Pune Porsche crash: ಪೋರ್ಷೆ ಕಾರು ಅಪಘಾತ; ಆರೋಪಿಯನ್ನು ಬಾಲಾಪರಾಧಿ ಎಂದು ಪರಿಗಣಿಸಿ, ಕೋರ್ಟ್ ಆದೇಶ
ಕಳೆದ ವರ್ಷ ಕುಡಿದ ಮತ್ತಿನಲ್ಲಿ ಮತ್ತಿನಲ್ಲಿ ಪೋರ್ಷೆ ಕಾರನ್ನು (Porsche Car) ಚಲಾಯಿಸಿ ಇಬ್ಬರು ವ್ಯಕ್ತಿಗಳ ಸಾವಿಗೆ ಕಾರಣನಾದ 17 ವರ್ಷದ ಬಾಲಕನನ್ನು ಬಾಲಾಪರಾಧಿ ಎಂದು ಪರಿಗಣಿಸಿ ವಿಚಾರಣೆ ನಡೆಸಲಾಗುವುದು ಎಂದು ಬಾಲ ನ್ಯಾಯ ಮಂಡಳಿ ತಿಳಿಸಿದೆ.


ಪುಣೆ: ಕಳೆದ ವರ್ಷ ಕುಡಿದ ಮತ್ತಿನಲ್ಲಿ ಮತ್ತಿನಲ್ಲಿ ಪೋರ್ಷೆ ಕಾರನ್ನು (Porsche Car) ಚಲಾಯಿಸಿ ಇಬ್ಬರು ವ್ಯಕ್ತಿಗಳ ಸಾವಿಗೆ ಕಾರಣನಾದ 17 ವರ್ಷದ ಬಾಲಕನನ್ನು ಬಾಲಾಪರಾಧಿ ಎಂದು ಪರಿಗಣಿಸಿ ವಿಚಾರಣೆ ನಡೆಸಲಾಗುವುದು ಎಂದು ಬಾಲ ನ್ಯಾಯ ಮಂಡಳಿ ತಿಳಿಸಿದೆ. ಆರೋಪಿಯನ್ನು ವಯಸ್ಕನೆಂದು ಪರಿಗಣಿಸುವಂತೆ ಪುಣೆ ಪೊಲೀಸರು ಮಾಡಿದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ ಎಂದು ಆರೋಪಿ ಪರ ವಕೀಲರು ತಿಳಿಸಿದ್ದಾರೆ.
ಕಳೆದ ವರ್ಷ ಮೇ 19 ರ ಮುಂಜಾನೆ ಪುಣೆಯ ಕಲ್ಯಾಣಿ ನಗರದಲ್ಲಿ ಈ ಅಪಘಾತ ನಡೆದಿತ್ತು. 17 ವರ್ಷದ ಯುವಕ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸುತ್ತಿದ್ದ. ಈ ಅಪಘಾತದಲ್ಲಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಐಟಿ ಕಂಪನಿಯ ಉದ್ಯೋಗಿಗಳಾಗಿದ್ದ ಅನೀಶ್ ಅವಧಿಯಾ ಮತ್ತು ಅವರ ಸ್ನೇಹಿತೆ ಅಶ್ವಿನಿ ಕೋಸ್ಟಾ ಮೃತಪಟ್ಟಿದ್ದರು.
ಕಳೆದ ವರ್ಷ ಪುಣೆ ಪೊಲೀಸರು ಆರೋಪಿಯನ್ನು ವಯಸ್ಕ ಎಂದು ಪರಿಗಣಿಸಿ ವಿಚಾರಣೆ ನಡೆಸಬೇಕೆಂದು ಕೋರಿದ್ದರು. ಅಪಘಾತ ಮಾಡಿ ಇಬ್ಬರನ್ನು ಕೊಂದಿದ್ದಲ್ಲದೇ ಸಾಕ್ಷ್ಯಗಳನ್ನು ತಿರುಚುವ ಪ್ರಯತ್ನಗಳು ನಡೆದಿವೆ ಎಂದು ಹೇಳಿದ್ದರು. ಅಪಘಾತದ ಸಮಯದಲ್ಲಿ ಮದ್ಯಪಾನ ಮಾಡಿರುವುದನ್ನು ಮರೆಮಾಚಲು ತನ್ನ ರಕ್ತದ ಮಾದರಿಯನ್ನು ಅವನ ರಕ್ತದ ಮಾದರಿಯೊಂದಿಗೆ ಬದಲಾಯಿಸುವ ಮೂಲಕ ಮಗನನ್ನು ರಕ್ಷಿಸಲು ಪ್ರಯತ್ನಿಸಿದರು ಎಂಬ ಆರೋಪದ ಮೇಲೆ ಆರೋಪಿಯ ತಾಯಿಯನ್ನು ಕಳೆದ ವರ್ಷ ಜೂನ್‌ನಲ್ಲಿ ಬಂಧಿಸಲಾಗಿತ್ತು. ಸುಪ್ರೀಂ ಕೋರ್ಟ್ ಏಪ್ರಿಲ್‌ನಲ್ಲಿ ಆಕೆಗೆ ಮಧ್ಯಂತರ ಜಾಮೀನು ನೀಡಿತು.
ಜೂ.25, 2024ರಂದು, ಬಾಂಬೆ ಹೈಕೋರ್ಟ್ ಬಾಲಕನನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಆದೇಶ ನೀಡಿತ್ತು. ಬಾಲ ನ್ಯಾಯ ಮಂಡಳಿಯು ಅಪ್ರಾಪ್ತ ಆರೋಪಿಯನ್ನು ವೀಕ್ಷಣಾ ಗೃಹಕ್ಕೆ ಕಳುಹಿಸುವುದು ಕಾನೂನುಬಾಹಿರವಾಗಿದೆ ಎಂದು ಹೇಳಿತ್ತು.
ಈ ಸುದ್ದಿಯನ್ನೂ ಓದಿ: Belagavi News: ಅಥಣಿಯಲ್ಲಿ ಭೀಕರ ಅಪಘಾತ; ಕಾರು-ಬಸ್ ಡಿಕ್ಕಿಯಾಗಿ ಮೂವರ ದುರ್ಮರಣ
ಮಂಗಳವಾರ, ಬಾಲ ನ್ಯಾಯ ಮಂಡಳಿಯು ಆರೋಪಿ ಬಾಲಕನನ್ನು ವಯಸ್ಕ ಎಂದು ಪರಿಗಣಿಸಬೇಕೆಂಬ ಪೊಲೀಸರ ಮನವಿಯನ್ನು ತಿರಸ್ಕರಿಸಿದೆ ಎಂದು ವಕೀಲರು ತಿಳಿಸಿದ್ದಾರೆ. ಈ ಅಪಘಾತ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗೆ ಜಾಮೀನು ಸಿಕ್ಕಿತ್ತು. ಬಾಲ ನ್ಯಾಯ ಮಂಡಳಿಯು ರಸ್ತೆ ಸುರಕ್ಷತೆಯ ಕುರಿತು 300 ಪದಗಳ ಪ್ರಬಂಧ ಬರೆಯಬೇಕೆಂಬ ಷರತ್ತಿನ ಮೇಲೆ ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು.