Chhattisgarh News: ವಿದ್ಯಾರ್ಥಿಗಳಿಗೆ ನಮಾಜ್ ಮಾಡಲು ಒತ್ತಾಯ: ಶಿಕ್ಷಕರು ಸೇರಿ 8 ಮಂದಿ ವಿರುದ್ಧ ಎಫ್ಐಆರ್
ಛತ್ತೀಗಢದ ಬಿಲಾಸ್ಪುರ ಜಿಲ್ಲೆಯ ಎನ್‌ಸಿಸಿ ಶಿಬಿರದಲ್ಲಿ ಗುರು ಘಾಸಿದಾಸ್ ಕೇಂದ್ರೀಯ ವಿಶ್ವವಿದ್ಯಾಲಯದ ಕೆಲವು ವಿದ್ಯಾರ್ಥಿಗಳಿಗೆ ನಮಾಜ್ ಮಾಡಲು ಶಿಕ್ಷಕರೇ ಒತ್ತಾಯಿಸಿದ್ದಾರೆ. ಶಿಬಿರದಲ್ಲಿ ಒಟ್ಟು 159 ವಿದ್ಯಾರ್ಥಿಗಳಿದ್ದರು. ಇವರಲ್ಲಿ ಕೇವಲ ನಾಲ್ಕು ಮಂದಿಯಷ್ಟೇ ಮುಸ್ಲಿಂ ವಿದ್ಯಾರ್ಥಿಗಳಾಗಿದ್ದರು ಎನ್ನಲಾಗಿದೆ. ಈ ಪ್ರಕರಣಕ್ಕೆ ಒಟ್ಟು 8 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.


ರಾಯ್‌ಪುರ: ವಿದ್ಯಾರ್ಥಿಗಳಿಗೆ ನಮಾಜ್ (Namaz) ಮಾಡಲು ಒತ್ತಾಯಿಸಿರುವ ಶಿಕ್ಷಕರು ಸೇರಿದಂತೆ 8 ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿರುವ ಘಟನೆ ಛತ್ತೀಸ್‌ಗಢದಲ್ಲಿ (Chhattisgarh) ನಡೆದಿದೆ. ಛತ್ತೀಗಢದ ಬಿಲಾಸ್ಪುರ ಜಿಲ್ಲೆಯ ಎನ್‌ಸಿಸಿ ಶಿಬಿರದಲ್ಲಿ ಗುರು ಘಾಸಿದಾಸ್ ಕೇಂದ್ರೀಯ ವಿಶ್ವವಿದ್ಯಾಲಯದ (Guru Ghasidas Central University) ಕೆಲವು ವಿದ್ಯಾರ್ಥಿಗಳಿಗೆ ನಮಾಜ್ ಮಾಡಲು ಶಿಕ್ಷಕರೇ ಒತ್ತಾಯಿಸಿದ್ದಾರೆ. ಶಿಬಿರದಲ್ಲಿ ಒಟ್ಟು 159 ವಿದ್ಯಾರ್ಥಿಗಳಿದ್ದರು. ಇವರಲ್ಲಿ ಕೇವಲ 4 ಮಂದಿಯಷ್ಟೇ ಮುಸ್ಲಿಂ ವಿದ್ಯಾರ್ಥಿಗಳಾಗಿದ್ದರು ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ 7 ಶಿಕ್ಷಕರು ಸೇರಿದಂತೆ 8 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬಿಲಾಸ್ಪುರ ಜಿಲ್ಲೆಯ ಕೋಟಾ ಪೊಲೀಸ್ ಠಾಣೆ ವ್ಯಾಪ್ತಿಯ ಶಿವತಾರೈ ಗ್ರಾಮದಲ್ಲಿ ಮಾರ್ಚ್ 26ರಿಂದ ಏಪ್ರಿಲ್ 1ರವರೆಗೆ ಆಯೋಜಿಸಿದ್ದ ಎನ್‌ಸಿಸಿ ಶಿಬಿರದಲ್ಲಿ ಈ ಘಟನೆ ನಡೆದಿದೆ. ಶಿಬಿರದಲ್ಲಿ ಪಾಲ್ಗೊಂಡಿದ್ದ ಗುರು ಘಾಸಿದಾಸ್ ಕೇಂದ್ರೀಯ ವಿಶ್ವವಿದ್ಯಾಲಯದ 159 ವಿದ್ಯಾರ್ಥಿಗಳನ್ನು ಶಿಕ್ಷಕರೇ ನಮಾಜ್ ಮಾಡಲು ಒತ್ತಾಯಿಸಿದರು ಎಂಬ ಆರೋಪ ಕೇಳಿ ಬಂದಿದೆ.
ವಿದ್ಯಾರ್ಥಿಗಳು ನಮಾಜ್ ಮಾಡಲು ನಿರಾಕರಿಸಿ ಪ್ರತಿಭಟನೆ ನಡೆಸಿದ ಬಳಿಕ ಪ್ರಕರಣದ ತನಿಖೆ ಪ್ರಾರಂಭಿಸಲಾಗಿದೆ. ಕೆಲವು ಸಂಘಟನೆಗಳು ಈ ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಆಕ್ರೋಶ ವ್ಯಕ್ತಪಡಿಸಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬಿಲಾಸ್ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಜನೇಶ್ ಸಿಂಗ್ ಅವರು ಈ ಕುರಿತು ತನಿಖೆಗಾಗಿ ಕೊಟ್ವಾಲಿ ನಗರ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಸಬದ್ರಾ ನೇತೃತ್ವದಲ್ಲಿ ನಾಲ್ವರು ಸದಸ್ಯರ ಸಮಿತಿಯನ್ನು ರಚಿಸಿದ್ದರು. ತನಿಖಾ ವರದಿಯನ್ನು ಎಸ್‌ಎಸ್‌ಪಿಗೆ ಸಲ್ಲಿಸಿದ ಅನಂತರ ಶನಿವಾರ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: Pahalgam Terror Attack: ಕಾಶ್ಮೀರದಲ್ಲಿ ನಿಲ್ಲದ ಉಗ್ರರ ಅಟ್ಟಹಾಸ; ಗುಂಡಿನ ದಾಳಿಗೆ ಓರ್ವ ನಾಗರಿಕ ಸಾವು
ಗುರು ಘಾಸಿದಾಸ್ ಕೇಂದ್ರೀಯ ವಿಶ್ವವಿದ್ಯಾಲಯದ ಶಿಕ್ಷಕರಾದ ದಿಲೀಪ್ ಝಾ, ಮಧುಲಿಕಾ ಸಿಂಗ್, ಜ್ಯೋತಿ ವರ್ಮಾ, ನೀರಜ್ ಕುಮಾರಿ, ಪ್ರಶಾಂತ್ ವೈಷ್ಣವ್, ಸೂರ್ಯಭನ್ ಸಿಂಗ್ ಮತ್ತು ಬಸಂತ್ ಕುಮಾರ್ ಮತ್ತು ತಂಡದ ಪ್ರಮುಖ ನಾಯಕ ವಿದ್ಯಾರ್ಥಿ ಆಯುಷ್ಮಾನ್ ಚೌಧರಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 196 (ಬಿ), 197 (1) (ಬಿ) (ಸಿ), ಬಿಎನ್‌ಎಸ್‌ನ 299, 302, 190 ಮತ್ತು ಛತ್ತೀಸ್‌ಗಢ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯ ಸೆಕ್ಷನ್ 4ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೋಣಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಪ್ರಕರಣದ ವರದಿಯನ್ನು ಕೋಟಾ ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ ಎಂದು ಠಾಣಾ ಅಧಿಕಾರಿಗಳು ತಿಳಿಸಿದ್ದಾರೆ.