ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kohinoor Diamond: ಕೊಹಿನೂರು ವಜ್ರ ಭಾರತಕ್ಕೆ ಮರಳುವುದೇ..? ಬ್ರಿಟಿಷ್ ಅಧಿಕಾರಿ ಹೇಳಿದ್ದೇನು?

ಕೊಹಿನೂರು ವಜ್ರವನ್ನು (Kohinoor diamond) ಮರಳಿ ಭಾರತಕ್ಕೆ ತರಲಾಗುತ್ತದೆಯೇ ಎನ್ನುವ ಚರ್ಚೆ ಈಗ ಜೋರಾಗಿದ್ದು ಇದಕ್ಕೆ ಮುಖ್ಯ ಕಾರಣ ಬ್ರಿಟನ್‌ನ ಸಂಸ್ಕೃತಿ ಇಲಾಖೆಯ ರಾಜ್ಯ ಕಾರ್ಯದರ್ಶಿ (Britains Secretary of State for Culture ) ಲಿಸಾ ನಂದಿ ಹೇಳಿಕೆ. ಕೊಹಿನೂರು ವಜ್ರ ಸೇರಿದಂತೆ ಐತಿಹಾಸಿಕ ಕಲಾಕೃತಿಗಳನ್ನು ಭಾರತ ಮತ್ತು ಯುಕೆ (India and UK) ನಡುವೆ ವಿನಿಮಯ ಮಾಡಿಕೊಳ್ಳಲು ಚರ್ಚೆ ನಡೆಸುವ ಸುಳಿವನ್ನು ಲೀಸಾ ನೀಡಿದ್ದಾರೆ.

ಕೊಹಿನೂರು ವಜ್ರ ಭಾರತಕ್ಕೆ ಮರಳುವುದೇ?

ನವದೆಹಲಿ: ಬ್ರಿಟನ್ ರಾಣಿಯ ಕಿರೀಟದಲ್ಲಿ (Crown of the Britain Queen) ಅಲಂಕೃತವಾಗಿದ್ದ ಕೊಹಿನೂರು ವಜ್ರವನ್ನು (Kohinoor Diamond) ಮರಳಿ ಭಾರತಕ್ಕೆ ತರಲಾಗುತ್ತದೆಯೇ ಎನ್ನುವ ಚರ್ಚೆ ಈಗ ಜೋರಾಗಿದೆ. ಇದಕ್ಕೆ ಕಾರಣವೂ ಇದೆ. ಕೊಹಿನೂರು ವಜ್ರ ಸೇರಿದಂತೆ ಐತಿಹಾಸಿಕ ಕಲಾಕೃತಿಗಳನ್ನು ಭಾರತ ಮತ್ತು ಯುಕೆ (India and UK) ನಡುವೆ ವಿನಿಮಯ ಮಾಡಿಕೊಳ್ಳಲು ಚರ್ಚೆ ನಡೆಸುವ ಸುಳಿವನ್ನು ಬ್ರಿಟನ್‌ನ ಸಂಸ್ಕೃತಿ ಇಲಾಖೆಯ ರಾಜ್ಯ ಕಾರ್ಯದರ್ಶಿ (Britains Secretary of State for Culture ) ಲಿಸಾ ನಂದಿ ನೀಡಿದ್ದಾರೆ. ಇದರಿಂದ ಒಂದು ಕಾಲದಲ್ಲಿ ವಿಶ್ವದ ಅತಿ ದೊಡ್ಡ ವಜ್ರವಾಗಿ ಗುರುತಿಸಿಕೊಂಡಿದ್ದ ಕೊಹಿನೂರು ಮತ್ತೆ ಭಾರತಕ್ಕೆ ಮರಳಬಹುದು ಎನ್ನುವ ಕುತೂಹಲ ಹೆಚ್ಚಾಗಿದೆ.

ವಿಶ್ವದ ಅತ್ಯಮೂಲ್ಯ ವಜ್ರಗಳಲ್ಲಿ ಒಂದಾಗಿರುವ ಕೊಹಿನೂರು ಸಿಕ್ಕಿರುವುದು ಭಾರತದಲ್ಲಿ. ಇದು ಅನೇಕ ರಾಜ ಮನೆತನವನ್ನು ಸೇರಿ ಕೊನೆಗೆ ಬ್ರಿಟಿಷ್ ರಾಜಮನೆತನವನ್ನು ತಲುಪಿದೆ. ಇದು ಸರಿಸುಮಾರು 1849 ರಿಂದ ಬ್ರಿಟಿಷ್ ರಾಜಮನೆತನದ ವಶದಲ್ಲಿದೆ. ವಿಶ್ವದ ಅತಿದೊಡ್ಡ ಕತ್ತರಿಸಿದ ವಜ್ರಗಳಲ್ಲಿ ಒಂದಾದ 105 ಕ್ಯಾರೆಟ್ ನ ಕೊಹಿನೂರ್ ಭಾರತ ಮತ್ತು ಪಾಕಿಸ್ತಾನ ವಿಭಜನೆಯ ಮೊದಲೇ ಬ್ರಿಟಿಷ್ ರಾಜಮನೆತನವನ್ನು ಸೇರಿದೆ.

ಭಾರತಕ್ಕೆ ಮರಳಿ ಬರುವುದೇ?

ಕೊಹಿನೂರನ್ನು ಭಾರತಕ್ಕೆ ಕೊಡಲಾಗುತ್ತದೆಯೇ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಬ್ರಿಟನ್‌ನ ಸಂಸ್ಕೃತಿ ಇಲಾಖೆಯ ರಾಜ್ಯ ಕಾರ್ಯದರ್ಶಿ ಲಿಸಾ ನಂದಿ, ಜನರಿಗೆ ಪ್ರಯೋಜನವಾಗುವ ಅನೇಕ ಸಾಂಸ್ಕೃತಿಕ ಕಲಾಕೃತಿಗಳನ್ನು ವಿನಿಮಯ ಮಾಡಿಕೊಳ್ಳಲು ಎರಡೂ ದೇಶಗಳು ಚರ್ಚೆ ನಡೆಸುತ್ತಿವೆ ಎಂದು ಹೇಳಿದರು. ಸಾಂಸ್ಕೃತಿಕ ಕಲಾಕೃತಿಗಳನ್ನು ವಿನಿಮಯದಿಂದ ಯುಕೆ ಮತ್ತು ಭಾರತೀಯರು ಹಿಂದಿನ ಯುಗದ ಅನೇಕ ಸಾಂಸ್ಕೃತಿಕ ಕಲಾಕೃತಿಗಳಿಂದ ಪ್ರಯೋಜನ ಪಡೆಯಬಹುದು. ಇದನ್ನು ಖಚಿತಪಡಿಸಿಕೊಳ್ಳಲು ನಾವು ಹೆಚ್ಚು ಸಹಕರಿಸುತ್ತೇವೆ. ಈ ಬಗ್ಗೆ ಬಹಳ ಸಮಯದಿಂದ ಯುಕೆ ಮತ್ತು ಭಾರತದ ನಡುವೆ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದರು.

kohinoor

ಕೊಹಿನೂರ್ ಇತಿಹಾಸ

ಪುರಾಣಗಳ ಉಲ್ಲೇಖದಂತೆ ಕೊಹಿನೂರ್ ವಜ್ರವು ಜಾಂಬವಂತ ಶ್ರೀಕೃಷ್ಣನಿಗೆ ಕೊಟ್ಟಿರುವ ಶಮಂತಕ ಮಣಿ ಎನ್ನಲಾಗುತ್ತದೆ. ಆದರೆ ಇದು ಹೆಚ್ಚು ಚರ್ಚೆಯ ವಿಷಯವಾಗಿದ್ದು ಬ್ರಿಟಿಷರು ಭಾರತ ಬಿಟ್ಟು ಹೋದಮೇಲೆಯೇ. ಕೊಹಿನೂರ್ ವಜ್ರದ ಮೂಲ ಇಂದಿಗೂ ಚರ್ಚೆಯ ವಿಷಯವಾಗಿದೆ. ಇದು ಕರ್ನಾಟಕದ ಗೋಲ್ಕೊಂಡದಲ್ಲಿ ಗಣಿಗಾರಿಕೆ ಮಾಡಿ ತೆಗೆದಿರುವುದು ಎನ್ನಲಾಗುತ್ತದೆ. ಆದರೆ ಇನ್ನೊಂದು ಮೂಲದ ಪ್ರಕಾರ 13ನೇ ಶತಮಾನದಲ್ಲಿ ಇದನ್ನು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕೊಲ್ಲೂರು ಗಣಿಯಲ್ಲಿ ತೆಗೆದಿರುವುದು ಎನ್ನಲಾಗುತ್ತದೆ.

ಕೊಹಿನೂರ್ ವಜ್ರವು ಅನೇಕ ರಾಜವಂಶಗಳ ಮೂಲಕ ಸಾಗಿ ಕೊನೆಗೆ ಬ್ರಿಟಿಷರ ಕೈ ಸೇರಿತ್ತು. 16ನೇ ಶತಮಾನದಲ್ಲಿ ಮೊಘಲರು, ಬಳಿಕ ಪರ್ಷಿಯನ್ನರು, ಅನಂತರ ಆಫ್ಘನ್ನರ ಮೂಲಕ ಸಿಖ್ ಮಹಾರಾಜ ರಂಜಿತ್ ಸಿಂಗ್ 1813ರಲ್ಲಿ ಅದನ್ನು ಪಡೆದ ಎನ್ನುವ ದಾಖಲೆ ಇದೆ. ಬ್ರಿಟಿಷರು ಪಂಜಾಬ್ ಅನ್ನು ಸ್ವಾಧೀನಪಡಿಸಿಕೊಳ್ಳುವವರೆಗೂ ಈ ವಜ್ರ ರಂಜಿತ್ ಸಿಂಗ್ ಅವರ ಮಗ ಮಹಾರಾಜ ದುಲೀಪ್ ಸಿಂಗ್ ಬಳಿ ಇತ್ತು. ಬಳಿಕ ಭಾರತದ ಆಗಿನ ಗವರ್ನರ್ ಜನರಲ್ ಲಾರ್ಡ್ ಡಾಲ್ ಹೌಸಿಯು ಇದನ್ನು ಒತ್ತಾಯ ಮಾಡಿ ಪಡೆದು ರಾಣಿ ವಿಕ್ಟೋರಿಯಾಳಿಗೆ ಉಡುಗೊರೆಯಾಗಿ ನೀಡಿದರು. ಅನಂತರ ಅದನ್ನು ಇಂಗ್ಲೆಂಡ್‌ಗೆ ತೆಗೆದುಕೊಂಡು ಹೋಗಲಾಗಿದೆ.

ಇದನ್ನೂ ಓದಿ Operation Sindoor: ಭಾರತ - ಪಾಕಿಸ್ತಾನ ಗಡಿ ರಾಜ್ಯಗಳಲ್ಲಿ ಕಟ್ಟೆಚ್ಚರ; ಪೊಲೀಸರ ರಜೆ ರದ್ದು, ಶಾಲಾ ಕಾಲೇಜಿಗೆ ರಜೆ

ರಾಣಿ ವಿಕ್ಟೋರಿಯಾ ಈ ವಜ್ರವನ್ನು ಬ್ರೂಚ್ ಆಗಿ ಧರಿಸಿದ್ದರು. ಬಳಿಕ ಅದನ್ನು ಬ್ರಿಟಿಷ್ ಕಿರೀಟ ಆಭರಣಗಳ ಭಾಗವನ್ನಾಗಿ ಮಾಡಿದರು. ಅಂದಿನಿಂದ ಕೊಹಿನೂರ್ ವಜ್ರವು ಸಾರ್ವಜನಿಕ ಚರ್ಚೆಯನ್ನು ಹುಟ್ಟುಹಾಕಿದೆ. ಅನೇಕರು ಅದನ್ನು ಭಾರತಕ್ಕೆ ಮರಳಿ ತರಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಮರಳಿ ತರುವ ಪ್ರಯತ್ನ

2022ರ ಅಕ್ಟೋಬರ್ ತಿಂಗಳಲ್ಲಿ ಭಾರತವು ಈ ವಜ್ರವನ್ನು ಮರಳಿ ತರಲು ದಾರಿ ಹುಡುಕುವುದಾಗಿ ಹೇಳಿತ್ತು. ಆಗಿನ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ವಜ್ರವನ್ನು ಭಾರತಕ್ಕೆ ಮರಳಿ ತರುವ ಪ್ರಯತ್ನವನ್ನು ಭಾರತ ಸರ್ಕಾರ ನಿರಂತರ ಮಾಡಲಿದೆ. ಇದಕ್ಕಾಗಿ ಮಾತುಕತೆ, ಕಾನೂನು ದಾರಿಗಳನ್ನು ಹುಡುಕುವುದಾಗಿ ಹೇಳಿದ್ದರು.

ಸುಮಾರು 800 ವರ್ಷಗಳ ಹಿಂದೆ ಪತ್ತೆಯಾದ ಕೊಹಿನೂರ್ ತೂಕ ಸುಮಾರು 186 ಕ್ಯಾರೆಟ್‌ಗಳಷ್ಟಿತ್ತು. ಇದನ್ನು ಪದೇ ಪದೇ ಕತ್ತರಿಸಿದ ಅನಂತರ ಅದು ಈಗ 105.6 ಕ್ಯಾರೆಟ್‌ಗಳಾಗಿ ಮಾರ್ಪಟ್ಟಿದೆ. ಪ್ರಸ್ತುತ ಇದನ್ನು ಬ್ರಿಟನ್‌ನ ಲಂಡನ್ ಗೋಪುರದಲ್ಲಿ ಇಡಲಾಗಿದೆ. ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಇರಾನ್ ಇದರ ಮೇಲೆ ಹಕ್ಕು ಸಾಧಿಸಿವೆ. ಭಾರತವು ಹಲವು ಬಾರಿ ಅದನ್ನು ಮರಳಿಸುವಂತೆ ಕೇಳಿದ್ದರೂ ಬ್ರಿಟನ್ ನಿರಾಕರಿಸಿದೆ.