ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam Terror Attack: ಬಂದರಿಗೆ ಪ್ರವೇಶವಿಲ್ಲ, ರಸ್ತೆಯಲ್ಲಿ ಬರುವಂತಿಲ್ಲ, ವಾಯುಯಾನ ಬಳಸುವಂತಿಲ್ಲ...ಪಾಕಿಸ್ತಾನಿ ಸರಕುಗಳ ಪ್ರವೇಶಕ್ಕೆ ಇಲ್ಲ ಯಾವುದೇ ಅವಕಾಶ

ಏಪ್ರಿಲ್ 22ರಂದು ನಡೆದ ವಿನಾಶಕಾರಿ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ ಬಳಿಕ ಭಾರತವು ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಮುಂದುವರಿದ ಭಾಗವಾಗಿ ಈಗ ಪಾಕಿಸ್ತಾನದಿಂದ ಎಲ್ಲ ಆಮದುಗಳನ್ನು ಸ್ಥಗಿತಗೊಳಿಸಲು ಕ್ರಮ ಕೈಗೊಂಡಿದೆ. ಪಾಕಿಸ್ತಾನದ ಹಡಗುಗಳು ಮತ್ತು ವಿಮಾನಯಾನ ಸಂಸ್ಥೆಗಳಿಗೆ ತನ್ನ ಬಂದರು ಮತ್ತು ವಾಯುಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಿದೆ.

ಪಾಕಿಸ್ತಾನದ ಆದಾಯದ ಮೂಲಕ್ಕೆ  ಹೊಡೆತ ನೀಡಿದ ಭಾರತ

ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನ (Pahalgam) ಬೈಸರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಯು (Terrorists Attack) ಉಗ್ರರಿಗೆ ಸದಾ ರಕ್ಷಣೆ, ಬೆಂಬಲ ನೀಡುವ ಪಾಕಿಸ್ತಾನಕ್ಕೆ (Pakistan) ಭವಿಷ್ಯದಲ್ಲಿ ಭಾರಿ ಸಂಕಷ್ಟವನ್ನು ತಂದೊಡ್ಡಲಿದೆ. ಏಪ್ರಿಲ್ 22ರಂದು ನಡೆದ ವಿನಾಶಕಾರಿ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ ಬಳಿಕ ಭಾರತವು ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಮುಂದುವರಿದ ಭಾಗವಾಗಿ ಈಗ ಪಾಕಿಸ್ತಾನದಿಂದ ಎಲ್ಲ ಆಮದುಗಳನ್ನು ಸ್ಥಗಿತಗೊಳಿಸಲು ಕ್ರಮ ಕೈಗೊಂಡಿದೆ. ಪಾಕಿಸ್ತಾನದ ಹಡಗುಗಳು ಮತ್ತು ವಿಮಾನಯಾನ ಸಂಸ್ಥೆಗಳಿಗೆ ತನ್ನ ಬಂದರು ಮತ್ತು ವಾಯುಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಿದೆ.

ಬೈಸರನ್ ಕಣಿವೆಯಲ್ಲಿ ನಾಗರಿಕರ ಜೀವಗಳನ್ನು ಬಲಿ ತೆಗೆದುಕೊಂಡ ದಾಳಿಗೆ ಭಾರತದ ಪ್ರತಿಯಾಗಿ ಪಾಕಿಸ್ತಾನಕ್ಕೆ ಮಿಲಿಟರಿ ದಾಳಿ ಮೂಲಕವಲ್ಲ ರಾಜತಾಂತ್ರಿಕ ದಾಳಿ ನಡೆಸುತ್ತಿದೆ. ಭಯೋತ್ಪಾದನೆಗೆ ಅವಕಾಶ ನೀಡಿರುವ ಪಾಕಿಸ್ತಾನದ ಆರ್ಥಿಕ ಬಲವನ್ನು ಸಂಪೂರ್ಣ ಕುಗ್ಗಿಸುವ ಪ್ರಯತ್ನವನ್ನು ಭಾರತ ಮಾಡುತ್ತಿದೆ.

ಭಾರತದ ರಾಜತಾಂತ್ರಿಕ ಕ್ರಮಗಳು ಈಗಾಗಲೇ ಪಾಕಿಸ್ತಾನದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿವೆ. ಭಯೋತ್ಪಾದಕ ದಾಳಿಯ ಅನಂತರ ಭಾರತವು ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಿತು. ಇದು ಪಾಕಿಸ್ತಾನದ ಕೃಷಿ ಮತ್ತು ನೀರು ಸರಬರಾಜಿನ ಮೇಲೆ ಗಂಭೀರ ಪರಿಣಾಮವನ್ನು ಉಂಟು ಮಾಡಿದೆ. ಈಗ ಪಾಕಿಸ್ತಾನದಿಂದ ಎಲ್ಲ ಆಮದುಗಳ ಮೇಲಿನ ಭಾರತದ ನಿಷೇಧವು ಪಾಕಿಸ್ತಾನದ ಔದ್ಯೋಗಿಕ ವಲಯಗಳ ಮೇಲೆ ಪರಿಣಾಮ ಬೀರಲಿದೆ.

ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ನೀತಿಯ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಯಾಗುವಂತೆ ಪಾಕಿಸ್ತಾನದಿಂದ ಎಲ್ಲ ಸರಕುಗಳ ನೇರ ಅಥವಾ ಪರೋಕ್ಷ ಆಮದಿನ ಮೇಲೆ ಭಾರತ ನಿಷೇಧ ಹೇರಿದೆ. ಇದರಿಂದ ಪಾಕಿಸ್ತಾನದಿಂದ ಭಾರತಕ್ಕೆ ಬರುವ ಎಲ್ಲ ಸರಕು ಸಾಗಣೆ ಸಂಪೂರ್ಣವಾಗಿ ನಿಲ್ಲಲಿದೆ.

ಪಾಕಿಸ್ತಾನ ಧ್ವಜ ಹೊಂದಿರುವ ಎಲ್ಲ ಹಡಗುಗಳು ತನ್ನ ಬಂದರುಗಳಿಗೆ ಪ್ರವೇಶಿಸುವುದನ್ನು ಭಾರತ ನಿಷೇಧಿಸಿದೆ. ಅಲ್ಲದೇ ಎಲ್ಲ ಭಾರತೀಯ ಹಡಗುಗಳು ಪಾಕಿಸ್ತಾನಿ ಬಂದರುಗಳಿಗೆ ಪ್ರವೇಶಿಸುವುದನ್ನು ಸಹ ನಿಷೇಧಿಸಲಾಗಿದೆ. ಈ ಮೂಲಕ ಭಾರತೀಯ ಆಸ್ತಿ, ಸರಕು ಮತ್ತು ಸಂಪರ್ಕಿತ ಮೂಲಸೌಕರ್ಯಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಭಾರತೀಯ ಹಡಗು ಸಾಗಣೆಯ ಹಿತಾಸಕ್ತಿಗಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ ತಿಳಿಸಿದೆ.

ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದ್ದ ಪಾಕಿಸ್ತಾನದ ನಿರ್ಧಾರಕ್ಕೆ ಪ್ರತಿಯಾಗಿ ಭಾರತವು ಈಗ ಪಾಕಿಸ್ತಾನ ಮೂಲದ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ ಎಲ್ಲ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಇದರಿಂದಾಗಿ ಪಾಕಿಸ್ತಾನ್ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್ ವಿಮಾನಗಳನ್ನು ಚೀನಾ ಮೂಲಕ ಕೌಲಾಲಂಪುರ ಸೇರಿದಂತೆ ವಿವಿಧ ಸ್ಥಳಗಳಿಗೆ ತೆರಳಬೇಕಾಗುತ್ತದೆ. ಇದು ಹೆಚ್ಚುವರಿ ಸಮಯ ಮತ್ತು ವೆಚ್ಚಗಳಿಗೆ ಕಾರಣವಾಗುತ್ತದೆ.

Pa

ಪಾಕಿಸ್ತಾನದ ಆರ್ಥಿಕತೆ ಮೇಲೆ ದಾಳಿ

  • 2019ರಲ್ಲಿ ನಡೆದ ಪುಲ್ವಾಮಾ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ವ್ಯಾಪಾರ ವಹಿವಾಟುಗಳು ಕಡಿಮೆಯಾಗಿದೆ. 2024-25ರ ಆರ್ಥಿಕ ವರ್ಷದಲ್ಲಿ ಪಾಕಿಸ್ತಾನಕ್ಕೆ ಭಾರತದ ರಫ್ತು ಕೇವಲ 44.765 ಕೋಟಿ ರೂ. ಗಳಾಗಿತ್ತು. ಆಮದು ಕೇವಲ 0.042 ಕೋಟಿ ರೂ.
  • 2023-24ರಲ್ಲಿ ಭಾರತದ ರಫ್ತು118 ಕೋಟಿ ರೂ. ಆಗಿದ್ದು, ಆಮದು 0.288 ಕೋಟಿ ರೂ. ಆಗಿತ್ತು. ಇದು ಪಾಕಿಸ್ತಾನದ ಒಟ್ಟು ಜಾಗತಿಕ ವ್ಯಾಪಾರದ ಕೇವಲ ಶೇ. 0.1 ಮಾತ್ರ.
  • 2024-25ರ ಆರ್ಥಿಕ ವರ್ಷದಲ್ಲಿ ಭಾರತವು ಪಾಕಿಸ್ತಾನದಿಂದ ಹಣ್ಣು, ಬೀಜ, ಎಣ್ಣೆ ಬೀಜಗಳು ಮತ್ತು ಔಷಧೀಯ ಸಸ್ಯ ಮತ್ತು ಸಾವಯವ ರಾಸಾಯನಿಕಗಳನ್ನು ಮಾತ್ರ ಆಮದು ಮಾಡಿಕೊಂಡಿದೆ. ಆದರೆ ಪಾಕಿಸ್ತಾನದ ಹಲವಾರು ಕೈಗಾರಿಕೆಗಳು ಭಾರತೀಯ ಆಮದುಗಳ ಮೇಲೆ ಹೆಚ್ಚು ಅವಲಂಬಿತವಾಗಿವೆ. ವಿಶೇಷವಾಗಿ ಸಾವಯವ ರಾಸಾಯನಿಕಗಳು ಮತ್ತು ಔಷಧ ಉತ್ಪನ್ನಗಳು ಇದರಲ್ಲಿ ಸೇರಿವೆ.
  • ಇದಲ್ಲದೆ ಸಕ್ಕರೆ ಮಿಠಾಯಿ, ತರಕಾರಿಗಳು, ಕಾಫಿ, ಚಹಾ ಮತ್ತು ಮಸಾಲೆಗಳು, ಧಾನ್ಯಗಳು, ಪೆಟ್ರೋಲಿಯಂ ಉತ್ಪನ್ನಗಳು, ರಸಗೊಬ್ಬರ, ಪ್ಲಾಸ್ಟಿಕ್, ರಬ್ಬರ್ ಸೇರಿದಂತೆ ಇನ್ನು ಕೆಲವು ವಸ್ತುಗಳಿಗೆ ಪಾಕಿಸ್ತಾನ ಭಾರತದ ಮೇಲೆ ಅವಲಂಬಿತವಾಗಿತ್ತು.
attari
  • ಈಗಾಗಲೇ ಭಾರತವು ಪಾಕಿಸ್ತಾನದ ಸರಕುಗಳಿಗೆ ಅಟ್ಟಾರಿ ಭೂ-ಸಾರಿಗೆ ಪೋಸ್ಟ್ ಮುಚ್ಚಿರುವುದರಿಂದ ಪಾಕಿಸ್ತಾನದಲ್ಲಿ ಔಷಧ, ರಾಸಾಯನಿಕ ಮತ್ತು ಆಹಾರ ವಲಯಗಳಲ್ಲಿ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.
  • ಆಹಾರ ಕೊರತೆ, ಹಣದುಬ್ಬರದಿಂದಾಗಿ ಸಂಕಷ್ಟದಲ್ಲಿರುವ ಈ ದೇಶಕ್ಕೆ ಇದು ಭಾರಿ ಹೊಡೆತ ನೀಡುವ ಸಾಧ್ಯತೆ ಇದೆ. ಪಾಕಿಸ್ತಾನವು ಬೇರೆ ಮಾರ್ಗಗಳ ಮೂಲಕ ಭಾರತಕ್ಕೆ ವಸ್ತುಗಳನ್ನು ರಫ್ತು ಮಾಡದಂತೆ ಭಾರತ ನಿಗಾ ವಹಿಸಿದೆ.

ಇದನ್ನೂ ಓದಿ: Viral News: 100 ಬಾರಿ ಹಾವಿನಿಂದ ಕಚ್ಚಿಸಿಕೊಂಡವನ ರಕ್ತ ಇದೀಗ ಹಾವು ಕಡಿತಕ್ಕೆ ರಾಮಬಾಣ!

  • ಭಾರತದ ಬಂದರುಗಳಿಗೆ ಪಾಕಿಸ್ತಾನಿ ಹಡಗುಗಳು ಪ್ರವೇಶಿಸದಂತೆ ಹೇರಿರುವ ನಿಷೇಧವು ಕೂಡ ಪಾಕಿಸ್ತಾನದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ. ಯಾಕೆಂದರೆ ಆ ಹಡಗುಗಳು ಪರ್ಯಾಯ ಮಾರ್ಗ ಹುಡುಕಬೇಕಾಗುತ್ತದೆ. ಇದರಿಂದ ಸರಕು ಸಾಗಣೆ ಸಮಯ, ವೆಚ್ಚದ ಮೇಲೆ ಪರಿಣಾಮ ಬೀರಲಿದೆ.
  • ಪಾಕಿಸ್ತಾನಿ ವಿಮಾನಯಾನ ಸಂಸ್ಥೆಗಳಿಗೂ ಭಾರತದ ವಾಯುಪ್ರದೇಶ ಮುಚ್ಚಿರುವುದರಿಂದ ಇದು ವಿಮಾನ ಪ್ರಯಾಣದ ಅವಧಿ, ಇಂಧನ ಬಳಕೆ, ವೇಳಾಪಟ್ಟಿ ಮತ್ತು ಟಿಕೆಟ್ ಬೆಲೆಯ ಮೇಲೆ ಪರಿಣಾಮ ಬೀರಲಿದೆ.
  • ಈ ನಡುವೆ ಪಾಕಿಸ್ತಾನ ಮತ್ತು ಭಾರತದ ನಡುವೆ ಉದ್ವಿಗ್ನತೆ ಹೆಚ್ಚಾಗಿರುವುದರಿಂದ ಹಲವಾರು ಪಾಶ್ಚಿಮಾತ್ಯ ವಿಮಾನಯಾನ ಸಂಸ್ಥೆಗಳು ಪಾಕಿಸ್ತಾನದ ವಾಯುಪ್ರದೇಶ ಬಳಸುವುದನ್ನು ತಪ್ಪಿಸಿಕೊಳ್ಳುತ್ತಿವೆ. ಇದರಿಂದಲೂ ಪಾಕಿಸ್ತಾನವು ಲಕ್ಷಾಂತರ ರೂ. ನಷ್ಟವನ್ನು ಅನುಭವಿಸುತ್ತಿದೆ.