ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Benefits of Tender Coconut: ಎಳನೀರು ಹೀರುವುದರ ಲಾಭಗಳು ನೂರಾರು

Health Tips: ಎಲ್ಲೆಡೆ ಬಿಸಿಲಿ ಝಳ ಹೆಚ್ಚಾಗತೊಡಗಿದ್ದು, ಪ್ರತಿಯೊಬ್ಬರು ರಳನೀರು ಎಲ್ಲಿದೆ ಎನ್ನುವುದನ್ನು ಹುಡುಕಲು ತೊಡಗಿದ್ದಾರೆ. ಬೇಸಿಗೆಯ ದಾಹ ಇಂಗಿಸಿ, ಬಿಸಿಲಿನ ತಾಪದಲ್ಲೂ ದೇಹವನ್ನು ತಂಪಾಗಿಸಿ, ಬಳಲಿದವರಿಗೆ ಚೈತನ್ಯ ನೀಡುವ ಈ ಎಳನೀರು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಉತ್ತಮ ಎನಿಸಿಕೊಂಡಿದೆ.

ಎಳನೀರು ಹೀರುವುದರ ಲಾಭಗಳು ನೂರಾರು

ಎಳನೀರು.

Profile Ramesh B May 1, 2025 6:00 AM

ಬೆಂಗಳೂರು: ಬಿಸಿಲು ಜೋರಾಗುತ್ತಿದ್ದಂತೆ ಎಲ್ಲೆಡೆ ಎಳನೀರಿಗೆ (Tender Coconut) ಬೇಡಿಕೆ ಹೆಚ್ಚಾಗಿದೆ. ಬೆಳಗ್ಗೆ ರಾಶಿ ಹಾಕಿದಂತೆ ಕಾಣುವ ಎಳನೀರು ಮಧ್ಯಾಹ್ನ ಎನ್ನುವಷ್ಟರಲ್ಲಿ ಬರಿದಾಗಿರುತ್ತದೆ. ಸಂಜೆಯ ಹೊತ್ತಿಗೆ ಬೇಕೆಂದರೂ ಸಿಗುವುದು ಕಷ್ಟ ಎನ್ನುವಂತಾಗುತ್ತದೆ. ಬೇಸಿಗೆಯ ದಾಹ ಇಂಗಿಸಿ, ಬಿಸಿಲಿನ ತಾಪದಲ್ಲೂ ದೇಹವನ್ನು ತಂಪಾಗಿಸಿ, ಬಳಲಿದವರಿಗೆ ಚೈತನ್ಯ ನೀಡುವ ಈ ಎಳನೀರು ಬೇಸಿಗೆಯ ಜೀವಜಲ ಎಂದರೆ ಹೆಚ್ಚಲ್ಲ (Benefits of Tender Coconut). ಕುಡಿಯುತ್ತಿದ್ದಂತೆ ಆರಾಮ ನೀಡುವ ಈ ಎಳನೀರಿನಲ್ಲಿ ಏನುಂಟು? ಇದನ್ನು ಕುಡಿಯುವುದರಿಂದ ದೇಹಕ್ಕಾಗುವ ಲಾಭಗಳೇನು?

ಸತ್ವಗಳೇನು?

ಸುಮಾರು ಕಾಲು ಲೀ. ಎಳನೀರಿನಲ್ಲಿ 60 ಕ್ಯಾಲರಿ ಶಕ್ತಿ ದೊರೆಯುತ್ತದೆ. ಜತೆಗೆ 15 ಗ್ರಾಂ ಪಿಷ್ಟ, 8 ಗ್ರಾಂ ಸಕ್ಕರೆ, ನಿತ್ಯ ದೇಹಕ್ಕೆ ಬೇಕಾದ ಶೇ. 15ರಷ್ಟು ಪೊಟಾಶಿಯಂ, ಅದೇ ಪ್ರಮಾಣದಲ್ಲಿ ಶೇ. 4ರಷ್ಟು ಕ್ಯಾಲ್ಶಿಯಂ, ಶೇ. 4ರಷ್ಟು ಮೆಗ್ನೀಶಿಯಂ, ಶೇ. 2ರಷ್ಟು ಫಾಸ್ಫರಸ್‌ ಮುಖ್ಯವಾಗಿ ದೊರೆಯುತ್ತದೆ.

ಈ ಸುದ್ದಿಯನ್ನೂ ಓದಿ: Mango Fruit: ದಿನಕ್ಕೆ ಎಷ್ಟು ಮಾವಿನ ಹಣ್ಣು ತಿನ್ನಬಹುದು?

ಉತ್ಕರ್ಷಣ ನಿರೋಧಕಗಳು

ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಹಲವು ರೀತಿಯಲ್ಲಿ ದೇಹಕ್ಕೆ ಉಪಕಾರ ಮಾಡುತ್ತವೆ. ಉರಿಯೂತ ಶಮನ ಮಾಡುವುದೇ ಅಲ್ಲದೆ, ಕೊಲೆಸ್ಟ್ರಾಲ್‌ ಮಟ್ಟವನ್ನು ತಗ್ಗಿಸುವ ಸಾಮರ್ಥ್ಯ ಇದಕ್ಕಿದೆ ಎನ್ನುತ್ತವೆ ಕೆಲವು ಅಧ್ಯಯನಗಳು. ದೇಹದಲ್ಲಿನ ಮುಕ್ತ ಕಣಗಳನ್ನು ನಿರ್ಬಂಧಿಸುವದರ ಜೊತೆಗೆ, ಇನ್‌ಸುಲಿನ ಚೋದಕದ ಪ್ರತಿರೋಧವನ್ನು ತಗ್ಗಿಸುವ ಸಾಧ್ಯತೆ ಇದಕ್ಕಿದೆ.

ಮಧುಮೇಹ

ಪ್ರಾಣಿಗಳ ಮೇಲೆ ನಡೆಸಲಾದ ಕೆಲವು ಅಧ್ಯಯನಗಳಲ್ಲಿ, ಮಧುಮೇಹ ನಿಯಂತ್ರಣಕ್ಕೆ ಎಳನೀರು ಪೂರಕ ಎಂಬ ಅಂಶ ಕಂಡುಬಂದಿದೆ. ಇನ್‌ಸುಲಿನ್‌ ಪ್ರತಿರೋಧವನ್ನು ತಗ್ಗಿಸಿದ್ದು ಮಾತ್ರವಲ್ಲದೆ, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ ಎಳನೀರು ಎನ್ನುತ್ತವೆ ಈ ಅಧ್ಯಯನಗಳು. ಆದರೆ ಮಾನವರ ಮೇಲಿನ ಇಂಥ ಪ್ರಯೋಗಗಳ ಮೂಲಕ ಇದನ್ನು ದೃಢಪಡಿಸಿಕೊಳ್ಳಬೇಕಿದೆ. ಹಾಗಾಗಿ ಮಧುಮೇಹಿಗಳಿಗೆ ವೈದ್ಯರ ಸಲಹೆ ಅಗತ್ಯ.

ಕಿಡ್ನಿ ಕಲ್ಲು

ಮೂತ್ರಕೋಶದಲ್ಲಿ ಹರಳುಗಳಾದರೆ ಅತೀವ ನೋವು ತರುತ್ತದೆ. ದೇಹಕ್ಕೆ ಸಾಕಷ್ಟು ನೀರುಣಿಸುವುದು, ಆ ಮೂಲಕ ಬೇಡದ್ದನ್ನು ಹೊರಹಾಕಲು ಮೂತ್ರಕೋಶಗಳಿಗೆ ನೆರವಾಗುವುದು ಮುಖ್ಯವಾದ ಸಂಗತಿ. ನಿಯಮಿತವಾಗಿ ಎಳನೀರು ಸೇವಿಸುವುದರಿಂದ ಕಿಡ್ನಿಯಲ್ಲಿ ಕಲ್ಲುಗಳಾಗುವ ಪ್ರಮಾಣವನ್ನು ತಗ್ಗಿಸಬಹುದು. ಅಂದರೆ ದೇಹದಲ್ಲಿ ಪೊಟಾಶಿಯಂ, ಕ್ಲೋರೈಡ್‌ ಮತ್ತು ಸಿಟ್ರೇಟ್‌ಗಳು ಅಧಿಕ ಪ್ರಮಾಣದಲ್ಲಿ ಜಮೆಯಾಗದಂತೆ ಸ್ವಚ್ಛ ಮಾಡುತ್ತದೆ.

ಹೃದಯಕ್ಕೆ ಪೂರಕ

ರಕ್ತದ ಒತ್ತಡ ಹೆಚ್ಚದಂತೆ ತಡೆಯುವ ಸಾಧ್ಯತೆ ಎಳನೀರಿಗಿದೆ. ಇದರಲ್ಲಿ ಹೇರಳವಾಗಿರುವ ಪೊಟಾಶಿಯಂ ಅಂಶವೇ ಇದಕ್ಕೆ ಕಾರಣ. ಮಾತ್ರವಲ್ಲ, ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ ಅಂಶವನ್ನು ತಗ್ಗಿಸುವ ಸಾಮರ್ಥ್ಯ ಎಳನೀರಿಗಿದೆ ಎನ್ನುತ್ತವೆ ಕೆಲವು ಅಧ್ಯಯನಗಳು. ಆದರೆ ಅಧ್ಯಯನದಲ್ಲಿ ಇದಕ್ಕಾಗಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಎಳನೀರು ಸೇವಿಸುವಂತೆ ಮಾಡಲಾಗಿತ್ತು. ಅದನ್ನು ಸಾಮಾನ್ಯ ಸಂದರ್ಭಗಳಲ್ಲಿ ಸಮೀಕರಿಸುವುದು ಕಷ್ಟವಾದರೂ, ಹೃದಯದ ಆರೋಗ್ಯಕ್ಕೆ ಪೂರಕವಂತೂ ಹೌದು.

Tender Coconut

ನೈಸರ್ಗಿಕ ಮತ್ತು ರುಚಿಕರ

ಬೇಸಿಗೆಯೆಂಬ ನೆವಕ್ಕೆ ದಿನವಿಡೀ ನೀರನ್ನೇ ಕುಡಿಯುತ್ತಿರಲು ಸಾಧ್ಯವಿಲ್ಲ. ಪೌಷ್ಟಿಕವಾದ ಇನ್ನೇನಾದರೂ ಬೇಕಾಗುತ್ತದೆ. ಅದು ರುಚಿಕಟ್ಟಾಗಿಯೂ ಇದ್ದರೆ, ಶರೀರಕ್ಕೆ ನೀರುಣಿಸುವುದು ಕಷ್ಟವಾಗುವುದಿಲ್ಲ. ಸೆಕೆ ತೀವ್ರವಾದಾಗ, ಬಿಸಿಲಲ್ಲಿ ದಣಿದಾಗ, ವ್ಯಾಯಾಮ ಮಾಡಿ ಸುಸ್ತಾದಾಗ… ಹೀಗೆ ಹಲವು ಸಂದರ್ಭಗಳಲ್ಲಿ ದೇಹಕ್ಕೆ ಬೇಕಾದ ಎಲೆಕ್ಟ್ರೋಲೈಟ್‌ಗಳನ್ನು ಎಳನೀರು ಒದಗಿಸಿ, ಪೋಷಿಸುತ್ತದೆ. ದೇಹಕ್ಕೆ ಎಲೆಕ್ಟ್ರೊಲೈಟ್‌ಗಳನ್ನು ಒದಗಿಸಿ ಕೊಡುವ ಅತ್ಯಂತ ನೈಸರ್ಗಿಕ ವಿಧಾನವಿದು. ಕೃತಕ ಹೆಲ್ತ್‌ ಡ್ರಿಂಕ್‌ಗಳಲ್ಲಿನ ಹೆಚ್ಚುವರಿ ಸಕ್ಕರೆಯ ಗೋಜು ಇದರಲ್ಲಿಲ್ಲ. ಸೇರಿಸಿದ ಬಣ್ಣ, ರುಚಿಯ ಗೊಡವೆಯೂ ಇಲ್ಲ. ಎಕ್ಸ್‌ಪೈರಿ ಯಾವತ್ತು ಎಂದು ನೋಡುವ ರಗಳೆಯಿಲ್ಲ. ತಾಜಾ ಎಳನೀರನ್ನು ತೆಗೆಸಿದರಾಯ್ತು, ಕುಡಿದರಾಯ್ತು. ಸಂತೋಷಗೊಂಡ ದೇಹ ನಮಗೊಂದು ಥ್ಯಾಂಕ್ಸ್‌ ಹೇಳುತ್ತದೆ.