Vijay Sethupathi: ಪುರಿ ಜಗನ್ನಾಥ್-ವಿಜಯ್ ಸೇತುಪತಿ ಚಿತ್ರಕ್ಕೆ ʼಗಾಳಿಪಟ 2' ನಾಯಕಿ ಎಂಟ್ರಿ
Samyuktha Menon: 2022ರಲ್ಲಿ ತೆರೆಕಂಡ ಸ್ಯಾಂಡಲ್‌ವುಡ್ ಚಿತ್ರ ʼಗಾಳಿಪಟ 2ʼ ಮೂಲಕ ಗಮನ ಸೆಳೆದ ಮಲಯಾಳಂ ಮೂಲದ ಬಹುಭಾಷಾ ನಟಿ ಸಂಯುಕ್ತ ಮೆನನ್ ಇದೀಗ ಡೈರೆಕ್ಟರ್ ಪುರಿ ಜಗನ್ನಾಥ್ ಹಾಗೂ ವಿಜಯ್ ಸೇತುಪತಿ ಕಾಂಬೋದ ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿರುವ ಈ ಚಿತ್ರದಲ್ಲಿ ದುನಿಯಾ ವಿಜಯ್ ಕೂಡ ನಟಿಸುತ್ತಿದ್ದಾರೆ.


ಹೈದರಾಬಾದ್: ಟಾಲಿವುಡ್ ಮೂಲದ ದಕ್ಷಿಣ ಭಾರತದ ಡ್ಯಾಶಿಂಗ್ ಡೈರೆಕ್ಟರ್ ಪುರಿ ಜಗನ್ನಾಥ್ (Puri Jagannadh) ಹಾಗೂ ವಿಜಯ್ ಸೇತುಪತಿ (Vijay Sethupathi) ಕಾಂಬೋದ ಬಹುನಿರೀಕ್ಷಿತ ಸಿನಿಮಾದಿಂದ ಮತ್ತೊಂದು ಅಪ್ ಡೇಟ್ ಸಿಕ್ಕಿದೆ. ಈಗಾಗಲೇ ತಾರಾಬಳಗದ ಮೂಲಕ ಸುದ್ದಿಯಾಗಿರುವ ಚಿತ್ರಕ್ಕೀಗ ಬಹುಭಾಷಾ ನಟಿ, ʼಗಾಳಿಪಟ 2ʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮೋಡಿ ಮಾಡಿದ್ದ ನಟಿ ಸಂಯುಕ್ತ ಮೆನನ್ (Samyuktha Menon) ಎಂಟ್ರಿ ಕೊಟ್ಟಿದ್ದಾರೆ. ಪುರಿ ಕನೆಕ್ಟ್ ಬ್ಯಾನರ್ ಅಡಿಯಲ್ಲಿ ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಟಬು, ದುನಿಯಾ ವಿಜಯ್ ಕುಮಾರ್ ನಟಿಸುವುದು ಖಚಿತವಾಗಿದೆ. ಇದೀಗ ನಟಿ ಸಂಯುಕ್ತ ಮೆನನ್ ಅವರನ್ನು ಚಿತ್ರತಂಡ ಸ್ವಾಗತಿಸಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಸಂಯುಕ್ತ ನಾಯಕಿಯಲ್ಲ. ಬದಲಾಗಿ ಬದಲಾಗಿ ಪ್ರಮುಖ ಪಾತ್ರವೊಂದಲ್ಲಿ ಅಭಿನಯಿಸಲಿದ್ದಾರೆ ಎನ್ನಲಾಗಿದೆ. ಕಥೆ ಮತ್ತು ಪಾತ್ರದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ʼʼಕೊಡಗಿನ ಹುಡುಗಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಹಿಂದಿದೆ ಕಠಿಣ ಪರಿಶ್ರಮʼʼ: ರಶ್ಮಿಕಾ ಮಂದಣ್ಣಗೆ ಧನುಷ್ ಮೆಚ್ಚುಗೆ
ಮೊದಲ ಹಂತದ ಶೂಟಿಂಗ್ ಅನ್ನು ಚಿತ್ರತಂಡ ಹೈದರಾಬಾದ್ ಹಾಗೂ ಚೆನ್ನೈನಲ್ಲಿ ನಡೆಸಲು ಸಿದ್ಧವಾಗಿದ್ದು, ಜೂನ್ ಕೊನೆಯ ವಾರದಲ್ಲಿ ರೆಗ್ಯೂಲರ್ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಪ್ಯಾನ್-ಇಂಡಿಯಾ ಸಿನಿಮಾ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ.
ಮಲಯಾಳಂ ಮೂಲದ ಸಂಯುಕ್ತ ಈಗಾಗಲೇ ದಕ್ಷಿಣ ಭಾರತದ ಚಿತ್ರಪ್ರೇಮಿಗಳ ಮನಗೆದ್ದಿದ್ದಾರೆ. ಪವನ್ ಕಲ್ಯಾಣ್-ರಾಣಾ ದಗ್ಗುಬಾಟಿ ನಟನೆಯ ʼಭೀಮ್ಲಾ ನಾಯಕ್ʼ, ಧನುಷ್ ಅಭಿನಯದ ʼಸರ್ʼ ಮುಂತಾದ ಚಿತ್ರಗಳ ಮೂಲಕ ಗಮನ ಸೆಳೆದಿದ್ದಾರೆ. 2022ರಲ್ಲಿ ತೆರೆಕಂಡ ಯೋಗರಾಜ್ ಭಟ್-ಗಣೇಶ್ ಕಾಂಬಿನೇಷನ್‌ನ ʼಗಾಳಿಪಟ 2ʼ ಸ್ಯಾಂಡಲ್‌ವುಡ್ ಚಿತ್ರದಲ್ಲಿಯೂ ಮಿಂಚಿದ್ದರು. ಸದ್ಯ ಸಂಯುಕ್ತ ಹಿಂದಿಯ ʼಮಹಾರಾಗ್ನಿ: ಕ್ವೀನ್ ಆಫ್ ಕ್ವೀನ್ಸ್ʼ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕಾಜೋಲ್, ಪ್ರಭು ದೇವ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ ಬಾಲಯ್ಯ ಜತೆಗಿನ ʼಅಖಂಡ 2ʼ ತೆಲುಗು ಸಿನಿಮಾವನ್ನೂ ಒಪ್ಪಿಕೊಂಡಿದ್ದಾರೆ.