ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Hunj Column: ಬಸವಣ್ಣ ಜಾಗತಿಕ ಸಾಂಸ್ಕೃತಿಕ ನಾಯಕನೇ ವಿನಾ, ಧರ್ಮಭಂಜಕ ಮತಸ್ಥಾಪಕನಲ್ಲ

ಈ ಐದು ತತ್ವಗಳಿಗೆ ವಿರುದ್ಧವಾದ ಒಂದೇ ಒಂದು ವಚನವು ಭೂತಗನ್ನಡಿ ಹಾಕಿ ಹುಡುಕಿದರೂ ಸಿಗುವುದಿಲ್ಲ! ಅಂಥ ವಚನ ಅಂತರಿಕ್ಷದನಾದರೂ ಇದ್ದು ಈ ಕಮ್ಯುನಿ ಪ್ರಣೀತರ ಬಳಿ ಇರಬಹು ದಾದ ರಷ್ಯನ್ ಟೆಲಿಸ್ಕೋಪಿನಲ್ಲಿ ಮಾತ್ರ ಕಾಣಿಸುವುದೋ ಗೊತ್ತಿಲ್ಲ! ಹೀಗಿದ್ದೂ ವಚನಗಳನ್ನು ಪಚಿಪಚಿಸಿ ವೇದಾಗಮೋಪನಿಷತ್ತಿನ ವೈರುಧ್ಯದ ವ್ಯಾಖ್ಯಾನ ಮಂಡಿಸುವ ಕನ್ನಡ-ಪಂಡಿತ, ಸಾಂಸ್ಕೃತಿಕ ಸಂಶೋ ಧಿಗ, ಮಾರ್ಕ್ಸ್‌ವಾದಿ ಕಮ್ಯುನಿಸ್ಟರ ಭಂಡತನ, ಧಾರ್ಷ್ಟ್ಯ, ಅಹಮ್ಮು, ಮೂರ್ಖತನಗಳನ್ನು ಅರಿಯ ದಷ್ಟು ನಾಡು ಕುರುಡಾಗಿತ್ತೆ ಎಂಬುದು ಮಿಲಿಯನ್ ಬಿಟ್‌ಕಾಯಿನ್ ಪ್ರಶ್ನೆ!

ಬಸವಣ್ಣ ಜಾಗತಿಕ ಸಾಂಸ್ಕೃತಿಕ ನಾಯಕನೇ ವಿನಾ, ಧರ್ಮಭಂಜಕ ಮತಸ್ಥಾಪಕನಲ್ಲ

Profile Ashok Nayak Apr 30, 2025 9:59 AM

ಬ‌ಸವ ಮಂಟಪ (ಭಾಗ-೨)

ರವಿ ಹಂಜ್

ನಿನ್ನೆಯ ಸಂಚಿಕೆಯಲ್ಲಿ ಉಲ್ಲೇಖಿಸಿದ ಎಲ್ಲಾ ವಚನಗಳಲ್ಲಿ ಉಪನಿಷತ್ತಿನ ತತ್ವಗಳೇ ಅತ್ಯಂತ ಸ್ಪಷ್ಟವಾಗಿ ಸದೃಢವಾಗಿ ಪ್ರತಿಧ್ವನಿಸುತ್ತವೆ. ವೇದೋಪನಿಷತ್ತುಗಳ ಐದು ಸಂಕ್ಷಿಪ್ತ ಅಂಶಗಳನ್ನು ಸಾವಿರಾರು ವಚನಗಳಾಗಿ ವಿಸ್ತರಿಸಿ ಬೋಧಿಸಿದ ಶರಣರು ವೇದವನ್ನು ತಿರಸ್ಕರಿಸಿದರು ಎಂಬ ಕುಚೋದ್ಯಿಗರಿಗೆ ಅರ್ಧ ಶತಮಾನವನ್ನು ಭರತಖಂಡ, ಕರ್ಣಾಟ ಸಾಮ್ರಾಜ್ಯವು ನುಮನಧನದಿಂದ ಅರ್ಪಿಸಿತ್ತು ಎಂದರೆ ಬಿಳಿಯ ಕೊರಳಪಟ್ಟಿಯ ಕೆಂಪುಚಡ್ಡಿಯ ಈ ಸಂಶೋಧಕ ವರ್ಗ ಅದೆಷ್ಟು ಮಂಕುಬೂದಿ ಎರಚಿತ್ತು ಎನ್ನುವುದನ್ನು ನೀವೇ ಊಹಿಸಿಕೊಳ್ಳಿ.

ಇಂಥ ಕುಚೋದ್ಯವನ್ನು ಸತ್ಯವೆಂದು ಜನಸಾಮಾನ್ಯರು ಬಿಡಿ, ರಾಜ್ಯದ ಓರ್ವ ಜನನಾಯಕರೂ, “ಬ್ರಾಹ್ಮಣ ಕುತಂತ್ರ! ಬಡವನಾದ ಓರ್ವ ದಲಿತ ಶ್ರೀಮಂತನಾಗಬಹುದು. ಆದರೆ ಆ ದಲಿತ ಎಂದಿಗೂ ಬ್ರಾಹ್ಮಣನಾಗುವುದಿಲ್ಲ" ಎಂದು ಜನಾಂಗೀಯ ಅವಹೇಳನ ಮಾಡಿ ಜನಾಂಗೀಯ ದ್ವೇಷದ ಕರೆ ಕೊಡುತ್ತಾರೆ ಎಂದರೆ ಸಮಾಜದಲ್ಲಿ ಅದೆಷ್ಟು ಮೌಢ್ಯವನ್ನು ಈ ಆತ್ಮರತಿ ಲಿಂಗಕರ ಸಂಜಾತ ಸಂಶೋಧಿಗರು ಬಿಂಬಿಸಿರಬಹುದು? ಅಂದ ಹಾಗೆ, ಸಾಧಿಸಿ ಜಂಗಮನಾಗಿದ್ದರೂ ಈ ನವ್ಯರು ದಲಿತನೆನ್ನುವ ಮಾದಾರ ಚೆನ್ನಯ್ಯನು, “ಆಚಾರವೆ ಕುಲ ಅನಾಚಾರವೆ ಹೊಲೆ ಆವ ಕುಲವಾದರೂ ಅರಿದಲ್ಲಿಯೆ ಪರತತ್ವಭಾವಿ ಮರೆದಲ್ಲಿಯೆ ಮಲಮ ಬಂಧ ಸಾಂಖ್ಯ ಶ್ವಪಚ, ಅಗಸ್ತ್ಯ ಕಬ್ಬಿಲ ದೂರ್ವಾಸ ಮಚ್ಚಿಗ, ದಧೀಚಿ ಕೀಲಿಗ, ಕಶ್ಯಪ ಕಮ್ಮಾರ, ರೋಮಜ ಕಂಚುಗಾರ, ಕೌಂಡಿಲ್ಯ ನಾವಿದ ನೆಂಬುದನರಿದು ಮತ್ತೆ ಕುಲವುಂಟೆಂದು ಛಲಕ್ಕೆ ಹೋರಲೇತಕ್ಕೆ?" ಎಂದು ಐತಿಹಾಸಿಕ ವಾಗಿ ದಲಿತರು ಬ್ರಾಹ್ಮಣರಾದ ಉದಾಹರಣೆಗಳನ್ನು ಕೊಡುತ್ತಾನೆ ಎನ್ನುವಲ್ಲಿಗೆ ಸದರಿ ಜನನಾಯ ಕರ ಕರೆ ನಿಶ್ಶೂನ್ಯವಾಗುತ್ತದೆ.

ವಚನಗಳನ್ನು ಪುಂಖಾನುಪುಂಖವಾಗಿ ವ್ಯಾಖ್ಯಾನಿಸುವ ಈ ಕನ್ನಡ-ಪಂಡಿತ, ಸಾಂಸ್ಕೃತಿಕ-ಸಾಮಾಜಿಕ ಸಂಶೋಧಕರಿಗೆ ಈ ಐದು ಸಂಸ್ಕೃತ ವಾಕ್ಯಗಳನ್ನು ಅರಿಯಲು ಯಾವುದೇ ಸಂಸ್ಕೃತದ ಜ್ಞಾನ ಬೇಕಿಲ್ಲ. ಅವರಿಗಿರುವ ಕನ್ನಡ ಜ್ಞಾನದ ಹಿನ್ನೆಲೆಯಲ್ಲಿಯೇ ಇವುಗಳನ್ನು ಅರಿತುಕೊಳ್ಳ ಬಹುದು.

ಇದನ್ನೂ ಓದಿ: ‌Ravi Hunj Column: ಬೌದ್ಧಿಕ ದಾರಿದ್ರ್ಯಕ್ಕೆ ಕವಚವಾಗಿ ಬಳಕೆಯಾದ ಬಸವಣ್ಣ !

ಈ ಐದು ತತ್ವಗಳಿಗೆ ವಿರುದ್ಧವಾದ ಒಂದೇ ಒಂದು ವಚನವು ಭೂತಗನ್ನಡಿ ಹಾಕಿ ಹುಡುಕಿದರೂ ಸಿಗುವುದಿಲ್ಲ! ಅಂಥ ವಚನ ಅಂತರಿಕ್ಷದನಾದರೂ ಇದ್ದು ಈ ಕಮ್ಯುನಿ ಪ್ರಣೀತರ ಬಳಿ ಇರಬಹು ದಾದ ರಷ್ಯನ್ ಟೆಲಿಸ್ಕೋಪಿನಲ್ಲಿ ಮಾತ್ರ ಕಾಣಿಸುವುದೋ ಗೊತ್ತಿಲ್ಲ! ಹೀಗಿದ್ದೂ ವಚನಗಳನ್ನು ಪಚಿಪಚಿಸಿ ವೇದಾಗಮೋಪನಿಷತ್ತಿನ ವೈರುಧ್ಯದ ವ್ಯಾಖ್ಯಾನ ಮಂಡಿಸುವ ಕನ್ನಡ-ಪಂಡಿತ, ಸಾಂಸ್ಕೃತಿಕ ಸಂಶೋಧಿಗ, ಮಾರ್ಕ್ಸ್‌ವಾದಿ ಕಮ್ಯುನಿಸ್ಟರ ಭಂಡತನ, ಧಾರ್ಷ್ಟ್ಯ, ಅಹಮ್ಮು, ಮೂರ್ಖತನಗಳನ್ನು ಅರಿಯದಷ್ಟು ನಾಡು ಕುರುಡಾಗಿತ್ತೆ ಎಂಬುದು ಮಿಲಿಯನ್ ಬಿಟ್‌ಕಾಯಿನ್ ಪ್ರಶ್ನೆ!

ಈ 21ನೇ ಶತಮಾನದ ಮಾಹಿತಿ ತಂತ್ರಜ್ಞಾನದ ಯುಗದಲ್ಲಂತೂ ಮೌಢ್ಯ ಮತ್ತಷ್ಟು ತ್ವರಿತವಾಗಿ ಹಬ್ಬುತ್ತಿದೆಯೆಂದರೆ ತಂತ್ರಜ್ಞ ಭಾರತವು ತಂತ್ರಜ್ಞಾನವನ್ನು ಯಾವ ದಿಕ್ಕಿನಲ್ಲಿ ಬಳಸುತ್ತಿದೆ ಎಂಬ ಆತ್ಮಾವಲೋಕನವು ಇಂದಿನ ರಾಷ್ಟ್ರೀಯ ತುರ್ತಾಗಿದೆ. ಜನನಾಯಕರನ್ನು ಬಿಡಿ, ಎಷ್ಟೇ ಆದರೂ ಓಲೈಕೆಯ ರಾಜಕಾರಣ ಅವರ ಅಸ್ತಿತ್ವದ ಸವಾಲಾದ ಕಾರಣ ಅವರಿಗೆ ಸಭಿಕರ ಜಾತಿಗನುಗುಣ ವಾಗಿ ಓಲೈಸುವ ತುರ್ತಿರಬಹುದು.

ಆದರೆ ತಮ್ಮ ವಿದ್ಯಾಭ್ಯಾಸದ ಭಾಗವಾಗಿ ಇತಿಹಾಸವನ್ನು ಓದಿರಲೇಬೇಕಾದ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಜಾಮದಾರರು ಇಂದು ತಾವೇ ಪೂರ್ವಜನ್ಮದ ಬಸವಣ್ಣನಾಗಿದ್ದೆ ಎಂಬಂತೆ ಶೂನ್ಯ ಸಂಪಾದನೆಯಲ್ಲಿನ ಸೃಜನಶೀಲ ಸಂಕಥನವನ್ನು ಅನು ಭವಿಸಿದಷ್ಟು ಸತ್ಯದ ನೆತ್ತಿಯ ಮೇಲೆ ಕುಟುಕಿ ಕಟಕಿ ಮೊಟಕಿ ದೃಢೀಕರಿಸುತ್ತಾರೆ.

ಜಾಮದಾರರು ತಮ್ಮ ವಂಧಿಮಾಗದರ, ‘ವಚನ ದರ್ಶನ: ಸತ್ಯ ವರ್ಸಸ್ ಮಿಥ್ಯ’ ಪುಸ್ತಕದ ಬಿಡುಗಡೆಯಂದು ಬೆಳಗಾವಿಯಲ್ಲಿ ಹೀಗೆ ಘೋಷಿಸಿದ್ದಾರೆ: “... ಲಿಂಗಾಯತರು ವೈದಿಕ ಶೈವರು ಎಂದು ಬಿಂಬಿಸಲು ವಚನ ದರ್ಶನ ಪುಸ್ತಕವನ್ನು ರಚಿಸಲಾಗಿದೆ. ಇದರ ಸಂಪಾದಕ ಸದಾಶಿವಾ ನಂದ ಸ್ವಾಮಿ ಮಹಾರಾಷ್ಟ್ರದ ಕಡೆಯವರು. ಅವರ ಗುರುಗಳು ಸಿದ್ದೇಶ್ವರ ಸ್ವಾಮಿಗಳು. ಈ ಸಿದ್ದೇಶ್ವರ ಸ್ವಾಮಿಗಳು ಅಪ್ಪಟ ಅಪ್ಪಟ ಅಪ್ಪಟ ಪರಿಶುದ್ಧ ‘ವೇದಾಂತಿ’ಗಳು!

ಸಿದ್ದೇಶ್ವರರ ಗುರು ಗಳಾದ ಮಲ್ಲಿಕಾರ್ಜುನ ಗುರುಗಳು, ‘ವೇದಾಂತ’ ಕೇಸರಿ! ವೇದಾಂತ/ವೇದಾಂತಿ ಎಂದರೆ ಯಾರು ಎಂದು ಗೊತ್ತಲ್ಲ!? ಅದೇ ರೀತಿ ನೀವೆ ಹೋಗುವ ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿಗಳ ಮಠ, ವೇದಾಂತಿಗಳ ಮಠ! ಸಿದ್ಧಾರೂಢರು ಶೆಟ್ಟರು. ಮೊದಲು ಗುಂಡುಗಡಿಗೆ (ಕರಡಿಗೆ) ತೊಟ್ಟವರು.

ಆದರೆ ಅದನ್ನು ಕಾಶಿಯಲ್ಲಿ ಹರಿದು ಹಾಕಿ ‘ಅಲಕ್ ನಿರಂಜನ್’ (ವ್ಯಂಗ್ಯಭರಿತ) ಎಂದು ವೇದಾಂತದ ಭಾಗವಾದ ಆರೂಢಕ್ಕೆ ಸೇರಿ ಹುಬ್ಬಳ್ಳಿಗೆ ವಕ್ಕರಿಸಿದರು. ಇಂಥವರಿಗೆ ನೀವೆಲ್ಲ ಭಯಭಕ್ತಿಯಿಂದ ನಿಮ್ಮ ‘ಧನಕನಕ’ ಕೊಟ್ಟಿದ್ದೀರಿ. ವಚನಗಳು ವೇದದ ಸಾರ ಎನ್ನುವ ವೈದಿಕ ಮಪುರಂ ವೆಂಕಟೇಶ್ ಅವರ ವೇದಾಂತಿ ಪೂರ್ವಜರು ಬಸವಣ್ಣನು ವೇದಗಳನ್ನು ಹಳಿದನು ಎಂದು ಏಕೆ ಬಿಜ್ಜಳನ ಆಸ್ಥಾನದಲ್ಲಿ ಬೊಗಳಿದರು...." ಎನ್ನುತ್ತಾ ಜನಾಂಗೀಯ ದ್ವೇಷ, ಪರಮತ ಅಸಹಿಷ್ಣುತೆ, ಊಳಿಗಮಾನ ಗೈರತ್ತು, ಅಧಿಕಾರಶಾಹಿಯ ಗತ್ತಿನಲ್ಲಿ ‘ತಾವಷ್ಟೇ ಸತ್ಯ ಉಳಿದವರು ಮಿಥ್ಯ’ ಎಂದು ತಮ್ಮ ‘ಸತ್ಯ ವರ್ಸಸ್ ಮಿಥ್ಯ’ವನ್ನು ಖುದ್ದು ತಾವೇ ರದ್ದುಗೊಳಿಸುತ್ತಾರೆ.

ತಮ್ಮನ್ನು ಬೆಂಬಲಿಸದ ಜಾತ್ಯಸ್ಥ ಲಿಂಗಾಯತರನ್ನು, ಮಠಗಳನ್ನು ಲಿಂಗಾಯತದಿಂದ ಬಹಿಷ್ಕಾರ ಹಾಕುತ್ತಾರೆ. ಬಸವಣ್ಣನನ್ನು ಗುತ್ತಿಗೆಗೆ ಪಡೆದ ಗುತ್ತಿಗೆದಾರನ ದರ್ಪದಿಂದ ಮಾತನಾಡುವ ಇಂಥವರು ಇಂದಿನ ದಾರಿ ತಪ್ಪಿದ ಅಥವಾ ದಾರಿ ತಪ್ಪಿಸುವ ಶಿಕ್ಷಣ ವ್ಯವಸ್ಥೆಯ ವಿದ್ಯಮಾನದ ಪ್ರತೀಕವಾಗಿದ್ದಾರೆ!

ಖುದ್ದು ತಲೆಗಲ್ಲದೆ ಎಡೆ ಬಣ್ಣ ಹಚ್ಚಿಕೊಂಡು ಜಮಾಜಮಾ ಜಾಮದಾರರನ್ನು ‘ಜಯನ್ನಮ ಪಾರ್ವತಿಪತಿ ಪರಮೇಶ್ವರ’ ಎಂದು ಭಜಿಸುವ ಪ್ರೊ. ಯಾಪಲಪರವಿ ಎಂಬುವವರು ವೀಣಾ ಬನ್ನಂಜೆಯವರನ್ನು ‘ಕೂದಲಿಗೆ ಬಣ್ಣ ಹಚ್ಚಿಕೊಳ್ಳುವ ನರ್ತಕಿ’ ಎಂದಿದ್ದಾರೆ. ವೀಣಾ ಬನ್ನಂಜೆ ಅವರು ಅಲ್ಲಮ-ಅಕ್ಕಮಹಾದೇವಿಯರ ಸ್ನಾತಕೋತ್ತರ ಮಟ್ಟದ ವಚನಗಳನ್ನು ವ್ಯಾಖ್ಯಾನಿ ಸುತ್ತಿದ್ದರೆ ಈ ನಿವೃತ್ತ ಇನ್ನೂ ಶಿಶುವಿಹಾರದ ‘ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ’ ವಚನವನ್ನು ಪಾಲಿಸುವ ಪ್ರಬುದ್ಧತೆಯನ್ನೂ ಗಳಿಸಿಲ್ಲ ಎಂಬುದು ಮತ್ತೊಂದು ಶಿಕ್ಷಣ ವ್ಯವಸ್ಥೆಯ ಮಾದರಿ.

ಇರಲಿ, ಸಂಶೋಧನೆಗಿಂತ ಪ್ರಚಾರದ ಹಪಾಹಪಿಯ ‘ಸಂಶೋಧಕರು’, ಖುದ್ದು ಆಧುನಿಕ ಬಸವಣ್ಣ ಎನಿಸಿಕೊಳ್ಳುವ ಆತ್ಮರತಿ ಪ್ರಭೃತಿಗಳು, ವಚನಗಳನ್ನು ತಮ್ಮ ರಾಜಕೀಯ ಆಲೇಖ್ಯಕ್ಕೆ ಅನುಗುಣ ವಾಗಿ ವಿರೂಪಗೊಳಿಸಿರುವ/ಸುತ್ತಿರುವ ಒಂದು ವಾಸ್ತವ ಮಾದರಿ ನಮ್ಮ ಮುಂದೆ ಜ್ವಲಂತವಾಗಿದೆ. ಇದು ಕಮ್ಯುನಿಸ್ಟರ ಗೋಬೆಲ್ಸ್ ತಂತ್ರದ ಪ್ರಮುಖ ಭಾಗವಾದ- “ಒಂದು ಸುಳ್ಳನ್ನು ಸಾವಿರ ಬಾರಿ ಹೇಳಿದರೆ ಅದು ಸತ್ಯವಾಗುತ್ತದೆ" ಎಂಬುದರ ಯಶಸ್ವಿ ಪ್ರಯೋಗವಾಗಿ ಶರಣ ಚಳವಳಿಯ ಹಿನ್ನೆಲೆ ಯಲ್ಲಿ ಸಾಬೀತಾಗಿದೆ ಸಹ. ‘ಬಸವ ಮಂಟಪ’ದ ಹಿಂದಿನ ಅಂಕಣಗಳಲ್ಲಿ ಈ ಮೊದಲೇ ಸಾಬೀತು ಪಡಿಸಿದಂತೆ: “ಕಲಬುರ್ಗಿಯವರು, ವೀರಶೈವ ಪದ 14ನೇ ಶತಮಾನದವರೆಗೆ ಇರಲಿಲ್ಲ" ಎನ್ನುವು ದಲ್ಲದೆ ಹತ್ತು ಹಲವಾರು ಸಂಶೋಧನಾ ಸುಳ್ಳು, “ಪ್ರತ್ಯೇಕಿಗಳು, ಲಿಂಗಾಯತವು ವೇದವಿರೋಧಿ" ಎಂಬ ಅಸತ್ಯ, “ದರ್ಗಾರ, ಬಸವಣ್ಣ ಮಾರ್ಕ್ಸ್‌ ನ ಪೂರ್ವಗಾಮಿ" ಎಂಬ ಹಾಸ್ಯಾಸ್ಪದ ಹೇಳಿಕೆ, “ಎಸ್.ಜಿ.ಸಿದ್ಧರಾಮಯ್ಯ, ಶರಣರು ಪುಣ್ಯ ಸೀಯರಿಗೆ ಬಾಳು ಕೊಟ್ಟಂತೆ ಕ್ಯೂಬನ್ನರು ಕ್ಯಾಸ್ಟ್ರೋ ಮಾತು ಕೇಳಿ ವೇಶ್ಯೆಯರಿಗೆ ಬಾಳು ಕೊಟ್ಟರು" ಎಂಬ ಕಟ್ಟುಕತೆ, “ಜಿ.ಬಿ. ಪಾಟೀಲರ ಥಾಯ್ಲೆಂಡಿ ನಲ್ಲಿ ಬಸವಣ್ಣ" ಎಂಬ ಮೂರ್ಖತನ, “ಸಂಸ್ಕೃತ ಪದಗಳನ್ನು ವಚನ ಗಳಲ್ಲಿ ತುರುಕಿದರು" ಎಂಬ ರೋಧನೆ, “ಅವರದು ಪೌರಾಣಿಕ ನಮ್ಮದು ಇತಿಹಾಸ" ಎನ್ನುವ ಶೋಧನೆ... ಇತ್ಯಾದಿ ಅಸಂಖ್ಯಾತ ಅಪ್ಪಟ ಸುಳ್ಳುಗಳ ಸರಮಾಲೆಗಳು ಮಹಾನ್ ಸಂಪುಟಗಳಾಗಿದ್ದವು ಈಗ ನಿಶ್ಶೂನ್ಯವಾಗಿವೆ.

ಕರಣ ಹಸಿಗೆ, ಮಂತ್ರಗೋಪ್ಯಗಳಲ್ಲಿ ಓಂಕಾರ, ವೇದಗಳು ವಿಜೃಂಭಿಸಿವೆ! ಹೀಗಿದ್ದೂ ವೇದಾಗಮ ಗಳನ್ನು ಶರಣರು ತಿರಸ್ಕರಿಸಿದರು ಎಂದರೆ ಇದು ಗೋಬೆಲ್ಸ್‌ ತಂತ್ರದ ಪರಾಕಾಷ್ಠೆಯಾಗಿದೆ ಅಷ್ಟೇ. ಇರಲಿ, ಒಟ್ಟಾರೆ ವೀರಶೈವ ಗ್ರಂಥಗಳು ಮತ್ತು ವಚನ ಸಾಹಿತ್ಯವು ವೇದಾಗಮ ಉಪನಿಷತ್ತುಗಳ ಸಾರವನ್ನು ಅನುಭವಾತ್ಮಕವಾಗಿ ವಿಸ್ತರಿಸಿವೆ.

ಬಸವಣ್ಣನ ‘ದೇಹವೇ ದೇಗುಲ’ ಎಂಬ ದರ್ಶನ, ಉಪನಿಷತ್ತಿನ ‘ಆತ್ಮವೇ ದೇವರು’ ಎಂಬ ತತ್ವದ ನೇರ ಅನ್ವಯ. ಬಸವಣ್ಣನ ಕ್ರಾಂತಿ ಧರ್ಮದ ಹೊಸ ವ್ಯಾಖ್ಯಾನವಲ್ಲ- ಸನಾತನ ಮಾನವೀಯ ಧರ್ಮದ ಪುನರು ಜ್ಜೀವನ. ಏಕೆಂದರೆ ಆತ ಆಗಷ್ಟೇ ಜಾರಿಯಾಗಿದ್ದ ‘ಹುಟ್ಟಿನಿಂದ ಜಾತಿ’ ಎಂಬ ಹೊಸ ನೀತಿಯನ್ನು ವಿರೋಧಿಸಿದ್ದನು ಮತ್ತು 12ನೇ ಶತಮಾನಕ್ಕೂ ಮುಂಚೆ ‘ಹುಟ್ಟಿನಿಂದ ಜಾತಿ’ ನಿರ್ಧಾರ ವಾಗುತ್ತಿರಲಿಲ್ಲ ಎಂಬ ಸ್ಪಷ್ಟ ಉಲ್ಲೇಖ ಅವನ ಈ ವಚನದಲ್ಲಿ ಸಿಗುತ್ತದೆ: “ವ್ಯಾಸ ಬೋವಿತಿಯ ಮಗ, ಮಾರ್ಕಂಡೇಯ ಮಾತಂಗಿಯ ಮಗ, ಮಂಡೋದರಿ ಕಪ್ಪೆಯ ಮಗಳು. ಕುಲವನರಸದಿರಿಂ ಭೋ!

ಕುಲದಿಂದ ಮುನ್ನೇನಾದಿರಿಂ ಭೋ! ಸಾಕ್ಷಾತ್ ಅಗಸ್ತ್ಯ ಕಬ್ಬಿಲ, ದೂರ್ವಾಸ ಮುಚ್ಚಿಗ, ಕಶ್ಯಪ ಕಮ್ಮಾರ, ಕೌಂಡಿನ್ಯನೆಂಬ ಋಷಿ ಮೂರು ಭುವನರಿಯದೆ ನಾವಿದ ಕಾಣಿ ಭೋ! ನಮ್ಮ ಕೂಡಲ ಸಂಗನ ವಚನವಿಂತೆಂದುದು ಶ್ವಪಚೋಪಿಯಾದಡೇನು, ಶಿವಭಕ್ತನೆ ಕುಲಜಂ ಭೋ!". ಇನ್ನು ಕೇವಲ ಓರ್ವ ಕುತೂಹಲಿಯಾಗಿ ನಾನು ಕಂಡುಕೊಂಡ ಈ ಸತ್ಯವನ್ನು, ಇದನ್ನು ಸಂಶೋಧಿಸ ಲೆಂದೇ ಲಕ್ಷದ ಮೇಲೆ ತೊಂಬತ್ತಾರು ಸಾವಿರ ರೂಪಾಯಿ ಮಾಸಿಕ ಸಂಬಳ ಪಡೆವ ವಿಶ್ವವಿದ್ಯಾಲ ಯಗಳ ಏಳುನೂರ ಎಪ್ಪತ್ತು ಪ್ರೊಫೆಸರರುಗಳಿಗೆ ಏಕೆ ಕಂಡುಹಿಡಿಯಲು ಆಗಿಲ್ಲ? ಸ್ವಾತಂತ್ರ್ಯಾ ನಂತರದ ಇಂಗ್ಲಿಷ್ ‘ಭಾಷೆ’ಯ ಇಂಗ್ಲಿಷ್ ‘ಶಿಕ್ಷಣ’ ಕಲಿತ ನೂತನ ಕಾರಕಾನರು ಇತಿಹಾಸವನ್ನೆ ಪುರಾಣವೆನ್ನುತ್ತಾ ಇಂಗ್ಲಿಷ್ ಶೈಲಿಯನ್ನು ನಕಲು ಮಾಡುತ್ತ ವಿಶ್ವವಿದ್ಯಾಲಯ ಗಳಲ್ಲಿ ಕುರುಡಾಗಿ ಎಡಪಂಥೀಯ ಚಿಂತನೆಯನ್ನು ತುರುಕಲಾರಂಬಿಸಿದರು.

ಹಳತನ್ನು ಧಿಕ್ಕರಿಸಿ ಏನನ್ನಾದರೂ ಹೊಸತನವನ್ನು ಸಾಧಿಸಬೇಕೆಂಬ ಈ ವಿದ್ಯಾವಂತರಿಗೆ ತಮ್ಮದೇ ಆದ ರಾಜಕೀಯ, ಸಾಮಾಜಿಕ, ಚಿಂತನೆಗಳನ್ನು ಸ್ವತಂತ್ರ ಭಾರತದ ಮೇಲೆ ಯಶಸ್ವಿಯಾಗಿ ಹೇರಲು ಮನುಸ್ಮೃತಿಯ ವಿಸ್ಮೃತಿಯನ್ನು ಹೆಚ್ಚು ಆಸ್ಥೆಯ ಪ್ರಚಾರ ಕೊಟ್ಟು ಬಳಸಿಕೊಳ್ಳ ಲಾಯಿತು. ಮುಂದೆ ಎಂಬತ್ತರ ದಶಕದ ಸಮಾಜವಾದಿ ಚಳವಳಿಯ ನಿಟ್ಟಿನಲ್ಲಿ ಬಸವಣ್ಣ, ಕಾಯಕ, ಶರಣ ಚಳವಳಿ ಮತ್ತು ಕಲ್ಯಾಣ ಕ್ರಾಂತಿಗಳ ಮೂಲೋದ್ದೇಶಗಳನ್ನು ಅಪ್ಪಟ ಸಮಾಜ ವಾದಿ ಕಮ್ಯೂನಿ ಚಿಂತನೆ ಎಂದು ಬಿಂಬಿಸುವ ಸಾಕಷ್ಟು ಸಂಕಥನಗಳನ್ನು ಬುದ್ಧಿಜೀವಿಗಳು ಯಶಸ್ವಿಯಾಗಿ ಕಟ್ಟಿಕೊಟ್ಟರು.

ಇದನ್ನೆ ನಂಬಿ ನಾನು ನನ್ನ ಕೊರಳಲ್ಲಿದ್ದ ಕರಡಿಗೆಯನ್ನು ಗಿರಗಿರನೇ ತಿರುಗಿಸಿ ಎಸೆದಿದ್ದೆ ಸಹ. ಕಟ್ಟಾ ವೀರಶೈವ ಸದ್ಭಕ್ತನಾಗಿದ್ದ ನಮ್ಮ ಅಪ್ಪ ನನ್ನನ್ನು ಹಿಟ್ಲರನಿಗಿಂತ ಉಗ್ರವಾಗಿ ಶಿಕ್ಷಿಸಿದರೂ ನನ್ನ ಸಮಾಜವಾದಿ ಅಚಲ ನಂಬಿಕೆ ಕಿಂಚಿತ್ತೂ ಅಡಿರಲಿಲ್ಲ. ಅಂಥ ತಲೆಮಾಸುವಿಕೆಯ ‘ಬಸವ-ಗುರಾಣಿ ಸಮಾಜವಾದದ-ಕತ್ತಿ’ಯ ಮಾಂತ್ರಿಕ ಸುಳ್ಳುಗಳ ಸಂಕಥನದ ಬರಹ ಈ ಬುದ್ಧಿಜೀವಿಗಳ ದಾಗಿತ್ತು!

ಇರಲಿ, ಇಂದು ವಿಶ್ವದ ಅತ್ಯಂತ ವಿಡಂಬನಾತ್ಮಕ ಸಾಹಿತ್ಯಿಕ ಬರಹ ಎಂದೇ ಹೆಸರಾದ ಬ್ರಿಟಿಷ್ ಸಾಹಿತ್ಯಕ್ಕಿಂತ ಹತ್ತು ಹಲವಾರು ಶತಮಾನಗಳಿಗೂ ಮುಂಚೆಯೇ ಹೆಚ್ಚು ವಿಡಂಬನಾತ್ಮಕವಾಗಿದ್ದ ಆದರೆ ಆಳದ ಅರ್ಥ ಹೊಂದಿದ್ದ ವಚನಗಳು ಈ ಬುದ್ಧಿಜೀವಿಗಳ ವ್ಯಾಖ್ಯಾನಕ್ಕೆ ಸುಲಭ ತುತ್ತಾ ದವು. ಇದನ್ನು ಬಳಸಿ ಇಡೀ ಶರಣ ಇತಿಹಾಸವನ್ನೇ ಬುಡಮೇಲು ಮಾಡುವಂಥ ಸಂಕಥನವನ್ನು ಕಟ್ಟಿ ಈ ತೇಲ್ ಮೇಲ್ ಜೀವಿಗಳು ಧರ್ಮಭಂಜನೆ ಮಾಡಿದರು.

ಕ್ರಮೇಣವಾಗಿ ಎಲ್ಲಾ ಸಮಾಜವಾದಿ ಚಿಂತಕ ನಾಯಕರು ತಮ್ಮ ಬುಡವನ್ನು ಭದ್ರಪಡಿಸಿಕೊಂಡು ರಾಜಕೀಯವಾಗಿ ಸಮಗ್ರವಾಗಿ ಜಾತಿ ಪ್ರಾಬಲ್ಯ ಅಧಿನಾಯಕತ್ವ ( Hegemony), ಉತ್ಪ್ರೇಕ್ಷೆ, ಓಲೈಕೆ ಗಳ ಪ್ರಭಾವಳಿಗಳಲ್ಲಿ ಜನರನ್ನು ಪ್ರಭಾವಿಸಿಬಿಟ್ಟರು. ಅಂಥ ಸಮಾಜವಾದಿ ನಾಯಕರುಗಳಿಗೆ ಏನು ಬೇಕೋ ಅದೆಲ್ಲವನ್ನೂ ಇಂಧನವಾಗಿ ಈ ಸಂಶೋಧಿಗರು ಒದಗಿಸಿಕೊಟ್ಟಿದ್ದಾರೆ.

ಇದರ ಪರಿಣಾಮವೇ ಇಂದು ನಿಮ್ಮ ಕಣ್ಣೆದುರಿಗಿರುವ ಧರ್ಮಭಂಜಕ ಸಂಘಟನೆಗಳು! ಒಂದು ಸಂಶೋಧನ ವಸ್ತುವನ್ನು ಸಾಧ್ಯವಿರುವ ಎಲ್ಲಾ ತಾರ್ಕಿಕ ಕೋನಗಳಿಂದ ಪರಾಮರ್ಶೆಗೊಳಪಡಿಸಿ, ಸ್ಥಿತಪ್ರಜ್ಞತೆಯಿಂದ ವಾಸ್ತವಿಕವಾಗಿ ನೆಲೆಗೊಳಿಸುವ ಸಂಶೋಧನ ತಂತ್ರವನ್ನು ವೀರಶೈವ-ಲಿಂಗಾ ಯತ ಸಂಕಥನದ ಕಲಬುರ್ಗಿ-ಪ್ರಣೀತ ಯಾವುದೇ ಸಂಶೋಧಕನೂ, ಜಾಮದಾರ-ಜಾಮಿತ ಧರ್ಮ ಬೀರುವೂ ಅಳವಡಿಸಿಕೊಂಡಿಲ್ಲ. ಬಹುವಿಸ್ತಾರದ ವಿಶ್ಲೇಷಣೆಯೊಂದಿಗೆ ಈವರೆಗಿನ ಎಲ್ಲಾ ಸಿದ್ಧ ಮಾದರಿ ಸಂಶೋಧನ ತಂತ್ರಗಳನ್ನು, ಸಿದ್ಧಾಂತಗಳನ್ನು ತೀವ್ರ ಒರೆಗೆ ಹಚ್ಚಿ ಪೂರ್ವಗ್ರಹಗಳ ಲವಲೇಶವನ್ನೂ ಸೋಂಕಿಸಿಕೊಳ್ಳದಂತೆ ಮತ್ತು ಸತ್ಯವು ಬಯಸುವ ಕಠೋರ ನಿಷ್ಠುರತೆಯನ್ನು ಪ್ರತಿಪಾದಿಸುವ ಮಾರ್ಗಕ್ಕೆ ಸಂಶೋಧಕರನ್ನು ಅನುವುಗೊಳಿಸುವಲ್ಲಿ ಧರ್ಮಬೀರುಗಳು ಧರ್ಮ ವನ್ನು ಬೀರುವಲ್ಲಿ ‘ವಿಶ್ವವಾಣಿ’ ಬರಹಗಳು ಒಂದು ಪ್ರಯತ್ನವನ್ನು ಮಾಡಿವೆಯಷ್ಟೇ.

ಒಂದು ಅಂತಾರಾಷ್ಟ್ರೀಯ ಮತ್ತು ಅಂತರಶಿಸ್ತೀಯ ವೈಧಾನಿಕತೆಗೆ ಬದ್ಧವಾಗಿಸಿ ನೋಡಿದಾಗ ಕಲ್ಯಾಣ ಕ್ರಾಂತಿಯ ಪಥ ಸುಸ್ಪಷ್ಟವಾಗಿ ಗೋಚರಿಸುತ್ತದೆ ಎಂಬುದನ್ನೂ ಅಷ್ಟೇ ಸುಸ್ಪಷ್ಟ ವಾಗಿಯೂ ‘ವಿಶ್ವವಾಣಿ’ ಬರಹಗಳು ದಾಖಲಿಸಿವೆ! ಹಿಂದೂ ಪ್ರಭೇದದ ದ್ವೈತ, ಅದ್ವೈತ, ವಿಶಿಷ್ಟಾ ದ್ವೈತ, ಶಕ್ತಿವಿಶಿಷ್ಟಾದ್ವೈತ, ಬೌದ್ಧ, ಜೈನ, ಸಿಖ್ ಧರ್ಮಗಳ ಬುನಾದಿಯೂ ಉಪನಿಷತ್ತಿನ ಇವೇ ಐದು ವಾಕ್ಯಗಳಾಗಿವೆ.

ಅಲ್ಲದೇ ಕ್ರೈಸ್ತ ಮತ್ತು ಇಸ್ಲಾಮಿನ ಮೂಲಧರ್ಮವಾದ ಯಹೂದಿಗಳ ಜೂಡಾಯಿಸಂನ ದೇವರ ಹೆಸರೇ ‘ಎಹಿಯೇ ಆಶೆರ್ ಎಹಿಯೇ’ ಅಂದರೆ “ನಾನು ನಾನೇ ಆಗಿದ್ದೇನೆ!" ಈ “ನಾನು ನಾನೇ ಆಗಿದ್ದೇನೆ" ಎಂಬುದು ಸಹ ನಮ್ಮ ಪರಬ್ರಹ್ಮ ಪರಮಾತ್ಮ ಅಥವಾ ಸರ್ವೋಚ್ಚ ವಾಸ್ತವಿಕತೆಯ ಸ್ಥಿತಿರಹಿತ ಸ್ಥಿತಿಯ ನಮ್ಮೊಳಗಿನ ಒಂದು ಅಮೂರ್ತತೆ ಎನ್ನಲಾಗಿದೆ!

ಅದೇ ರೀತಿ ‘ಅಹಂ ಬ್ರಹ್ಮಾಸ್ಮಿ’ ಎಂಬುದನ್ನೇ ಯೇಸುವು ‘ನಾನೇ ದೇವರು’ ಎಂದಿದ್ದಾನೆ. “ನಾನು ನಾನೇ ಆಗಿದ್ದೇನೆ" ಎಂಬ ನಮ್ಮೊಳಗಿನ ಅಮೂರ್ತತೆಯ ಆತ್ಮಲಿಂಗದ ವಿಸ್ತೃತ ಶಾಸ್ತ್ರವೇ ವೀರ ಶೈವರ ಶಕ್ತಿವಿಶಿಷ್ಟಾದ್ವೈತ. ಹೀಗೆ ಜಗತ್ತು ಸನಾತನ ಸಂಸ್ಕೃತಿಯ ವಸುಧೈವ ಕುಟುಂಬಕಂ ಎಂಬಂತೆ ಅನಾದಿಯಿಂದಲೂ ಜಾಗತಿಕವಾಗಿದೆ. ಹಾಗಾಗಿಯೇ ಬಸವಣ್ಣ ವೀರಶೈವ ತತ್ವದ “ಮಾನವ ಧರ್ಮಕ್ಕೆ ಜಯವಾಗಲಿ.

ಧರ್ಮದಿಂದಲೇ ವಿಶ್ವಕ್ಕೆ ಶಾಂತಿ" ಎನ್ನುವ ಜಾಗತಿಕ ಸಾಂಸ್ಕೃತಿಕ ನಾಯಕನಾಗಿದ್ದಾನೆಯೇ ಹೊರತು ಯಾವುದೋ ಅಜ್ಞಾನಿ ಕರ್ಮಠರು ಹಕ್ಕೊತ್ತಾಯ ಮಂಡಿಸುವಂಥ ಧರ್ಮಭಂಜಕ ಮತಸ್ಥಾಪಕನಲ್ಲ. ಅಂದ ಹಾಗೆ ಇದು ದುರಿತ ಕಾಲ ಎಂದು ನಾಡಿನ ಬುದ್ಧಿಜೀವಿಗಳೇ ಹೇಳಿದ್ದಾರೆ. ಹಾಗಾಗಿ ಬಸವಣ್ಣನನ್ನು ಈ ದುರಿತ ಕಾಲದ ಕರ್ಮಠರಿಂದ ಬಿಡಿಸಿ, ವೀರಶೈವ ಸೈದ್ಧಾಂತಿಕ ಸತ್ಯದ ಆದರೆ ಮಹತ್ವಾಕಾಂಕ್ಷಿಯೂ ಆಗಿದ್ದ ಬಸವಣ್ಣನನ್ನು ಎತ್ತಿ ಹಿಡಿದು ನಾನೇ ನಾನೆಂದು ನೀವು ನೀವಾಗಿರಿ.

(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)