Pakistan terrorism: ಪಾಕ್ನಲ್ಲಿ ಭೀಕರ ವಿಧ್ವಂಸಕ ಕೃತ್ಯ; ಶಾಲಾ ಬಸ್ ಮೇಲೆ ಭೀಕರ ಬಾಂಬ್ ದಾಳಿ
ಉಗ್ರ ಚಟುವಟಿಕೆಗಳ ತಾಣವಾಗಿರುವ ಪಾಪಿ ಪಾಕಿಸ್ತಾನದಲ್ಲಿ ಇದೀಗ ಮತ್ತೊಂದು ಭೀಕರ ಬಾಂಬ್ ದಾಳಿ ನಡೆದಿದೆ. ಶಾಲಾ ಬಸ್ ಮೇಲೆ ಭಯಾನಕ ಬಾಂಬ್ ದಾಳಿ ನಡೆಸಲಾಗಿದ್ದು ಬಸ್ನಲ್ಲಿದ್ದ ವಿದ್ಯಾರ್ಥಿಗಳು, ಬಾಸ್ ಚಾಲಕ ಮತ್ತು ಸಹಾಯಕ ಸೇರಿದಂತೆ ಒಟ್ಟು 6 ಜನ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.


ಇಸ್ಲಮಾಬಾದ್: ಪಾಕಿಸ್ತಾನದಲ್ಲಿ ಶಾಲಾ ವಾಹನದ ಮೇಲೆ ಬಾಂಬ್ ಸ್ಫೋಟ(Pak Bomb Blast) ಸಂಭವಿದ್ದು, ಆರು ಜನ ಸ್ಥಳದಲ್ಲೇ ಅಸುನೀಗಿರುವ ಘಟನೆ ವರದಿಯಾಗಿದೆ. ಇಲ್ಲಿನ ಪಶ್ಚಿಮ ಭಾಗದ ಬಲೂಚಿಸ್ತಾನ್ ಪ್ರಾಂತ್ಯದ ಖುಜ್ದಾರ್ ಜಿಲ್ಲೆಯಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ದಾಳಿಯಲ್ಲಿ ನಾಲ್ವರು ಮಕ್ಕಳು ಮತ್ತು ಇಬ್ಬರು ವಯಸ್ಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.
ಈ ದಾಳಿಯಲ್ಲಿ ಶಾಲಾ ಬಸ್ನ ಚಾಲಕ ಮತ್ತು ಸಹಾಯಕರು ಕೂಡ ಮೃತಪಟ್ಟಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿಗಳನ್ನು ಶಾಲೆಗೆ ಕೊಂಡೊಯ್ಯತ್ತಿದ್ದ ವಾಹನವನ್ನು ಗುರಿಯಾಗಿಸಿ ಈ ಬಾಂಬ್ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ 24ಕ್ಕಿಂತ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಘಟನೆಯ ನಂತರ ಸೇನಾ ಇಲಾಖೆ ಮಾಧ್ಯಮಗಳಿಗೆ ನೀಡಿದ ಪ್ರಕಟಣೆಯಲ್ಲಿ, ಮೂರು ವಿದ್ಯಾರ್ಥಿಗಳನ್ನು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ ಎಂದು ತಿಳಿಸಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಚಿತ್ರಗಳಲ್ಲಿ ಶಾಲಾ ಬಸ್ ಹಾಗೂ ಅಲ್ಲಿದ್ದ ಮಕ್ಕಳ ಶಾಲಾ ಬ್ಯಾಗ್ಗಳು ರಸ್ತೆಯ ಬದಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ದೃಶ್ಯಗಳು ಕಂಡುಬಂದಿವೆ. ಈ ಪ್ರದೇಶದಲ್ಲಿ ಬಲೂಚ್ ಲಿಬರೇಶನ್ ಆರ್ಮಿ (BLA) ಎಂಬ ಉಗ್ರ ಸಂಘಟನೆ ಹೆಚ್ಚು ಸಕ್ರಿಯವಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಈ ಸಂಘಟನೆಯಿಂದ ಹಲವು ಬಾಂಬ್ ದಾಳಿ ಮತ್ತು ಗಲಭೆಗಳು ನಡೆದಿವೆ. ಅದರಲ್ಲೂ ಮುಖ್ಯವಾಗಿ ಸೇನಾ ಸಿಬ್ಬಂದಿ ಹಾಗೂ ಹೊರಗಿನಿಂದ ಬಂದ ಜನರನ್ನು ಗುರಿಯಾಗಿಸಿಕೊಂಡು ಈ ದಾಳಿ ಮಾಡಲಾಗುತ್ತಿದೆ.
ಈ ಹಿಂದೆ ನಡೆದಿದ್ದ ಘಟನೆಗಳು:
ಈ ಹಿಂದೆ ಮಾರ್ಚ್ ತಿಂಗಳಲ್ಲಿ BLA ಸಂಘಟನೆಯು ನೂರಾರು ಪ್ರಯಾಣಿಕರೊಂದಿಗೆ ಪ್ರಯಾಣಿಸುತ್ತಿದ್ದ ರೈಲನ್ನು ಬಲವಂತವಾಗಿ ತಡೆದು ನಡೆಸಿದ್ದ ಬಾಂಬ್ ದಾಳಿಯಲ್ಲಿ ಅನೇಕ ಉಗ್ರರು ಮತ್ತು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದರು. 2014 ರಲ್ಲಿ ಪಾಕಿಸ್ತಾನದ ಉತ್ತರ ಪಶ್ಚಿಮ ಖೈಬರ್ ಪಕ್ತುನ್ವಾ ಪ್ರಾಂತ್ಯದ ಪೇಶಾವರ್ನ ಸೇನಾ ಸಾರ್ವಜನಿಕ ಶಾಲೆಯಲ್ಲಿ ತಾಲಿಬಾನ್ ಉಗ್ರರು ನಡೆಸಿದ ಭಯಾನಕ ದಾಳಿಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ 150 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು.