ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಗೆಳತಿ ವಿಚಾರದಲ್ಲಿ ತಗಾದೆ: ಗೆಳೆಯನನ್ನು ಕೊಂದು ಶವದ ಮುಂದೆ ಡ್ಯಾನ್ಸ್‌

ಹಣಕಾಸಿನ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿತ್ತು. ಗಲಾಟೆ ವೇಳೆ ಕಾರ್ತಿಕ್, ಪ್ರವೀಣ್‌ನನ್ನು ಕೊಲೆ ಮಾಡುವ ಧಮಕಿ ಹಾಕಿದ್ದ. ಕಾರ್ತಿಕ್ ತನ್ನನ್ನು ಕೊಲೆ ಮಾಡುತ್ತಾನೆ ಎನ್ನುವ ಭಯದಲ್ಲೇ ಹುಡುಗರ ಗ್ಯಾಂಗ್ ಕಟ್ಟಿಕೊಂಡು ಕಾರ್ತಿಕನನ್ನೇ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಜೊತೆಗೆ ಮಹಿಳೆಯೊಬ್ಬಳ ಸಂಗದ ವಿಷಯ ಕೂಡ ಸೇರಿಕೊಂಡಿದೆ.

ಗೆಳತಿ ವಿಚಾರದಲ್ಲಿ ತಗಾದೆ: ಗೆಳೆಯನನ್ನು ಕೊಂದು ಶವದ ಮುಂದೆ ಡ್ಯಾನ್ಸ್‌

ಕೊಲೆಯಾದ ಕಾರ್ತಿಕ್

ಹರೀಶ್‌ ಕೇರ ಹರೀಶ್‌ ಕೇರ May 6, 2025 7:16 AM

ಮೈಸೂರು: ಗೆಳೆಯರೇ ಯುವಕನನ್ನು ಕೊಚ್ಚಿ ಕೊಂದ (Murder case) ಘಟನೆ ಮೈಸೂರು (Mysuru crime news) ಹೊರವಲಯದ ವರುಣ ಗ್ರಾಮದ ಹೋಟೆಲ್‌ ಮುಂಭಾಗ ಕಳೆದ ರಾತ್ರಿ ನಡೆದಿದೆ. ಕೊಲೆಯಾದ ಯುವಕನನ್ನು ಮೈಸೂರು ನಗರದ ಕ್ಯಾತಮಾರನಹಳ್ಳಿ ನಿವಾಸಿ ಕಾರ್ತಿಕ್‌ (33) ಎಂದು ಗುರುತಿಸಲಾಗಿದೆ. ಒಂದು ಕಾಲದಲ್ಲಿ ಕಾರ್ತಿಕ್ ಜೊತೆಗೆ ಇದ್ದ ಆತನ ಕುಚಿಕು ಗೆಳೆಯ ಪ್ರವೀಣ್ ಹಾಗೂ ಗ್ಯಾಂಗ್ ಈ ಕೊಲೆ ಮಾಡಿದೆ ಎಂದು ತಿಳಿದುಬಂದಿದೆ. ಕಾರ್ತಿಕ್‌ ರೌಡಿ ಶೀಟರ್‌ (Rowdy sheeter) ಕೂಡ ಆಗಿದ್ದಾನೆ. ಕಾರ್ತಿಕ್ ಹಾಗೂ ಪ್ರವೀಣ್ ನಡುವೆ ಹಣಕಾಸಿನ ವಿಚಾರಕ್ಕೆ ಹಾಗೂ ಮಹಿಳೆಯೊಬ್ಬರ ಜೊತೆಗೆ ಸ್ನೇಹದ ಕಾರಣಕ್ಕೆ ಗಲಾಟೆಯಾಗಿತ್ತು ಎಂದು ಹೇಳಲಾಗಿದೆ.

ಹಣಕಾಸಿನ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿತ್ತು. ಗಲಾಟೆ ವೇಳೆ ಕಾರ್ತಿಕ್, ಪ್ರವೀಣ್‌ನನ್ನು ಕೊಲೆ ಮಾಡುವ ಧಮಕಿ ಹಾಕಿದ್ದ. ಕಾರ್ತಿಕ್ ತನ್ನನ್ನು ಕೊಲೆ ಮಾಡುತ್ತಾನೆ ಎನ್ನುವ ಭಯದಲ್ಲೇ ಹುಡುಗರ ಗ್ಯಾಂಗ್ ಕಟ್ಟಿಕೊಂಡು ಕಾರ್ತಿಕನನ್ನೇ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಕಾರ್ತಿಕ್ ಚಿಕ್ಕಹಳ್ಳಿಯಲ್ಲಿ ನಡೆದ ಒಂದು ಕೊಲೆ ಯತ್ನ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿದ್ದ. ಜೊತೆಗೆ ಕಾರ್ತಿಕ್ ರೌಡಿಶೀಟರ್ ಆಗಿದ್ದ. ರೌಡಿ ಶೀಟರ್ ಆಗಿರುವುದರಿಂದ ಆತನನ್ನು ಗಡಿಪಾರು ಮಾಡಲಾಗಿತ್ತು. ಹೀಗಾಗಿ ಆತ ತನ್ನ ಮನೆಗೆ ಹೋಗದೆ ವರುಣ ಹತ್ತಿರ ಇರುವ ಹೋಟೆಲ್‌ನಲ್ಲಿದ್ದ.

ಕೊಲೆಯಾದ ಕಾರ್ತಿಕ್ ಸ್ನೇಹಿತರು ಹೇಳುವ ಪ್ರಕಾರ, ಕಾರ್ತಿಕ್ ಜೊತೆಯಲ್ಲಿ ಇದ್ದವರು ಆತನ ಹೆಸರು ಹೇಳಿ ದುಡ್ಡು ಮಾಡಿಕೊಂಡಿದ್ದರು. ಈ ವಿಚಾರ ಗೊತ್ತಾಗಿ ಕಾರ್ತಿಕ್ ಅವರಿಗೆ ಬೈದು ಬುದ್ಧಿ ಹೇಳಿದ್ದ. ಅದೇ ದ್ವೇಷಕ್ಕೆ ಕೊಲೆ ನಡೆದಿದೆ. ಆದರೆ ಕಾರ್ತಿಕ್ ತಾಯಿ ಹೇಳುವುದೇ ಬೇರೆ.ಈ‌ ಕೊಲೆ ಹಿಂದೆ ಲಕ್ಷ್ಮೀ ಎನ್ನುವ ಮಹಿಳೆ ಇದ್ದಾಳೆ. ಆಕೆಯ ಕಾರಣವಾಗಿ ಈ ಕೊಲೆ ನಡೆದಿದೆ. ನಿನ್ನೆ ರಾತ್ರಿ ಆಕೆ ಕಾರ್ತಿಕ್​ಗೆ ಕರೆ ಮಾಡಿ ಊಟಕ್ಕೆ ಬಾ ಎಂದು ಕರೆದಿದ್ದಳು. ಆಕೆಯ ಕರೆ ಬಳಿಕ ಕಾರ್ತಿಕ್ ಮನೆಯಿಂದ ತೆರಳಿದ್ದ. ಅಲ್ಲಿಂದ ನೇರವಾಗಿ ಕಾರ್ತಿಕ್ ಹೋಟೆಲ್‌‌ಗೆ ಹೋಗಿದ್ದಾನೆ. ಅಲ್ಲಿ ಪ್ರವೀಣ್ ಎಂಬಾತ ತನ್ನ ಗ್ಯಾಂಗ್ ಜೊತೆ ಸೇರಿ ಕಾರ್ತಿಕ್‌ಗೆ ಹೊಡೆದಿದ್ದಾನೆ.

ಪ್ರವೀಣ್, ಕಾರ್ತಿಕ್ ಜೊತೆಯೇ ಇದ್ದವನು. ಇದೇ ಲಕ್ಷ್ಮೀ ವಿಚಾರಕ್ಕೆ ಈ ಹಿಂದೆ ಕಾರ್ತಿಕ್ ಹಾಗೂ ಪ್ರವೀಣ್ ನಡುವೆ ಗಲಾಟೆಯಾಗಿತ್ತು. ಕಾರ್ತಿಕ್, ಪ್ರವೀಣ್‌ಗೆ ಈ ವಿಚಾರವಾಗಿ ಬೆದರಿಕೆ ಹಾಕಿದ್ದ. ಇದರ‌ ಜೊತೆಗೆ ಕಾರ್ತಿಕ್ ಬಡ್ಡಿ ವ್ಯವಹಾರ ಕೂಡ ನಡೆಸುತ್ತಿದ್ದ. ಹಣಕಾಸಿನ ವೈಷಮ್ಯಕ್ಕೂ ಕಾರ್ತಿಕ್ ಕೊಲೆ ಆಗಿರಬಹುದು ಎಂದು ಶಂಕಿಸಲಾಗ್ತಿದೆ. ಈ ನಡುವೆ ಕೊಲೆ ಮಾಡಿದ ಬಳಿಕ ಶವದ ವಿಡಿಯೋ ಮಾಡಿಕೊಂಡು ಪ್ರವೀಣ್‌ ಡ್ಯಾನ್ಸ್ ಮಾಡಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ದೃಶ್ಯ ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ.

ಈ ಸಂಬಂಧ ವರುಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಕಾರ್ತಿಕ್ ಕೊಲೆಯಿಂದ‌ ಮೈಸೂರು ಬೆಚ್ಚಿ ಬಿದ್ದಿದೆ. ತಣ್ಣಗಿದ್ದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೆ ಸೇಡಿನ ಕೊಲೆಗಳು ನಡೆಯುತ್ತಾ ಅನ್ನೋ ಅನುಮಾನ ಮೂಡಿಸಿದೆ. ಒಟ್ಟಿನಲ್ಲಿ ಈ ಕೊಲೆಗೆ ಬೇರೆ ಬೇರೆ ರೀತಿಯಾದ ಕಾರಣಗಳು ಕಂಡುಬಂದಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Murder Case: ದಾವಣಗೆರೆಯಲ್ಲಿ ರೌಡಿಶೀಟರ್‌ ಕೊಚ್ಚಿ ಕೊಂದ ದುಷ್ಕರ್ಮಿಗಳು