ಟೆಸ್ಟ್ ನಿವೃತ್ತಿ ಬಳಿಕ ರೋಹಿತ್, ಕೊಹ್ಲಿಗೆ ಎದುರಾಗಲಿರುವ ಸವಾಲನ್ನು ತಿಳಿಸಿದ ಅನಿಲ್ ಕುಂಬ್ಳೆ!
ಭಾರತ ತಂಡದ ಸ್ಟಾರ್ ಬ್ಯಾಟ್ಸ್ಮನ್ಗಳಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಆ ಮೂಲಕ ಈ ಇಬ್ಬರೂ ಏಕದಿನ ಕ್ರಿಕೆಟ್ನಲ್ಲಿ ಮುಂದುವರಿಯಲಿದ್ದಾರೆ. ಆದರೆ, ಒಡಿಐ ಕ್ರಿಕೆಟ್ನಲ್ಲಿ ಆಡಲಿರುವ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಎಚ್ಚರಿಕೆ ನೀಡಿದ್ದಾರೆ.



ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದ ರೋಹಿತ್-ಕೊಹ್ಲಿ
ಜೂನ್ 20 ರಂದು ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಇಲ್ಲಿ ಉಭಯ ತಂಡಗಳು ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಆದರೆ, ಈ ಸರಣಿಗೂ ಮುನ್ನ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಕೊನೆಯ ಪಂದ್ಯವನ್ನು ಆಡಿದ್ದರು.

ಟಿ20 ಕ್ರಿಕೆಟ್ಗೆ ನಿವೃತ್ತಿ ನೀಡಿದ್ದ ಸ್ಟಾರ್ಗಳು
2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಬಳಿಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಇದಾದ ಕೆಲವೇ ತಿಂಗಳುಗಳಲ್ಲಿ ಇವರು ರೆಡ್ ಬಾಲ್ ಕ್ರಿಕೆಟ್ಗೆ ಗುಡ್ಬೈ ಹೇಳಿದ್ದಾರೆ.

ಕೊಹ್ಲಿ-ರೋಹಿತ್ಗೆ ಸವಾಲು ಎದುರಾಗಿದೆ
"ಆರು ತಿಂಗಳ ನಂತರ ನಡೆಯಲಿರುವ ಏಕದಿನ ಪಂದ್ಯಕ್ಕೆ ತಯಾರಿ ನಡೆಸುವಾಗ ಅವರಿಗೆ ಬೇಕಾದುದನ್ನು ಮಾಡುವುದು ಸುಲಭವಲ್ಲ. ನೀವು ಯಾರೇ ಆಗಿರಲಿ ಮತ್ತು ವರ್ಷಗಳಲ್ಲಿ ನಿಮ್ಮ ವೃತ್ತಿಜೀವನವನ್ನು ಎಷ್ಟೇ ಚೆನ್ನಾಗಿ ಹೊಂದಿದ್ದರೂ ಅದು ಸವಾಲಿನದ್ದಾಗಿರುತ್ತದೆ," ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.

ಈ ಇಬ್ಬರೂ ಚಾಂಪಿಯನ್ ಆಟಗಾರರು
"ಆದರೆ, ಈ ಇಬ್ಬರೂ ಚಾಂಪಿಯನ್ ಆಟಗಾರರು. ಆದ್ದರಿಂದ ಅದನ್ನು ಹೇಗೆ ನಿರ್ವಹಿಸಬೇಕೆಂದು ಅವರಿಗೆ ತಿಳಿದಿದೆ ಮತ್ತು ಚಾಂಪಿಯನ್ ಆಟಗಾರರು ಆಡುವವರೆಗೂ ಅವರನ್ನು ಆಚರಿಸುವುದು ಮುಖ್ಯ. ಅವರು ಹೇಗೆ ಆಡಬೇಕಿತ್ತು ಅಥವಾ ಹೇಗೆ ಆಡಬಹುದಿತ್ತು ಎಂಬುದರ ಕುರಿತು ನೀವು ಪ್ರತಿಯೊಂದು ಪ್ರದರ್ಶನದ ಎಳೆಯನ್ನು ಬರೆಯುತ್ತಲೇ ಇರುತ್ತೀರಿ," ಎಂದು ಸ್ಪಿನ್ ದಿಗ್ಗಜ ತಿಳಿಸಿದ್ದಾರೆ.

ಏಕದಿನ ವಿಶ್ವಕಪ್ ಆಡಲು ಬಯಸುತ್ತಿದ್ದಾರೆ
"ಈ ಇಬ್ಬರೂ ಆಟಗಾರರು ಏನೇ ಆಡಿದರೂ ಅವರನ್ನು ಬೆಂಬಲಿಸುವುದು ತುಂಬಾ ಮುಖ್ಯವಾಗುತ್ತದೆ. 2027ರ ಏಕದಿನ ವಿಶ್ವಕಪ್ವರೆಗೂ ಇವರು ಆಡಲು ಬಯಸುತ್ತಿದ್ದಾರೆ. ಏಕೆಂದರೆ ಇದನ್ನು ಅವರು ಸಾಧಿಸುವುದು ಬಾಕಿ ಇದೆ. ಭಾರತ 2023ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಸೋತಿತ್ತು," ಎಂದು ಕುಂಬ್ಳೆ ಹೇಳಿದ್ದಾರೆ.

ವಿರಾಟ್-ರೋಹಿತ್ ದಾಖಲೆಗಳು
ವಿರಾಟ್ ಕೊಹ್ಲಿ 123 ಟೆಸ್ಟ್ ಪಂದ್ಯಗಳಿಂದ 9230 ರನ್ಗಳನ್ನು ಕಲೆ ಹಾಕಿದ್ದಾರೆ. ಇವರು 40 ಟೆಸ್ಟ್ ಪಂದ್ಯಗಳ ಗೆಲುವಿನ ಮೂಲಕ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಎನಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ 67 ಟೆಸ್ಟ್ ಪಂದ್ಯಗಳಿಂದ 4301 ರನ್ ಗಳಿಸಿದ್ದಾರೆ. ರೋಹಿತ್ ನಾಯಕತ್ವದಲ್ಲಿ ಭಾರತ 12ರೆಲ್ಲಿ ಗೆಲುವು ಪಡೆದಿದೆ.