Shubhanshu Shukla: ಭೂಮಿಯತ್ತ ಪ್ರಯಾಣ ಆರಂಭಿಸಿದ ಶುಭಾಂಶು ಶುಕ್ಲಾ- 22 ಗಂಟೆಗಳ ಸುದೀರ್ಘ ಯಾತ್ರೆ!
ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲ ಸೇರಿದಂತೆ ಆಕ್ಸಿಯಮ್-4 ಬಾಹ್ಯಾಕಾಶ ತಂಡದ ನಾಲ್ವರು ಸದಸ್ಯರು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 18 ದಿನಗಳ ಕಾಲ ಇದ್ದು, ಯಶಸ್ವಿ ಪ್ರಯೋಗ ನಡೆಸಿ ಸೋಮವಾರ ಸಂಜೆ 4:50ರ ಸುಮಾರಿಗೆ ಭೂಮಿಯತ್ತ ಪ್ರಯಾಣ ಆರಂಭಿಸಿದ್ದಾರೆ.

ಶುಭಾಂಶು ಶುಕ್ಲಾ

ನವದೆಹಲಿ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ (Shubhanshu Shukla) ಸೇರಿದಂತೆ ಆಕ್ಸಿಯಮ್-4 (Axiom-4 ) ಬಾಹ್ಯಾಕಾಶ ತಂಡದ ನಾಲ್ವರು ಸದಸ್ಯರು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (International Space Station) 18 ದಿನಗಳ ಕಾಲ ಇದ್ದು, ಸೋಮವಾರ ಸಂಜೆ 4:50ರ ಸುಮಾರಿಗೆ ಭೂಮಿಯತ್ತ ಪ್ರಯಾಣ ಆರಂಭಿಸಿದ್ದಾರೆ.
ಪಯಣದ ವಿವರ
ಡ್ರಾಗನ್ ಬಾಹ್ಯಾಕಾಶ ನೌಕೆಯು ಬಾಹ್ಯಾಕಾಶ ನಿಲ್ದಾಣದಿಂದ ಬೇರ್ಪಡುವಿಕೆಯು 4:15 ನಂತರ ನಡೆಯಲಿದೆ ಎಂದು NASA ತಿಳಿಸಿತ್ತು. ಕೆಲವು ಕಾರ್ಯಾಚರಣೆಗಳಲ್ಲಿ ವಿಳಂಬವಾದರೂ, ಯಾವುದೇ ತೊಡಕುಗಳಿಲ್ಲದೆ ಪ್ರಕ್ರಿಯೆ ಮುಂದುವರಿಯಿತು. ಈ ನೌಕೆಯು ಆಕ್ಸಿಯಮ್-4 ತಂಡದ ಜೊತೆಗೆ 250 ಕೆಜಿಗೂ ಅಧಿಕ ತೂಕದ ಸರಕು, ಉಪಕರಣಗಳು ಮತ್ತು ಹಲವು ಪ್ರಯೋಗಗಳ ಮಾದರಿಗಳನ್ನು ತೆಗೆದುಕೊಂಡು ಹೋಗಿತ್ತು.
ಭೂಮಿಗೆ ಆಗಮನ
ತಂಡವು ಮಂಗಳವಾರ ಮಧ್ಯಾಹ್ನ 3 ಗಂಟೆಗೆ (IST) ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಇಳಿಯಲಿದ್ದಾರೆ. "ಪಯಣವು ಸುಮಾರು 22 ಗಂಟೆ 30 ನಿಮಿಷಗಳ ಕಾಲ ಇರಲಿದೆ," ಎಂದು NASA ತಿಳಿಸಿದೆ. ಶುಭಾಂಶು ಶುಕ್ಲಾ ಪೈಲಟ್ ಆಗಿರುವ ಈ ಆಕ್ಸಿಯಮ್-4 ಯೋಜನೆಯು ಜೂನ್ 25ರಂದು ಎಲಾನ್ ಮಸ್ಕ್‌ರ ಸ್ಪೇಸ್‌ಎಕ್ಸ್‌ನ ಡ್ರಾಗನ್ ನೌಕೆಯ ಮೂಲಕ ಫ್ಲೋರಿಡಾದ NASA ಕೆನಡಿ ಸ್ಪೇಸ್ ಸೆಂಟರ್‌ನಿಂದ ಆರಂಭವಾಗಿತ್ತು.
22 ಗಂಟೆ 30 ನಿಮಿಷಗಳ ಯಾತ್ರೆ
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಬೇರ್ಪಟ್ಟ ನಂತರ, ಡ್ರಾಗನ್ ನೌಕೆಯು ಭೂಮಿಯ ವಾತಾವರಣಕ್ಕೆ ಪುನಃ ಪ್ರವೇಶಿಸಿ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಇಳಿಯಲು 22 ಗಂಟೆ 30 ನಿಮಿಷ ತೆಗೆದುಕೊಳ್ಳಲಿದೆ. NASA ಪ್ರಕಾರ, ಸೋಮವಾರ ಮಧ್ಯಾಹ್ನ 2 ಗಂಟೆಗೆ (IST) ಹ್ಯಾಚ್ ಮುಚ್ಚುವಿಕೆ ಆರಂಭವಾಗಲಿದೆ. ಎಲ್ಲಾ ಪೂರ್ವ-ನಿರ್ಗಮನ ಪರೀಕ್ಷೆಗಳ ನಂತರ, ಸ್ಪೇಸ್‌ಎಕ್ಸ್ ಡ್ರಾಗನ್ ಕ್ಯಾಪ್ಸೂಲ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಹಾರ್ಮನಿ ಮಾಡ್ಯೂಲ್‌ನಿಂದ 4:35ಕ್ಕೆ ಬೇರ್ಪಡಲಿದೆ. ಈ ಕಾರ್ಯಾಚರಣೆಗಳು ಸ್ವಯಂಚಾಲಿತವಾದರೂ, ಅನುಕೂಲಕರ ಹವಾಮಾನವು ಅಂತಿಮ ಅನುಮತಿಗೆ ನಿರ್ಣಾಯಕವಾಗಿದೆ.
ಈ ಸುದ್ದಿಯನ್ನು ಓದಿ: Shubhanshu Shukla: "ಸಾರೇ ಜಹಾನ್ ಸೇ ಅಚ್ಚಾ" ; ಭೂಮಿಗೆ ಮರಳುವ ಮುನ್ನ ವಿದಾಯದ ಸಂದೇಶ ಹಂಚಿಕೊಂಡ ಶುಭಾಂಶು
ಕುಟುಂಬದಲ್ಲಿ ಉತ್ಸಾಹ
ಲಕ್ನೋದಲ್ಲಿರುವ ಶುಭಾಂಶು ಶುಕ್ಲಾ ಅವರ ಕುಟುಂಬವು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದಾಗ ಅವರೊಂದಿಗಿನ ಸಂಭಾಷಣೆಯನ್ನು ನೆನಪಿಸಿಕೊಂಡಿದೆ. "ಅವನು ಬಾಹ್ಯಾಕಾಶದಲ್ಲಿ ಎಲ್ಲಿ ವಾಸಿಸುತ್ತಾನೆ, ಕೆಲಸ ಮಾಡುತ್ತಾನೆ, ಮಲಗುತ್ತಾನೆ ಎಂದು ತೋರಿಸಿದ. ಅಲ್ಲಿ ನಡೆಯುವುದಿಲ್ಲ, ಜನರು ಒಂದು ಸ್ಥಳದಿಂದ ಇನ್ನೊಂದಕ್ಕೆ ತೇಲುತ್ತಾರೆ. ಬೆಲ್ಟ್‌ನೊಂದಿಗೆ ಕಟ್ಟಿಹಾಕಿ ನಿಂತುಕೊಂಡು ಮಲಗುತ್ತಾರೆ," ಎಂದು ಶುಭಾಂಶು ಅವರ ತಂದೆ ಶಂಭು ದಯಾಳ್ ಶುಕ್ಲಾ ಹೇಳಿದ್ದಾರೆ. ಶುಭಾಂಶು ಅವರ ತಾಯಿ ಆಶಾ ದೇವಿ, "ಅವನು ನಮಗೆ ನಿರಂತರ ಸಂಪರ್ಕದಲ್ಲಿದ್ದ. ಶ್ರಾವಣದ ಮೊದಲ ಸೋಮವಾರದಂದು ನಾವು ಶಿವನ ದೇವಸ್ಥಾನದಲ್ಲಿ ಅವನ ಸುರಕ್ಷಿತ ವಾಪಸಾತಿಗಾಗಿ ಪ್ರಾರ್ಥಿಸಿದೆವು" ಎಂದಿದ್ದಾರೆ.