Food Adulteration: ಇಡ್ಲಿ, ಪನೀರ್, ಪಾನಿಪುರಿ ಬಳಿಕ ಜಿಲೇಬಿ, ಶರಬತ್ ಸರದಿ! ಇದೂ ಸುರಕ್ಷಿತವಲ್ಲ!
ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಆಹಾರ ಗುಣಮಟ್ಟ ಇಲಾಖೆ, ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಮಾದರಿ ಸಂಗ್ರಹಣೆಗೆ (food adulteration) ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪ್ರತಿ ಜಿಲ್ಲೆಯ ಅಂಕಿತಾಧಿಕಾರಿಗಳ ವ್ಯಾಪ್ತಿಯಲ್ಲಿ ಜಿಲೇಬಿ ಮತ್ತು ಶರಬತ್‌ನ ತಲಾ 5 ಮಾದರಿಗಳನ್ನು ಸಂಗ್ರಹಿಸುವಂತೆ ಆದೇಶಿಸಲಾಗಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯಾದ್ಯಂತ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಆಹಾರ ತಯಾರಿಕಾ ಘಟಕಗಳಲ್ಲಿ ಕೃತಕ ಬಣ್ಣ- ರಾಸಾಯನಿಕ ಬಳಕೆ, ಅಸುರಕ್ಷಿತ ಹಾಗೂ ಅನೈರ್ಮಲ್ಯದ ಆಹಾರ ತಯಾರಿಕೆಯ (food adulteration) ಆರೋಪದ ಮೇಲೆ ಆಹಾರ ಸುರಕ್ಷತೆ ಇಲಾಖೆ (Food safety department) ಈ ಹಿಂದೆ ಹಲವು ಬಾರಿ ಕ್ರಮ ಕೈಗೊಂಡಿದೆ. ಇದೀಗ ಮತ್ತೆ ಆಹಾರ ಗುಣಮಟ್ಟ (food quality) ಇಲಾಖೆ ಕ್ರಮಕ್ಕೆ ಮುಂದಾಗಿದ್ದು, ರಾಜ್ಯಾದ್ಯಂತ ಜಿಲೇಬಿ ಮತ್ತು ಶರಬತ್‌ನ ಗುಣಮಟ್ಟವನ್ನು ಪರಿಶೀಲಿಸಲು ಸಿದ್ಧವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ (Social Media) ಜಿಲೇಬಿ (Jilebi) ಮತ್ತು ಶರಬತ್‌ನಲ್ಲಿ (Sharabath) ಕೃತಕ ಬಣ್ಣಗಳ (artificial colour) ಬಳಕೆ ಹಾಗೂ ಸ್ವಚ್ಛತೆಯ ಕೊರತೆಯ ಬಗ್ಗೆ ದೂರುಗಳು ವ್ಯಾಪಕವಾಗಿ ಹರಡಿರುವ ಬೆನ್ನಲ್ಲೇ ಈ ಕಾರ್ಯಾಚರಣೆಗೆ ಇಲಾಖೆ ಮುಂದಾಗಿದೆ.
ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಆಹಾರ ಗುಣಮಟ್ಟ ಇಲಾಖೆ, ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಮಾದರಿ ಸಂಗ್ರಹಣೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪ್ರತಿ ಜಿಲ್ಲೆಯ ಅಂಕಿತಾಧಿಕಾರಿಗಳ ವ್ಯಾಪ್ತಿಯಲ್ಲಿ ಜಿಲೇಬಿ ಮತ್ತು ಶರಬತ್‌ನ ತಲಾ 5 ಮಾದರಿಗಳನ್ನು ಸಂಗ್ರಹಿಸುವಂತೆ ಆದೇಶಿಸಲಾಗಿದೆ. ಅಧಿಕಾರಿಗಳಿಗೆ ನೀಡಿರುವ ಸೂಚನೆಯಂತೆ, ಸಂಗ್ರಹಿಸಿದ ಮಾದರಿಗಳನ್ನು ಮೂರು ದಿನಗಳ ಒಳಗೆ ಪ್ರಯೋಗಾಲಯಕ್ಕೆ ರವಾನಿಸಬೇಕು. ಈ ಮಾದರಿಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸಿ, ಕೃತಕ ಬಣ್ಣಗಳ ಬಳಕೆ, ಕಲಬೆರಕೆ ಮತ್ತು ಸ್ವಚ್ಛತೆಯ ಮಾನದಂಡಗಳನ್ನು ತಪಾಸಣೆ ಮಾಡಲಾಗುವುದು. ಪರೀಕ್ಷಾ ವರದಿಯ ಆಧಾರದ ಮೇಲೆ ಕಾನೂನು ಕ್ರಮ ಜರುಗಿಸಲು ಇಲಾಖೆ ಸಜ್ಜಾಗಿದೆ.
ಈ ಕುರಿತು ಆಹಾರ ಗುಣಮಟ್ಟ ಮತ್ತು ಸುರಕ್ಷತೆ ಇಲಾಖೆಯ ಆಯುಕ್ತರು ಮಾತನಾಡಿ, "ಗ್ರಾಹಕರ ಆರೋಗ್ಯವೇ ನಮ್ಮ ಆದ್ಯತೆ. ಜಿಲೇಬಿ ಮತ್ತು ಶರಬತ್‌ನಂತಹ ಜನಪ್ರಿಯ ಆಹಾರ ಪದಾರ್ಥಗಳಲ್ಲಿ ಕೃತಕ ಬಣ್ಣಗಳು ಮತ್ತು ಸ್ವಚ್ಛತೆಯ ಕೊರತೆಯ ಬಗ್ಗೆ ದೂರುಗಳು ಬಂದಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ, ರಾಜ್ಯಾದ್ಯಂತ ತೀವ್ರ ಕಾರ್ಯಾಚರಣೆಗೆ ಆದೇಶಿಸಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳಿಗೆ ಯಾವುದೇ ರಿಯಾಯಿತಿಯಿಲ್ಲ," ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಡ್ರೈವ್‌ನಿಂದ ಆಹಾರ ತಯಾರಕರು ಮತ್ತು ವ್ಯಾಪಾರಿಗಳಲ್ಲಿ ಎಚ್ಚರಿಕೆ ಮೂಡಿದ್ದು, ಗುಣಮಟ್ಟ ಮತ್ತು ಸ್ವಚ್ಛತೆಯ ಕಡೆಗೆ ಹೆಚ್ಚಿನ ಗಮನ ಹರಿಸುವಂತೆ ಇಲಾಖೆ ಸೂಚಿಸಿದೆ. ಗ್ರಾಹಕರಿಗೆ ಸುರಕ್ಷಿತ ಆಹಾರ ಒದಗಿಸುವ ಈ ಪ್ರಯತ್ನಕ್ಕೆ ಸಾರ್ವಜನಿಕರಿಂದಲೂ ಬೆಂಬಲ ವ್ಯಕ್ತವಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಹುತೇಕರು ಬೀದಿಬದಿ ಚಪ್ಪರಿಸಿಕೊಂಡು ಸೇವಿಸುವ ಇಡ್ಲಿ ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂದು ಆಹಾರ ಇಲಾಖೆಯ ಇತ್ತೀಚಿನ ವರದಿಯಲ್ಲಿ ಬೆಳಕಿಗೆ ಬಂದಿತ್ತು. ಬೆಂಗಳೂರಿನ ಹಲವೆಡೆ ಇಡ್ಲಿ ತಯಾರಿಕೆಯಲ್ಲಿ ಹತ್ತಿ ಬಟ್ಟೆಯ ಬದಲು ಪ್ಲಾಸ್ಟಿಕ್ ಕವರ್‌ಗಳನ್ನು ಬಳಸುತ್ತಿರುವುದೇ ಇದಕ್ಕೆ ಮುಖ್ಯ ಕಾರಣ. ಇಡ್ಲಿ ಮಾಡುವಾಗ ಮಾತ್ರವಲ್ಲದೆ, ಆಹಾರವನ್ನು ಬಡಿಸುವಾಗ ಮತ್ತು ಪ್ಯಾಕ್ ಮಾಡುವಾಗಲೂ ಪ್ಲಾಸ್ಟಿಕ್ ಬಳಕೆ ಹೆಚ್ಚುತ್ತಿದೆ. ಈ ಪ್ಲಾಸ್ಟಿಕ್ ಹಾಳೆಗಳು ಶಾಖಕ್ಕೆ ಒಡ್ಡಿಕೊಂಡಾಗ ಕ್ಯಾನ್ಸರ್ ಕಾರಕವಾದ ಹಾನಿಕಾರಕ ವಸ್ತುಗಳನ್ನು ಹೊರಸೂಸುತ್ತವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.ಇದರಿಂದ ರಸ್ತೆ ಬದಿಯಲ್ಲಿ ಮಾರಾಟವಾಗುವ ಇಡ್ಲಿ ಸೇವಿಸುವ ಮೊದಲು ಹತ್ತು ಬಾರಿ ಯೋಚಿಸುವ ಪರಿಸ್ಥಿತಿ ಎದುರಾಗಿತ್ತು.
ಇದನ್ನೂ ಓದಿ: Food Adulteration: ಬಾಟಲಿ ನೀರು ಕೂಡ ಕಳಪೆ! ಖೋವಾ ಕೂಡ ಮಾರಕ, ಆಹಾರ ಇಲಾಖೆ ಎಚ್ಚರಿಕೆ