Tavleen Singh Column: ಸ್ವಾಮೀ, ದಯವಿಟ್ಟು ನಿಲ್ಲಿಸಿ ಈ ಬೀದಿನಾಟಕವನ್ನು..!
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಜತೆಗಿನ ಸಂಘರ್ಷಗಳು ನಡೆಯುತ್ತಲೇ ಇವೆ ಮತ್ತು ಈ ಪರಿಸ್ಥಿತಿಯು ಶೀಘ್ರದಲ್ಲೇ ಬದಲಾಗುವ ಯಾವುದೇ ಲಕ್ಷಣಗಳಿಲ್ಲ. ಹಾಗಾದರೆ, ನಾವು ಸದ್ಯದಲ್ಲೇ ‘ಆಪರೇಷನ್ ಸಿಂದೂರ್-೨’ ಕಾರ್ಯಾಚರಣೆಗೆ ಸಾಕ್ಷಿಯಾಗಲಿದ್ದೇವೆಯೇ? ನಾವು ಯಾವಾಗಲೂ ಜಿಹಾದಿಗಳಿಗಿಂತ ಒಂದು ಹೆಜ್ಜೆ ಹಿಂದಿರುತ್ತೇವಲ್ಲಾ, ಯಾಕೆ?


ಕ್ರಿಯಾಲೋಪ
ತವ್ಲೀನ್ ಸಿಂಗ್
ನಮ್ಮ ಕೆಲವೊಂದು ತಥಾಕಥಿತ ರಾಜಕೀಯ ನಾಯಕರು ಕಳೆದ ವಾರ ಭಾರತವು ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿಬಿಟ್ಟರು. ಬೇಡದ ಕಾರಣಕ್ಕೆ ನಾವು ನೆರೆರಾಷ್ಟ್ರದೊಂದಿಗೆ ಕೆಲ ದಿನಗಳ ಹಿಂದೆ ಸೆಣಸಿ ಗೆದ್ದೆವಲ್ಲವೇ? ಈ ಕೊಳಕು-ಸಂಘರ್ಷವು ಅಂತ್ಯಗೊಳ್ಳುವ ಹೊತ್ತಿಗೆ ಇವರೆಲ್ಲರೂ ಒಂದು ಪ್ರಜಾಸತ್ತಾತ್ಮಕ ದೇಶಕ್ಕೆ ತಕ್ಕನಾದ ಘನತೆ-ಗೌರವದೊಂದಿಗೆ ನಡೆದುಕೊಳ್ಳಬೇಕಿತ್ತು, ಪ್ರಬುದ್ಧರಾಗಿ ವರ್ತಿಸಬೇಕಿತ್ತು. ಆದರೆ ಇವರು ಮಾಡಿದ್ದೇನು? ‘ಕ್ರೂರ ನಿರಂಕುಶಾಧಿಕಾರ’ ವ್ಯವಸ್ಥೆ ಯಲ್ಲಿ ಜೋತಾಡುತ್ತಿರುವ ರಾಜಕಾರಣಿಗಳಿಗೆ ಒಪ್ಪುವಂಥ ರೀತಿಯಲ್ಲಿರುವ ಭಾಷಣ ಗಳನ್ನು ಕುಟ್ಟಿದರು, ಹೇಳಿಕೆಗಳನ್ನು ವಗಾಯಿಸಿ ಬಿಟ್ಟರು. ಈ ಘನಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದು ನಮ್ಮ ರಾಜಕೀಯ ನಾಯಕರುಗಳು ಮಾತ್ರವೇ ಅಲ್ಲ, ಮಾಧ್ಯಮಗಳು ಕೂಡ ಈ ವಿಷಯದಲ್ಲಿ ವರ್ತಿಸಿದ್ದು ನಿರಾಶಾದಾಯಕ ರೀತಿಯಲ್ಲಿಯೇ.
ನಮ್ಮ ಬಹುತೇಕ ಎಲ್ಲಾ ಖಾಸಗಿ ಸುದ್ದಿ ವಾಹಿನಿಗಳೂ ತಂತಮ್ಮ ಸ್ಟುಡಿಯೋಗಳನ್ನು ‘ಸಮ ರಾಂಗಣ’ಗಳಾಗಿ ಮಾರ್ಪಡಿಸಿಕೊಂಡುಬಿಟ್ಟಿದ್ದವು. ಅವುಗಳ ಸುಪ್ರಸಿದ್ಧ ನಿರೂಪಕರಂತೂ ‘ಕದನಶೀಲ ರಾಷ್ಟ್ರಪ್ರೇಮ’ ಅಥವಾ ‘ಅತಿರೇಕದ-ಅಬ್ಬರದ ದೇಶಭಕ್ತಿ’ಯನ್ನೇ ಪತ್ರಿಕೋದ್ಯಮ ಎಂಬಂತೆ ಬಿಂಬಿಸಿಬಿಟ್ಟರು ಪಹಲ್ಗಾಮ್‌ನಲ್ಲಿ ಪೈಶಾಚಿಕ ಕೃತ್ಯವನ್ನು ಮೆರೆದ ಹಂತಕರು ಎಲ್ಲಿ ಕಣ್ಮರೆಯಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚುವ ಬದಲು, ರಾಷ್ಟ್ರೀಯ ಭದ್ರತೆಯ ಕುರಿತಾದ ‘ತಪ್ಪು-ಗ್ರಹಿಕೆ’ಗಳನ್ನು ಅಥವಾ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದರಲ್ಲಿಯೇ ಇವರೆಲ್ಲಾ ಸಮಯವನ್ನು ವ್ಯರ್ಥಮಾಡಿದರು.
ಈ ಪೈಕಿ ಕೆಲವರಂತೂ ದಿಢೀರ್ ಅರ್ಥಶಾಸ್ತ್ರಜ್ಞರಾಗಿ ಮಾರ್ಪಟ್ಟು, ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸಂಸ್ಥೆಯು ತನ್ನ ಸಾಲದ ಮುಂದಿನ ಕಂತನ್ನು ಪಾಕಿಸ್ತಾನಕ್ಕೆ ನೀಡಿದ್ದೇಕೆ ಎಂದು ಕೂಡ ಪ್ರಶ್ನಿಸಿದರು. ಇಂಥ ನಿರ್ಣಯಗಳನ್ನು ಕೈಗೊಳ್ಳುವುದು ಐಎಂಎಫ್ ನ ಮಂಡಳಿ ಎಂಬು ದಾಗಿ ಐಎಂಎಫ್ ನಮಗೆ ನೆನಪಿಸಬೇಕಾಗಿ ಬಂದ ‘ಕಾಲಘಟ್ಟ’ ಅಥವಾ ‘ಸಕಾಲಿಕತೆ’ಯ ಬಗ್ಗೆ ಇಂಥವರಿಂದ ಹೆಚ್ಚಿನ ಅಬ್ಬರವೇನೂ ಕೇಳಿಬರಲಿಲ್ಲ.
ಬರೋಬ್ಬರಿ 50 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಪತ್ರಿಕೋದ್ಯಮದಲ್ಲೇ ತೊಡಗಿಸಿಕೊಂಡಿ ರುವ ನನಗೆ, ಪತ್ರಿಕೋದ್ಯಮವು ಕಾಲಾಂತರದಲ್ಲಿ ಹೇಗೆ ರೂಪಾಂತರಗೊಂಡಿದೆ ಎಂಬುದು ಗೊತ್ತಿದೆ. ಅಂದರೆ, ಕೇವಲ ‘ಪತ್ರಿಕಾ ಹೇಳಿಕೆಯ ಬಿಡುಗಡೆ’ಯನ್ನು ನೆಚ್ಚಿದ್ದ ಪತ್ರಿಕೋದ್ಯಮದಿಂದ ಮೊದಲ್ಗೊಂಡು ಪ್ರಜಾಪ್ರಭುತ್ವದ ಒಂದು ಆಧಾರಸ್ತಂಭವಾಗಿ ರೂಪುಗೊಳ್ಳುವ ಮತ್ತು ಉತ್ತರ ದಾಯಿಯಾಗಿ ಮಾರ್ಪಾಡಾಗುವವರೆಗಿನ ಒಂದು ಪ್ರಬಲ ಸ್ಥಾನಕ್ಕೆ ತಲುಪುವವರೆಗೆ ಭಾರತೀಯ ಮಾಧ್ಯಮವು ಹಂತಹಂತವಾಗಿ ಮೇಲುಗೈ ಸಾಧಿಸುತ್ತಾ ಬಂದಿದೆ. ಈ ಬಗ್ಗೆ ನನಗೆ ಹೆಮ್ಮೆಯಿದೆ. ಆದರೆ, ಕಳೆದ ವಾರ, ನಾನು ಒಂದು ಸುದ್ದಿ ವಾಹಿನಿಯಿಂದ ಮತ್ತೊಂದು ವಾಹಿನಿಗೆ ವೀಕ್ಷಣೆಯನ್ನು ಬದಲಿಸುತ್ತಾ ಹೋದಂತೆ, ಸ್ವತಃ ನನಗೇ ನಾಚಿಕೆಯಾಯಿತು, ಮುಜುಗರವೂ ಆಯಿತು ಎನ್ನಿ.
ಅದರಲ್ಲೂ ನಿರ್ದಿಷ್ಟವಾಗಿ, ಭಾರತದಲ್ಲಿ ಕಾಣ ಬರುವ ಅತ್ಯಂತ ಪ್ರಮುಖ ರಾಜಕೀಯ ನಾಯಕರ ಭಾಷಣಗಳು ಮತ್ತು ಹೇಳಿಕೆಗಳನ್ನು ಕೇಳಿದಾಗ, ಇಂಥದೊಂದು ನಾಚಿಕೆ-ಮುಜುಗರದ ಭಾವಕ್ಕೆ ನಾನು ಒಳಗಾದೆ ಎನ್ನಬೇಕು. ಮೊದಲಿಗೆ, ನಮ್ಮ ವಿರೋಧ ಪಕ್ಷದ ನಾಯಕರ ಮಾತಿನ ಬಗ್ಗೆ ಹಾಗೂ ತಮ್ಮ ವಕ್ತಾರರಿಗೆಂದು ಅವರು ‘ಸಜ್ಜುಗೊಳಿಸಿಕೊಟ್ಟ’ ದನಿಯ ಕಡೆಗೆ ಗಮನ ಹರಿಸೋಣ. ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯಲ್ಲಿ ನಿಜಕ್ಕೂ ಘಟಿಸಿದ್ದೇನು ಎಂಬುದನ್ನು ಪ್ರಶ್ನಿಸುವು ದಕ್ಕೆ ರಾಹುಲ್ ಗಾಂಧಿಯವರಿಗೆ ಹಕ್ಕು ಇದೆ.
ವಾಸ್ತವವಾಗಿ ಅವರು, “ಪಹಲ್ಗಾಮ್‌ನಲ್ಲಿ ಮಾರಣ ಹೋಮ ನಡೆಸಿದ ಹಂತಕರನ್ನು ನಾವಿನ್ನೂ ಏಕೆ ಪತ್ತೆ ಹಚ್ಚಲಾಗಿಲ್ಲ? ಏನಾದರೂ ಭಯಾನಕ ಘಟನೆ ನಡೆದ ನಂತರವಷ್ಟೇ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕರನ್ನು ಗುರುತಿಸಲು/ಪತ್ತೆ ಹಚ್ಚಲು ನಾವು ಹೆಣಗುವಂತೆ ಆಗುತ್ತಿದೆ ಎಂದು ಯಾವಾಗಲೂ ತೋರುವುದೇಕೆ, ಇಂಥ ಘಟನೆಗೂ ಮುಂಚೆಯೇ ಯಾಕೆ ಯಾವತ್ತಿಗೂ ಪತ್ತೆ ಹಚ್ಚಲಾಗುತ್ತಿಲ್ಲ/ಗುರುತಿಸಲಾಗುತ್ತಿಲ್ಲ?" ಎಂದೆಲ್ಲಾ ಪ್ರಶ್ನಿಸಬೇಕಿತ್ತು.
ಮಾತ್ರವಲ್ಲದೆ, “ಕಾಶ್ಮೀರದಲ್ಲಿ ಉಗ್ರವಾದವನ್ನು ಮತ್ತು ಉಗ್ರವಾದಿಗಳನ್ನು ಪುಡಿಗಟ್ಟಲಾಗಿದೆ ಎಂಬುದಾಗಿ ನಾವು ನಂಬುವಂತೆ ಗೃಹ ಸಚಿವರು ನಮ್ಮನ್ನು ದಾರಿ ತಪ್ಪಿಸಿದ್ದೇಕೆ? ಪಹಲ್ಗಾಮ್‌ನ ಮೇಲು ಸ್ತರದಲ್ಲಿರುವ ಆ ಅಸುರಕ್ಷಿತ ಹುಲ್ಲುಗಾವಲಿನಲ್ಲಿ ವಿಹರಿಸುವುದಕ್ಕೆ ಪ್ರವಾಸಿಗರಿಗೆ ಅನುವು ಮಾಡಿಕೊಟ್ಟಿದ್ದೇಕೆ, ಉತ್ತೇಜಿಸಿದ್ದೇಕೆ?" ಎಂದು ಕೂಡ ಅವರು ಪ್ರಶ್ನಿಸಬೇಕಿತ್ತು. ಹೇಳುತ್ತಾ ಹೋದರೆ ಇಂಥ ನೂರಾರು ಪ್ರಶ್ನೆಗಳಿವೆ ಬಿಡಿ.
ಆದರೆ ಮೇಲಿನ ರೀತಿಯ ಪ್ರಶ್ನೆಗಳನ್ನು ಕೇಳುವ ಬದಲು ರಾಹುಲ್ ಗಾಂಧಿಯವರು ಮಾರ್ಗ ಬದಲಿಸಿದರು. ಸಮರದ ಯೋಜನೆಗಳನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡಿದ್ದರೆಂಬ ನೆಪವಿಟ್ಟು ಕೊಂಡು ವಿದೇಶಾಂಗ ಖಾತೆ ಸಚಿವರ ತಲೆ ಮೇಲೆ ಗೂಬೆ ಕೂರಿಸಲು ಮುಂದಾದರು. ಇಷ್ಟು ಸಾಲದೆಂಬಂತೆ, “ಅಮೆರಿಕದ ಒತ್ತಡಕ್ಕೆ ಸಿಲುಕಿಯೇ ಭಾರತವು ಕದನವಿರಾಮಕ್ಕೆ ಒಪ್ಪಿಕೊಂಡಿತು" ಎಂಬ ಬೇಜವಾಬ್ದಾರಿತನದ ಆರೋಪ ಹೊರಿಸಲೂ ಮುಂದಾದರು.
ಅವರ ಪಕ್ಷದ ವಕ್ತಾರರು ತಾವೇನು ಕಮ್ಮಿ ಎನ್ನುವಂತೆ ತಮ್ಮ ನಾಯಕನನ್ನು ಹಿಂಬಾಲಿಸಿದ್ದರ ಜತೆಗೆ, ಹೀಗೆ ಗೂಬೆ ಕೂರಿಸುವುದರಲ್ಲಿ ಒಂದು ಹೆಜ್ಜೆ ಮುಂದಿಟ್ಟರು. ಸುದ್ದಿ ವಾಹಿನಿಗಳ ಚರ್ಚಾ ಕಾರ್ಯಕ್ರಮಗಳಲ್ಲಿ ಅವ್ಯಾಹತವಾಗಿ ಕಾಣಿಸಿಕೊಳ್ಳತೊಡಗಿದ ಇಂಥವರು, “ಡೊನಾಲ್ಡ್ ಟ್ರಂಪ್ ಹೇರಿದ ಒತ್ತಡಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮಣಿಯದೇ ಇದ್ದಿದ್ದರೆ, ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತವು ಮರುವಶ ಮಾಡಿಕೊಳ್ಳಬಹುದಿತ್ತು ಹಾಗೂ ಪಾಕಿಸ್ತಾನವನ್ನು ಸಂಪೂರ್ಣ ಧ್ವಂಸಗೊಳಿಸಬಹುದಿತ್ತು" ಎಂದು ಘೋಷಿಸಿಬಿಟ್ಟರು!
ಹಾಗೆ ನೋಡಿದರೆ, ಕಾಂಗ್ರೆಸ್ ಪಕ್ಷದ ಆರೋಪಗಳು ಹಾಸ್ಯಾಸ್ಪದವಾಗಿದ್ದವು ಮತ್ತು ನಮ್ಮ ಪ್ರಧಾನಮಂತ್ರಿಗಳಿಂದ ತಿರಸ್ಕೃತವಾಗುವುದಕ್ಕೆ ಅವು ಅರ್ಹವಾಗಿದ್ದವು. ಆದರೆ ಬದಲಿಗೆ ಅವರು ತಕ್ಕ ಪ್ರತ್ಯುತ್ತರವನ್ನೇ ನೀಡಲು ಮುಂದಾಗಿ, ಒಂದು ಗಂಭೀರ ಸ್ವರೂಪದ ರಾಜಕೀಯ ವೇದಿಕೆಗಿಂತ ಬಾಲಿವುಡ್ ಚಲನಚಿತ್ರವೊಂದರಲ್ಲಿ ಕಾಣಬರುವ ರೀತಿಯಲ್ಲೇ ಬಿಸಿ ಮುಟ್ಟಿಸಿದರು.
“ಯುದ್ಧಗಳಿಗೆ ಇದು ಕಾಲವಲ್ಲ" ಎಂಬುದಾಗಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಒಮ್ಮೆ ಹೇಳಿದ್ದ ಅದೇ ಗೌರವಾನ್ವಿತ ರಾಜಕೀಯ ಮುತ್ಸದ್ದಿ ಅಲ್ಲಿ ಮಾಯವಾಗಿದ್ದರು, “ಇನ್ನು ಮುಂದೆ ನನ್ನ ನರ-ನಾಡಿಗಳಲ್ಲಿ ಹರಿಯುವುದು ‘ಬಿಸಿ ಸಿಂದೂರ’ವೇ ಹೊರತು ರಕ್ತವಲ್ಲ" ಎಂದು ಅಬ್ಬರಿಸಿದ ಓರ್ವ ಪ್ರಚೋದನಕಾರಿ ಭಾಷಣಕಾರ ಆ ಜಾಗವನ್ನು ಆಕ್ರಮಿಸಿಕೊಂಡಿದ್ದರು.
ಭಾರತದ ನಿಲುವನ್ನು ಮತ್ತು ಪಾಕಿಸ್ತಾನದ ವತಿಯಿಂದ ನಮ್ಮ ನೆಲದ ಮೇಲೆ ಹೆಚ್ಚೆಚ್ಚು ಭಯೋತ್ಪಾದನಾ ಕೃತ್ಯಗಳು ಒಂದೊಮ್ಮೆ ನಡೆದಲ್ಲಿ ನಾವೇಕೆ ಪ್ರತಿಕ್ರಿಯಿಸಬೇಕಾಗುತ್ತದೆ ಎಂಬುದಕ್ಕಿರುವ ಕಾರಣಗಳನ್ನು ಶಾಂತದನಿಯಲ್ಲಿ ಹೇಳುವುದರ ಬದಲು ಅವರು ಅಬ್ಬರಿಸಿ ಬೊಬ್ಬಿರಿದರು. “ಈಗಿನದು ಹೊಸ ಭಾರತ, ಜತೆಗೆ ಇದು ಹೊಸ ತೆರನಾದ ನ್ಯಾಯ" ಎಂದೇ ಅವರು ಘೋಷಿಸಿಬಿಟ್ಟರು.
ತಮ್ಮ ‘ಮೆಚ್ಚಿನ ನಾಯಕ’ ಹೀಗೆ ಅಬ್ಬರಿಸಿದ್ದೇ ಅಬ್ಬರಿಸಿದ್ದು, ಬಿಜೆಪಿಯ ಮತ್ತಿತರ ವಕ್ತಾರರು ಕೂಡ ಮೈಕೊಡವಿಕೊಂಡು ಎದ್ದರು, “ಕಾಂಗ್ರೆಸ್ ಪಕ್ಷವು ಪಾಕಿಸ್ತಾನದ ಭಾಷೆಯನ್ನು ಮಾತನಾಡುತ್ತಿದೆ" ಎಂದು ಹಿಗ್ಗಾಮುಗ್ಗಾ ಟೀಕಿಸುವುದಕ್ಕೂ ಅವರು ಹಿಂಜರಿಯಲಿಲ್ಲ. ಭಾರತೀಯ ರಾಜಕಾರಣದ ಅತ್ಯುನ್ನತ ವಲಯದಲ್ಲೇ ಇಂಥ ವಿಷಯಗಳು ಹೇಳಲ್ಪಟ್ಟರೆ ಅವು ನಮ್ಮನ್ನು ಕರೆದೊಯ್ಯುವು ದಾದರೂ ಎಲ್ಲಿಗೆ? ಇಂಥ ಮಾತುಗಳು ನಮ್ಮ ಭಾರತವನ್ನು ಪಕ್ಕದ ಇಸ್ಲಾಮಿಕ್ ಗಣರಾಜ್ಯದ ಮಟ್ಟಕ್ಕೆ ಕೆಳಕ್ಕಿಳಿಸಿಬಿಡುತ್ತವೆ, ಅಲ್ಲವೇ? ನಾವೀಗ ಬಹುತೇಕ ಪ್ರತಿದಿನ ಎದುರಿಸುತ್ತಲೇ ಇರುವ ಜಿಹಾದಿ ಭಯೋತ್ಪಾದನೆಯ ಬೆದರಿಕೆಯನ್ನು ನಿವಾರಿಸುವ ನಿಟ್ಟಿನಲ್ಲಿ ಇಂಥ ಮಾತುಗಳು ಏನೂ ಪ್ರಯೋಜನಕಾರಿಯಾಗಲಾರವು.
ನಾನು ಈ ಮಾತುಗಳನ್ನು ಬರೆಯುತ್ತಿರುವಾಗ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಜತೆಗಿನ ಮುಖಾಮುಖಿ ಸಂಘರ್ಷಗಳು ನಡೆಯುತ್ತಲೇ ಇವೆ ಮತ್ತು ಈ ಪರಿಸ್ಥಿತಿಯು ಶೀಘ್ರದಲ್ಲೇ ಬದಲಾಗುವ ಯಾವುದೇ ಲಕ್ಷಣಗಳಿಲ್ಲ. ಹಾಗಾದರೆ, ನಾವು ಸದ್ಯದಲ್ಲೇ ‘ಆಪರೇಷನ್ ಸಿಂದೂರ್-2’ ಕಾರ್ಯಾಚರಣೆಗೆ ಸಾಕ್ಷಿಯಾಗಲಿದ್ದೇವೆಯೇ? ಅಥವಾ “ನಾವು ಯಾವಾಗಲೂ ಜಿಹಾದಿಗಳಿಗಿಂತ ಒಂದು ಹೆಜ್ಜೆ ಹಿಂದಿರುತ್ತೇವಲ್ಲಾ, ಯಾಕೆ? ಅಷ್ಟಕ್ಕೂ ಈ ಪರಿಸ್ಥಿತಿ ಅಬಾಧಿತವಾಗಿ ಮುಂದುವರಿಯೋದು ಯಾಕೆ?" ಎಂಬ ಪ್ರಶ್ನೆಗಳಿಗೆ ಉತ್ತರಿಸುವಂತೆ, ರಾಷ್ಟ್ರೀಯ ಭದ್ರತೆಯ ಉತ್ತರದಾಯಿಗಳಾಗಿರುವ ಜನರನ್ನು ಕೇಳಲಿದ್ದೇವೆಯೇ? ಓರ್ವ ಸೈನಿಕನ ಮಗಳಾಗಿ ನಾನು ನನ್ನ ಬಾಲ್ಯದ ಬಹುತೇಕ ಭಾಗವನ್ನು ಭಾರತದ ಉದ್ದಗಲಕ್ಕೂ ಮೈಚೆಲ್ಲಿಕೊಂಡಿರುವ ಸೇನಾ ಠಾಣ್ಯಗಳ ಪ್ರದೇಶಗಳಲ್ಲಿ ಕಳೆದಿರುವೆ; ಹೀಗಾಗಿ ಭಾರತೀಯ ಸೇನೆಯ ಕುರಿತಾಗಿ ನನ್ನಲ್ಲಿ ಒಂದು ಗಾಢವಾದ ಮೆಚ್ಚುಗೆ ಕೆನೆಗಟ್ಟಿದೆ.
‘ಬಬಿನಾ’ ಮತ್ತು ‘ಮೊವ್’ನಂಥ ಹೆಸರುಗಳನ್ನು ಹೊಂದಿರುವ, ಅಷ್ಟಾಗಿ ಜನರ ಗಮನಕ್ಕೆ ಬಾರದ ಪಟ್ಟಣಗಳಲ್ಲಿ ನೆಲೆಗೊಂಡಿರುವ ಸೇನಾ ಮೆಸ್‌ಗಳಲ್ಲಿ, ಹಿಂದೆಂದೂ ಕಾಣದಂಥ ಒಂದಷ್ಟು ಅತ್ಯುತ್ತಮ ಯೋಧರನ್ನು ನಾನು ಭೇಟಿಯಾಗಿರುವುದುಂಟು. ಅವರು, ಎಲ್ಲರಿಗಿಂತ ಮಿಗಿಲಾಗಿ ಗೌರವ ಮತ್ತು ಧೈರ್ಯವನ್ನು ಕಾಪಿಟ್ಟುಕೊಂಡು ಬಂದ ಪುರುಷರಾಗಿದ್ದರು. ಅವರು, ನಮ್ಮ ದೇಶದ ಗಡಿಗಳನ್ನು ಸಂರಕ್ಷಿಸುತ್ತಿರುವ ಸಂದರ್ಭದಲ್ಲಿ ಸಾಯಬೇಕಾಗಿ ಬರುವ ಸಾಧ್ಯತೆಯನ್ನೂ ಹಗುರವಾಗಿ ತಳ್ಳಿಹಾಕಿದಂಥ ಧಿರೋದಾತ್ತರಾಗಿದ್ದರು.
ಭಾರತಕ್ಕೆ ತಮ್ಮ ಪ್ರಾಣವನ್ನೇ ಸಮರ್ಪಣೆ ಮಾಡುವುದು ತಮ್ಮ ಪಾಲಿನ ಕರ್ತವ್ಯ ಎಂದೇ ಪರಿಗಣಿಸಿದ್ದ ಯೋಧರಾಗಿದ್ದರು ಅವರು. ನಮ್ಮ ದೇಶದ ಸಶ್ತ್ರ ಪಡೆಗಳಲ್ಲಿ ಇಂಥ ಜನರು ಇನ್ನೂ ಇದ್ದಾರೆ; ಆದರೆ ಇಂಥ ಯೋಧರ ಅನುಪಮ ಸೇವೆಯನ್ನು ನಮ್ಮ ರಾಜಕಾರಣಿಗಳು ಅಗೌರವಿಸಿ ಅದನ್ನೊಂದು ‘ರಾಜಕೀಯ ಧಾರಾವಾಹಿ’ಯಾಗಿ ಮಾರ್ಪಡಿಸಿಬಿಟ್ಟರೆ, ಅದು ಇಂಥ ಯೋಧರ ತ್ಯಾಗ-ಬಲಿದಾನಗಳನ್ನು ಅಗೌರವಿಸಿದಂತೆಯೇ ಆಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
ಇತ್ತೀಚಿನ ಮಿಲಿಟರಿ ಕಾರ್ಯಾಚರಣೆಯು ಸಂಪನ್ನಗೊಂಡ ನಂತರದ ದಿನಗಳಲ್ಲಿ ನಾವು ನೋಡುತ್ತಿರುವುದು ಇಂಥ ಗಲೀಜು ಸ್ವರೂಪದ ರಾಜಕೀಯ ಧಾರಾವಾಹಿಯನ್ನೇ! ಇದು ಆದಷ್ಟು ಬೇಗ ನಿಲ್ಲಬೇಕು ಹಾಗೂ ನಮ್ಮ ರಾಜಕೀಯ ನಾಯಕರೆನಿಸಿಕೊಂಡವರು ಹೆಚ್ಚೆಚ್ಚು ಘನತೆಯಿಂದ ವರ್ತಿಸುವಂತಾಗಬೇಕು. ಇದುವೇ ಬಹುಜನರ ಆಶಯ.
ಇನ್ನು ಮಾಧ್ಯಮಗಳ ವಿಷಯಕ್ಕೆ ಬರುವುದಾದರೆ, ‘ಕದನ ಶೀಲ ರಾಷ್ಟ್ರಪ್ರೇಮ’ ಅಥವಾ ‘ಅತಿರೇಕದ-ಅಬ್ಬರದ ದೇಶಭಕ್ತಿ’ಯನ್ನೇ ಪತ್ರಿಕೋದ್ಯಮ ಎಂಬುದಾಗಿ ಏಕಪ್ರಕಾರವಾಗಿ ಬಿಂಬಿಸಿದರೆ ಅದರಿಂದ ಭಾರತಕ್ಕೆ ಹಾನಿಯಾಗುತ್ತದೆ ಎಂಬ ಕಹಿಸತ್ಯವನ್ನು ಸುದ್ದಿ ವಾಹಿನಿಗಳ ನಿರೂಪಕರು ಹಾಗೂ ವರದಿಗಾರರು ಅರ್ಥಮಾಡಿಕೊಳ್ಳುವುದಕ್ಕೆ ಇದು ಸಕಾಲ.
ವಾಸ್ತವವಾಗಿ ಏನು ನಡೆಯುತ್ತಿದೆಯೋ ಅದನ್ನು ವರದಿ ಮಾಡುವುದು ಪತ್ರಕರ್ತರ ಕಸುಬಾಗಬೇಕೇ ವಿನಾ, ‘ರಣಭೇರಿ’ಯನ್ನು ಬಾರಿಸುವುದಲ್ಲ!
(ಲೇಖಕಿ ಹಿರಿಯ ಪತ್ರಕರ್ತೆ ಹಾಗೂ ಅಂಕಣಕಾರ್ತಿ)