No Diet Day: ಡಯೆಟ್ ರಹಿತ ದಿನ: ದೇಹವೆಂಬ ದೇವವೀಣೆಯನ್ನು ಗೌರವಿಸಿ
Health Tips: ಡಯಟ್ ಬಗ್ಗೆ ನಾವೆಲ್ಲ ಕೇಳಿದ್ದೇವೆ. ನೊ ಡಯಟ್ ಡೇ ಬಗ್ಗೆ ನಿಮಗೆ ಗೊತ್ತೆ? ಮೇ 6ರಂದು ಅಂತಾರಾಷ್ಟ್ರೀಯ ನೋ ಡಯಟ್ ಡೇ ಆಚರಿಸಲಾಗುತ್ತಿದೆ. ʻನೊ ಡಯೆಟ್ʼ ಎನ್ನುತ್ತಿದ್ದಂತೆ ಸಿಕ್ಕಿದ್ದೆಲ್ಲಾ ಕಬಳಿಸುವ ದಿನ ಎಂದರ್ಥವಲ್ಲ. ಹಾಗಾದರೆ ಏನಿದು ʻನೊ ಡಯೆಟ್ ಡೇ?ʼ ಇಲ್ಲಿದೆ ವಿವರ.

ಸಾಂದರ್ಭಿಕ ಚಿತ್ರ.

ಬೆಂಗಳೂರು: ಪ್ರತಿಯೊಬ್ಬರಿಗೂ ಲೋಕದ ಅತಿ ಸುಂದರ ಕಾಯವನ್ನೇ ಹೊಂದಬೇಕೆಂಬ ಅಭಿಲಾಷೆ ಇದ್ದರೆ, ಅದೇನು ಅತಿಯಲ್ಲ. ಫ್ಯಾಷನ್ ನಿಯತಕಾಲಿಕಗಳಲ್ಲಿ ಫೋಟೋಶಾಪ್ ಮಾಡಿದ ತಾರೆಗಳ ಚಿತ್ರಗಳು ಇದಕ್ಕೆ ಇನ್ನಷ್ಟು ಪ್ರೇರಣೆ ನೀಡುತ್ತವೆ. ಹುಡುಗಿಯರಿಗೆ ಬೆನ್ನು-ಹೊಟ್ಟೆ ಒಂದಾಗಿರುವಂತೆ, ಬಳುಕುವ ದೇಹ ಹೊಂದುವ ಮಹದಾಸೆಯಿದ್ದರೆ, ಹುಡುಗರಿಗೆ ದೇಹದ ನರ-ನರಗಳೆಲ್ಲ ಎದ್ದುಬರುವಂತೆ ಸ್ನಾಯುಗಳನ್ನು ಬೆಳೆಸಬೇಕೆಂಬ ಬಯಕೆ ಇರುತ್ತದೆ. ಇವುಗಳ ಹಿಂದೆ ಫಿಟ್‌ನೆಸ್ ಉದ್ದೇಶ ಇದ್ದರೆ ಒಂದು ಲೆಕ್ಕ (Health Tips). ಹೆಚ್ಚಿನ ಬಾರಿ ಹಾಗಾಗುವುದೇ ಇಲ್ಲ. ಬದಲಿಗೆ, ಸಮಾಜದಲ್ಲಿ ಎಲ್ಲರೂ ಒಪ್ಪುವಂಥ ಮೆಚ್ಚುವಂಥ ದೇಹವನ್ನು ಹೊಂದಬೇಕೆಂಬ ಆಸೆ ಇದರ ಹಿಂದಿರುತ್ತದೆ. ಹಾಗಾಗಿ, ಹುಕಿಗೆ ಬಿದ್ದವರಂತೆ ಏನಕ್ಕೇನೋ ಡಯೆಟ್ ಮಾಡುತ್ತಾ, ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ ಅಥವಾ ಜೀವವನ್ನೇ ಕಳೆದುಕೊಳ್ಳುತ್ತಾರೆ. ಇಂಥ ಅನಾರೋಗ್ಯಕರ ಪ್ರವೃತ್ತಿಗೆ ಕಡಿವಾಣ ಹಾಕುವ ಉದ್ದೇಶದಿಂದಲೇ ʻಅಂತಾರಾಷ್ಟ್ರೀಯ ಡಯೆಟ್ ರಹಿತ ದಿನʼ (No Diet Day)ವನ್ನಾಗಿ ಮೇ ತಿಂಗಳ 6ನೇ ದಿನವನ್ನು ಗುರುತಿಸಲಾಗಿದೆ.
ಏನಿದರರ್ಥ?
ʻನೊ ಡಯೆಟ್ʼ ಎನ್ನುತ್ತಿದ್ದಂತೆ ಸಿಕ್ಕಿದ್ದೆಲ್ಲಾ ಕಬಳಿಸುವ ದಿನ ಎಂದು ಗ್ರಹಿಸುವುದಲ್ಲ. ನಮ್ಮ ದೇಹದ ಬಗೆಗಿನ ಕೀಳರಿಮೆಯನ್ನು ಬಿಟ್ಟು, ಧನಾತ್ಮಕವಾಗಿ ದೇಹವನ್ನು ಗ್ರಹಿಸುವ ಮತ್ತು ಸೌಂದರ್ಯದ ಭ್ರಮೆಯಲ್ಲಿ ಶರೀರದ ಮೇಲೆ ಹುಚ್ಚು ಡಯೆಟ್ ಪ್ರಯೋಗಗಳನ್ನು ಮಾಡುವುದನ್ನು ನಿಲ್ಲಿಸಬೇಕೆಂಬ ಸಂದೇಶವನ್ನು ಸಾರುವ ದಿನವಿದು. ನಾವಿದ್ದಂತೆಯೇ ನಮ್ಮನ್ನು ಒಪ್ಪಿಕೊಳ್ಳುವುದು ಸಕಾರಾತ್ಮಕ ಜೀವನಕ್ಕೆ ಎಷ್ಟು ಮುಖ್ಯ ಎಂಬ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ. ಸೌಂರ್ಯದ ಹೆಸರಿನಲ್ಲಿ ಎಲ್ಲರೂ ಒಂದೇ ಮಾನದಂಡಕ್ಕೆ ಒಳಪಡುವುದು ಸಾಧ್ಯವಿಲ್ಲ. ಬದಲಿಗೆ, ವಿವಿಧತೆಯೇ ಸೌಂದರ್ಯ ಎಂಬ ಸರಳ ಸೂತ್ರ ಇದರ ಹಿಂದಿದೆ.
ಯಾಕೆ ಬಂತು ಈ ದಿನ?
ಇದು ಪ್ರಾರಂಭವಾಗಿದ್ದು ಬ್ರಿಟನ್‌ನಲ್ಲಿ 1992ರಲ್ಲಿ. ಅಲ್ಲಿನ ಮೇರಿ ಇವಾನ್ಸ್ ಯಂಗ್ ಈ ದಿನವನ್ನು ಮೊದಲಿಗೆ ಉದ್ದೇಶಿಸಿದ್ದು. ತನ್ನ ದೇಹ ಇರುವ ರೀತಿಯನ್ನು ಒಪ್ಪಿಕೊಳ್ಳಲಾರದೆ, ಆಹಾರ ಕ್ರಮವನ್ನು ಸಿಕ್ಕಾಪಟ್ಟೆ ಏರುಪೇರಾಗಿಸಿಕೊಂಡು, ಅದರಿಂದ ಅನೊರೆಕ್ಸಿಯ ರೋಗಕ್ಕೆ ಆಕೆ ತುತ್ತಾಗಿದ್ದರು. ಇದರಿಂದ ಚೇತರಿಸಿಕೊಂಡ ನಂತರ, ಸೌಂದರ್ಯದ ಹೆಸರಿನಲ್ಲಿ ಅವೈಜ್ಞಾನಿಕ ಡಯೆಟ್‌ಗಳನ್ನು ಪಾಲಿಸುವ ಪದ್ಧತಿಯ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ, ಲಂಡನ್‌ನ ಹೈಡ್ ಪಾರ್ಕ್‌ನಲ್ಲಿ ಇದನ್ನು ಪ್ರಾರಂಭಿಸಿದರು. ಅದೊಂದು, ಹತ್ತಿಪ್ಪತ್ತು ಮಂದಿ ಮಹಿಳೆಯರು ಭಾಗವಹಿಸಿದ್ದ, ಸಣ್ಣ ಪಿಕ್‌ನಿಕ್ ರೂಪದಲ್ಲಿ ಮೊದಲಾಯಿತು. ಡಯೆಟ್ ಹೆಸರಿನಲ್ಲಿ ತಲೆಬುಡವಿಲ್ಲದ ಆಹಾರ ಕ್ರಮಗಳಿಂದ ದೇಹ-ಮನಸ್ಸುಗಳ ಮೇಲೆ ಆಗುವ ವಿಪರೀತ ಪರಿಣಾಮಗಳನ್ನು ತಿಳಿಸುವುದು ಅಂದಿನ ಉದ್ದೇಶವಾಗಿತ್ತು.
ತೂಕದ ವಿಷಯಕ್ಕೆ ಅತಿ ಮಹತ್ವ ನೀಡುವುದು, ಯಾವುದೋ ಒಪ್ಪಿತ ಅಳತೆಗಳಿಗೆ ಒಗ್ಗದವರತ್ತ ತಾರತಮ್ಯ ಮಾಡುವುದು ಇಂಥವನ್ನೆಲ್ಲ ಬಿಟ್ಟು, ಆಹಾರದೊಂದಿಗೆ ಆರೋಗ್ಯಕರ ನಂಟು ಬೆಳೆಸಿಕೊಳ್ಳುವುದು ಅಗತ್ಯ. ಇದನ್ನೇ ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಆದರೆ ಡಯೆಟ್ ಮಾಡಬಾರದೆಂದರೆ ಏನೆಂಬುದನ್ನು ಇನ್ನಷ್ಟು ನಿಖರವಾಗಿ ಸ್ಪಷ್ಟಪಡಿಸುವ ಅಗತ್ಯವಿದೆ. ಹಾಗಲ್ಲದಿದ್ರೆ ತಪ್ಪು ಕಲ್ಪನೆಗಳಿಗೆ ಎಡೆಯಾಗಬಹುದು.
ಈ ಸುದ್ದಿಯನ್ನೂ ಓದಿ: Health Tips: ರಸಭರಿತ ಮಾವಿನಹಣ್ಣಿನ ಉಪಯೋಗವೇನು?

ಏನು ಮಾಡಬೇಕು?
ಮನಸ್ಸಿಗೆ ಬಂದಿದ್ದೆಲ್ಲ ತಿನ್ನುವುದನ್ನು ಪ್ರಚಾರ ಮಾಡುವ ದಿನವಲ್ಲ ಇದು. ಬದಲಿಗೆ ಆರೋಗ್ಯಕರ ಆಹಾರ ಕ್ರಮವನ್ನು ರೂಢಿಸಿಕೊಳ್ಳಲು ಅಂದು ಪ್ರೋತ್ಸಾಹ ನೀಡುವುದು ಮಹತ್ವದ್ದು. ದೇಹ-ಮನಸ್ಸಿಗೆ ಚೈತನ್ಯ ನೀಡುವಂಥ ಸಮತೋಲಿತ ಆಹಾರವನ್ನು ಸೇವಿಸುವುದಕ್ಕಿಂತ ದೇಹದ ತೂಕ, ಸಪೂರ ಕಾಣುವುದು ಮುಖ್ಯವಲ್ಲ. ದೇಹದ ತೂಕ ಕೆಲವೊಮ್ಮೆ ಆನುವಂಶಿಕವಾಗಿ ಬರಬಹುದು, ಹಾರ್ಮೋನುಗಳ ಏರುಪೇರಿನಿಂದ ಬರಬಹುದು, ಔಷಧಿಗಳ ಅಡ್ಡ ಪರಿಣಾಮಗಳಾಗಿರಬಹುದು. ಹಾಗಾಗಿ ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿ ಹಾಕದೆ, ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವತ್ತ ಗಮನ ಕೊಡಿ. ಯಾರದ್ದೋ ಫೋಟೋಶಾಪ್ ಮಾಡಿದ ದೇಹಗಳಂತೆ ತಮ್ಮದಿಲ್ಲ ಎಂದು ಕೊರಗಬೇಡಿ. ಒತ್ತಡ ರಹಿತವಾಗಿ ಬದುಕುವತ್ತ ಗಮನ ನೀಡಿ. ಧನಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಿ. ಆರೋಗ್ಯವಂತ ದೇಹದ ಸುಂದರ ನಗುವಿಗಿಂತ ಸುಂದರವಾಗಿದ್ದು ಲೋಕದಲ್ಲಿ ಇನ್ನಾವುದೂ ಇಲ್ಲ.