DJ Halli-KG Halli case: ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಮೌಸೀನ್ ಬಂಧನ
DJ Halli-KG Halli case: 2020ರ ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಶಿರಸಿಯ ಟಿಪ್ಪು ನಗರ ನಿವಾಸಿ ಮೌಸೀನ್ ಅಲಿಯಾಸ್ ಇಮ್ತಿಯಾಝ್ ಶುಕುರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.


ಕಾರವಾರ: 2020ರ ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣದ (DJ Halli-KG Halli case) ಪ್ರಮುಖ ಆರೋಪಿಯನ್ನು ಉತ್ತರ ಕನ್ನಡ ಜಿಲ್ಲೆ ಪೊಲೀಸರು ಬಂಧಿಸಿದ್ದಾರೆ. ಶಿರಸಿಯ ಟಿಪ್ಪು ನಗರ ನಿವಾಸಿ ಮೌಸೀನ್ ಅಲಿಯಾಸ್ ಇಮ್ತಿಯಾಝ್ ಶುಕುರ್ ಬಂಧಿತ ಆರೋಪಿ. ಈತ ಪಿಎಫ್‌ಐ ಕಾರ್ಯಕರ್ತನಾಗಿದ್ದಲ್ಲದೇ ಉಗ್ರರಿಂದ ತರಬೇತಿ ಪಡೆದಿದ್ದ. ಈತನ ಪತ್ತೆಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆಗೆ ಇಳಿದಿತ್ತು. ಆರೋಪಿ ಮೌಸೀನ್ ಸಿಂಧಗಿಯಲ್ಲಿರುವ ಮಾಹಿತಿ ತಿಳಿದ ಪೊಲೀಸರು, ಕೂಡಲೇ ಕಾರ್ಯಪ್ರವೃತ್ತರಾಗಿ ಆತನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕೆಜಿ ಹಳ್ಳಿ-ಡಿಜಿ ಹಳ್ಳಿ ಗಲಭೆ ನಂತರ ಆರೋಪಿ ಮೌಸೀನ್ ತಲೆಮರೆಸಿಕೊಂಡಿದ್ದ. ಮೌಸೀನ್ ಹೈದರಾಬಾದ್‌ಗೆ ತೆರಳಿ, ನಂತರ ಬಿಜಾಪುರ ಜಿಲ್ಲೆಯ ಸಿಂಧಗಿಯಲ್ಲಿ ನೆಲೆಸಿದ್ದನು. ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಈ ಹಿಂದೆ ಉಗ್ರ ಚಟುವಟಿಕೆ ಸಂಬಂಧಿಸಿ ಶಿರಸಿಯಲ್ಲಿ ಎನ್ಐಎಯಿಂದ ಬಂಧಿತನಾಗಿದ್ದ ಸಾದಿಕ್, ಆರೋಪಿ ಮೌಸೀನ್ಗೆ ತರಬೇತಿ ನೀಡಿದ್ದ. ಶಿರಸಿಯಲ್ಲಿ 302 ಪ್ರಕರಣಗಳ ಆರೋಪಿಯಾದ ಈತ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ.
ಏನಿದು ಕೆಜಿ ಹಳ್ಳಿ, ಡಿಜೆ ಹಳ್ಳಿ ಪ್ರಕರಣ?
ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರನ್ನು ನಿಂದನೆ ಮಾಡಲಾಗಿದೆ ಎಂದು ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿಯಲ್ಲಿ ಗಲಭೆ ನಡೆದಿತ್ತು. ಗಲಭೆ ಸಂದರ್ಭದಲ್ಲಿ ಅಂದಿನ ಪುಲಕೇಶಿನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮತ್ತು ಸಾರ್ವಜನಿಕರ ಮನೆಗೆ ಬೆಂಕಿ ಹಾಕಲಾಗಿತ್ತು. ಅಲ್ಲದೆ ಕಿಡಿಗೇಡಿಗಳು ಡಿಜೆ ಹಳ್ಳಿ ಪೊಲೀಸ್ ಠಾಣೆಗೂ ಬೆಂಕಿ ಹಾಕಿದ್ದರು. ಈ ಸಂದರ್ಭದಲ್ಲಿ ಗಲಭೆ ನಿಯಂತ್ರಣ ಮಾಡಲು ಪೊಲೀಸರು ಗೋಲಿಬಾರ್ ಮಾಡಿದ್ದರು. ಮೂವರು ಮೃತಪಟ್ಟಿದ್ದರು. ಬೆಂಗಳೂರಿನ ಸಿಸಿಬಿ ಪೊಲೀಸರ ತನಿಖೆ ವೇಳೆ ಘಟನೆ ಹಿಂದೆ ಎಸ್ಡಿಪಿಐ ಮತ್ತು ಪಿಎಫ್‌ಐ ಕಾರ್ಯಕರ್ತರ ಕೈವಾಡ ಇರುವುದು ಬೆಳಕಿಗೆ ಬಂದಿತ್ತು. ಅಲ್ಲದೆ, 360 ಅಧಿಕ ಗಲಭೆಕೋರರನ್ನು ಬಂಧಿಸಲಾಗಿತ್ತು. ಡಿಜೆ ಹಳ್ಳಿ, ಕೆಜಿ ಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದವು.
ಈ ಸುದ್ದಿಯನ್ನೂ ಓದಿ | Pahalgam Terror Attack: ಪಹಲ್ಗಾಮ್ ದಾಳಿಗೆ ಕಾರಣರಾದವರನ್ನು ನ್ಯಾಯದ ಕಟಕಟೆಯಲ್ಲಿ ನಿಲ್ಲಿಸಿ- ವಿಶ್ವಸಂಸ್ಥೆ