Dr Murali Mohan Choontaru Column: ವಾಸಿಯಾಗದ ಅಸ್ತಮಾ, ನಿಯಂತ್ರಣವೊಂದೇ ಪರಿಹಾರ !
1998ರಲ್ಲಿ ಆರಂಭವಾದ ಈ ವಿಶ್ವ ಅಸ್ತಮಾ ದಿನಾಚರಣೆಯನ್ನು ಪ್ರತಿ ವರ್ಷ ನಡೆಸಲಾಗುತ್ತದೆ. ಬಾರ್ಸಿಲೋನಾದಲ್ಲಿ ನಡೆದ ಮೊದಲ ವಿಶ್ವ ಅಸ್ತಮಾ ಸಮಾವೇಶದ ಸವಿ ನೆನಪಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಮಕ್ಕಳಿಗೆ ಉಸಿರಾಡಲು ನೆರವಾಗಿ ಎಂಬ ಧ್ಯೇಯ ವಾಕ್ಯದೊಂದಿಗೆ 1998ರಲ್ಲಿ ಆರಂಭವಾದ ಈ ಆಚರಣೆ, 2007ರಿಂದ 2015ರ ವರೆಗೆ ‘ನೀವು ನಿಮ್ಮ ಅಸ್ತಮಾವನ್ನು ಹತೋಟಿ ಯಲ್ಲಿಟ್ಟುಕೊಳ್ಳಬಹುದು’ ಎಂಬ ತಿರುಳಿನೊಂದಿಗೆ ಆಚರಿಸಲಾಯಿತು


ವಿಶ್ವ ಅಸ್ತಮಾ ದಿನ
ಡಾ.ಮುರಲೀ ಮೋಹನ್ ಚೂಂತಾರು
ಪ್ರತಿ ವರ್ಷ ಮೇ ತಿಂಗಳ ಮೊದಲನೇ ಮಂಗಳವಾರದಂದು ವಿಶ್ವ ಅಸ್ತಮಾ ದಿನ ಎಂದು ಆಚರಿಸ ಲಾಗುತ್ತಿದೆ. ವಿಶ್ವದಾದ್ಯಂತ ಅಸ್ತಮಾ ರೋಗದ ಬಗೆಗಿನ ಅಪನಂಬಿಕೆಗಳನ್ನು ಹೋಗ ಲಾಡಿಸಿ, ರೋಗದ ಬಗ್ಗೆ ಜಾಗೃತಿ ಮೂಡಿಸಿ, ರೋಗಿಗಳಿಗೆ ಆತ್ಮಸೈರ್ಯವನ್ನು ನೀಡುವ ಸದುದ್ದೇಶ ಈ ಆಚರಣೆಯ ಹಿಂದೆ ಇದೆ. ಅಸ್ತಮಾ ರೋಗವು ಶ್ವಾಸಕೋಶಗಳಿಗೆ ಸಂಬಂಧಿಸಿದ ದೀರ್ಘಕಾಲಿಕ ರೋಗವಾಗಿದ್ದು, ಮುಖ್ಯವಾಗಿ ರೋಗಿಯ ಉಸಿರಾಟದ ಪ್ರಕ್ರಿಯೆ ಮೇಲೆ ತೊಂದರೆಯನ್ನು ಉಂಟು ಮಾಡುತ್ತದೆ. ರೋಗದ ತೀವ್ರತೆ ಮತ್ತು ಕೆರಳುವಿಕೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿದ್ದು, ಅಸ್ತಮಾ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲಾಗದಿದ್ದರೂ, ನಿರಂತರವಾದ ಚಿಕಿತ್ಸೆ, ಸೂಕ್ತ ವೈದ್ಯ ಕೀಯ ಮಾರ್ಗದರ್ಶನ ಮತ್ತು ಜೀವನ ಶೈಲಿಯನ್ನು ಮಾರ್ಪಾಡು ಮಾಡಿ ರೋಗವನ್ನು ಖಂಡಿತ ವಾಗಿಯೂ ನಿಯಂತ್ರಣವಾಗಿಟ್ಟುಕೊಂಡು, ಜೀವನವನ್ನು ಇತರ ಎಲ್ಲರಂತೆ ಸಂಪೂರ್ಣವಾಗಿ ಆನಂದಿಸುವ ಎಲ್ಲಾ ಸಾಧ್ಯತೆಗಳೂ ಇದೆ.
1998ರಲ್ಲಿ ಆರಂಭವಾದ ಈ ವಿಶ್ವ ಅಸ್ತಮಾ ದಿನಾಚರಣೆಯನ್ನು ಪ್ರತಿ ವರ್ಷ ನಡೆಸಲಾಗುತ್ತದೆ. ಬಾರ್ಸಿಲೋನಾದಲ್ಲಿ ನಡೆದ ಮೊದಲ ವಿಶ್ವ ಅಸ್ತಮಾ ಸಮಾವೇಶದ ಸವಿ ನೆನಪಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಮಕ್ಕಳಿಗೆ ಉಸಿರಾಡಲು ನೆರವಾಗಿ ಎಂಬ ಧ್ಯೇಯ ವಾಕ್ಯದೊಂದಿಗೆ 1998ರಲ್ಲಿ ಆರಂಭವಾದ ಈ ಆಚರಣೆ, 2007ರಿಂದ 2015ರ ವರೆಗೆ ‘ನೀವು ನಿಮ್ಮ ಅಸ್ತಮಾವನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು’ ಎಂಬ ತಿರುಳಿನೊಂದಿಗೆ ಆಚರಿಸಲಾಯಿತು.
‘ಎಲ್ಲರಿಗೂ ಇನ್ಹೇಲ್ಡ್ ಚಿಕಿತ್ಸೆಗಳು ಲಭ್ಯವಾಗುವಂತೆ ಮಾಡಿ’ ಎನ್ನುವುದು 2025ರ ದಿನಾಚರಣೆಯ ಧ್ಯೇಯ ವಾಕ್ಯ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳ ಪ್ರಕಾರ ಜಗತ್ತಿನಲ್ಲಿ ಸುಮಾರು 26.2 ಕೋಟಿ ಅಸ್ತಮಾ ರೋಗಿಗಳಿದ್ದಾರೆ. ಭಾರತವೊಂದರಲ್ಲೇ ಸುಮಾರು ಒಂದೂವರೆ ಕೋಟಿ ಜನರು ಅಸ್ತಮಾದಿಂದ ಬಳಲುತ್ತಿದ್ದಾರೆ.
ವಿಶ್ವದಲ್ಲಿ ವಾರ್ಷಿಕ ಸುಮಾರು 2.5 ಲಕ್ಷ ಅಸ್ತಮಾ ರೋಗಿಗಳು ಸಾವನ್ನಪ್ಪುತ್ತಾರೆ ಎಂದು ತಿಳಿದು ಬಂದಿದೆ. ಈ ಕಾರಣದಿಂದಲೇ ಇಡೀ ಮೇ ತಿಂಗಳಲ್ಲಿ ಅಸ್ತಮಾ ರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಿ, ಅಸ್ತಮಾ ರೋಗವನ್ನು ತಡೆಗಟ್ಟುವ ಮತ್ತು ಹತೋಟಿಯಲ್ಲಿಡುವ ವಿವಿಧ ಶಿಬಿರಗಳನ್ನು ಏರ್ಪಡಿಸಿ, ಜನರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಮೇ ತಿಂಗಳನ್ನು ಅಸ್ತಮಾ ತಿಳಿವಳಿಕೆ ತಿಂಗಳು ಎಂದು ಆಚರಿಸಲಾಗುತ್ತಿದೆ.
ಇದನ್ನೂ ಓದಿ: Dr Prabhu Basarakoda Column: ಕೃತಕ ಬುದ್ಧಿಮತ್ತೆ: ಮಾನವೀಯತೆಯ ಅಂತ್ಯವೇ ?
ಏನಿದು ಅಸ್ತಮಾ ಖಾಯಿಲೆ?
ಅಸ್ತಮಾ ಎನ್ನುವುದು ಶ್ವಾಸಕೋಶಗಳಿಗೆ ಸಂಬಂಧಿಸಿದ ದೀರ್ಘಕಾಲಿಕ ಖಾಯಿಲೆಯಾಗಿದೆ. ಶ್ವಾಸ ಕೋಶಗಳು ನಮ್ಮ ದೇಹದ ಅತ್ಯಂತ ಕ್ರಿಯಾತ್ಮಕವಾದ ಅಂಗವಾಗಿದ್ದು ದೇಹದ ಎಲ್ಲಾ ಜೀವಕೋಶ ಗಳಿಗೆ ಅತೀ ಅಗತ್ಯವಾದ ಅಕ್ಸಿಜನ್ (ಆಮ್ಲಜನಕ)ನ ಪೂರೈಕೆಯನ್ನು ಮಾಡುವ ಗುರುತರವಾದ ಜವಬ್ದಾರಿಯನ್ನು ಹೊಂದಿರುತ್ತದೆ. ನಾವು ಮೂಗಿನ ಮೂಲಕ ಒಳಗೆಳೆದುಕೊಂಡ ಗಾಳಿ ಶ್ವಾಸನಾಳಗಳು ಅಥವಾ ಶ್ವಾಸಮಾರ್ಗಗಳ ಮೂಲಕ ಶ್ವಾಸಕೋಶಕ್ಕೆ ತಲುಪುತ್ತದೆ.
ಶ್ವಾಸಕೋಶಗಳಲ್ಲಿರುವ ಚಿಕ್ಕ ಚಿಕ್ಕ ಗಾಳಿಚೀಲಗಳ ಮುಖಾಂತರ ನಾವು ಸೇವಿಸಿದ ಗಾಳಿಯಲ್ಲಿನ ಆಮ್ಲಜನಕ ಶ್ವಾಸಕೋಶದ ಒಳಗಿರುವ ರಕ್ತನಾಳಗಳ ಒಳಗೆ ಸೇರಿಕೊಂಡು ದೇಹದ ಇತರ ಎಲ್ಲಾ ಅಂಗಾಂಗಗಳಿಗೆ, ಜೀವಕೋಶಗಳಿಗೆ ರಕ್ತದ ಮುಖಾಂತರ ಆಮ್ಲಜನಕದ ಪೂರೈಕೆಯಾಗುತ್ತ ಲಿರುತ್ತದೆ. ಈ ಆಮ್ಲಜನಕದ ಪೂರೈಕೆಯಲ್ಲಿ ಸ್ವಲ್ಪವಾದರೂ ವ್ಯತ್ಯಾಸವಾದಲ್ಲಿ ಉಸಿರಾಟದ ತೊಂದರೆ ಉಂಟಾಗಿ ಮನುಷ್ಯನಿಗೆ ಚಡಪಡಿಕೆ ಉಂಟಾಗುತ್ತದೆ. ಅಸ್ತಮಾ ಎನ್ನುವ ರೋಗ ಮುಖ್ಯವಾಗಿ ಈ ಶ್ವಾಸನಾಳಗಳಿಗೆ ಮತ್ತು ಶ್ವಾಸಕೋಶದ ಚಿಕ್ಕಚಿಕ್ಕ ಗಾಳಿಚೀಲಗಳಿಗೆ ಸಂಬಂಧಿಸಿದ ದೀರ್ಘಕಾಲಿಕ ರೋಗವಾಗಿದ್ದು ಸುದೀರ್ಘ ಕಾಲದ ಚಿಕಿತ್ಸೆ ಮತ್ತು ನಿರಂತರವಾದ ಆರೈಕೆ ಅತೀ ಅವಶ್ಯಕ.
ವಾತಾವರಣದ ಕಾರಣಗಳು ಮತ್ತು ವಂಶವಾಹಿನಿ ಕಾರಣಗಳು ಸಂಯುಕ್ತವಾಗಿ ಅಸ್ತಮಾ ರೋಗಕ್ಕೆ ಕಾರಣವಾಗಿದೆ. ಪರಿಸರ ಮತ್ತು ಜೈವಿಕ ಕಾರಣದಿಂದಾಗಿ ಅಸ್ತಮಾ ರೋಗಿಗಳ ಶ್ವಾಸ ಮಾರ್ಗವೂ ಉರಿಯೂತದಿಂದ ಕೂಡಿರುತ್ತದೆ. ರೋಗಿಯು ತನಗೆ ಬಹಳ ಸಂವೇಧನಾ ಕಾರಕವಾಗಿರುವ ಅಲರ್ಜಿಕಾರಕ ವಸ್ತುಗಳನ್ನು ಶ್ವಾಸೋಛ್ಛಾಸ ಮಾಡಿದಾಗ ಉರಿಯೂತವನ್ನು ಮತ್ತಷ್ಟು ಕೆರಳಿಸು ತ್ತದೆ.
ಹೀಗಾದಾಗ ಶ್ವಾಸಮಾರ್ಗಗಳ ಉರಿಯೂತವು ಶ್ವಾಸಮಾರ್ಗದ ವಾಯು ಸಂಚಲನಕ್ಕೆ ಸಂಚಕಾರ ಮಾಡಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ಶೀತ ಗಾಳಿ, ವೈರಾಣುಗಳು ಅಲರ್ಜಿಕಾರಕ ವಸ್ತುಗಳಾದ ಧೂಳು, ಮರಳು, ನಾರು ಅಥವಾ ಇನ್ನಾವುದೇ ಕಾರಣಗಳು ಶ್ವಾಸಮಾರ್ಗದ ಉರಿಯೂತವನ್ನು ಹೆಚ್ಚಾಗಿಸಿ ಅಸ್ತಮಾ ರೋಗ ಉಲ್ಬಣಿಸುವಂತೆ ಮಾಡುತ್ತದೆ.
ಅಸ್ತಮಾ ರೋಗದ ಲಕ್ಷಣಗಳು
- ಉಬ್ಬಸ ಅಥವಾ ಉಸಿರಾಡುವ ಸಮಯದಲ್ಲಿ ಗೊರ ಗೊರ ಸದ್ದುಕೇಳಿಸುವುದು ಅಥವಾ ಉಸಿರಾಡುವಾಗ ಸಿಳ್ಳೆ ಹಾಕಿದಂತೆ ಸದ್ದು ಬರುವುದು.
- ಎದೆ ಬಿಗಿಹಿಡಿತ, ಉಸಿರು ಕಿರಿದಾಗುವುದು, ಉಸಿರಾಡಲು ಕಷ್ಟವಾಗುವುದು
- ವಿಪರೀತವಾದ ದೀರ್ಘಕಾಲಿಕ ಕೆಮ್ಮು
- ವಿಪರೀತ ಮತ್ತು ನಿರಂತರ ಕೆಮ್ಮಿನಿಂದಾಗಿ ನಿದ್ರಾಹೀನತೆ, ನಿಶ್ಯಕ್ತಿ,ಅಸಹನೆ, ನಿರುತ್ಸಾಹ... ಆಟೋಟ ಮತ್ತು ಇತರ ಚಟುವಟಿಕೆಗಳಿಂದ ದೂರ ಇರುವುದು ಇತ್ಯಾದಿ. ಅಸ್ತಮಾ ಅಘಾತ ಅಸ್ತಮಾ ರೋಗದಿಂದ ಬಳಲುತ್ತಿರುವವರು ದೈನಂದಿನ ಚಟುವಟಿಕೆಗಳನ್ನು ಅತಿಯಾಗಿ ಕಾಳಜಿ ವಹಿಸಬೇಕಾಗುತ್ತದೆ.
ಅಲರ್ಜಿಕಾರಕ ವಸ್ತುಗಳಿಗೆ ಒಡ್ಡಿಕೊಂಡಾಗ ಅಸ್ತಮಾ ಕೆರಳುತ್ತದೆ. ಧೂಳಿನ ಕಣಗಳು, ಪರಾಗದ ಕಣಗಳು, ಸಾಕುಪ್ರಾಣಿಗಳ ರೋಮಗಳು, ಹುರುಪೆಗಳು ಇತ್ಯಾದಿಗಳು ಹೆಚ್ಚಾಗಿ ಅಸ್ತಮಾ ಅಲರ್ಜಿ ಕಾರಕ ವಸ್ತಗಳಾಗಿರುತ್ತದೆ. ಕೆಲವೊಮ್ಮೆ ಅಲರ್ಜಿಕಾರಕ ವಸ್ತುಗಳಲ್ಲದೆ ಶೀತಗಾಳಿ/ತಂಪುಗಾಳಿ, ವಾಯುಮಾಲಿನ್ಯ, ಹೊಗೆ, ವಿಪರೀತ ಒತ್ತಡ, ಶೀತ ಪದಾರ್ಥ ಸೇವನೆ, ಅಜೀರ್ಣವಾದಾಗ, ಆಹಾರ ದಲ್ಲಿ ವಿಷಬೆರಕೆ ಆದಾಗಲೂ ಅಸ್ತಮಾ ರೋಗ ಕೆರಳುವ ಸಾಧ್ಯತೆ ಇರುತ್ತದೆ.
ಕೆಲವೊಮ್ಮೆ ದೈಹಿಕ ವ್ಯಾಯಾಮದ ಬಳಿಕವೂ ಅಸ್ತಮಾ ಅಘಾತ ಉಂಟಾಗಬಹುದು. ಈ ರೀತಿ ಸ್ತಮಾ ಕೆರಳಿದಾಗ ಶ್ವಾಸ ಮಾರ್ಗದ ಸುತ್ತಲಿರುವ ಸ್ನಾಯುಗಳು ಬಿಗಿಯಾಗಿ ಸೆಟೆದು ನಿಲ್ಲುತ್ತದೆ. ಶ್ವಾಸ ಮಾರ್ಗದ ಸುತ್ತಳತೆ ಕಡಿಮೆಯಾಗಿ ಗಾಳಿಯ ಸಂಚಲನೆ ಕುಂಠಿತವಾಗ ಬಹುದು. ಅದೇ ರೀತಿ ಶ್ವಾಸ ಮಾರ್ಗದೊಳಗಿನ ಒಳಪದರ ಊದಿಕೊಂಡು ಉರಿಯೂತ ಉಲ್ಬಣಿಸುತ್ತದೆ ಮತ್ತು ಶ್ವಾಸ ಮಾರ್ಗದಲ್ಲಿ ಲೊಳೆಯ ಉತ್ಪನ್ನ ಜಾಸ್ತಿಯಾಗಿ ಗಾಳಿಯ ಸಂಚಾರಕ್ಕೆ ಮತ್ತಷ್ಟು ಸಂಚಕಾರ ತರುತ್ತದೆ.
ಹೀಗೆ ಗಾಳಿಯ ಸಂಚಾರವಿಲ್ಲದಾಗ ಆಮ್ಲಜನಕದ ಕೊರತೆಯಾಗಿ ರಕ್ತಕ್ಕೆ ಮತ್ತು ದೇಹದ ಇನ್ನಿತರ ತುರ್ತು ಮತ್ತು ಅನಿವಾರ್ಯ ಅಂಗಾಂಗಗಳಾದ ಮೆದುಳು ಕಿಡ್ನಿಗಳಿಗೆ ಆಮ್ಲಜನಕದ ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗಿ ಮಾರಣಾಂತಿಕವಾಗಿ ಪರಿಣಮಿಸಲೂಬಹುದು.
ಅಸ್ತಮಾ ರೋಗಕ್ಕೆ ಪರಿಹಾರ ಅಥವಾ ಸಂಪೂರ್ಣ ಚಿಕಿತ್ಸೆ ಇಲ್ಲವಾದ ಕಾರಣದಿಂದ ಪರಿಣಾಮ ಕಾರಿ ಚಿಕಿತ್ಸೆ ಮತ್ತು ನಿಯಂತ್ರಣದ ಮುಖಾಂತರ ಅಸ್ತಮಾದ ರೋಗದ ಲಕ್ಷಣಗಳನ್ನು ನಿಯಂತ್ರಿಸ ಬೇಕು. ವೈದ್ಯರ ಸಲಹೆಯಂತೆ ಸೂಕ್ತ ಕಾಲದಲ್ಲಿ ಸರಿಯಾದ ಔಷಧಿ ಸೇವಿಸುತ್ತಾ ಅಸ್ತಮಾ ಕೆರಳಿ ಸುವ ವಸ್ತುಗಳಿಂದ ದೂರವಿರುವುದರಲ್ಲಿಯೇ ಜಾಣತನ ಅಡಗಿದೆ.
ಅಸ್ತಮಾ ಪತ್ತೆ ಹಚ್ಚುವುದು ಹೇಗೆ ?
ಶ್ವಾಸಕೋಶದ ಸಂಬಂಧಿ ರೋಗಿಗಳು ಇರುವವರಿಗೆ ಸ್ಪೈರೋ ಮೆಟ್ರಿ ಎಂಬ ವಿಶಿಷ್ಟ ಪರೀಕ್ಷೆ ಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ರೋಗಿಗಳು ದೀರ್ಘ ಉಸಿರುಗಳನ್ನು ಎಳೆದುಕೊಂಡು ಪರೀಕ್ಷೆ ಯಂತ್ರದ ಸೆನ್ಸಾರ್ ಪದರದ ಮೇಲೆ ಉಸಿರನ್ನು ಬಿಡಬೇಕು. ಈ ರೀತಿಯಿಂದ ರೋಗಿಗಳು ಉಸಿರನ್ನು ಒಳಗೆ ತೆಗೆದುಕೊಳ್ಳುವ ಮತ್ತು ಹೊರಗೆ ಬಿಡುವ ಪ್ರಮಾಣವನ್ನು ಮಾಪನ ಮಾಡಲಾಗುತ್ತದೆ.
ಈ ಪರೀಕ್ಷೆಯಿಂದ ರೋಗಿಯೊಬ್ಬನ ಶ್ವಾಸಕೋಶದಿಂದ ಎಷ್ಟು ಪ್ರಮಾಣದ ಗಾಳಿಯನ್ನು ಸರಬ ರಾಜು ಮಾಡಲಾಗುತ್ತದೆ ಎಂಬುದನ್ನು ಮಾಪನ ಮಾಡಲಾಗುತ್ತದೆ. ಅಸ್ತಮಾ ಮತ್ತು ಇನ್ನಿತರ ಯಾವುದೇ ಶ್ವಾಸಕೋಶ ಸಂಬಂಧಿ ರೋಗಗಳಿರುವವರಿಗೆ ಸ್ಪೈರೋಮೆಟ್ರಿ ಪರೀಕ್ಷೆಯ ಮುಖಾಂತರ ರೋಗದ ತೀವ್ರತೆ ಮತ್ತು ಚಿಕಿತ್ಸೆಯ ಸ್ಪಂದನ ಹಾಗೂ ಪ್ರಗತಿಯನ್ನು ಅಂದಾಜಿಸ ಲಾಗುತ್ತದೆ. ಈ ಪರೀಕ್ಷೆಯು ಫಲಿತಾಂಶಕ್ಕೆ ಅನುಗುಣವಾಗಿ ಅಸ್ತಮಾದ ತೀವ್ರತೆಯನ್ನು ನಿರ್ಧರಿಸಿ ಚಿಕಿತ್ಸೆ ಮತ್ತು ಔಷಧಿಯ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ.
ಅದೇ ರೀತಿ ಅಲರ್ಜಿ ಪರೀಕ್ಷೆಯನ್ನು ನಡೆಸಿ ರೋಗಿಗಳು ಯಾವ ವಸ್ತುಗಳಿಗೆ ಅಲರ್ಜಿ ಗೊಳಗಾಗು ತ್ತಾರೆ ಎಂಬುದನ್ನು ತಿಳಿಯಲಾಗುತ್ತದೆ. ಅಸ್ತಮಾ ರೋಗಕ್ಕೆ ಕಾರಣವಾಗುವ ಅಲರ್ಜಿಕಾರಕ ವಸ್ತುಗಳನ್ನು ಗುರುತಿಸಿ ಅಂತಹ ವಸ್ತುಗಳನ್ನು ಸೇವಿಸದಂತೆ ಅಥವಾ ವಸ್ತುಗಳಿಗೆ ಎದುರಾಗ ದಂತೆ ಸೂಕ್ತ ಎಚ್ಚರವನ್ನು ವಹಿಸಲಾಗುತ್ತದೆ.
ಅದೇ ರೀತಿ ಎದೆಗೂಡಿನ ಎಕ್ಸರೇ, ಮೂಗಿನ ಎಲುಬಿನ ಕ್ಷ ಕಿರಣ, ದೇಹದ ರಕ್ತದಲ್ಲಿನ ಅಲರ್ಜಿಯ ಪ್ರಮಾಣ ಮುಂತಾದ ಪರೀಕ್ಷೆಯ ಮುಖಾಂತರ ರೋಗಿಯನ್ನು ಕುಲಂಕಶವಾಗಿ ಅಭ್ಯಸಿಸಿದ ಬಳಿಕವೇ ಚಿಕಿತ್ಸೆಯನ್ನು ಆರಂಭಿಸಲಾಗುತ್ತದೆ. ಒಂದು ವೇಳೆ ರೋಗಿಯು ಯಾವುದಾದರೂ ವಸ್ತುಗಳಿಗೆ ಅಲರ್ಜಿ ಹೊಂದಿದ್ದಾನೆ ಎಂಬುದು ಪರೀಕ್ಷೆಗಳಿಂದ ಸಾಬಿತಾದಲ್ಲಿ ಅಂತಹ ವಸ್ತುಗಳು ಪುನಃ ಆ ವ್ಯಕ್ತಿಗೆ ಅಸ್ತಮಾ ರೋಗವನ್ನು ಕೆರಳಿಸುವ ಸಾಧ್ಯತೆ ಅಧಿಕವಾಗಿರುತ್ತದೆ. ಈ ನಿಟ್ಟಿನಲ್ಲಿ ಸೂಕ್ತವಾದ ಪರೀಕ್ಷೆ ಮತ್ತು ಎಚ್ಚರಿಕೆಗಳನ್ನು ವಹಿಸುವುದರಿಂದ ಅಸ್ತಮಾ ಕೆರಳುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.
ಚಿಕಿತ್ಸೆ ಹೇಗೆ?
ಅಸ್ತಮಾ ಎನ್ನುವುದು ದೀರ್ಘಕಾಲಿಕ ಖಾಯಿಲೆಯಾಗಿದ್ದು ಸಂಪೂರ್ಣವಾಗಿ ರೋಗವನ್ನು ಗುಣಪಡಿಸುವುದು ಸಾಧ್ಯವಿಲ್ಲದ ಮಾತು. ಆದರೆ ಪರಿಣಾಮಕಾರಿಯಾದ ಚಿಕಿತ್ಸೆ ಮತ್ತು ಸೂಕ್ತ ಮಾರ್ಗದರ್ಶನದ ಮೂಲಕ ರೋಗದ ಲಕ್ಷಣಗಳನ್ನು ನಿಯಂತ್ರಿಸಬಹುದು. ವೈದ್ಯರು ಸೂಚಿಸಿದ ಔಷಽಗಳನ್ನು ಸೂಕ್ತ ಪ್ರಮಾಣದಲ್ಲಿ ಸಕಾಲದಲ್ಲಿ ಸೇವಿಸಬೇಕು. ಮತ್ತು ಅಸ್ತಮಾದ ಲಕ್ಷಣಗಳನ್ನು ಉದ್ರೇಕಿಸುವ ಅಂಶಗಳಿಂದ ದೂರವಿರುವುದು ಒಳಿತು. ಅಲರ್ಜಿಕಾರಕ ಅಂಶಗಳನ್ನು ಆದಷ್ಟು ತಪ್ಪಿಸಿಕೊಳ್ಳಬೇಕು. ಸಾಮಾನ್ಯವಾಗಿ ಅಸ್ತಮಾ ಚಿಕಿತ್ಸೆಯಲ್ಲಿ ಎರಡು ಬಗೆಯ ಮೂಲ ಔಷಧ ಗಳನ್ನು ಬಳಸಲಾಗುತ್ತದೆ.
- ಅಸ್ತಮಾ ಅಘಾತವನ್ನು ತಡೆಯುವ ನಿಯಂತ್ರಣ ಔಷಧಿಗಳು : ಈ ರೀತಿಯ ಔಷಧಿಗಳು ಅಸ್ತಮಾ ರೋಗ ಲಕ್ಷಣಗಳನ್ನು ಪರಿಣಾಮಕಾರಿಯಗಿ ನಿಯಂತ್ರ್ರಿಸುತ್ತದೆ. ಮತ್ತು ಅಸ್ತಮಾ ರೋಗಕ್ಕೆ ಕಾರಣವಾಗಿರುವ ಉರಿಯೂತದಂತಹ ತೊಂದರೆಗಳು ಮರುಕಳಿಸದಂತೆ ಮತ್ತು ನಿರಂತರವಾಗಿರದಂತೆ ನಿಯಂತ್ರಿಸುತ್ತದೆ. ಆದರೆ ಅಸ್ತಮಾ ರೋಗದ ಸಂಪೂರ್ಣ ನಿಯಂತ್ರಣ ಕ್ಕಾಗಿ ರೋಗಿಗಳು ಈ ಔಷಧಿಗಳನ್ನು ಪ್ರತೀ ದಿನ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ರೋಗಿಗಳು ಸಹಜ ಸ್ಥಿತಿಯಲ್ಲಿರುವ ಸಮಯದಲ್ಲಿಯೂ ಈ ಔಷಧಿಗಳನ್ನು ತೆಗೆದುಕೊಳ್ಳ ಬೇಕಾಗುತ್ತದೆ.
ಸೇದಬಹುದಾದ ಅಥವಾ ಶ್ವಾಸದ ಮುಖಾಂತರ ಒಳಗೆಳೆದುಕೊಳ್ಳಬಹುದಾದ ಸ್ಟಿರಾಯ್ಡ್‌ಗಳು ಬಹಳ ಪರಿಣಾಮಕಾರಿಯಾದ ಮತ್ತು ದೀರ್ಘಕಾಲಿಕ ಅಸ್ತಮಾ ನಿಯಂತ್ರಣಕ್ಕಾಗಿ ಬಳಸುವ ಔಷಧಿ ಯಾಗಿರುತ್ತದೆ. ಈ ರೀತಿ ಔಷಧಿಯ ಬಳಕೆಯಿಂದ ಅಸ್ತಮಾ ರೋಗದ ಲಕ್ಷಣವು ಕಡಿಮೆಯಾಗಿ ಆರೋಗ್ಯ ವೃದ್ಧಿಯಾಗುತ್ತದೆ. ಅಸ್ತಮಾ ತೀವ್ರ ಅಘಾತದ ಪ್ರಮಾಣ ಕಡಿಮೆಯಾಗಿ ಕ್ಷಿಪ್ರ ಉಪಶಮನ ಕಾರಿ ಔಷಧಿಗಳ ಬಳಕೆ ಕೂಡಾ ಕಡಿಮೆಯಾಗುತ್ತದೆ.
ಒಟ್ಟಿನಲ್ಲಿ ಈ ರೀತಿಯ ಔಷಧಿಗಳು ಹೆಚ್ಚು ಅಸ್ತಮಾ ರೋಗವನ್ನು ತಡೆಗಟ್ಟುವಲ್ಲಿ ಮತ್ತು ರೋಗ ಉಲ್ಬಣಗೊಳ್ಳದಂತೆ ತಡೆಯುವ ಕೆಲಸವನ್ನು ಪರಿಣಾಮಕಾರಿಯಾಗಿ ನಡೆಸುತ್ತದೆ.
- ಕ್ಷಿಪ್ರ ಉಪಶಮನಕಾರಿ ಔಷಧಿಗಳು: ಸಾಮಾನ್ಯವಾಗಿ ಅಸ್ತಮಾ ಅಘಾತದ ಸಂದರ್ಭದ ಈ ಕ್ಷಿಪ್ರ ಉಪಶಮನಕಾರಿ ಔಷಧಿಗಳನ್ನು ಬಳಸಲಾಗುತ್ತದೆ. ಈ ಔಷಧಿಗಳು ಜೀವ ಸಂರಕ್ಷಣಾ ಔಷಽಗಳಾಗಿದ್ದು ಅಸ್ತಮಾ ಕೆರಳಿದ ತಕ್ಷಣ ಉಪಶಮನ ದೊರಕಲು ತೆಗೆದುಕೊಳ್ಳಬೇಕಾಗುತ್ತದೆ. ಈ ಜೀವ ರಕ್ಷಕ ಔಷಧಿಗಳು ಶ್ವಾಸನಾಳಗಳನ್ನು ಹಿಗ್ಗಿಸಿ ಗಾಳಿಯ ಚಲನೆಯನ್ನು ಹೆಚ್ಚಿಸಿ ರೋಗದ ಲಕ್ಷಣಗಳನ್ನು ಕುಗ್ಗಿಸಿ ತ್ವರಿತ ಆರಾಮ ನೀಡುತ್ತವೆ. ಈ ರೀತಿಯ ಕ್ಷಿಪ್ರ ಉಪಶಮನ ಕಾರಿ ಔಷಧಿ ಗಳನ್ನು ನಿಯಂತ್ರಕ ಔಷಧಿಗಳ ಬದಲಾಗಿ ತೆಗೆದುಕೊಳ್ಳಬಾರದು.
ನಿಮ್ಮ ಔಷಧಿಗಳ ಬಗ್ಗೆ ಯಾವುದೇ ಸಂದೇಹವಿದ್ದಲ್ಲಿ ತಜ್ಞ ವೈದ್ಯರ ಬಳಿ ಸೂಕ್ತ ಮಾರ್ಗದರ್ಶನ ತೆಗೆದುಕೊಂಡಲ್ಲಿ ಉತ್ತಮ. ನೆನಪಿರಲಿ ಪ್ರತಿಯೊಬ್ಬ ಅಸ್ತಮಾ ರೋಗಿಯು ತನ್ನ ಬಳಿ ಈ ಕ್ಷಿಪ್ರ ಉಪಶಮನ ಔಷಧಿಗಳನ್ನು ಇಟ್ಟುಕೊಳ್ಳುವುದು ಅತೀ ಅವಶ್ಯಕ. ಇಲ್ಲವಾದಲ್ಲಿ ಅಪಾಯ ಕಟ್ಟಿಟ ಬುತ್ತಿ.
ತಡೆಗಟ್ಟುವುದು ಹೇಗೆ ?
ಅಸ್ತಮಾ ರೋಗಕ್ಕೆ ಸಂಪೂರ್ಣ ಪರಿಹಾರವಿಲ್ಲದ ಕಾರಣ ತಡೆಗಟ್ಟುವ ಪ್ರಕ್ರಿಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ವ್ಯಕ್ತಿಯು ಯಾವ ಕಾರಣಕ್ಕಾಗಿ ಅಸ್ತಮಾರೋಗಕ್ಕೆ ತುತ್ತಾಗುತ್ತಾನೆ ಎಂಬುದನ್ನು ಅರಿತು ಅಲರ್ಜಿ ಕಾರಕ ವಸ್ತುಗಳನ್ನು ವ್ಯಕ್ತಿಯ ಸಂಪರ್ಕಕ್ಕೆ ಬರದಂತೆ ಎಚ್ಚರ ವಹಿಸಬೇಕು. ಉದಾ: ಧೂಳು, ಧೂಮಪಾನದ ಹೊಗೆ, ಆಸ್ಪ್ಪರೀನ್ ಮುಂತಾದ ನೋವು ನಿವಾರಕ ಔಷಽಗಳು, ಸಾಕು ಪ್ರಾಣಿಗಳ ರೋಮ, ಅಲರ್ಜಿಕಾರಕ ಆಹಾರ ಪದಾರ್ಥಗಳು. ಚಾಕಲೇಟು ಇತ್ಯಾದಿ. ಜೀವನ ಶೈಲಿಯ ಪರಿವರ್ತನೆಗೆ ಹೆಚ್ಚಿನ ಒತ್ತು ನೀಡಿ ವಾತವರಣದಲ್ಲಿನ ಅಲರ್ಜಿಕಾರಕ ವಸ್ತುಗಳು ಅಥವಾ ರಾಸಾಯನಿಕಗಳ ಸಂಪರ್ಕಕ್ಕೆ ಬರದಂತೆ ಹೆಚ್ಚಿನ ನಿಗಾ ವಹಿಸಲಾಗುತ್ತದೆ.
ಮುಕ್ತಾಯದ ಮುನ್ನ
ಅಸ್ತಮಾ ರೋಗ ಬಹಳ ಹಳೆಯ ರೋಗವಾಗಿದ್ದು ಪುರಾತನ ಈಜಿಪ್ಟ್ ಇತಿಹಾಸದಲ್ಲಿ ಕ್ರಿಸ್ತಪೂರ್ವ 500ರ ಸಮಯದಲ್ಲಿಯೂ ದಾಖಲಾದ ಬಗ್ಗೆ ವಿವರಗಳು ಇದೆ. ಆ ಕಾಲದಲ್ಲಿ ಕೈಪಿ ಎಂಬ ರಾಸಾಯನಿಕ ಮಿಶ್ರಿತ ನೀರಿನ ಮುಖಾಂತರ ಚಿಕಿತ್ಸೆ ನೀಡಿದ ದಾಖಲೆಗಳು ಇದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಅಥವಾ ಶೀತ ಹವೆಯಲ್ಲಿ ರಕ್ತನಾಳಗಳು ಸಂಕುಚಿತಗೊಂಡು ಶ್ವಾಸಕೋಶ ಸಂಬಂಧಿ ಹೆಚ್ಚಿನ ರೋಗಗಳು ಉಲ್ಬಣಗೊಳ್ಳುವುದು ಸಹಜ.
ಅಸ್ತಮಾ ರೋಗ ಕೂಡಾ ಇದಕ್ಕೆ ಹೊರತಾಗಿಲ್ಲ. ಸಂಪೂರ್ಣವಾದ ಪರಿಹಾರ ಈ ರೋಗಕ್ಕೆ ಇಲ್ಲ ದಿದ್ದರೂ ಸೂಕ್ತ ಔಷಧಿಗಳನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಂಡಲ್ಲಿ ಅಸ್ತಮಾ ರೋಗ ಉಲ್ಬಣವಾಗದಂತೆ ಪರಿಣಾಮಕಾರಿಯಾಿ ತಡೆಯಲು ಸಾಧ್ಯವಿದೆ. ಕಾಲಕಾಲಕ್ಕೆ ವೈದ್ಯರನ್ನು ಕಂಡು ರೋಗದ ಲಕ್ಷಣಗಳು ಮರುಕಳಿಸದಂತೆ ಎಚ್ಚರ ವಹಿಸಿದಲ್ಲಿ ಅಸ್ತಮಾ ರೋಗ ನಮ್ಮ ದೈನಂದಿನ ಚಟುವಟಿಕೆಗಳಿಗೆ ಯಾವುದೇ ತೊಡಕಾಗದಂತೆ ಮಾಡಬಹುದು. ಅಸ್ತಮಾ ರೋಗದ ಸೂಕ್ತ ನಿರ್ವಹಣೆಯಲ್ಲಿ ರೋಗದ ಚಿಕಿತ್ಸೆಗಿಂತ ರೋಗ ತಡೆಗಟ್ಟುವ ಪ್ರಕ್ರಿಯೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.