ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Thimmanna Bhagwat Column: ಜೇಬಿನಲ್ಲಿಟ್ಟುಕೊಂಡ ವಿಧೇಯಕಗಳು ಮತ್ತು ಕತ್ತರಿ ಪ್ರಯೋಗ

ರಾಜಕಾರಣಿಗಳು ಮತ್ತು ನ್ಯಾಯಾಂಗದ ನಡುವಿನ ಜಟಾಪಟಿ ಇಂದು ನಿನ್ನೆಯದಲ್ಲ. ಇಂದಿರಾ ಗಾಂಧಿ ವರ್ಸಸ್ ರಾಜ್‌ನಾರಾಯಣ್ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟು ಇಂದಿರಾ ಗಾಂಧಿಯವರ ಚುನಾವಣೆಯ ಗೆಲುವನ್ನೇ ಅಸಿಂಧು ಎಂಬ ನಿರ್ಣಯ ನೀಡಿತ್ತು. ನಂತರ ಹೇರ ಲಾದ ತುರ್ತುಪರಿಸ್ಥಿತಿ ಯ ಸಮಯದಲ್ಲಿ ಅನೇಕ ಸಂಸದರ ಅನುಪಸ್ಥಿತಿಯಲ್ಲಿ ವಿವಾದಾತ್ಮಕ 39ನೇ ಸಂವಿಧಾನ ತಿದ್ದುಪಡಿ ಯ ಮೂಲಕ 329-B ವಿಧಿಗೆ 4ನೇ ಉಪವಿಧಿಯನ್ನು ಸೇರಿಸಲಾಯಿತು

ಜೇಬಿನಲ್ಲಿಟ್ಟುಕೊಂಡ ವಿಧೇಯಕಗಳು ಮತ್ತು ಕತ್ತರಿ ಪ್ರಯೋಗ

Profile Ashok Nayak May 3, 2025 8:43 AM

ಕಾನೂನು ಸೆನ್ಸ್‌

ತಿಮ್ಮಣ್ಣ ಭಾಗ್ವತ್

ದೇಶದ ಸರ್ವೋಚ್ಚ ಅಧಿಕಾರಿಗಳಾದ ರಾಷ್ಟ್ರಪತಿಗಳಿಗೇ ಕಾಲಮಿತಿ ನಿಗದಿ ಮಾಡಿ ಆದೇಶ ನೀಡುವ ಮೂಲಕ ಸರ್ವೋಚ್ಚ ನ್ಯಾಯಾಲಯವು ತನ್ನ ಅಧಿಕಾರದ ಎಲ್ಲೆಯನ್ನು ಮೀರಿದೆ ಮತ್ತು ನ್ಯಾಯಾ ಧೀಶರುಗಳು ಪರಮೋಚ್ಚವಾದ ಸಂಸತ್ತಿನ ಅಧಿಕಾರವನ್ನೂ ಮೀರಿ ವರ್ತಿಸತೊಡಗಿದ್ದಾರೆ" ಎಂದು ರಾಜ್ಯಸಭೆಯ ಅಧ್ಯಕ್ಷರೂ ಆಗಿರುವ ಭಾರತದ ಗೌರವಾನ್ವಿತ ಉಪರಾಷ್ಟ್ರಪತಿಗಳು ಇತ್ತೀಚೆಗೆ ಕೆಲವು ಸಂದರ್ಭಗಳಲ್ಲಿ ಹೇಳಿದ್ದಾರೆ. “ಶಾಸಕಾಂಗ, ಕಾರ್ಯಾಂಗಗಳ ವ್ಯವಹಾರಗಳಲ್ಲಿ ಪದೇ ಪದೆ ಮೂಗು ತೂರಿಸುತ್ತಿರುವ ಸುಪ್ರೀಂ ಕೋರ್ಟು, ನ್ಯಾಯಾಧೀಶರೊಬ್ಬರ ಮನೆಯಲ್ಲಿ ದೊರಕಿದ ನಗದಿನ ವಿಷಯದಲ್ಲಿ ಯಾಕೆ ಅಷ್ಟೇ ಸಕ್ರಿಯವಾಗಿ ಕ್ರಮ ತೆಗೆದುಕೊಳ್ಳುತ್ತಿಲ್ಲ? ಆ ವಿಷಯದಲ್ಲಿ ಯಾಕೆ ವಿಳಂಬ" ಎಂದು ಅವರು ನೇರವಾಗಿ ಪ್ರಶ್ನಿಸಿದ್ದಾರೆ. ಬಿಜೆಪಿಯ ಕೆಲವು ಶಾಸಕರುಗಳು ನ್ಯಾಯಾಲಯಗಳೇ ಕಾನೂನು ಮಾಡುವುದಾದರೆ ಸಂಸತ್ತನ್ನೇ ಮುಚ್ಚಬೇಕಾಗಬಹುದು ಎಂದು ನೇರ ಆಕ್ಷೇಪಣೆಗಳನ್ನು ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ನ್ಯಾಯಾಧೀಶರ ಆಯ್ಕೆಗೆ ಇರುವ ಕೊಲೀಜಿಯಂ ವ್ಯವಸ್ಥೆ, ವಕ್ಫ್ ಕಾಯಿದೆಯ 2013ರ ತಿದ್ದುಪಡಿಯ ವಿಷಯದಲ್ಲಿ ವಿಚಾರಣೆಯನ್ನು ನಿರಾಕರಿಸಿದ ಸುಪ್ರೀಂ ಕೋರ್ಟ್, 2025ರ ತಿದ್ದುಪಡಿಯ ವಿಷಯದಲ್ಲಿ ತೋರುತ್ತಿದೆಯೆನ್ನಲಾದ ಆಸಕ್ತಿ- ಈ ಎಲ್ಲ ವಿಷಯಗಳ ಚರ್ಚೆ ಮುನ್ನೆಲೆಗೆ ಬಂದಿದೆ. ‌

ರಾಜಕಾರಣಿಗಳು ಮತ್ತು ನ್ಯಾಯಾಂಗದ ನಡುವಿನ ಜಟಾಪಟಿ ಇಂದು ನಿನ್ನೆಯದಲ್ಲ. ಇಂದಿರಾ ಗಾಂಧಿ ವರ್ಸಸ್ ರಾಜ್ ನಾರಾಯಣ್ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟು ಇಂದಿರಾ ಗಾಂಧಿ ಯವರ ಚುನಾವಣೆಯ ಗೆಲುವನ್ನೇ ಅಸಿಂಧು ಎಂಬ ನಿರ್ಣಯ ನೀಡಿತ್ತು. ನಂತರ ಹೇರಲಾದ ತುರ್ತು ಪರಿಸ್ಥಿತಿಯ ಸಮಯದಲ್ಲಿ ಅನೇಕ ಸಂಸದರ ಅನುಪಸ್ಥಿತಿಯಲ್ಲಿ ವಿವಾದಾತ್ಮಕ 39ನೇ ಸಂವಿಧಾನ ತಿದ್ದುಪಡಿಯ ಮೂಲಕ 329-B ವಿಧಿಗೆ 4ನೇ ಉಪವಿಧಿಯನ್ನು ಸೇರಿಸಲಾಯಿತು.

ಇದನ್ನೂ ಓದಿ: Thimmanna Bhagwat Column: ಸೀಮೆ ಮೀರದಿರಲಿ ಸೀಮಾಸುಂಕ ಸಮರ

ಅಲಹಾಬಾದ್ ಹೈಕೋರ್ಟ್ ನಿರ್ಣಯವನ್ನು ರದ್ದು ಗೊಳಿಸುವ ಉದ್ದೇಶದಿಂದ ಮಾಡಲಾಗಿದ್ದ ಈ ತಿದ್ದುಪಡಿಯನ್ನು ಸುಪ್ರೀಂ ಕೋರ್ಟು ರದ್ದುಗೊಳಿಸಿತಾದರೂ ಪ್ರಧಾನ ಮಂತ್ರಿಯ ವರ ಆಯ್ಕೆ ಮತ್ತು ಜನತಾ ಪ್ರಾತಿನಿಧ್ಯ ಕಾಯಿದೆಗಳಿಗೆ ತರಲಾದ ತಿದ್ದುಪಡಿಗಳನ್ನು ಎತ್ತಿ ಹಿಡಿಯಿತು. ಶಾಬಾನೋ ಪ್ರಕರಣದಲ್ಲಿ ವಿಚ್ಛೇದಿತ ಮುಸ್ಲಿಂ ಮಹಿಳೆಗೆ ಜೀವನಾಂಶದ ಹಕ್ಕು ನೀಡಿದ ಸುಪ್ರೀಂ ಕೋರ್ಟಿನ ನಿರ್ಣಯವನ್ನು 1986ರ ಮುಸ್ಲಿಮ್ ವಿಚ್ಛೇದಿತ ಮಹಿಳೆಯರ ಹಕ್ಕು ರಕ್ಷಣೆ ಕಾಯಿದೆ ತರುವ ಮೂಲಕ ಪೂರ್ತಿ ದುರ್ಬಲಗೊಳಿಸಲಾಯಿತು.

ಕೇಶವಾನಂದ ಭಾರತೀ ವರ್ಸಸ್ ಭಾರತ ಸರಕಾರ (ಸಂವಿಧಾನದ ಮೂಲ ರಚನೆಯ ವಿಷಯ), ಮನೇಕಾ ಗಾಂಧಿ ವರ್ಸಸ್ ಭಾರತ ಸರಕಾರ (ವ್ಯಕ್ತಿ ಸ್ವಾತಂತ್ರ್ಯ), ವಿಶಾಖಾ ವರ್ಸಸ್ ರಾಜಸ್ಥಾನ ಸರಕಾರ (ಮಹಿಳೆಯರಿಗೆ ಲೈಂಗಿಕ ಕಿರುಕುಳ), ಎಸ್.ಆರ್.ಬೊಮ್ಮಾಯಿ ವರ್ಸಸ್ ಭಾರತ ಸರಕಾರ (ರಾಷ್ಟ್ರಪತಿ ಆಡಳಿತ ಮತ್ತು ಬಹುಮತದ ನಿರ್ಣಯ ಕುರಿತು ರಾಜ್ಯಪಾಲರ ಅಧಿಕಾರ) ಮುಂತಾದ ಅನೇಕ ಪ್ರಕರಣಗಳು ನ್ಯಾಯಾಂಗದ ಕ್ರಿಯಾಶಿಲತೆಗೆ ( Judicial Activism) ಉದಾಹರಣೆ ಯಾಗಬಹುದು.

7 R

ಈಗ ಎದ್ದಿರುವ ಗದ್ದಲ “ತಮಿಳುನಾಡು ಸರಕಾರ ವರ್ಸಸ್ ತಮಿಳುನಾಡು ರಾಜ್ಯಪಾಲರು" ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಕುರಿತಾದ್ದು. ರಾಜ್ಯದ ಎಲ್ಲಾ ವಿಶ್ವ ವಿದ್ಯಾಲಯಗಳಿಗೆ ಉಪಕುಲಪತಿಗಳನ್ನು ನೇಮಿಸುವ ಅಧಿಕಾರವನ್ನು ರಾಜ್ಯಪಾಲರ ಬದಲಾಗಿ ಸರಕಾರಕ್ಕೆ ನೀಡುವ ಒಂದು ವಿಧೇಯಕವಲ್ಲದೆ ವಿಶ್ವವಿದ್ಯಾಲಯಗಳ ಆಡಳಿತಾತ್ಮಕ ವಿಷಯ ಗಳಲ್ಲಿ ಸರಕಾರಕ್ಕೆ ಹೆಚ್ಚಿನ ಅಽಕಾರ ನೀಡುವ ಇತರ 11 ವಿಧೇಯಕಗಳನ್ನು ರಾಜ್ಯಪಾಲ ಆರ್.ಎನ್. ರವಿಯವರ ಅಂಕಿತಕ್ಕಾಗಿ ಜನವರಿ 2020ರಿಂದ ಎಪ್ರಿಲ್ 2023ರ ಅವಧಿಯಲ್ಲಿ ಕಳಿಸಲಾಗಿತ್ತು.

ಈ ಕುರಿತು ಯಾವುದೇ ನಿರ್ಧಾರ ಕೈಗೊಳ್ಳದೆ ರಾಜ್ಯ ಪಾಲರು ವಿಧೇಯಕಗಳನ್ನು ಇಟ್ಟುಕೊಂಡಿ ದ್ದರು. ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿ ತಮಿಳುನಾಡು ಸರಕಾರ ನವೆಂಬರ್ 2023ರಲ್ಲಿ ಸುಪ್ರೀಂ ಕೋರ್ಟಿನಲ್ಲಿ ದಾವೆ ದಾಖಲಿಸಿದ ಕೂಡಲೇ, 2 ವಿಧೇಯಕಗಳನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿ ಇನ್ನುಳಿದ 10ನ್ನು ಯಾವುದೇ ಟಿಪ್ಪಣಿಗಳಿಲ್ಲದೆ ಸರಕಾರಕ್ಕೆ ಹಿಂತಿರುಗಿಸಿದರು.

ಆ ಎಲ್ಲ ವಿಧೇಯಕಗಳನ್ನು ಯಥಾವತ್ತಾಗಿ ಶಾಸನಸಭೆಗಳಲ್ಲಿ ಪುನಃ ಪಾಸ್ ಮಾಡಿಸಿ ರಾಜ್ಯಪಾಲರ ಅಂಕಿತಕ್ಕೆ ಮತ್ತೊಮ್ಮೆ ಕಳಿಸಿದಾಗ ಅವುಗಳನ್ನು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಾಯ್ದಿಡಲಾಯಿತು. ರಾಷ್ಟ್ರಪತಿಗಳೂ ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ. ಅನೇಕ ಕಾಮನ್‌ವೆಲ್ತ್ ರಾಷ್ಟ್ರಗಳಲ್ಲಿರು ವಂತೆ ಸಂಸತ್ತು ಅಥವಾ ರಾಜ್ಯದ ಶಾಸನಸಭೆಗಳು ಆಂಗೀಕರಿಸಿದ ವಿಧೇಯಕಗಳಿಗೆ ರಾಷ್ಟ್ರಪತಿಗಳು ಅಥವಾ ರಾಜ್ಯಪಾಲರ ಅಂಕಿತ ಪಡೆಯುವ ಪದ್ಧತಿ ಇಂಗ್ಲೆಂಡಿನ ರಾಜರು (ಅಥವಾ ರಾಣಿ) ಅಲ್ಲಿನ ಸಂಸತ್ತು ಅಂಗೀಕರಿಸಿದ ವಿಧೇಯಕಗಳಿಗೆ ರಾಜಮುದ್ರೆಯೊತ್ತುವ (Royal Assent) ಪದ್ಧತಿಯ ಅನುಕರಣೆ. ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರು ಶಾಸಕಾಂಗದ ಭಾಗವೇ ಆಗಿರುತ್ತಾರೆ ಎಂಬುದೂ ಇದಕ್ಕೆ ಕಾರಣ. ಇಂಗ್ಲೆಂಡಿನಲ್ಲಿ 1967ರವರೆಗೂ ರಾಜಮುದ್ರೆ ಯೊತ್ತುವುದಕ್ಕೆ ದೊಡ್ಡ ಸಮಾರಂಭವೇ ನಡೆಯುತ್ತಿತ್ತಂತೆ!

ಬ್ರಿಟಿಷ್ ಆಡಳಿತದ ಕಾಲದಲ್ಲಿ ಭಾರತದ ಪ್ರಾಂತೀಯ ಶಾಸನಸಭೆಗಳು ಅಂಗೀಕರಿಸುವ ವಿಧೇಯಕ ಗಳಿಗೆ ಪ್ರಾಂತೀಯ ಗವರ್ನರ್‌ಗಳ ಅಂಕಿತ ಹಾಗೂ ದೇಶದ ಪ್ರತಿನಿಧಿ ಸಭೆ ಅಂಗೀಕರಿಸುವ ವಿಧೇಯಕಗಳಿಗೆ ಬ್ರಿಟನ್ನಿನ ರಾಣಿಯ/ಗವರ್ನರ್ ಜನರಲ್‌ರ ಅಂಕಿತ ಅಗತ್ಯವಾಗಿತ್ತು ಮತ್ತು ಯಾವುದೇ ವಿಧೇಯಕಗಳ ಮೇಲೆ ಬ್ರಿಟನ್ ರಾಣಿ/ಗವರ್ನರ್ ಜನರಲ್‌ರಿಗೆ VETO POWER ಇರುತ್ತಿತ್ತು. ಆದರೆ ಸ್ವತಂತ್ರ ಭಾರತದ ಸಂವಿಧಾನದ 200 ಮತ್ತು 201ನೇ ವಿಧಿಗಳಡಿಯಲ್ಲಿ ರಾಜ್ಯಪಾಲರಿಗೆ ಅಥವಾ ರಾಷ್ಟ್ರಪತಿಗಳಿಗೆ ಅಂಥ ಅಧಿಕಾರ ಇರುವುದಿಲ್ಲ.

ಇದರ ಪರಿಣಾಮವೆಂದರೆ ರಾಷ್ಟ್ರಪತಿಗಳ ಅಥವಾ ರಾಜ್ಯಪಾಲರ ಅಂಕಿತ ಕೆಲವೇ ಸಂದರ್ಭ ಗಳನ್ನು ಹೊರತುಪಡಿಸಿದರೆ ಕೇವಲ ಸಾಂಕೇತಿಕವೆನಿಸುತ್ತದೆ. ಕಾನೂನಿನ ರಚನೆಯಲ್ಲಿ ಸಂಸತ್ತು ಅಥವಾ ಶಾಸನಸಭೆಗಳೇ ಸರ್ವೋಚ್ಚ. ಸುಪ್ರೀಂ ಕೋರ್ಟು ಹೇಳಿರುವುದೂ ಇದನ್ನೇ. ರಾಜ್ಯದ ಶಾಸನಸಭೆಗಳು ಅಂಗೀಕರಿಸಿದ ವಿಧೇಯಕಗಳು ರಾಜ್ಯಪಾಲರಿಗೆ ಸಲ್ಲಿಕೆಯಾದಾಗ ಅವರು ಅದನ್ನು ಅಂಗೀಕರಿಸಬೇಕು, ಇಲ್ಲವೇ ತಮ್ಮ ಟಿಪ್ಪಣಿಯೊಂದಿಗೆ ಮರಳಿ ಕಳಿಸಬೇಕು.

ಹಾಗೆ ಹಿಂದಿರುಗಿಸಲ್ಪಟ್ಟ ವಿಧೇಯಕಗಳನ್ನು ಶಾಸನಸಭೆಗಳು ಮತ್ತೊಮ್ಮೆ ಅಂಗೀಕರಿಸಿ ರಾಜ್ಯ ಪಾಲರಿಗೆ ಸಲ್ಲಿಸಿದರೆ ಅವುಗಳನ್ನು ಅವರು ಅಂಗೀಕರಿಸದೆ ಅನ್ಯಮಾರ್ಗವಿಲ್ಲ ಎಂಬುದು 200ನೇ ವಿಧಿಯ ತಾತ್ಪರ್ಯವೆಂದು “ಪಂಜಾಬ್ ಸರಕಾರ ವರ್ಸಸ್ ಪಂಜಾಬ್ ರಾಜ್ಯಪಾಲರ ಮುಖ್ಯ ಕಾರ್ಯದರ್ಶಿಗಳು" ಪ್ರಕರಣದಲ್ಲೂ ಹೇಳಲಾಗಿದೆ.

ಸಾಂವಿಧಾನಿಕ ಆಂಶಗಳಿರುವ ಸಂದರ್ಭಗಳಲ್ಲಿ ವಿಧೇಯಕಗಳನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿದಾಗ, ಅಂಥವುಗಳಿಗೆ ಸಂಸತ್ತಿನ ಕಾಯಿದೆಗಳಿಗೆ ವ್ಯತಿರಿಕ್ತವಾಗುವಂಥ ಕೆಲವು ಸಂದರ್ಭಗಳನ್ನು ಹೊರತು ಪಡಿಸಿ, ಅಂಕಿತವನ್ನು ತಡೆಹಿಡಿಯುವಂತಿಲ್ಲ. ಸಾಂವಿಧಾನಿಕ ವಿಷಯಗಳ ಕಾರಣಕ್ಕೆ ಅಂಕಿತ ವನ್ನು ತಡೆ ಹಿಡಿಯುವ ಸಂದರ್ಭಗಳಲ್ಲಿ ರಾಷ್ಟ್ರಪತಿಗಳು 143ನೇ ವಿಧಿಯಡಿಯಲ್ಲಿ ಸುಪ್ರೀಂ ಕೋರ್ಟಿನ ಸಲಹೆ ಕೇಳುವುದು ಸೂಕ್ತ ಎಂದು ಕೂಡಾ ಕೋರ್ಟು ನಿರ್ದೇಶಿಸಿದೆ. ಇದಕ್ಕಿಂತ ಮುಖ್ಯವಾಗಿ 3 ವರ್ಷದವರೆಗೆ ಏನೂ ಮಾಡದೆ ವಿಧೇಯಕಗಳನ್ನು ಜೇಬಿನಲ್ಲಿಟ್ಟು ಕೂತಿದ್ದ ರಾಜ್ಯಪಾಲರ ಕ್ರಮವನ್ನು ಖಂಡಿಸಿದ ಸುಪ್ರೀಂ ಕೋರ್ಟು, ತನಗೆ 142ನೇ ವಿಧಿಯಲ್ಲಿ ಪ್ರದತ್ತವಾದ ವಿಶೇಷಾಧಿಕಾರವನ್ನು ಉಪಯೋಗಿಸಿ, ಆ ಎಲ್ಲ ವಿಧೇಯಕಗಳನ್ನು ಕಾನೂನು ಎಂದು ಪರಿಗಣಿಸುವಂತೆ ಆದೇಶಿಸಿದೆ.

ಅಲ್ಲದೆ ಇನ್ನು ಮುಂದೆ ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರುಗಳು ಈ ವಿಧಿಗಳಡಿಯಲ್ಲಿ ಕೈಗೊಳ್ಳಬೇಕಾದ ನಿರ್ಣಯಗಳಿಗೆ ಕಾಲಮಿತಿ ಯನ್ನು ನಿಗದಿಪಡಿಸಿದೆ. ರಾಜ್ಯಪಾಲರಿಗೆ ಮತ್ತು ರಾಷ್ಟ್ರಪತಿಗಳಿಗೆ 200 ಮತ್ತು 201ನೇ ವಿಧಿಗಳಡಿ POCKET VETO (ನಿರ್ಣಯ ತೆಗೆದುಕೊಳ್ಳದೆ ಆ ವಿಧೇಯಕಗಳು ಬಿದ್ದು ಹೋಗುವದು) ಅಥವಾ ABSOLUTE VETO (ಪೂರ್ತಿ ತಿರಸ್ಕರಿಸುವ ಅಧಿಕಾರ) ಇರುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ.

ಈ ತೀರ್ಪಿನ ಕುರಿತು ಮಾಡಲಾದ ಮುಖ್ಯ ಆಕ್ಷೇಪಣೆಯೆಂದರೆ ರಾಷ್ಟ್ರಪತಿಗಳಿಗೇ ಕಾಲಮಿತಿ ನಿರ್ಧರಿಸುವ ಮೂಲಕ ಸುಪ್ರೀಂ ಕೋರ್ಟು ತನ್ನ ಅಧಿಕಾರದ ಎಲ್ಲೆಯನ್ನು ಮೀರಿದೆ ಎಂಬುದು. ಕಾನೂನಿನ ಪ್ರಶ್ನೆಯನ್ನು ಬದಿಗಿರಿಸಿ ವಿಚಾರ ಮಾಡುವುದಾದರೆ, ತಮ್ಮನ್ನು ಆರಿಸಿ ಕಳಿಸಿದ ಜನರ ಆಶೋತ್ತರಗಳನ್ನು ಈಡೇರಿಸುವ ಮತ್ತು ಅವರ ಹಿತ ಕಾಯುವ ನಿಟ್ಟಿನಲ್ಲಿ ಶಾಸನಗಳನ್ನು ಜಾರಿಮಾಡುವ ಹೊಣೆ ಜನಪ್ರತಿನಿಧಿಗಳಿಗೆ ಇರುತ್ತದೆ.

ಅದಕ್ಕಾಗಿಯೇ ಸಂಸತ್ತು ಮತ್ತು ಶಾಸನ ಸಭೆಗಳಿಗೆ ಪರಮೋಚ್ಚ ಅಧಿಕಾರ ನೀಡಲಾಗಿದೆ. ಅಂಥ ವಿಧೇಯಕಗಳನ್ನು ಸಕಾರಣವಿಲ್ಲದೆ ರಾಜ್ಯಪಾಲರಾಗಲೀ ರಾಷ್ಟ್ರಪತಿಗಳಾಗಲೀ ಅನಿರ್ದಿಷ್ಟ ಅವಧಿಗೆ ಇಟ್ಟುಕೊಂಡರೆ ಅಂಥ ಶಾಸನಸಭೆಗಳು ಅಂಗೀಕರಿಸಿದ ಮಸೂದೆಗಳ ವಿರುದ್ಧ ರಾಜ್ಯಪಾಲರು VETO ಯೋಗಿಸಿದಂತಾಗುತ್ತದೆ. ಕಾಲಮಿತಿ ನಿಗದಿಪಡಿಸುವುದು 200 ಮತ್ತು 201ನೇ ವಿಧಿಗಳ ಆಶಯಕ್ಕೆ ಮತ್ತು ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಪೂರಕವಾಗುತ್ತದೆ ಹೊರತು ಸಂವಿಧಾನಕ್ಕೆ ತಿದ್ದುಪಡಿ ಮಾಡಿದಂತಾಗುವುದಿಲ್ಲ.

ಈ ಹಿಂದೆ ಕೇಂದ್ರ ರಾಜ್ಯ ಸಂಬಂಧಗಳ ಕುರಿತು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಕಾಲದಲ್ಲಿ ನೇಮಕವಾಗಿದ್ದ ಸರ್ಕಾರಿಯಾ ಆಯೋಗ ಕೂಡಾ ಇಂಥ ಶಿಫಾರಸು ಮಾಡಿತ್ತು ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ. ಯಾವುದೇ ಮಸೂದೆಯ ರಾಜಕೀಯ ಪರಿಣಾಮ ವನ್ನು ಲೆಕ್ಕಿಸಿ ರಾಜ್ಯಪಾಲರು ಅಥವಾ ರಾಷ್ಟ್ರಪತಿಗಳು ಅಂಥ ವಿಧೇಯಕಗಳು ಕಾನೂನಾಗುವುದರ ವಿರುದ್ಧ ಕೆಲಸಮಾಡುವುದು ಪಕ್ಷಪಾತದ ಮತ್ತು ದುರುದ್ದೇಶದ ಕ್ರಮವಾಗುತ್ತದೆ.

ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳು ಬೇರೆ ಬೇರೆಯಾದಾಗ ಇಂಥ ಮುಸುಕಿನ ಗುದ್ದಾಟ ಮತ್ತು ಅಂತರ್ಯುದ್ಧಗಳು ನಡೆಯುತ್ತವೆ. ಆ ಕಾರಣಕ್ಕೆ ಸ್ಥಳೀಯ ಅವಶ್ಯಕತೆ ಗಳು ಮತ್ತು ಆಡಳಿತ ವ್ಯವಸ್ಥೆಯ ಮೇಲೆ ಪರಿಣಾಮವಾಗುವಂಥ ಪರಿಸ್ಥಿತಿ ನಿರ್ಮಾಣ ವಾಗಿ ರಾಜ್ಯ ಸರಕಾರಗಳು ಅಸಹಾಯಕವಾಗ ಬಾರದು. ಇದು ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಗೆ ಅಪಾಯಕಾರಿ. ಆದ್ದರಿಂದ ಅಂಥ ಸಂದರ್ಭಗಳಲ್ಲಿ ನ್ಯಾಯಾಂಗದ ಮಧ್ಯಪ್ರವೇಶ ಖಂಡಿತ ಅಪೇಕ್ಷಣೀಯ ಮತ್ತು ಸಂವಿಧಾನದ ಆಶಯ, ಶಾಸನಸಭೆಗಳ ಘನತೆ ಮತ್ತು ಜನಪ್ರತಿನಿಧಿಗಳ ಅಭಿಪ್ರಾಯದ ದೃಷ್ಟಿಯಿಂದ ಅನಿವಾರ್ಯ ಕೂಡಾ. ಸಂವಿಧಾನದ ರಕ್ಷಣೆಯು ರಾಷ್ಟ್ರಪತಿಗಳ ಮತ್ತು ರಾಜ್ಯಪಾಲರ ಪ್ರಾಥಮಿಕ ಹೊಣೆಯಾಗಿದ್ದರೂ ಅವರುಗಳು ಹಾಗೆ ಮಾಡುವಲ್ಲಿ ತಪ್ಪಿದಲ್ಲಿ ನ್ಯಾಯಾಂಗ ಸಕ್ರಿಯವಾಗಬೇಕಾಗುತ್ತದೆ.

ರಾಷ್ಟ್ರಪತಿಗಳು ಸರಕಾರವನ್ನು ಪ್ರತಿನಿಧಿಸುತ್ತಾರೆ. ಅವರು ಸಾಮಾನ್ಯವಾಗಿ ಮಂತ್ರಿಮಂಡಲದ ಸಲಹೆಯ ಮೇರೆಗೆ ಕಾರ್ಯನಿ ರ್ವಹಿಸುತ್ತಾರೆ. ಹೀಗಾಗಿ ಅವರ ನಿರ್ಣಯಗಳ ಕುರಿತಾಗಿ ನೀಡಲಾಗುವ ಆದೇಶಗಳು ವಾಸ್ತವದಲ್ಲಿ ಸರಕಾರಕ್ಕೆ ನೀಡುವ ಆದೇಶವಾಗುತ್ತದೆಯೇ ಹೊರತು ವೈಯಕ್ತಿಕವಾಗಿ ರಾಷ್ಟ್ರಪತಿಗಳಿಗಲ್ಲ. ನ್ಯಾಯಾಲಯದ ಆದೇಶಗಳನ್ನು ಈ ಹಿನ್ನೆಲೆಯಲ್ಲಿ ಪರಿಗಣಿಸಬೇಕಲ್ಲದೆ ಅದು ಅಧಿಕಾರದ ಎಲ್ಲೆ ಮೀರಿದೆ ಎಂದಲ್ಲ. ನ್ಯಾಯಾಂಗದ ಅತಿ ಕ್ರಿಯಾ ಶೀಲತೆ ಶಾಸಕಾಂಗ ಮತ್ತು ಕಾರ್ಯಾಂಗಗಳ ಅಧಿಕಾರ ವ್ಯಾಪ್ತಿಯ ಅತಿಕ್ರಮಣ ವೆಂದೆನಿಸಿದರೂ ಸಂವಿಧಾನದ ಆಶಯ ಮತ್ತು ವಿಧಿಗಳ ಅನುಷ್ಠಾನ ಮತ್ತು ರಕ್ಷಣೆಯ ಹೊಣೆಗಾರಿಕೆಯನ್ನು ಪೂರ್ತಿಯಾಗಿ ಕೇವಲ ರಾಜಕೀಯ ವ್ಯಕ್ತಿಗಳ ಕೈಯಲ್ಲಿ ಬಿಡುವುದು ಸುರಕ್ಷಿತವಲ್ಲ ಎಂಬುದೂ ಅಷ್ಟೇ ಸತ್ಯ.

ರಾಜಕಾರಣಿಗಳು ಮತ್ತು ನ್ಯಾಯಾಲಯಗಳ ನಡುವಿನ ತುಲನೆಯಲ್ಲಿ ಭಾರತದ ನ್ಯಾಯಾಂಗದ ಪ್ರಾಮಾಣಿಕತೆ ಹಾಗೂ ವಿಶ್ವಾಸಾರ್ಹತೆ ಮೇಲ್ಮಟ್ಟದ್ದು ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ನ್ಯಾಯಮೂರ್ತಿ ವರ್ಮಾರವರ ಮನೆಯಲ್ಲಿ ಕಂಡ ಹಣದ ವಿಚಾರ ಕೆಲವು ಅಪವಾದಗಳ ಪೈಕಿ ಒಂದಾಗಿರಬಹುದು. ಆ ವಿಷಯದಲ್ಲಿ ತ್ವರಿತ ವಿಚಾರಣೆಯಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಭಾರತದ ಪ್ರಜಾಪ್ರಭುತ್ವದ ರಕ್ಷಣೆ ಮತ್ತು ದೇಶದ ಹಿತಾಸಕ್ತಿಯ ಅನೇಕ ವಿಷಯ ಗಳಲ್ಲಿ ನ್ಯಾಯಾಂಗ ತೋರಿದ ಬದ್ಧತೆಗೆ ಸುದೀರ್ಘ ಇತಿಹಾಸವೇ ಸಾಕ್ಷಿ.

(ಲೇಖಕರು ಕಾನೂನು ತಜ್ಞರು ಮತ್ತು ಕೆವಿಜಿ ಬ್ಯಾಂಕ್‌ನ ನಿವೃತ್ತ ಎಜಿಎಂ)