Chalavadi Narayanaswamy: ಕಾಂಗ್ರೆಸ್ಸಿನವರು ಭಾರತ ದೇಶಕ್ಕಿಂತ ಪಾಕಿಸ್ತಾನದಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆ: ಛಲವಾದಿ ನಾರಾಯಣಸ್ವಾಮಿ
Chalavadi Narayanaswamy: ಸಿದ್ದರಾಮಯ್ಯನವರು ಪಾಕಿಸ್ತಾನದಲ್ಲೆಲ್ಲೋ ಜಾಗ ಹುಡುಕುತ್ತಿರಬೇಕು. ಮುಡಾ ಸೈಟ್ ಸಾಕಾಗದೆ ಅವರು ಪಾಕಿಸ್ತಾನದಲ್ಲಿ ಸೈಟ್ ಹುಡುಕಿ ಹೋಗಬಹುದು. ಸಿದ್ದರಾಮಯ್ಯನವರ ನಾಲಿಗೆ ಹೊಲಸಾಗಿದೆ. ಏನು ಬೇಕಾದರೂ ಮಾತನಾಡುತ್ತಾರೆ ಎಂದು ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.


ಬೆಂಗಳೂರು: ಇಡೀ ಭಾರತ ದೇಶದಲ್ಲಿ ಎಲ್ಲರೂ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದ್ದಾರೆ. ಜನಾಕ್ರೋಶ ಪ್ರಾರಂಭವಾಗಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ತಿಳಿಸಿದ್ದಾರೆ. ಮಾಧ್ಯಮಗಳ ಜತೆ ಇಂದು ಮಾತನಾಡಿದ ಅವರು, ಕಾಂಗ್ರೆಸ್ (Congress Party) ಈ ದೇಶದಿಂದ ಗಾಯಬ್ ಆಗುವುದು ಸತ್ಯ ಎಂಬುದನ್ನು ಕಾಂಗ್ರೆಸ್ಸಿಗರೇ ಹೇಳಿಕೊಂಡಿದ್ದಾರೆ ಎಂದು ಆರೋಪಿಸಿದರು. ಅಷ್ಟು ತಾಕತ್ತಿದ್ದರೆ ಕಾಂಗ್ರೆಸ್‍ನವರು ಟ್ವೀಟನ್ನು ಯಾಕೆ ಅಳಿಸಿ ಹಾಕಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.
ಭಾರತದ ಪ್ರಧಾನಮಂತ್ರಿಯವರನ್ನು ಅವಹೇಳನ ಮಾಡುವ ರೀತಿಯಲ್ಲಿ ಅವರ ಶಿರವನ್ನು ತೆಗೆದು ಗಾಯಬ್ (ನಾಪತ್ತೆ ಅಥವಾ ಮಾಯ) ಎಂದು ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ಸಿನವರಿಗೆ ತಲೆ ಇಲ್ಲ ಎಂದು ಅವರು ತೋರಿಸಿಕೊಂಡಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್ಸಿನವರು ಭಾರತ ದೇಶಕ್ಕಿಂತ ಪಾಕಿಸ್ತಾನದಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆ. ಇನ್ನು ಮುಂದೆ ಅವರು ಪಾಕಿಸ್ತಾನದಲ್ಲಿ ಚುನಾವಣೆಗೆ ನಿಲ್ಲುವುದನ್ನು ಯೋಚಿಸಬೇಕಿದೆ ಎಂದು ವ್ಯಂಗ್ಯವಾಡಿದರು.
ತಲೆ ಇಲ್ಲದ ಕಾಂಗ್ರೆಸ್ಸಿನವರು ಇದಕ್ಕಿಂತ ಒಳ್ಳೆಯದನ್ನು ಏನು ಮಾಡಲು ಸಾಧ್ಯ? ಎಂದು ಪ್ರಶ್ನಿಸಿದರು. ಕೆಲವರಿಗೆ ತಲೆ ಇಲ್ಲ; ಕೆಲವರಿಗೆ ತಲೆ ಇದೆ; ಆದರೆ ಮಿದುಳೇ ಇಲ್ಲ. ಕೆಲವರಿಗೆ ಮಿದುಳಿದೆ; ನಾಲಿಗೆಗೂ ಮಿದುಳಿಗೂ ಸಂಬಂಧವೇ ಇಲ್ಲ; ತಲೆ ಕೆಟ್ಟವರಂತೆ ಏನೆಲ್ಲ ಮಾತನಾಡುತ್ತಾರೆ ಎಂದು ಆರೋಪಿಸಿದರು. ಸಿದ್ದರಾಮಯ್ಯನವರು ಪಾಕಿಸ್ತಾನದಲ್ಲೆಲ್ಲೋ ಜಾಗ ಹುಡುಕುತ್ತಿರಬೇಕು. ಮುಡಾ ಸೈಟ್ ಸಾಕಾಗದೆ ಅವರು ಪಾಕಿಸ್ತಾನದಲ್ಲಿ ಸೈಟ್ ಹುಡುಕಿ ಹೋಗಬಹುದು. ಸಿದ್ದರಾಮಯ್ಯನವರ ನಾಲಿಗೆ ಹೊಲಸಾಗಿದೆ. ಏನು ಬೇಕಾದರೂ ಮಾತನಾಡುತ್ತಾರೆ ಎಂದು ಅವರು ಟೀಕಿಸಿದರು.
ಈ ಸುದ್ದಿಯನ್ನೂ ಓದಿ | BPNL Recruitment 2025: 10ನೇ ತರಗತಿ ಪಾಸಾದವರಿಗೆ ಬಂಪರ್ ಚಾನ್ಸ್; ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್‌ನಲ್ಲಿದೆ ಬರೋಬ್ಬರಿ 12,981 ಹುದ್ದೆ
ಬೆಳಗಾವಿಯಲ್ಲಿ ಮಹಿಳಾ ಮೋರ್ಚಾದವರು ಕಪ್ಪು ಬಟ್ಟೆ ತೋರಿಸಿದ್ದಕ್ಕೆ ಸಿದ್ದರಾಮಯ್ಯನವರಿಗೆ ಸಿಟ್ಟು ಬಂತಲ್ಲವೇ? ಒಬ್ಬ ಪೊಲೀಸ್ ಅಧಿಕಾರಿಯನ್ನು ಕರೆದು ಕಪಾಳಮೋಕ್ಷ ಮಾಡಲು ಹೊರಟಿದ್ದರಲ್ಲವೇ? ಹಾಗಿದ್ದರೆ, ಭಯೋತ್ಪಾದಕರ ದಾಳಿಯಲ್ಲಿ 28 ಜನ ಭಾರತೀಯರು ಮೃತಪಟ್ಟಾಗ ಅಷ್ಟು ಸಿಟ್ಟು ಯಾಕೆ ಬರಲಿಲ್ಲ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.