ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಕೊನೆಗೂ ಮಣಿದ ಜತ್ತಿ

ಮಧು ಲಿಮಯೆ ಮತ್ತು ನಗರಕರ್ ಅವರೊಂದಿಗೆ ಫೋನಿನಲ್ಲಿ ಮಾತಾಡಿದ ಬಳಿಕ ಜಾರ್ಜ್ ಫೆರ್ನಾಂಡಿಸ್ ಜಾಗೃತರಾದರು. ಅವರ ತಲೆಯಲ್ಲಿ ನೂರಾರು ಆಲೋಚನೆಗಳು ಹಾದು ಹೋದವು. ತಕ್ಷಣ ಇಂಟೆಲಿಜೆನ್ಸ್ ವಿಭಾಗದ ತಮ್ಮ ನಂಬುಗಸ್ಥ ಅಧಿಕಾರಿಯನ್ನು ಕರೆದು, ‘ಸರಕಾರವನ್ನು ಪದಚ್ಯುತಗೊಳಿಸಲು, ಸೇನೆ ಅಥವಾ ಅರೆಸೇನಾ ಪಡೆ ಕ್ಷಿಪ್ರಕ್ರಾಂತಿಯನ್ನು ಆಯೋಜಿಸುವ ತಂತ್ರವನ್ನೇ ನಾದರೂ ಹೆಣೆದಿದೆಯಾ ಎಂಬ ಬಗ್ಗೆ ನನಗೆ ಎಲ್ಲ ಮಾಹಿತಿ ಬೇಕು’ ಎಂದು ಹೇಳಿದರು

ಕೊನೆಗೂ ಮಣಿದ ಜತ್ತಿ

ಸಂಪಾದಕರ ಸದ್ಯಶೋಧನೆ

ಆ ರಾತ್ರಿ ಮಧು ಲಿಮಯೆ ಮತ್ತು ನಗರಕರ್ ಅವರೊಂದಿಗೆ ಫೋನಿನಲ್ಲಿ ಮಾತಾಡಿದ ಬಳಿಕ ಜಾರ್ಜ್ ಫೆರ್ನಾಂಡಿಸ್ ಜಾಗೃತರಾದರು. ಅವರ ತಲೆಯಲ್ಲಿ ನೂರಾರು ಆಲೋಚನೆಗಳು ಹಾದು ಹೋದವು. ತಕ್ಷಣ ಇಂಟೆಲಿಜೆನ್ಸ್ ವಿಭಾಗದ ತಮ್ಮ ನಂಬುಗಸ್ಥ ಅಧಿಕಾರಿಯನ್ನು ಕರೆದು, ‘ಸರಕಾರ ವನ್ನು ಪದಚ್ಯುತಗೊಳಿಸಲು, ಸೇನೆ ಅಥವಾ ಅರೆಸೇನಾ ಪಡೆ ಕ್ಷಿಪ್ರಕ್ರಾಂತಿಯನ್ನು ಆಯೋಜಿಸುವ ತಂತ್ರವನ್ನೇನಾದರೂ ಹೆಣೆದಿದೆಯಾ ಎಂಬ ಬಗ್ಗೆ ನನಗೆ ಎಲ್ಲ ಮಾಹಿತಿ ಬೇಕು’ ಎಂದು ಹೇಳಿದರು. ಫೆರ್ನಾಂಡಿಸ್ ಅವರ ಆದೇಶ ಹೇಗಿತ್ತೆಂದರೆ, ಅವರು ತತ್‌ಕ್ಷಣ ಕಾರ್ಯತತ್ಪರರಾದರು. ಅವರು ತಮ್ಮ ಸ್ನೇಹಿತರ ಸ್ಕೂಟರ್ ಏರಿ ಕಾಂಗ್ರೆಸ್ ನಾಯಕರು, ಸೇನಾ ಭವನ, ಸೆಂಟ್ರಲ್ ಟೆಲಿಗ್ರಾಫ್ ಆಫೀಸ್, ಆಲ್ ಇಂಡಿಯಾ ರೇಡಿಯೋ, ಪಾರ್ಲಿಮೆಂಟ್ ಭವನ ಮುಂತಾದ ಪ್ರಮುಖ ಕಡೆಗಳಲ್ಲಿ ಖುದ್ದಾಗಿ ಹೋಗಿ ಏನಾದರೂ ಚಟುವಟಿಕೆಗಳು ನಡೆಯುತ್ತಿವೆಯಾ ಎಂಬುದನ್ನು ಖಾತ್ರಿಪಡಿಸಿ‌ ಕೊಂಡರು. ಅದಾಗಿ ಸುಮಾರು ಎರಡು ತಾಸಿನ ಬಳಿಕ, ಮಧ್ಯರಾತ್ರಿ ಸುಮಾರು ಒಂದೂವರೆ ಹೊತ್ತಿಗೆ ವಾಪಸ್ ಬಂದು ಫೆರ್ನಾಂಡಿಸ್ ಅವರಿಗೆ ವರದಿ ಒಪ್ಪಿಸಿದರು.

ಇದನ್ನೂ ಓದಿ: Vishweshwar Bhat Column: ಡಿಜೆಐ ನಿಯೋ ಡ್ರೋನ್

‘ಅಂಥ ಯಾವ ಚಟುವಟಿಕೆಗಳೂ ನಡೆಯುತ್ತಿಲ್ಲ, ಗಾಬರಿಯಾಗುವ ಅಗತ್ಯವಿಲ್ಲ’ ಎಂದು ಹೇಳಿದರು. ಇಂಥ ಸ್ಥಿತಿಯಲ್ಲಿ ಜಗತ್ತಿನ ಹಲವು ದೇಶಗಳಲ್ಲಿ ಚುನಾಯಿತ ಸರಕಾರವನ್ನು ಸೇನಾಪಡೆ ಕಿತ್ತೆಸೆದ ನಿದರ್ಶನಗಳಿರುವುದರಿಂದ ಯಾವ ಕಾರಣಕ್ಕೂ ಚಾನ್ಸ್ ತೆಗೆದುಕೊಳ್ಳುವುದು ಬೇಡ ಎಂದು ಫೆರ್ನಾಂಡಿಸ್ ನಿರ್ಧರಿಸಿದ್ದರು. ಈ ವಿಷಯವನ್ನು ಅವರು ಪ್ರಧಾನಿ ಮೊರಾರ್ಜಿ ದೇಸಾಯಿ ಅವರಿಗೂ ತಿಳಿಸಿರಲಿಲ್ಲ. ಕಾರಣ ಆ ಹೊತ್ತಿನಲ್ಲಿ ಪ್ರಧಾನಿ ಮಾತಿಗೆ ಸಿಗುವುದಿಲ್ಲ ಎಂಬುದು ಗೊತ್ತಿತ್ತು.

ಮರುದಿನ 1977ರ ಮೇ 1, ಬೆಳಗಾಗುತ್ತಿದಂತೆ ಫೆರ್ನಾಂಡಿಸ್ ಕ್ರಿಯಾಶೀಲರಾದರು. ಸುಮಾರು ಮುನ್ನೂರು ಸೋಷಲಿಸ್ಟ್ ಹಿನ್ನೆಲೆಯ ಯುವಕರು ದಿಲ್ಲಿಯ ಬೀದಿಯಲ್ಲಿ ಜಮಾಯಿಸಿದ್ದರು. ಅವರು ರೈಸಿನಾ ಹಿಲ್ ಕಡೆ ಹೆಜ್ಜೆ ಹಾಕಲಾರಂಭಿಸಿದ್ದರು. ರಾಷ್ಟ್ರಪತಿ ಭವನದ ಮುಂದೆ ಜಮಾ ಯಿಸಿದ ಅವರು, ಹಂಗಾಮಿ ರಾಷ್ಟ್ರಪತಿ ಬಿ.ಡಿ.ಜತ್ತಿ ಅವರ ರಾಜೀನಾಮೆಗೆ ಆಗ್ರಹಿಸಿದರು. ಈ ಮಧ್ಯೆ ರಾಷ್ಟ್ರಪತಿ ಭವನದ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದ ಫೆರ್ನಾಂಡಿಸ್, ಕೇಂದ್ರ ಸಚಿವ ಸಂಪುಟದ ಶಿಫಾರಸಿನಂತೆ, ಕಾಂಗ್ರೆಸ್ ಆಡಳಿತವಿರುವ ಒಂಬತ್ತು ರಾಜ್ಯ ಸರಕಾರಗಳನ್ನು ವಜಾ ಗೊಳಿಸದಿದ್ದರೆ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ; ಕೊನೆಯಲ್ಲಿ ಮುಖಭಂಗ ಅನುಭವಿ ಸುವ ಬದಲು, ಶಿಫಾರಸಿಗೆ ಅಂಕಿತ ಹಾಕುವುದು ವಾಸಿ ಎಂಬ ಸಂದೇಶವನ್ನು ಜತ್ತಿಯವರಿಗೆ ರವಾನಿಸಿದರು.

ಅಷ್ಟೇ ಅಲ್ಲ, ತುರ್ತುಪರಿಸ್ಥಿತಿ ಸಂದರ್ಭದಲ್ಲಿ, ಕಾಂಗ್ರೆಸ್ ಸರಕಾರ ಮಾಡಿದ ಸಂವಿಧಾನದ ನಲವತ್ತೆರಡನೇ ತಿದ್ದುಪಡಿಯನ್ನು ಜತ್ತಿಯವರ ಗಮನಕ್ಕೆ ತರಲಾಯಿತು. ಆ ತಿದ್ದುಪಡಿ ಪ್ರಕಾರ, ಕೇಂದ್ರ ಸಚಿವ ಸಂಪುಟದ ನಿರ್ಧಾರಗಳಿಗೆ ರಾಷ್ಟ್ರಪತಿಯಾದವರು ಬಾಧ್ಯಸ್ಥರಾಗಿರಬೇಕು ಮತ್ತು ಶಿರಸಾ ಪಾಲಿಸಬೇಕು. ಈ ಅಂಶಗಳು ಜತ್ತಿಯವರನ್ನು ಕಟ್ಟಿ ಹಾಕಿಬಿಟ್ಟವು. ಅದೇ ರಾತ್ರಿ ಅವರು ಕಾಂಗ್ರೆಸ್ ಅಧಿಕಾರದಲ್ಲಿರುವ ಒಂಬತ್ತು ಸರಕಾರಗಳನ್ನು ವಜಾಗೊಳಿಸಿಬಿಟ್ಟರು.

1977ರ ಜೂನ್ 11ರಂದು ಆ ರಾಜ್ಯಗಳಲ್ಲಿ ಚುನಾವಣೆಯನ್ನು ಘೋಷಿಸಲಾಯಿತು. ಏಳು ರಾಜ್ಯ (ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ, ಹಿಮಾಚಲ ಪ್ರದೇಶ, ಬಿಹಾರ ಮತ್ತು ಒಡಿಶಾ)ಗಳಲ್ಲಿ ಜನತಾ ಪಕ್ಷದ ಸರಕಾರ ಅಸ್ತಿತ್ವಕ್ಕೆ ಬಂದಿತು. ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ಸರಕಾರ ಮತ್ತು ಪಂಜಾಬಿನಲ್ಲಿ ಅಕಾಲಿದಳ ಸರಕಾರ ಆಡಳಿತಕ್ಕೆ ಬಂದಿತು. ಅಂದರೆ ಒಂಬತ್ತೂ ರಾಜ್ಯಗಳಲ್ಲಿ ಕಾಂಗ್ರೆಸ್ ಸರಕಾರ ದಯನೀಯವಾಗಿ ಸೋತುಹೋಯಿತು.

ಲೋಕಸಭಾ ಚುನಾವಣೆಯ ಸೋಲಿನ ಕಹಿಯನ್ನು ಮರೆತು ಸಹಜ ಸ್ಥಿತಿಗೆ ಬರುತ್ತಿರುವಂತೆ, ಒಂಬತ್ತು ರಾಜ್ಯಗಳ ಸೋಲು ಇಂದಿರಾ ಗಾಂಧಿ ಅವರನ್ನು ಮತ್ತಷ್ಟು ಜರ್ಜರಿತರನ್ನಾಗಿ ಮಾಡಿತು.