯಾಜ್ಞೆಯಲ್ಲಿ ಕಾಣಾ ಗಂಗಾಪ್ರಿಯ ಕೂಡಲಸಂಗಮದೇವಾ" (ಸಮಗ್ರ ವಚನ ಸಂಪುಟ: 5, ವಚನದ ಸಂಖ್ಯೆ: 758).
ಹೀಗೆ ಬಸವಪತ್ನಿಯರೀರ್ವರೂ ತಮ್ಮ ಮಾನಸಿಕ ತುಮುಲಗಳನ್ನು, ಸಾಂಸಾರಿಕ ವೇದನೆಗಳನ್ನು ತಮ್ಮ ವಚನಗಳಲ್ಲಿ ಹರಿಯ ಬಿಟ್ಟಿದ್ದಾರೆ. ಬೇರೆ ವಚನಕಾರ್ತಿಯರಿಗೆ ಬಸವತತ್ವದಿಂದ ಸಿಕ್ಕಿದ್ದ ಅನುಭಾವ ಬಸವ ಪತ್ನಿಯರಿಗೆ ಸತ್ವಹೀನವೆನಿಸಿದ್ದಿತೇನೋ ಎಂಬಂತೆ ಈ ವಚನಗಳು ಸಂಸಾರ ಸೂಕ್ಷ್ಮಗಳನ್ನು ತೆರೆದಿಡುತ್ತವೆ.
ಇರಲಿ, ವೀರಶೈವ ತತ್ವವು, “ಜೀವಜಗತ್ತುಗಳನ್ನು ಮಿಥ್ಯವೆನ್ನುವುದಿಲ್ಲ. ದೇಹವನ್ನಲ್ಲಗಳೆಯುವು ದಿಲ್ಲ, ಭೋಗವನ್ನು ದುಃಖಪ್ರದವೆಂದು ಪರಿಗಣಿಸುವುದಿಲ್ಲ. ಭೋಗವನ್ನು ಈಡೇರಿಸಿ ಕೊಳ್ಳಲು ಅನುವಾಗುವ ವೃತ್ತಿಗಳನ್ನು ತುಚ್ಛವಾಗಿ ಕಾಣುವುದಿಲ್ಲ. ಈ ಜಗದಾದಿಗಳೇ ಜೀವನು ಶಿವನಾಗುವ ವಿಕಾಸಮಾರ್ಗಕ್ಕೆ ಮುಖ್ಯ ಸಾಧನಗಳೆಂಬ ವಾಸ್ತವಾಂಶವನ್ನು ಹೇಳುತ್ತದೆ.
ಜೀವಜಗತ್ತುಗಳೆಲ್ಲವೂ ದೇವರ ಅಂಶಗಳೇ ಆಗಿವೆ. ಹಾಗಾಗಿ ಜೀವನಿಗೆ ದೇಹವೇ ದೇವಾಲಯ. ಅವನು ತನ್ನ ವಿಕಾಸರೂಪವಾದ ಆತ್ಮಲಿಂಗವನ್ನು ದೇಹದಲ್ಲಿಟ್ಟು ಪೂಜಿಸುವನು. ಅವನ ಕಾಯಕ ವೃತ್ತಿಗಳೆಲ್ಲವೂ ದೇವರಪೂಜೆಯೇ ಆಗಿವೆ. ಜೀವನ ಭೋಗವೇ ದೇವರ ಪ್ರಸಾದವಾಗಿದೆ. ಆ ಪ್ರಸಾದ ದಿಂದಲೇ ಜೀವನು ವಿಕಾಸ ಹೊಂದಿ, ದೇವರಾಗುವನು" ಎನ್ನುತ್ತದೆ.
ಹಾಗಾಗಿಯೇ ಚೆನ್ನಬಸವ ಪುರಾಣದಲ್ಲಿ ಬರುವ ವೇಶ್ಯಾವಾಟಿಕೆಯ ವರ್ಣನೆ ಹೀಗಿದೆ: “ಪೊಂಗುತಿಹ ಕ್ರಮುಕಾಮಳಕ ಬಿಲ್ವ ಜಂಭ ನಾ ರಂಗಫಲ ಕಮಲ ನವಕುಟ್ಮಳಕುಚಂಗಳ ಬೆದಂಗಿನೊಳ್ನೆಡೆಯ ನಿಡುಜಡೆಯ ಥಳಥಳಿಪ ಕದಪಿನ ತಳಿರ್ದುಟಿಯ ವಿಟರ ಪಿಂಗದೀಕ್ಷಿಪ ದಿಟ್ಟಿಗಳ ಸೊಗಸುತಿಹ ನಗೆಮೊಗಂಗಳ ನಯಂ ಬಿರುಸಿನೊಳ್ ಬೆರೆದ ನುಡಿಗಳ ಮನಂಗೊಳಿಪ ಸಿಂಗರದ ಬೆಚ್ಚಬೇಟದ ಬಗೆಯ ಜವ್ವನೆಯರೆಸೆದಿರ್ದರು ಬಿಣ್ಮೊಲೆಯ ಮಿಗೆ ಬಟ್ಟಮೊಲೆಯ ತೆಂಗಾಯ್ಮೊಲೆಯ ನುಣ್ಮೊಲೆಯ ನೆಲೆಮೊಲೆಯ ಬಲ್ಮೊಲೆಯ ಹೊಳೆಹೊಳೆವ ಕಣ್ಮಲರ ಸನ್ನೆಗಳ ಬೆಳ್ನಗೆಯ ಬೇಟದೊಳ್ ಬೆರೆದು ತರಹರಿಪ ಮನದ ಜಾಣ್ಮೆಗಳ ಸವಿನುಡಿಯ ಮಚ್ಚಿಮಚ್ಚಿಪ ಬಗೆಯ ಪೊಣ್ಮಿ ಪೊಡಕರಿಪ ಧನದಾತುರದ ವೈಸಿಕದೊಳುಣ್ಮುವ ಗುಣಂಗಳ ಮಹಾಪ್ರೌಢವನಿತೆರ್ಯ ಕಣ್ಣೆಸೆದರಲ್ಲಿಗಲ್ಲಿ".
ಅರ್ಥಾತ್, ವಿಕಸಿಸುತ್ತಿರುವ ಅಡಕೆ, ನೆಲ್ಲಿ, ಬಿಲ್ಪತ್ರೆ ಕಾಯಿ, ನಿಂಬೆ, ಕಿತ್ತಲೆಹಣ್ಣುಗಳಂತೆ ಅರೆಬಿರಿದ ತಾವರೆಯ ಮೊಲೆಗಳಿದ್ದವು. ಉದ್ದವಾದ ಜಡೆಗಳಿದ್ದವು, ಅವರ ಕೆನ್ನೆಗಳು ಹೊಳೆಯುತ್ತಿದ್ದುವು, ತುಟಿಗಳು ಚಿಗುರಿನಂತಿದ್ದುವು, ಹಿಂಜರಿಯದೆ ವಿಟರನ್ನು ನೋಡುವ ನೋಟ, ನಗುವ ಮುಖಗಳ ಸೊಗಸು, ನಯ ಮತ್ತು ಒರಟುತನದಿಂದ ಕೂಡಿದ ಮಾತುಗಳು, ಮನಸ್ಸಿಗೆ ಆನಂದ ವನ್ನುಂಟುಮಾಡುವಂತೆ ಆಲಂಕರಿಸಿಕೊಂಡ ರೀತಿ.
ಹಾಯಾದ ಸಂಭೋಗದ ಇಚ್ಛೆಯಿಂದ ಕೂಡಿದ ಮನವುಳ್ಳ ಯೌವನೆಯರು ಅಲ್ಲಿದ್ದರು. ದೊಡ್ಡ ಭಾರವಾದ ಮೊಲೆಯವರಿದ್ದರು. ದುಂಡನೆಯ ಮೊಲೆಯವರಿದ್ದರು. ತೆಂಗಿನಕಾಯಿ ಗಾತ್ರದ ಮೊಲೆಯವರಿದ್ದರು. ಮೃದುವಾದ ಮೊಲೆಯವರಿದ್ದರು. ಸ್ಥಿರವಾದ ಮೊಲೆಯವರಿದ್ದರು. ಗಟ್ಟಿ ಯಾದ ಮೊಲೆಯವರಿದ್ದರು. ಹೊಳೆಯುವ ಹೂವಿನಂತೆ ಅರಳಿದ ಕಣ್ಣೋಟದ ಸನ್ನೆಗಳನ್ನು ಮಾಡುವ ಹೆಂಗಸರಿದ್ದರು.
ನಸುನಗೆಯಿಂದ ಸಂಭೋಗದಲ್ಲಿ ಕೂಡಿ ನೆಮ್ಮದಿಯನ್ನು ಹೊಂದುವ ಮನಸ್ಸಿನವರಿದ್ದರು. ಬಹಳ ಬುದ್ಧಿವಂತಿಕೆಯಿಂದ ಸವಿಮಾತನ್ನಾಡುವವರಿದ್ದರು. ಮೆಚ್ಚುವ ರೀತಿನೀತಿಗಳನ್ನುಳ್ಳವರಿದ್ದರು. ದುಡ್ಡಿನ ಆತುರದವರೆಂದು ಹೆಚ್ಚಾಗಿ ಹೊರನೋಟಕ್ಕೆ ಕಾಣುವವರಿದ್ದರು. ಮೋಸದಿಂದ ಕೂಡಿದ ಗುಣಗಳುಳ್ಳವರಿದ್ದರು. ಇಂಥ ಪ್ರೌಢಸೀಯರು ಅಲ್ಲಲ್ಲಿ ಕಣ್ಣಿಗೆ ಕಾಣಿಸಿದರು. ಕಮಲಮುಖಿ, ಕಮಲದ ಸುವಾಸನೆಯುಳ್ಳವಳು, ಜಿಂಕೆಯಂತೆ ಕಣ್ಣುಳ್ಳವಳು, ಕೋಗಿಲೆಯಂತೆ ಹಾಡುವವಳು, ಕಪ್ಪು ಕೂದಲಿನವಳು....
ಹಾಗಾಗಿಯೇ ವಚನಕಾರರು ಅವರವರ ವೈಯಕ್ತಿಕ ಕಾರಣಗಳಿಗಾಗಿ ಪಣ್ಯಸ್ತ್ರೀಯರನ್ನು ಹೊಂದಿ ದ್ದರು. ಹೀಗಿದ್ದೂ ಶರಣರಲ್ಲಿ ಪುರುಷ ಅಹಂ ಇದ್ದಿತು ಎಂದು ಅವರ ವಚನಗಳಲ್ಲಿ ಎದ್ದು ಕಾಣುತ್ತದೆ ಎಂಬುದನ್ನು ಅಲ್ಲಗಳೆಯಲಾಗದು. ಹಾಗಾಗಿ ಇಂದಿನ ಬುದ್ದಿಜೀವಿಗಳು ಹೇಳುವಂತೆ ಮಹಿಳಾ ಶೋಷಣೆ, ವೇಶ್ಯೆಯರನ್ನು ಹೀನವಾಗಿ ಕಾಣುವ ಮನಸ್ಥಿತಿಗಳ್ಯಾವುವೂ ಅಂದು ಇರಲಿಲ್ಲ ಎಂದು ಐತಿಹಾಸಿಕವಾಗಿ ಸಾಬೀತಾಗುತ್ತದೆ.
ಕೃಷ್ಣದೇವರಾಯನ ಅಂತಃಪುರದೊಳಗೆ ವೇಶ್ಯೆಯರು ಹೋಗಿ ತಾಂಬೂಲವನ್ನು ಮೆದ್ದು ಬರು ವಷ್ಟು ಕುಲೀನರೆಂದು ಗೌರವಿಸುತ್ತಿದ್ದರು. ವೇಶ್ಯೆಯರನ್ನು ಸಮಾಜವು ಸಹ ಯಾವುದೇ ಹಿಂಜರಿಕೆ ಯಿಲ್ಲದೆ ಕುಲೀನ ಮನೆತನಗಳ ಸೀಯರಂತೆಯೇ ಒಳಗೊಳ್ಳುತ್ತಿತ್ತು ಎಂದು ಡೊಮಿಂಗೋ ಪಯಸ್ ದಾಖಲಿಸಿದ್ದಾನೆ.
ಆದರೆ ಪರ್ದಾ ಪಲ್ಲಟ ಮುಂದೆ ಹಿಂದೂ ಸಮಾಜದಲ್ಲಿ ಎಂಥ ಘೋರ ನೀತಿಗಳನ್ನು ತಂದಿಟ್ಟಿತು ಎನ್ನುವುದು ಸತ್ಯವೇ ಆದರೂ ದಕ್ಷಿಣ ಭಾರತದಲ್ಲಿ ಅದು ಹನ್ನೆರಡನೇ ಶತಮಾನದಗಲಿ, ಕೃಷ್ಣದೇವರಾಯನ ಹದಿನೈದನೇ ಶತಮಾನದಗಲಿ ಇನ್ನೂ ಶೈಶಾವಸ್ಥೆಯಲ್ಲಿಯೇ ಇದ್ದಿತು ಎಂದು ಐತಿಹಾಸಿಕ ದಾಖಲೆಗಳು ತಿಳಿಸುತ್ತವೆ. ಮಾನವ ಧರ್ಮದ ಹಿನ್ನೆಲೆಯಲ್ಲಿ ಮನಶಾಸ್ತ್ರದ ಮುನ್ನೆಲೆ ಯಿಂದ ವಚನಕಾರರ ಸಾಮಾಜಿಕ ಮತ್ತು ವೈಯಕ್ತಿಕ ಜೀವನವನ್ನು ಸಮಗ್ರ ವಾಗಿಟ್ಟುಕೊಂಡು ವಚನಗಳನ್ನು ವಿಶ್ಲೇಷಿಸಿದಾಗ ಕಾಣುವ ಸತ್ಯವೇ ಬೇರೆ. ಹಾಗಾಗಿ ಇತಿಹಾಸವನ್ನು ಭಾವನಾತ್ಮಕ ವಾಗಿ ಒಳಗೊಂಡು ಸಂಕಥನವನ್ನು ರಚಿಸುವ ಮುನ್ನ ಸಂಶೋಧನ ಚಿಕಿತ್ಸಕ ಆದರೆ ತಟಸ್ಥ ನಿಲುವಿನಿಂದ ಅವಲೋಕಿಸಿ ವಿಶ್ಲೇಷಣೆಯನ್ನು ಮಂಡಿಸುವ ತುರ್ತು ಇಂದಿನ ಅಗತ್ಯವಾಗಿದೆ.
ಭಾರತದ ಇತಿಹಾಸವು ಹೀಗೆ ಕ್ರಿಸ್ತಪೂರ್ವ ಕಾಲದಿಂದ ಇಪ್ಪತ್ತೊಂದನೇ ಶತಮಾನದ ವರ್ತಮಾನ ದವರೆಗಿನ ತನ್ನೆ ಸ್ಥಿತ್ಯಂತರಗಳನ್ನು ಸ್ಪಷ್ಟವಾಗಿ ಸಮಗ್ರ ರೂಪದಲ್ಲಿ ಕಟ್ಟಿಕೊಡುತ್ತದೆ. ಭಾರತವು ತನ್ನ ಈ Paradigm Shifts ಅನ್ನು ಸಮಗ್ರವಾಗಿ ತೆರೆದಿಟ್ಟು ನಿಚ್ಚಳವಾಗಿ ನೋಡಬಲ್ಲ ಸಂಶೋ ಧಕರಿಗಾಗಿ ಶಾಪಗ್ರಸ್ತ ಯಕ್ಷಿಣಿಯಂತೆ ಕಾಯುತ್ತಿದೆ. ಇದಕ್ಕೆ ವಚನಕಾರರು ಮತ್ತವರ ಜೀವನ ಚರಿತ್ರೆಯೂ ಹೊರತಲ್ಲ!
ಸಂಶೋಧಕರ ಪೂರ್ವಗ್ರಹ, ಭಾವುಕತೆಗಳ ಪೊರೆಯಲ್ಲಿ ಮಸುಕು ಮಸುಕಾಗಿರುವ ಬಸವಣ್ಣ, ಶರಣರು, ವಚನ ಚಳವಳಿ, ಕಲ್ಯಾಣ ಕ್ರಾಂತಿಗಳ ಹುಸಿ ದೈವಿಕತೆ ಪಾವಿತ್ರ್ಯಗಳ ಪೊರೆಯನ್ನು ಹರಿದು ಅಗಾಧ ಮಾನವತೆಯ ಮಾನವೀಯ ವ್ಯಕ್ತಿತ್ವವನ್ನು, ಸಹಮಾನವರ ಸಾಮಾಜಿಕ ಜೀವಪರತೆಯನ್ನು ಅನಾವರಣಗೊಳಿಸುವ ಪ್ರಯತ್ನಗಳು ಸಂಶೋಧನಾ ವಲಯದಲ್ಲಿ ಉದಯಿ ಸಲಿ.
(ಲೇಖಕರು ಶಿಕಾಗೊ ನಿವಾಸಿ ಹಾಗೂ ಸಾಹಿತಿ)