ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Serial Killer: ಕೊಲೆ ಮಾಡಿ ಮೊಸಳೆಗಳಿಗೆ ಆಹಾರ ನೀಡ್ತಿದ್ದ ಸರಣಿ ಹಂತಕ ಅರೆಸ್ಟ್‌

ಸುಮಾರು 27 ಕೊಲೆ ಪ್ರಕರಣದ ಆರೋಪಿಯಾಗಿರುವ ಸರಣಿ ಹಂತಕ (Serial Killer) ದೇವೇಂದರ್ ಶರ್ಮಾನನ್ನು ದೆಹಲಿ ಪೊಲೀಸರು ರಾಜಸ್ಥಾನದಲ್ಲಿ ಬಂಧಿಸಿದ್ದಾರೆ. ಹಲವು ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿದ್ದ ಆತ ಕೊಲೆ ಮಾಡಿ ಬಳಿಕ ಶವಗಳನ್ನು ಉತ್ತರ ಪ್ರದೇಶದ ಕಾಸ್ಗಂಜ್‌ನಲ್ಲಿರುವ ಹಜಾರ ಕಾಲುವೆಯ ಮೊಸಳೆ ತುಂಬಿದ ನೀರಿಗೆ ಎಸೆಯುತ್ತಿದ್ದ ಎನ್ನಲಾಗಿದೆ.

ಕೊಲೆ ಮಾಡಿ ಮೊಸಳೆಗಳಿಗೆ ಆಹಾರ ನೀಡ್ತಿದ್ದ ಸರಣಿ ಹಂತಕ ಅರೆಸ್ಟ್‌

ನವದೆಹಲಿ: ಕೊಲೆ ಮಾಡಿ ಶವಗಳನ್ನು ಮೊಸಳೆಗಳಿಗೆ (Crocodiles) ಆಹಾರವಾಗಿ ನೀಡುತ್ತಿದ್ದ ಸರಣಿ ಹಂತಕನನ್ನು (Serial Killer) ರಾಜಸ್ಥಾನದ (Rajasthan) ದೌಸಾದಲ್ಲಿರುವ ( Dausa) ಆಶ್ರಮದಲ್ಲಿ ಪೊಲೀಸರು ಬಂಧಿಸಿದ್ದಾರೆ. ವೈದ್ಯನಾಗಿದ್ದ ಹಂತಕನು ಅಲ್ಲಿ ಅರ್ಚಕನಾಗಿ ನಟಿಸುತ್ತಿದ್ದನು. 'ಡಾಕ್ಟರ್ ಡೆತ್' (Doctor Death ) ಎಂದೇ ಕುಖ್ಯಾತನಾಗಿದ್ದ ಆಯುರ್ವೇದ ವೈದ್ಯ ದೇವೇಂದರ್ ಶರ್ಮಾ (67) (Devender Sharma) ಕಳೆದ ವರ್ಷ ಪೆರೋಲ್ ಪಡೆದು ಹೊರಬಂದಿದ್ದು, ಬಳಿಕ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ. ಇದೀಗ ದೆಹಲಿ ಪೊಲೀಸರು (Delhi police) ಆತನನ್ನು ರಾಜಸ್ಥಾನದಲ್ಲಿ ಬಂಧಿಸಿದ್ದಾರೆ.

ರಾಜಸ್ಥಾನದ ದೌಸಾದಲ್ಲಿರುವ ಆಶ್ರಮದಲ್ಲಿ ಅರ್ಚಕನಂತೆ ನಟಿಸುತ್ತಿದ್ದ ಸರಣಿ ಹಂತಕ ದೇವೇಂದರ್ ಶರ್ಮಾ ಎಂಬಾತನನ್ನು ಮಂಗಳವಾರ ಬಂಧಿಸಲಾಗಿದೆ. ಸುಮಾರು 27 ಕೊಲೆ ಪ್ರಕರಣದ ಆರೋಪಿಯಾಗಿರುವ ದೇವೇಂದರ್ ಶರ್ಮಾ ಹಲವು ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿದ್ದನು. ಆತ ಕೊಲೆ ಮಾಡಿ ಬಳಿಕ ಶವಗಳನ್ನು ಉತ್ತರ ಪ್ರದೇಶದ ಕಾಸ್ಗಂಜ್‌ನಲ್ಲಿರುವ ಹಜಾರ ಕಾಲುವೆಯ ಮೊಸಳೆ ತುಂಬಿದ ನೀರಿಗೆ ಎಸೆಯುತ್ತಿದ್ದ. ದೆಹಲಿ, ರಾಜಸ್ಥಾನ ಮತ್ತು ಹರಿಯಾಣದಲ್ಲಿ ನಡೆದಿರುವ ಏಳು ಪ್ರತ್ಯೇಕ ಪ್ರಕರಣಗಳಲ್ಲಿ ಆತನಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ. ಗುರಗಾಂವ್ ನ್ಯಾಯಾಲಯವು ಆತನಿಗೆ ಮರಣದಂಡನೆಯನ್ನು ಕೂಡ ವಿಧಿಸಿದೆ.

ಆಯುರ್ವೇದ ಔಷಧ ಮತ್ತು ಶಸ್ತ್ರಚಿಕಿತ್ಸೆಯಲ್ಲಿ ಪದವಿ ಪಡೆದಿರುವ ದೇವೇಂದರ್ ಶರ್ಮಾ 2002 ಮತ್ತು 2004ರ ನಡುವೆ ಹಲವಾರು ಟ್ಯಾಕ್ಸಿ ಮತ್ತು ಟ್ರಕ್ ಚಾಲಕರನ್ನು ಹತ್ಯೆ ಮಾಡಿ ತಿಹಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದನು. 2023ರ ಆಗಸ್ಟ್ ತಿಂಗಳಲ್ಲಿ ಪೆರೋಲ್ ಪಡೆದು ಆತ ಜೈಲಿನಿಂದ ಹೊರ ಬಂದಿದ್ದ ಎಂದು ಉಪ ಪೊಲೀಸ್ ಆಯುಕ್ತ (ಅಪರಾಧ ಶಾಖೆ) ಆದಿತ್ಯ ಗೌತಮ್ ತಿಳಿಸಿದ್ದಾರೆ.

ದೇವೇಂದರ್ ಶರ್ಮಾ ಮತ್ತು ಆತನ ಸಹಚರರು ಚಾಲಕರನ್ನು ಸುಳ್ಳು ಹೇಳಿ ಕರೆಸಿ ಅವರನ್ನು ಕೊಂದು ವಾಹನಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರು. ಬಳಿಕ ಶವಗಳನ್ನು ಮೊಸಳೆಗಳಿಂದ ತುಂಬಿದ್ದ ಹಜಾರ ಕಾಲುವೆಗೆ ಎಸೆಯುತ್ತಿದ್ದರು. ದೇವೇಂದರ್ ಶರ್ಮಾ ಸುಮಾರು ಕನಿಷ್ಠ 27 ಕೊಲೆ, ಅಪಹರಣ ಮತ್ತು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ದೃಢಪಟ್ಟಿದೆ ಎಂದು ಆದಿತ್ಯ ಗೌತಮ್ ತಿಳಿಸಿದ್ದಾರೆ.

ಈ ಕೊಲೆಗಳನ್ನು ನಡೆಸುವ ಮೊದಲು 1998 ಮತ್ತು 2004 ರ ನಡುವೆ ದೇವೇಂದರ್ ಶರ್ಮಾ ಅಕ್ರಮ ಮೂತ್ರಪಿಂಡ ಕಸಿ ನಡೆಸಿದ್ದ ಆರೋಪ ಹೊತ್ತಿರುವ ಜಾಲವನ್ನು ನಡೆಸುತ್ತಿದ್ದ. ಹಲವಾರು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಮತ್ತು ಮಧ್ಯವರ್ತಿಗಳ ಸಹಾಯದಿಂದ 125 ಕ್ಕೂ ಹೆಚ್ಚು ಅಕ್ರಮ ಕಸಿಗಳನ್ನು ನಡೆಸಲು ಆತ ನಡೆಸಿದ್ದನು.

ನಕಲಿ ಅನಿಲ ಏಜೆನ್ಸಿ ನಡೆಸುತ್ತಿದ್ದ ಶರ್ಮಾ, 1994ರಲ್ಲಿ ಅನಿಲ ಮಾರಾಟ ಒಪ್ಪಂದದಲ್ಲಿ ಭಾರೀ ಆರ್ಥಿಕ ನಷ್ಟವನ್ನು ಅನುಭವಿಸಿದ ಅನಂತರ ಅಕ್ರಮ ಅಂಗಾಂಗ ವ್ಯಾಪಾರ ನಡೆಸಲು ಪ್ರಾರಂಭಿಸಿದ. ಇದಕ್ಕಾಗಿ ಟ್ಯಾಕ್ಸಿ, ಟ್ರಕ್ ಚಾಲಕರನ್ನು ಬಲಿಪಶುಗಳನ್ನಾಗಿ ಮಾಡಿಕೊಳ್ಳುತ್ತಿದ್ದ. ಮೂತ್ರಪಿಂಡ ದಂಧೆ ಮತ್ತು ಸರಣಿ ಹತ್ಯೆಗಳಿಗೆ ಸಂಬಂಧಿಸಿ ದೇವೇಂದರ್ ಶರ್ಮಾನನ್ನು 2004ರಲ್ಲಿ ಬಂಧಿಸಲಾಯಿತು. ಸುಮಾರು 50ಕ್ಕೂ ಹೆಚ್ಚು ಕೊಲೆ ಪ್ರಕರಣದಲ್ಲಿ ಆತ ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: National Herald Case: ನ್ಯಾಷನಲ್ ಹೆರಾಲ್ಡ್ ಕೇಸ್‌; ಕಾಂಗ್ರೆಸ್ ಅನ್ನು ಆರೋಪಿಯಾನ್ನಾಗಿಸಲು ಇಡಿ ಚಿಂತನೆ

ಪೆರೋಲ್ ನಲ್ಲಿ ಹೊರ ಬಂದಿದ್ದ ಶರ್ಮಾ ಬಳಿಕ ಪರಾರಿಯಾಗಿದ್ದ. ಆತನನ್ನು ಹುಡುಕುವ ಕಾರ್ಯವನ್ನು ಅಪರಾಧ ವಿಭಾಗಕ್ಕೆ ವಹಿಸಲಾಗಿತ್ತು. ಅಲಿಗಢ, ಜೈಪುರ, ದೆಹಲಿ, ಆಗ್ರಾ ಮತ್ತು ಪ್ರಯಾಗ್‌ರಾಜ್ ಸೇರಿದಂತೆ ಹಲವಾರು ನಗರಗಳಲ್ಲಿ ಆರು ತಿಂಗಳ ಕಾಲ ಕಾರ್ಯಾಚರಣೆ ನಡೆಸಿದ ಅನಂತರ ತಂಡವು ದೌಸಾದಲ್ಲಿರುವ ಆಶ್ರಮದಲ್ಲಿ ಆತನನ್ನು ಪತ್ತೆ ಹಚ್ಚಿದೆ. ಶರ್ಮಾ ಪೆರೋಲ್‌ನಲ್ಲಿದ್ದಾಗ ಪರಾರಿಯಾಗಿರುವುದು ಇದೇ ಮೊದಲೇನಲ್ಲ. 2020ರಲ್ಲಿ ಆತ 20 ದಿನಗಳ ಪೆರೋಲ್ ಪಡೆದು ಸುಮಾರು ಏಳು ತಿಂಗಳ ಕಾಲ ತಲೆಮರೆಸಿಕೊಂಡಿದ್ದನು. 2023ರ ಜೂನ್ ತಿಂಗಳಲ್ಲಿ ಸರಿತಾ ವಿಹಾರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಆತನಿಗೆ ಮತ್ತೆ ಎರಡು ತಿಂಗಳ ಪೆರೋಲ್ ನೀಡಲಾಗಿದ್ದು, 2023ರ ಆಗಸ್ಟ್ 3ರಿಂದ ಆತ ನಾಪತ್ತೆಯಾಗಿದ್ದನು.