ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nimisha Priya: ನಿಮಿಷಾ ಪ್ರಿಯಾ ಅಪರಾಧಿ...ಎಂದಿಗೂ ಆಕೆಯನ್ನು ಕ್ಷಮಿಸಲಾಗದು ಎಂದ ಮೆಹದಿ ಸಹೋದರ; ಕಂದಿದ ಭರವಸೆಯ ಬೆಳಕು?

ಯಾವುದೇ ಕಾರಣಕ್ಕೂ ನಿಮಿಷಾ ಪ್ರಿಯಾ ಅವರನ್ನು ಕ್ಷಮಿಸಬಾರದು. ಅವರು ಮಾಡಿರುವುದು ಅಪರಾಧ ಎಂದು ನಿಮಿಷಾ ಪ್ರಿಯಾ ಅವರಿಂದ ಕೊಲೆಯಾದ ತಲಾಲ್ ಅಬ್ದೋ ಮೆಹದಿ ಸಹೋದರ ಅಬ್ದುಲ್ ಫತ್ತಾ ಮೆಹದಿ ಹೇಳಿದ್ದಾರೆ. ಯೆಮನ್‌ನಲ್ಲಿ ಕ್ಲಿನಿಕ್ ನಡೆಸುತ್ತಿದ್ದ ಕೇರಳದ ಪಾಲಕ್ಕಾಡ್‌ನ ನರ್ಸ್ ನಿಮಿಷಾ ಪ್ರಿಯಾ ಅವರಿಂದ ಮಿತಿ ಮೀರಿದ ಕೆಟಮೈನ್ ಸೇವಿಸಿ ತಲಾಲ್ ಅಬ್ದೋ ಮೆಹದಿ ಸಾವನ್ನಪ್ಪಿದ್ದ.

ನಿಮಿಷಾ ಪ್ರಿಯಾ ಅಪರಾಧಕ್ಕೆ ಕ್ಷಮಿಸಲು ಸಾಧ್ಯವಿಲ್ಲ ಎಂದ ಮೆಹದಿ ಸಹೋದರ

ನವದೆಹಲಿ: ಯಾವುದೇ ಕಾರಣಕ್ಕೂ ನಿಮಿಷಾ ಪ್ರಿಯಾ (Nimisha Priya) ಅವರನ್ನು ಕ್ಷಮಿಸಬಾರದು. ಅವರು ಮಾಡಿರುವುದು ಅಪರಾಧ ಎಂದು ನಿಮಿಷಾ ಪ್ರಿಯಾ ಅವರಿಂದ ಕೊಲೆಯಾದ ತಲಾಲ್ ಅಬ್ದೋ ಮೆಹದಿ ಸಹೋದರ ಅಬ್ದುಲ್ ಫತ್ತಾ ಮೆಹದಿ ಹೇಳಿದ್ದಾರೆ. ಯೆಮನ್ (Yemen)ನಲ್ಲಿ ಕ್ಲಿನಿಕ್ ನಡೆಸುತ್ತಿದ್ದ ಕೇರಳದ ಪಾಲಕ್ಕಾಡ್‌ನ ನರ್ಸ್ (Nurse from Palakkad, Kerala) ನಿಮಿಷಾ ಪ್ರಿಯಾ ಅವರಿಂದ ಮಿತಿ ಮೀರಿದ ಕೆಟಮೈನ್ ಸೇವಿಸಿ ತಲಾಲ್ ಅಬ್ದೋ ಮೆಹದಿ ಸಾವನ್ನಪ್ಪಿದ್ದ. ಈ ಘಟನೆ 2017ರಲ್ಲಿ ನಡೆದಿದ್ದು, ನಿಮಿಷಾ ಪ್ರಿಯ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಆದರೆ ಭಾರತ ಸರ್ಕಾರದ ಮಾತುಕತೆಗಳ ಕಾರಣದಿಂದ ಅವರ ಮರಣ ದಂಡನೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.

ತಲಾಲ್ ಅಬ್ದೋ ಮೆಹದಿ ಅವರ ಸಾವಿಗೆ ಕಾರಣರಾದ ನಿಮಿಷಾ ಪ್ರಿಯಾ ಅವರನ್ನು ಈ ಅಪರಾಧಕ್ಕೆ ಕ್ಷಮಿಸಲು ಸಾಧ್ಯವಿಲ್ಲ ಎಂದು ತಲಾಲ್ ಸಹೋದರ ಅಬ್ದುಲ್ ಫತ್ತಾ ಮೆಹದಿ ಹೇಳಿದ್ದು, ನಿಮಿಷಾ ಪ್ರಿಯಾ ಅವರನ್ನು ಗಲ್ಲಿಗೇರಿಸಲೇಬೇಕು ಎಂದು ಆಗ್ರಹಿಸಿದ್ದಾರೆ. ನಿಮಿಷಾ ಅವರನ್ನು ಸಂತ್ರಸ್ತೆ ಎಂದು ಬಿಂಬಿಸಲು ಭಾರತೀಯ ಮಾಧ್ಯಮಗಳು ಪ್ರಯತ್ನಿಸುತ್ತಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ನಿಮಿಷಾ ಪ್ರಿಯಾ ಅವರನ್ನು ಬುಧವಾರ ಗಲ್ಲಿಗೇರಿಸಬೇಕಿತ್ತು. ಆದರೆ ಎರಡು ರಾಷ್ಟ್ರಗಳ ನಡುವಿನ ಮಾತುಕತೆಗಳ ಕಾರಣದಿಂದ ಅವರ ಮರಣದಂಡನೆಯನ್ನು ಸ್ಥಗಿತಗೊಳಿಸಲಾಗಿದೆ.

ಭಾರತ ಸರ್ಕಾರ, ಸೌದಿ ಅರೇಬಿಯಾದಲ್ಲಿರುವ ಏಜೆನ್ಸಿಗಳು, ಧಾರ್ಮಿಕ ನಾಯಕರಾದ ಗ್ರ್ಯಾಂಡ್ ಮುಫ್ತಿ, ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಅವರ ಹಸ್ತಕ್ಷೇಪಗಳಿಂದ ಮಧ್ಯಸ್ಥಿಕೆ ವಹಿಸಿದ ಯೆಮೆನ್‌ನ ಶೂರಾ ಕೌನ್ಸಿಲ್‌ನಲ್ಲಿರುವವರ ಕಾರಣದಿಂದ ನಿಮಿಷಾ ಅವರ ಮರಣದಂಡನೆಯನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ.

ರಾಜ್ಯ ಸಿಪಿಐಎಂ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಬುಧವಾರ ಬೆಳಗ್ಗೆ ಮುಸ್ಲಿಯಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಕುರಿತು ಮಾತನಾಡಿರುವ ಗೋವಿಂದನ್, ಮರಣದಂಡನೆಯನ್ನು ಸದ್ಯ ಸ್ಥಗಿತಗೊಳಿಸಲಾಗಿದೆ. ಯೆಮೆನ್‌ನಲ್ಲಿ ಅಧಿಕಾರಿಗಳೊಂದಿಗೆ ಇನ್ನು ಕೆಲವು ಅಂಶಗಳನ್ನು ಚರ್ಚಿಸಲಾಗುತ್ತಿದೆ. ಕ್ಷಮಾದಾನ ನೀಡಬೇಕಾದ ಕುಟುಂಬದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಹೇಳಿದರು.

ನಿಮಿಷಾ ಪ್ರಿಯಾ ಅವರಿಗೆ ಕ್ಷಮಾದಾನ ನೀಡಬೇಕಿರುವುದು ಮೃತರ ಕುಟುಂಬ. ಅವರ ನಡುವೆ ಭಿನ್ನಾಭಿಪ್ರಾಯಗಳಿರುವುದರಿಂದ ಅಧಿಕಾರಿಗಳ ಜತೆಗೆ ಮಾತುಕತೆಯಲ್ಲಿ ತೊಡಗಿರುವ ಧಾರ್ಮಿಕ ನಾಯಕರು ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.

ಈ ನಡುವೆ 'ರಕ್ತ ಹಣ'ದ ಬಗ್ಗೆ ಚರ್ಚೆಯಾಗುತ್ತಿದೆ. 'ರಕ್ತದ ಹಣ' ಎಂದರೆ ಕ್ಷಮೆಗೆ ಪ್ರತಿಯಾಗಿ ಕೊಲ್ಲಲ್ಪಟ್ಟ ವ್ಯಕ್ತಿಯ ಕುಟುಂಬಕ್ಕೆ ನೀಡುವ ಆರ್ಥಿಕ ಪರಿಹಾರ. ಇದು ಷರಿಯಾ ಕಾನೂನಿನಡಿಯಲ್ಲಿ ಅಂಗೀಕರಿಸಲ್ಪಟ್ಟ ಪದ್ಧತಿ. ಕೇರಳದ ಬಿಲಿಯನೇರ್ ಎಂ.ಎ. ಯೂಸುಫ್ ಅಲಿ ಎಷ್ಟೇ ಮೊತ್ತವಾದರೂ ಸರಿ ಆರ್ಥಿಕ ಸಹಾಯ ನೀಡಲು ಮುಂದೆ ಬಂದಿದ್ದಾರೆ ಎಂದು ಅವರು ತಿಳಿಸಿದರು.

ನಿಮಿಷಾ ಪ್ರಿಯಾ ಪ್ರಸ್ತುತ ಯೆಮೆನ್‌ನ ಜೈಲಿನಲ್ಲಿದ್ದು, 2017ರಲ್ಲಿ ತನ್ನ ಮಾಜಿ ವ್ಯವಹಾರ ಪಾಲುದಾರ ಮೆಹ್ದಿಯ ಕೊಲೆ ಆರೋಪದ ಮೇಲೆ ಮರಣದಂಡನೆಯನ್ನು ಎದುರಿಸುತ್ತಿದ್ದಾರೆ. ಇವರಿಗೆ ಮರಣದಂಡನೆ ದಿನಾಂಕ ಘೋಷಣೆಯಾದಾಗಿನಿಂದ ಕೇರಳದ ರಾಜಕಾರಣಿಗಳು ತುರ್ತು ಹಸ್ತಕ್ಷೇಪಕ್ಕಾಗಿ ಕೇಂದ್ರ ಸರ್ಕಾರ ಮತ್ತು ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Golden Temple:‌ ಕೆಲವೇ ಕ್ಷಣದಲ್ಲಿ ಸ್ವರ್ಣ ಮಂದಿರ ಉಡೀಸ್‌...ದುಷ್ಕರ್ಮಿಗಳಿಂದ ಹುಸಿ ಬಾಂಬ್‌ ಬೆದರಿಕೆ

ಏನಾಗಿತ್ತು?

ನಿಮಿಷಾ ಪ್ರಿಯಾ ಅವರು 2008ರಲ್ಲಿ ಯೆಮೆನ್‌ಗೆ ತೆರಳಿದ್ದು, ಅಲ್ಲಿ ತಮ್ಮ ಕ್ಲಿನಿಕ್ ಅನ್ನು ತೆರೆಯಲು ಮುಂದಾದರು. ಇದಕ್ಕಾಗಿ ತಲಾಲ್ ಅಬ್ದೋ ಮೆಹದಿ ಅವರೊಂದಿಗೆ ಕೈಜೋಡಿಸಿದ್ದರು. ಬಳಿಕ ಇವರಿಬ್ಬರ ನಡುವೆ ವಿವಾದ ಉಂಟಾಗಿದ್ದು, ಮೆಹದಿ ವಶದಲ್ಲಿದ್ದ ತನ್ನ ಪಾಸ್‌ಪೋರ್ಟ್ ಅನ್ನು ಮರಳಿ ಪಡೆಯಲು ನಿಮಿಷಾ ಆತನಿಗೆ ನಿದ್ರೆ ಬರುವಂತೆ ಮಾಡಲು ಕೆಟಮೈನ್ ನೀಡಿದ್ದಾರೆ. ಇದು ಅವರ ಜೀವಕ್ಕೆ ಮಾರಕವಾಯಿತು. ಬಳಿಕ ನಿಮಿಷಾ ದೇಶದಿಂದ ಪರಾರಿಯಾಗಲು ಯತ್ನಿಸಿದ್ದು, ಅವರನ್ನು ಕೊಲೆ ಆರೋಪದಲ್ಲಿ ಬಂಧಿಸಲಾಯಿತು. 2020ರಲ್ಲಿ ಮರಣದಂಡನೆ ವಿಧಿಸಿ ಆದೇಶಿಸಲಾಗಿದೆ.