ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kamal Haasan: ತಮಿಳಿನಿಂದಲೇ ಕನ್ನಡ ಹುಟ್ಟಿತು ಎಂದ ಕಮಲ್‌ ಹಾಸನ್‌; ಭುಗಿಲೆದ್ದ ವಿವಾದ

ತಮಿಳಿನಿಂದಲೇ ಕನ್ನಡ ಹುಟ್ಟಿಕೊಂಡಿತು ಎಂದು ಹೇಳುವ ಮೂಲಕ ಕಾಲಿವುಡ್‌ ಸೂಪರ್‌ ಸ್ಟಾರ್‌ ಕಮಲ್‌ ಹಾಸನ್‌ ವಿವಾದ ಹುಟ್ಟು ಹಾಕಿದ್ದಾರೆ. ಇತ್ತೀಚೆಗೆ ಚೆನ್ನೈಯಲ್ಲಿ ನಡೆದ ತಮ್ಮ ಮುಂಬರುವ ʼಥಗ್‌ ಲೈಫ್‌ʼ ಚಿತ್ರದ ಆಡಿಯೋ ಲಾಂಚ್‌ ಸಮಾರಂಭದಲ್ಲಿ ಮಾತನಾಡಿದ ಅವರು, ಮುಖ್ಯ ಅತಿಥಿಯಾಗಿದ್ದ ಕರುನಾಡ ಚಕ್ರವರ್ತಿ ಡಾ. ಶಿವ ರಾಜ್‌ಕುಮಾರ್‌ ಸಮ್ಮುಖದಲ್ಲೇ ಈ ಹೇಳಿಕೆ ನೀಡಿದ್ದಾರೆ.

ತಮಿಳಿನಿಂದಲೇ ಕನ್ನಡ ಹುಟ್ಟಿತು ಎಂದ ಕಮಲ್‌ ಹಾಸನ್‌

ಕಮಲ್‌ ಹಾಸನ್‌.

Profile Ramesh B May 27, 2025 6:00 PM

ಚೆನ್ನೈ: ತಮಿಳಿನಿಂದಲೇ ಕನ್ನಡ ಹುಟ್ಟಿಕೊಂಡಿತು ಎಂದು ಹೇಳುವ ಮೂಲಕ ಕಾಲಿವುಡ್‌ ಸೂಪರ್‌ ಸ್ಟಾರ್‌ ಕಮಲ್‌ ಹಾಸನ್‌ (Kamal Haasan) ಹೊಸದೊಂದು ವಿವಾದ ಹುಟ್ಟು ಹಾಕಿದ್ದಾರೆ. ಇತ್ತೀಚೆಗೆ ಚೆನ್ನೈಯಲ್ಲಿ ನಡೆದ ತಮ್ಮ ಮುಂಬರುವ ʼಥಗ್‌ ಲೈಫ್‌ʼ (Thug Life) ಚಿತ್ರದ ಆಡಿಯೋ ಲಾಂಚ್‌ ಸಮಾರಂಭದಲ್ಲಿ ಮಾತನಾಡಿದ ಅವರು, ಮುಖ್ಯ ಅತಿಥಿಯಾಗಿದ್ದ ಕರುನಾಡ ಚಕ್ರವರ್ತಿ ಡಾ. ಶಿವ ರಾಜ್‌ಕುಮಾರ್‌ (Shiva Rajkumar) ಸಮ್ಮುಖದಲ್ಲೇ ಈ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆಯನ್ನು ಕನ್ನಡಿಗರು ಖಂಡಿಸಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ವ್ಯಾಪಕ ಚರ್ಚೆ ಹುಟ್ಟು ಹಾಕಿದೆ.

ಮಣಿರತ್ನಂ ಮತ್ತು ಕಮಲ್‌ ಹಾಸನ್‌ ಬರೋಬ್ಬರಿ 38 ವರ್ಷಗಳ ಬಳಿಕ ಒಂದಾಗುತ್ತಿರುವ ತಮಿಳು ಚಿತ್ರ ʼಥಗ್‌ ಲೈಫ್‌ʼ. ಇದೇ ಕಾರಣಕ್ಕೆ ಈ ಚಿತ್ರ ಕುತೂಹಲ ಮೂಡಿಸಿದೆ. ಕೆಲವು ದಿನಗಳ ಹಿಂದೆ ಹೊರ ಬಂದಿರುವ ಟ್ರೈಲರ್‌ ಗಮನ ಸೆಳೆದಿದ್ದು, ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಈ ಮಧ್ಯೆ ಕಮಲ್‌ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಅಭಿಷೇಕ್‌ ಅವರ ಪೋಸ್ಟ್‌:



ಕಮಲ್‌ ಹೇಳಿದ್ದೇನು?

ಇತ್ತೀಚೆಗೆ ಚೆನ್ನೈಯಲ್ಲಿ ಆಯೋಜಿಸಿದ್ದ ಅದ್ಧೂರಿ ಸಮಾರಂಭದಲ್ಲಿ ʼಥಗ್‌ ಲೈಫ್‌ʼ ಚಿತ್ರದ ಆಡಿಯೋ ಲಾಂಚ್‌ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ತೆರಳಿದ್ದ ಶಿವಣ್ಣ ಅವರನ್ನು ಸ್ವಾಗತಿಸಿ ಕಮಲ್‌ ಹಾಸನ್‌ ಆಡಿದ ಮಾತು ಇದೀಗ ಭಾಷೆಯ ಬಗ್ಗೆ ಚರ್ಚೆ ಹುಟ್ಟು ಹಾಕಿದೆ. ಶಿವ ರಾಜ್‌ಕುಮಾರ್‌ ಅವರನ್ನು ಉದ್ದೇಶಿಸಿ ಮಾತನಾಡಿದ ಕಮಲ್‌ ಹಾಸನ್‌, ʼʼಇವರು ಆ ಊರಿನಲ್ಲಿರುವ ನನ್ನ ಕುಟುಂಬ ಸದಸ್ಯ. ಇದೇ ಕಾರಣಕ್ಕೆ ಅವರು ಬೆಂಗಳೂರಿನಿಂದ ಇಲ್ಲಿಗೆ ಬಂದಿದ್ದಾರೆ. ತಮಿಳಿನಿಂದ ಹುಟ್ಟಿದ್ದೇ ನಿಮ್ಮ ಭಾಷೆ (ಕನ್ನಡ)ʼʼ ಎಂದು ಹೇಳಿದ್ದಾರೆ. ಆ ಮೂಲಕ ಭಾಷಾ ವಿವಾದಕ್ಕೆ ತುಪ್ಪ ಸುರಿದಿದ್ದಾರೆ.

ಎಸ್‌.ಶ್ಯಾಮ್‌ಪ್ರಸಾದ್‌ ಅವರ ಪೋಸ್ಟ್‌:



ಈ ಸುದ್ದಿಯನ್ನೂ ಓದಿ: Shiva Rajakumar: ಕಮಲ್‌ ಹಾಸನ್‌ ತಬ್ಬಿಕೊಂಡ ಕಾರಣಕ್ಕೆ 3 ದಿನ ಸ್ನಾನ ಮಾಡದ ಶಿವಣ್ಣ; ಏನಿದು ಫ್ಯಾನ್‌ ಬಾಯ್‌ ಮೂಮೆಂಟ್‌?

ಕನ್ನಡಿಗರ ಆಕ್ರೋಶ

ತಮಿಳಿನಿಂದಲೇ ಕನ್ನಡ ಹಾಗೂ ದಕ್ಷಿಣ ಭಾರತದ ವಿವಿಧ ಭಾಷೆಗಳ ಜನನವಾಗಿದೆ ಎಂದು ಹಲವು ವರ್ಷಗಳಿಂದ ತಮಿಳಿಗರು ವಾದಿಸುತ್ತಲೇ ಬಂದಿದ್ದಾರೆ. ಇದನ್ನು ಪುಷ್ಟಿಕರಿಸುವಂತೆ ಕಮಲ್‌ ಹಾಸನ್‌ ಈ ಹೇಳಿಕೆ ನೀಡಿದ್ದಾರೆ. ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತದೆ. ಹಲವರು ಕಮಲ್‌ ಹಾಸನ್‌ ಅವರ ಈ ವಿಡಿಯೊ ಕ್ಲಿಪ್‌ ಹಂಚಿಕೊಂಡು ಕಿಡಿಕಾರಿದ್ದಾರೆ. ʼʼಕನ್ನಡ ತಮಿಳಿನಿಂದ ಹುಟ್ಟಿಲ್ಲ. ಕನ್ನಡ ಕೂಡ ತಮಿಳಿನಂತೆ ಬೆಳೆದು ಬಂದಿದೆ. ನಾವು ಶಬ್ದಕೋಶವನ್ನು ಹಂಚಿಕೊಂಡಿದ್ದೇವೆ. ಆದರೆ ತಮಿಳು ಭಾಷೆ ಕನ್ನಡದ ತಾಯಿಯಲ್ಲʼʼ ಎಂದು ಅಭಿಷೇಕ್‌ ಎನ್ನುವವರು ಬರೆದುಕೊಂಡಿದ್ದಾರೆ.

ಪತ್ರಕರ್ತ ಎಸ್‌.ಶ್ಯಾಮ್‌ ಪ್ರಸಾದ್‌ ಈ ಬಗ್ಗೆ ಎಕ್ಸ್‌ನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದು, ತಮಿಳು ಕನ್ನಡದ ತಾಯಿಯಲ್ಲ. ಒಟ್ಟಿಗೆ ಬೆಳೆದು ಬಂದ ಸಹೋದರಿ ಭಾಷೆ. ಕನ್ನಡದ ಶ್ರೀಮಂತ ಪರಂಪರೆಯನ್ನು ಅವಮಾನಿಸುವುದು ಸರಿಯಲ್ಲ ಎಂಬರ್ಥದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಇವರೊಂದಿಗೆ ಹಲವು ಕನ್ನಡಿಗರು ಕಮಲ್‌ ಹಾಸನ್‌ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಭಾಷೆಯ ಚರ್ಚೆ ಮತ್ತೊಂದು ಹಂತಕ್ಕೆ ತಲುಪಿದೆ.